ಕವಿತೆ: ಹೆಂಗ
ಬೀಜದಿ ಹೆಂಗ ಅಡಗಿ ಕೂತಿದೆ
ದೊಡ್ಡ ಬಿಳಲಿನ ಆಲ
ಮಣ್ಣಿನ ಆಸರೆ ಸಿಕ್ಕರೆ ಸಾಕು
ಹಬ್ಬಿಸಿ ಬಿಡುವುದು ಜಾಲ
ಮೊಗ್ಗಲಿ ಹೆಂಗ ಅಡಗಿ ಕೂತಿದೆ
ಪರಿಮಳ ಸೂಸುವ ಗಂದ
ಪಕಳೆಯ ಬಿಚ್ಚುತ ಹೂವು ಅರಳಲು
ಹರಿದಾಡುವುದು ಚಂದ
ಸ್ವರದಲಿ ಹೆಂಗ ಅಡಗಿ ಕೂತಿದೆ
ಮದುರ ಸುಮದುರ ನಾದ
ಲಯಗತಿಯಲ್ಲಿ ಮೈಯನು ಮರೆಸಿ
ಅಳಿಸಿ ಬಿಡುವುದು ಬೇದ
ಹಾಲಲಿ ಹೆಂಗ ಅಡಗಿ ಕೂತಿದೆ
ಗಮಗಮ ವಾಸನೆ ತುಪ್ಪ
ಕಾದ ಹಾಲಿನ ಹದವನು ಅರಿತು
ಹಾಕಿದರಾಯ್ತು ಹೆಪ್ಪ
ಪದದಲಿ ಹೆಂಗ ಅಡಗಿ ಕೂತಿದೆ
ಆಗಸದಗಲದ ಅರ‍್ತ
ಹೊಸಲೋಕವನೆ ತೆರೆದು ಬಿಡುವುದು
ಜೀವ ಬಾವದಿ ಬೆರತ
ಸಾಲಲಿ ಹೆಂಗ ಅಡಗಿ ಕೂತಿದೆ
ಸುಂದರ ಕವಿತೆಯ ಬಾವ
ಅನುಬವ ಲಯದಲಿ ಬೆರೆತರೆ ಸಾಕು
ತಾಳಿಬಿಡುವುದು ಜೀವ
( ಚಿತ್ರ ಸೆಲೆ: clipartpanda.com)
Good poem