ಪುರಾಣಪ್ರಸಿದ್ದ ಚಿಕ್ಕದೇವಮ್ಮನ ಬೆಟ್ಟ
– ಆರೋನಾ ಸೋಹೆಲ್.
ಹೆಗ್ಗಡದೇವನ ಕೋಟೆ ತಾಲೂಕಿನ ಪ್ರಸಿದ್ದ ಯಾತ್ರಾ ಸ್ತಳಗಳಲ್ಲಿ ಚಿಕ್ಕದೇವಮ್ಮನ ಬೆಟ್ಟವೂ ಒಂದು. ಬಾನುವಾರ ಮತ್ತು ಮಂಗಳವಾರಗಳಂದು ಹೆಚ್ಚು ಬಕ್ತರು ತಾಯಿ ಚಿಕ್ಕದೇವಮ್ಮನ ದರ‍್ಶನಕ್ಕೆ ಬರುತ್ತಾರೆ. ಈ ಬೆಟ್ಟವನ್ನು ದೂರದಿಂದ ನೋಡಿದಾಗ ಒಂದು ಹೆಣ್ಣಿನ ಆಕ್ರುತಿಯಂತೆ, ಆಕಾಶದೆಡೆಗೆ ಮುಕ ಮಾಡಿ ಮಲಗಿರುವಂತೆ ಕಾಣುತ್ತದೆ. ಬೆಟ್ಟದ ಮೇಲೆ ಚಾಮುಂಡೇಶ್ವರಿಯ ಏಳು ಸಹೋದರಿಯರಲ್ಲಿ ಒಬ್ಬಳಾದ ಚಿಕ್ಕದೇವಮ್ಮ ದೇವಿಯನ್ನು ಅದಿದೇವತೆಯನ್ನಾಗಿ ಪೂಜಿಸಲಾಗುತ್ತಿದೆ.
ಚಿಕ್ಕದೇವಮ್ಮನ ಬೆಟ್ಟದ ಐತಿಹಾಸಿಕ ಹಿನ್ನೆಲೆ
ಈ ದೇಗುಲಕ್ಕೆ ಎಂಟು ನೂರು ವರ‍್ಶಗಳ ಇತಿಹಾಸವಿದೆ. ಈ ದೇಗುಲವನ್ನು ಪುನ್ನಾಟರ ದೊರೆಗಳ ಕಾಲದಲ್ಲಿ ರಾಜ್ಯದ ಅದಿದೇವತೆಯಾಗಿದ್ದ ದೇವಿಗೆ ಬೆಟ್ಟದ ಮೇಲೆ ದೇವಾಲಯವನ್ನು ನಿರ‍್ಮಿಸಲಾಯಿತು. ನಂತರ ಚೋಳರು, ಅನಂತರ ಮೈಸೂರು ಒಡೆಯರ್ ಮನೆತನದ ಮಹಾರಾಜರು ಈ ದೇವಾಲಯದ ಅಬಿವ್ರುದ್ದಿಗೆ ನೆರವಾಗಿದ್ದಾರೆ. ಈಗ ಇದನ್ನು ರಾಜ್ಯ ಸರ‍್ಕಾರದ ಮುಜರಾಯಿಗೆ ಸೇರಿಸಲಾಗಿದ್ದು, 2011 ರಲ್ಲಿ ದೇವಸ್ತಾನವನ್ನು ಜೀರ‍್ಣೋದ್ದಾರಗೊಳಿಸಲಾಗಿದೆ.
ಪ್ರತಿ ವರ‍್ಶ ಯುಗಾದಿ ಹಬ್ಬದ ಹೊತ್ತಿನಲ್ಲಿ ಜಾತ್ರೆ ನಡೆಯುತ್ತದೆ. ಉತ್ಸವ ಮೂರ‍್ತಿಯನ್ನು ಸಮೀಪದಲ್ಲಿರುವ ಹಾಲ್‍ಗಡಕ್ಕೆ ತೆಗೆದುಕೊಂಡು ಕಬಿನಿ ಹೊಳೆಯಲ್ಲಿ ಪೂಜೆ ಮಾಡಲಾಗುತ್ತದೆ. ಸಮೀಪದ ಇಟ್ನಾ ಗ್ರಾಮದ ಬಕ್ತರ ಮನೆಯಲ್ಲಿ ಎರಡು ದಿನ ಇಟ್ಟು ವಿಶೇಶ ಪೂಜೆ ನೆರವೇರಿಸಲಾಗುತ್ತದೆ. ದನುರ್ ಮಾಸದ ಹುಣ್ಣಿಮೆಯಲ್ಲಿ ವಿಶೇಶ ಪೂಜೆಗಳು ಬೆಟ್ಟದ ದೇಗುಲದಲ್ಲಿ ನಡೆಯುತ್ತವೆ.
