ಹೊಯ್ಸಳ ಶೈಲಿಯ ಅಮ್ರುತೇಶ್ವರ ಗುಡಿ

– ಸುನಿಲ್ ಮಲ್ಲೇನಹಳ್ಳಿ.

ಕೆಲವೊಂದು ಪ್ರವಾಸಿ ತಾಣಗಳನ್ನು ಎಶ್ಟು ಬಾರಿ ನೋಡಿಕೊಂಡು ಬಂದರೂ ಮತ್ತೆ ಮತ್ತೆ ನೋಡಬೇಕೆಂಬ ಹಂಬಲ ಹಾಗೂ ಆಶಯ ನಮ್ಮನ್ನು ಕಾಡುತ್ತದೆ. ಇಂತಹ ಪ್ರವಾಸಿ ತಾಣಗಳ ಸಾಲಿಗೆ ಸೇರಿದ್ದು ತರೀಕೆರೆ ತಾಲೂಕಿನ ಅಮ್ರುತಾಪುರದಲ್ಲಿನ ಶ್ರೀ ಅಮ್ರುತೇಶ್ವರ ಸ್ವಾಮಿಯ ದೇವಸ್ತಾನ.

ಶ್ರೀ ಅಮ್ರುತೇಶ್ವರ ದೇವಾಲಯದ ಹಿನ್ನೆಲೆ

ಮಲೆನಾಡಿನ ಹೆಬ್ಬಾಗಿಲಾದ ತರೀಕೆರೆ ಪಟ್ಟಣದಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿರುವ ಅಮ್ರುತಾಪುರದಲ್ಲಿ ಪ್ರಸಿದ್ದವಾದ ಶ್ರೀ ಅಮ್ರುತೇಶ್ವರ ಗುಡಿಯಿದೆ. ಈ ದೇಗುಲವನ್ನು ಹೊಯ್ಸಳರ ಆಳ್ವಿಕೆಯಲ್ಲಿ ರಾಜ ಎರಡನೇ ವೀರ ಬಲ್ಲಾಳನ ( ವಿಶ್ಣುವರ‍್ದನನ ಮೊಮ್ಮಗ ) ದಂಡ ನಾಯಕನಾದ ಅಮ್ರುತ ನಾಯಕನು ಕ್ರಿ.ಶ 1296ರಲ್ಲಿ ಕಟ್ಟಿಸಿದ್ದು.

ದೇಗುಲದ ವಾಸ್ತುಶೈಲಿ ಹಾಗೂ ಶಿಲ್ಪಕಲೆಅಮ್ರುತೇಶ್ವರ ದೇವಸ್ತಾನ, ತರೀಕೆರೆ

ದೇಗುಲಗಳು ಪೂರ‍್ಣ ಪ್ರಮಾಣದಲ್ಲಿ ಹೊಯ್ಸಳರ ವಾಸ್ತುಶೈಲಿ ಹಾಗೂ ಶಿಲ್ಪಕಲೆಯ ಪ್ರಕಾರದಲ್ಲಿದ್ದು, ಗೋಪುರಗಳ ಒಳಬಾಗ ಅತ್ಯದ್ಬುತವಾದ ಕೆತ್ತನೆಯಿಂದ ಕೂಡಿದೆ. ದೇವಾಲಯದ ಒಳಾಂಗಣ ಕಂಬಗಳಿಂದ ಕೂಡಿದೆ ಹಾಗೂ ದೇವಾಲಯದ ಹೊರ ಗೋಡೆಯ ಸುತ್ತಲೂ ಮಹಾಬಾರತ ಮತ್ತು ರಾಮಾಯಣದ ಕತೆಗಳನ್ನು ತೋರುವ ಕೆತ್ತನೆಗಳಿವೆ. ಇವೆಲ್ಲವೂ ನೋಡುಗರಲ್ಲಿ ಇನ್ನಿಲ್ಲದ ಆಸಕ್ತಿ ಹಾಗೂ ಕುತೂಹಲವನ್ನು ತರುತ್ತವೆ. ಅಲ್ಲದೇ ಈ ದೇಗುಲದ ಹೊರ ಗೋಡೆಯಲ್ಲಿನ ಕೆತ್ತನೆಗಳು ಹಳೇಬೀಡು, ಬೇಲೂರು ಹಾಗೂ ಹೊಯ್ಸಳರ ಇತರ ದೇಗುಲಗಳಿಗೆ ಹೋಲಿಸಿದಲ್ಲಿ ಎತ್ತರವಾಗಿವೆ. ಇದೂ ಸಹ ಈ ದೇಗುಲದ ವಿಶೇಶ. ಅಲ್ಲದೆ ದೊಡ್ಡದಾದ‌ ಕಲ್ಲುಗಳ ಮೇಲೆ ಶಾಸನದ ರೂಪದಲ್ಲಿ ಹೊಯ್ಸಳ ರಾಜವಂಶದ ಇತಿಹಾಸ, ಅವರ ಸಾಮ್ರಾಜ್ಯದ ಗತವೈಬವವನ್ನು ಸಾರುವ ವಿಚಾರಗಳು ಹಾಗೂ ಹೊಯ್ಸಳರ ಆಸ್ತಾನ ಕವಿಯಾಗಿದ್ದ ಜನ್ನ ಕವಿಯ ಸಾಹಿತ್ಯವನ್ನು ಹಳೆಗನ್ನಡದಲ್ಲಿ ಬರೆಯಲಾಗಿದೆ.