ಪುರಾಣಗಳಲ್ಲಿ ಚಿಕ್ಕದೇವಮ್ಮನ ಬೆಟ್ಟ
ಪುರಾಣದ ಪ್ರಕಾರ ರಾಕ್ಶಸ ಸಂಹಾರಕ್ಕಾಗಿ ದೇವಿ ಪಾರ‍್ವತಿಯು ಬೂಲೋಕದಲ್ಲಿ ಏಳು ದೇವತೆಯರ ರೂಪಗಳಲ್ಲಿ ಅವತರಿಸುತ್ತಾಳೆ. ಬೂಲೋಕಕ್ಕೆ ಬಂದ ಏಳು ದೇವತೆಯರು, ದಕ್ಶಿಣ ದಿಕ್ಕಿನ ಕಡೆ ಕಾಣುವ ಎತ್ತರದ ಬೆಟ್ಟಗಳನ್ನು ನೆಲೆಯಾಗಿ ಆರಿಸಿಕೊಳ್ಳುತ್ತಾರೆ. ಅವರಲ್ಲಿ ಒಬ್ಬಳಾದ ಚಿಕ್ಕದೇವಮ್ಮ ಈ ಬೆಟ್ಟದ ಕಡೆಗೆ ಬರುತ್ತಿರಲು ಬೆಟ್ಟವು ಸಾವಿರಾರು ರಾಕ್ಶಸರಿಂದ ತುಂಬಿರುತ್ತದೆ. ಈ ಸಮಯದಲ್ಲಿ ರಾಕ್ಶಸರನ್ನು ಕಂಡು ಮೊದಲಿಗೆ ಹೆದರಿದ ಈಕೆ ಅವರಿಂದ ತಪ್ಪಿಸಿಕೊಂಡು ಬೆಟ್ಟದ ಮೇಲೆ ಇದ್ದ ಗುಹೆಯಲ್ಲಿ ಅವಿತುಕೊಳ್ಳುತ್ತಾಳೆ. ನಂತರ ಎಲ್ಲಾ ರಾಕ್ಶಸರನ್ನು ಸಂಹರಿಸಿ ಬೆಟ್ಟದ ಮೇಲೆ ನೆಲೆಸುತ್ತಾಳೆ.
ಈ ಜಾಗದ ಹಿಂದೆ ಹಲವಾರು ಪುರಾಣ ಕತೆಗಳಿವೆ. ಹೆಚ್. ಡಿ. ಕೋಟೆ ಹಾಗು ನಂಜನಗೂಡುಗಳ ಸುತ್ತಮುತ್ತ ರೈತರ ಜೀವನಾಡಿಯಾಗಿ ಹರಿಯುವ ಕಪಿಲಾ ನದಿ ಈ ಬೆಟ್ಟದ ಮುಂದೆ ನಿರ‍್ಮಲವಾಗಿಯೂ, ಬಹಳ ಶಾಂತವಾಗಿಯೂ ಹರಿಯುತ್ತದೆ. ಬೆಟ್ಟದ ಮುಂದಿರುವ ನದಿಯಲ್ಲಿ ದೇವಿಗೆ ವರ‍್ಶಕ್ಕೆ ಒಮ್ಮೆ ತೆಪ್ಪೋತ್ಸವ ನಡೆಯುತ್ತದೆ. ಈ ಪ್ರದೇಶಕ್ಕೆ ಹಾಲ್‍ಗಡ ಎಂದು ಕರೆಯುತ್ತಾರೆ. ನದಿಯು ನಿದಾನವಾಗಿ ಹರಿಯುವುದರಿಂದ ನೀರು ಹಾಲಿನ ಹಾಗೆ ನೊರೆ ನೊರೆಯಾಗಿ ಹರಿಯುತ್ತದೆ. ಇದೇ ಕಾರಣಕ್ಕಾಗಿ ಇದನ್ನು ಹಾಲ್‌ಗಡ ಎಂದು ಕರೆದಿರಬಹುದು.
ಇನ್ನೊಂದು ಪುರಾಣದ ಕತೆಯಂತೆ, ಬೆಟ್ಟದ ಪಕ್ಕದಲ್ಲಿರುವ ಗ್ರಾಮ ಇಟ್ನಾದ ಒಬ್ಬ ಮಹಿಳೆ ಪ್ರತಿದಿನ ದೇವಿಗೆ ಹಾಲನ್ನು ನೈವೇದ್ಯವಾಗಿ ಅರ‍್ಪಿಸುತ್ತಿದ್ದಳು. ಒಂದು ದಿನ ನದಿ ದಾಟುವಾಗ ಆಯತಪ್ಪಿ ನದಿಯಲ್ಲಿ ಬೀಳುತ್ತಾಳೆ. ನೈವೇದ್ಯದ ಹಾಲು ನದಿಯ ನೀರಿನಲ್ಲಿ ಚೆಲ್ಲಿ ಹರಿದು ಹೋಗುತ್ತದೆ. ನಂತರ ಬಯ ಮತ್ತು ಬಕ್ತಿಯಿಂದ ದೇವಿಯನ್ನು ಮನಸ್ಸಿನಲ್ಲಿ ಪ್ರಾರ‍್ತಿಸುತ್ತಾ ಅದೇ ನದಿಯ ನೀರನ್ನು ತೆಗೆದುಕೊಂಡು ನೈವೇದ್ಯಮಾಡಲು ಬೆಟ್ಟವನ್ನು ಏರುತ್ತಾಳೆ. ಇವಳ ಬಕ್ತಿಗೆ ಮೆಚ್ಚಿದ ದೇವಿಯು ನೀರನ್ನು ಹಾಲನ್ನಾಗಿ ಸ್ವೀಕರಿಸುತ್ತಾಳೆ. ಅಂದಿನಿಂದ ಈ ಸ್ತಳವನ್ನು ಹಾಲ್‍ಗಡ ಹೆಸರಿನಿಂದ ಕರೆಯಲಾಗುತ್ತಿದೆ ಎಂದು ಹೇಳುತ್ತಾರೆ.
ಹಳೆಯ ದೇವಾಲಯ ಇದ್ದ ಜಾಗದಲ್ಲೇ, ಒಂದು ಹೊಸ ದೇವಾಲಯ ಕಟ್ಟಲಾಗಿದೆ. ಇಲ್ಲಿ ದೇವಿಯನ್ನು ನೇರವಾಗಿ ನೋಡಬಹುದು, ಪ್ರಾರ‍್ತಿಸಬಹುದು. ಆದರೆ ಹಳೆಯ ದೇವಾಲಯದಲ್ಲಿ ದೇವಿಯನ್ನು ನೇರವಾಗಿ ನೋಡಲು ಆಗುತ್ತಿರಲ್ಲಿಲ್ಲ. ಬೂಲೋಕಕ್ಕೆ ಇಳಿದು ಬಂದ ದೇವಿ ಮೊದಲು ರಾಕ್ಶಸರಿಗೆ ಹೆದರಿ ಅವಿತುಕೊಂಡಿರುತ್ತಾಳೆ. ಈ ಕಾರಣಕ್ಕೆ ದೇವಿಯನ್ನು ಮರೆಯಾಗಿ ಇಟ್ಟು ಪೂಜಿಸಲಾಗುತ್ತಿತ್ತು. ಅವಳಿಗೆ ರಕ್ಶಣೆಗೆ ನೆರವಾಗಲು ಶಿವನು ರೂಪ ಬದಲಿಸಿ ಅವಳಿಗೆ ಆಶ್ರಯ ನೀಡುತ್ತಾನೆ. ಪ್ರಯಾಣದ ಆಯಸವನ್ನು ಕಳೆದ ನಂತರ ದೇವಿಯು ಯುದ್ದಕ್ಕೆ ಸಿದ್ದಳಾಗಿ ಎಲ್ಲಾ ರಾಕ್ಶಸರನ್ನು ಸಂಹರಿಸುತ್ತಾಳೆ. ಬೆಟ್ಟದ ತಳದಲ್ಲಿದ್ದ ಒಬ್ಬ ಕುಂಟ ರಾಕ್ಶಸ ದೇವಿಗೆ ಶರಣಾಗಿ, ದೇವಿಯ ಕಾವಲುಗಾರನಾಗಿ ಬೆಟ್ಟದ ಬುಡದಲ್ಲಿ ಸೇವಕನಂತೆ ನೆಲೆನಿಲ್ಲುತ್ತಾನೆ. ದೇವಾಲಯದ ಜೀಣೋದ್ದಾರದ ನಂತರ ದೇವಿಯನ್ನು ನೇರವಾಗಿ ಪೂಜಿಸಲಾಗುತ್ತಿದೆ.
ಇದು ಸಪ್ತಮಾತ್ರುಕೆಯರ ದೇವಾಲಯವೂ ಹೌದು. ದೇವಸ್ತಾನದ ಮೂಲ ದೇವಿಯ ವಿಗ್ರಹದ ಕೆಳಗೆ ಸಪ್ತ ಮಾತ್ರುಕೆಯರ ವಿಗ್ರಹವನ್ನು ಪೂಜಿಸಲಾಗುತ್ತಿದೆ.
ದೇವಿಯು ತಾನು ಎಲೆ ಮರೆಯ ಕಾಯಿಯಂತೆ ಇದ್ದುಕೊಂಡು, ತನ್ನ ಬಕ್ತರು ಬೇಡಿಕೊಂಡ ವರಗಳನ್ನು ನೀಡುತ್ತಾ, ಬಕ್ತರ ಮೇಲಿನ ತಾಯಿ ಪ್ರೀತಿಯನ್ನು ಪ್ರತಿ ವರ‍್ಶ ಇಮ್ಮಡಿಗೊಳಿಸಿಕೊಂಡು ಬರುತ್ತಿದ್ದಾಳೆ. ಈ ದೇವಿಯ ಮಹಿಮೆಯನ್ನು ಪ್ರತಿದಿನ ಬೆಟ್ಟ ಏರುವ ಬಕ್ತರ ದಂಡೇ ತಿಳಿಸುತ್ತದೆ.
ಚಿಕ್ಕದೇವಮ್ಮನ ಬೆಟ್ಟ ತಲುಪುವುದು ಹೇಗೆ
ಚಿಕ್ಕದೇವಮ್ಮನ ಬೆಟ್ಟ ಮೈಸೂರಿನಿಂದ 60 ಕಿ.ಮೀ. ಮತ್ತು ಹೆಗ್ಗಡದೇವನ ಕೋಟೆಯಿಂದ 25 ಕಿ.ಮೀ. ದೂರದಲ್ಲಿದೆ. ಹೆಗ್ಗಡದೇವನ ಕೋಟೆಯಿಂದ ಹೊರಟು, ಹ್ಯಾಂಡ್ ಪೋಸ್ಟ್ ಸರಗೂರು, ಪುರದಕಟ್ಟೆ ಮಾರ‍್ಗವಾಗಿ ಚಿಕ್ಕದೇವಮ್ಮನ ದೇವಾಲಯಕ್ಕೆ ಹೋಗಬಹುದು. ಚಾಮರಾಜನಗರ ಮಾರ‍್ಗವಾಗಿ ಬರುವವರು ಗುಂಡ್ಲುಪೇಟೆ, ಬೇಗೂರು ಮಾರ‍್ಗವಾಗಿ ಇಲ್ಲಿಗೆ ತಲುಪಬಹುದು.
(ಚಿತ್ರ ಸೆಲೆ: vijayavani.net)
ಚಿಕ್ಕದೇವಮ್ಮನ ಜಾತ್ರೆ ಕೆ ದಡದಹಳ್ಳಿ ಮಾಳದ್ದಲಿ ಪ್ರತಿ ವರ್ಷ ನಡೆಯುತ್ತದೆ