ಸತತವಾಗಿ ಬೆಳಗುತ್ತಿರುವ ನಂದಾದೀಪ

ಅಮ್ರುತೇಶ್ವರ ಸ್ವಾಮಿಯ ಲಿಂಗವು ಸಾಲಿಗ್ರಾಮದ್ದಾಗಿದ್ದು. ತ್ರಿಮೂರ‍್ತಿಗಳ ಪ್ರತಿರೂಪವಾದ ಈ ಪವಿತ್ರ ಲಿಂಗವನ್ನು ನೇಪಾಳದಿಂದ ತರಿಸಿದ್ದಾಗಿದ್ದು. ಬಹಳ ಅಪರೂಪದ್ದಾಗಿದೆ. ದಿನನಿತ್ಯ ಅರ‍್ಚನಾಬಿಶೇಕ ಸ್ವಾಮಿಗೆ ನೇರವೇರುತ್ತದೆ. ಬಕ್ತಾದಿಗಳು, ಪ್ರವಾಸಿಗರಿಗೆ ಅಮ್ರುತೇಶ್ವರನಿಗೆ ವಿವಿದ ಬಗೆಯ ಅರ‍್ಚನಾಬಿಶೇಕವನ್ನು ಮಾಡಿಸುವ ಅವಕಾಶವಿದೆ. ದೇಗುಲದ ಗರ‍್ಬಗುಡಿಯಲ್ಲಿರುವ ನಂದಾದೀಪ ಸರಿಸುಮಾರು ಇನ್ನೂರು ವರ‍್ಶಗಳಿಂದ ಸತತವಾಗಿ ಸ್ವಾಮಿಯನ್ನು ಬೆಳಗುತ್ತಿದೆ.

ಶಾರದಾ ಮಾತೆಯ ದೇಗುಲ

ಈ ಬವ್ಯ ದೇಗುಲದ ಪಕ್ಕದಲ್ಲೇ ಶ್ರೀ ಶಾರದ ಮಾತೆಯ ದೇಗುಲವಿರುವುದು ಇಲ್ಲಿಯ ವೈಶಿಶ್ಟ್ಯ. ಶ್ರೀ ಶಾರದಾ ದೇವಿಯವರ ಸನ್ನಿದಿಯಲ್ಲಿ ಮೂರು ವರ‍್ಶಕ್ಕೆ ಮೇಲ್ಪಟ್ಟ ಮಕ್ಕಳಿಗೆ ‘ಅಕ್ಶರ ಅಬ್ಯಾಸ’ ವನ್ನೂ ಸಹ ಮಾಡಿಸಲಾಗುತ್ತದೆ.

ಅಮ್ರುತಾಪುರಕ್ಕೆ‌‌‌ ಸಮೀಪದಲ್ಲಿ ‌ಲಕ್ಕವಳ್ಳಿ ಡ್ಯಾಮ್, ಕಲ್ಹತ್ತಿಗಿರಿ, ಕೆಮ್ಮಣ್ಣು ಗುಂಡಿ ಇನ್ನಿತರ ಪ್ರವಾಸಿ ತಾಣಗಳಿವೆ.

(ಚಿತ್ರ ಸೆಲೆ: ಸುನಿಲ್ ಮಲ್ಲೇನಹಳ್ಳಿ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: