ಸುತ್ತಾಟ: ಹಚ್ಚ ಹಸಿರಿನ ಅರಕು ವ್ಯಾಲಿ – ಕಂತು 1

ಹನುಮಗೌಡ ಕಲಿಕೇರಿ.

ಕಂತು-2

ಕಳೆದ ವರ‍್ಶದ ಅಂತ್ಯದಲ್ಲಿ ನಾವು ಸ್ನೇಹಿತರು ನೋಡಲು ಬಯಸಿದ ಪ್ರವಾಸಿ ಸ್ತಳ ಅರಕು ಕಣಿವೆಯಾಗಿತ್ತು. ಇದು ಆಂದ್ರ ಪ್ರದೇಶದ ವಿಶಾಕಪಟ್ಟಣಂನಿಂದ ಸುಮಾರು 115 ಕಿಲೋಮೀಟರ್ ದೂರದಲ್ಲಿದೆ. ನಾವು ವಿಶಾಕಪಟ್ಟಣಂನಿಂದ ಅರಕುಗೆ ಹೋಗುವ ಬಸ್ಸು ಹತ್ತಿದಾಗ ಸಾಯಂಕಾಲ 4 ಗಂಟೆ. ವಿಶಾಕಪಟ್ಟಣಂನಿಂದ ಸುಮಾರು 50 ಕಿಲೋಮೀಟರ್ ಕ್ರಮಿಸಿದ ನಂತರ ಪೂರ‍್ವ ಗಟ್ಟದ ಹಚ್ಚ ಹಸಿರಿನ ಪರ‍್ವತ ಶ್ರೇಣಿಗಳು ನಮ್ಮನ್ನು ಸ್ವಾಗತಿಸಿದವು. ಹಾಗೆಯೇ ಸಂಜೆಯ ಕುಳಿರ‍್ಗಾಳಿ ಶುರುವಾಯಿತು. ಬಸ್ಸಿನ ಕಿಟಕಿಯಿಂದ ಹೊರಗೆ ನೋಡಿದಾಗ ಎತ್ತರದ ಹಸಿರು ಬೆಟ್ಟಗಳು, ವಿಸ್ತಾರವಾದ ಸುಂದರ ಕಣಿವೆ ನಮ್ಮನ್ನು ರೋಮಾಂಚನಗೊಳಿಸಿದವು. ಕಣಿವೆಯ ಪ್ರಕ್ರುತಿ ಸೌಂದರ‍್ಯ, ಕಣಿವೆಯ ಆಳದಲ್ಲಿ ಹರಿಯುವ ತೊರೆ, ಅದರ ರಮ್ಯ ಸೊಬಗನ್ನು ನೋಡಿ ಅಚ್ಚರಿಗೊಂಡೆವು. 

ನಮ್ಮ ಬಸ್ಸು ಕಣಿವೆಯ ಚಿಕ್ಕದಾದ ದಾರಿಯಲ್ಲಿ  ಹೋಗುತ್ತಿತ್ತು. ಎದುರಿನಿಂದ ಬರುವ ವಾಹನಗಳು ನಿದಾನವಾಗಿ ಬರುತ್ತಿದ್ದವು. ಅನನುಬವಿ ಚಾಲಕರಿಗೆ ಈ ರಸ್ತೆ ಮೇಲಿನ ವಾಹನ ಚಾಲನೆ ಒಂದು ಸಾಹಸವೇ ಸರಿ. ರಸ್ತೆಯ ಕೆಲವೊಂದು ಮುರುಕಲು ತಿರುವುಗಳಲ್ಲಿ ಮುಂದಿನ ರಸ್ತೆಯು ಸ್ಪಶ್ಟವಾಗಿ ಕಾಣಿಸುತಿರಲಿಲ್ಲ. ಬಸ್ಸಿನ ಪ್ರಯಾಣದಲ್ಲಿ ಕಿಟಕಿಯಿಂದ ಹೊರಗೆ ತಲೆ ಹಾಕಿ ಪ್ರಕ್ರುತಿಯ ಹಸಿರಿನ ವಿಶಾಲ ಪರಿದಿಯ ಸೌಂದರ‍್ಯವನ್ನು ಕಣ್ಣುತುಂಬಿಕೊಂಡೆವು. ಉಲ್ಲಾಸದ ಪ್ರಯಾಣದ ನಂತರ ಅರಕು ವ್ಯಾಲಿ ಸೇರಿದಾಗ ರಾತ್ರಿ ಸಮಯ 7:30 ಗಂಟೆ ಅಂದು  ರಾತ್ರಿ ಸಹದ್ಯೋಗಿಗಳ ಸಂಬಂದಿಕರ ಮನೆಯಲ್ಲಿ ತಂಗಿದ್ದೆವು. ಅರಕುವಿನಲ್ಲಿ ಹೊರಗಿನಿಂದ ಬರುವ ಪ್ರವಾಸಿಗರಿಗಾಗಿ ಬಯಲು ರೆಸಾರ್‍ಟ್‌ಗಳು ತಲೆ ಎತ್ತಿವೆ. ಅಲ್ಲಿ ವ್ಯಾಲಿಯ ತಂಡಿ ಅನುಬವವನ್ನು ಪಡೆಯುವುದಕ್ಕಾಗಿ ಪ್ರವಾಸಿಗರಿಗಾಗಿ ಬಯಲು ಟೆಂಟ್ ಮನೆಗಳನ್ನು ಬಾಡಿಗೆಗೆ ಒದಗಿಸುತ್ತಾರೆ.

ಅರಕು ವ್ಯಾಲಿ ಸಮುದ್ರ ಮೇಲ್ಮಟ್ಟದಿಂದ 3,200 ಅಡಿ ಎತ್ತರದ ಪೂರ‍್ವ ಗಟ್ಟದ ಒಂದು ಸುಂದರ ಊರು. ಚಳಿಗಾಲದಲ್ಲಿ ಇಲ್ಲಿ ಕನಿಶ್ಟ 1 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಕಲಾಗುತ್ತದೆ. ಇದನ್ನು ಆಂದ್ರ ಪ್ರದೇಶದ ಊಟಿ ಎಂದೂ ಕರೆಯುತ್ತಾರೆ. ತುಂಬಾ ಜನಪ್ರಿಯವಾದ ಈ ಗಿರಿದಾಮ ಒರಿಸ್ಸಾ ಗಡಿಬಾಗಕ್ಕೆ ಕೇವಲ 10 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿಂದ ಒರಿಸ್ಸಾದ ಪ್ರಮುಕ ಸ್ತಳಗಳಾದ ಕೋರಾಪುಟ್, ಜೇಪೋರ್ ನಗರಗಳನ್ನು ಸುಲಬವಾಗಿ ತಲುಪಬಹುದು. ಇಲ್ಲಿ ಬೂಮಿ ಕರೀದಿ ಮಾಡಲು ಹೊರಗಿನವರಿಗೆ ಅವಕಾಶವಿಲ್ಲ. ಇಲ್ಲಿನ ನೆಲ ಅವರಿಗೆ ಮಾತ್ರ ಮೀಸಲು. ಗಿರಿಜನರ ಬದುಕು ಇಲ್ಲಿ ಹಾಸುಹೊಕ್ಕಾಗಿದೆ. ಬೊಂಬು ಚಿಕನ್ ಹಾಗೂ ಕ್ಯಾಂಪ್ ಪೈರ್ ಇಲ್ಲಿನ ಪ್ರಮುಕ ಆಕರ‍್ಶಣೆಗಳು. ಅಕ್ಟೋಬರ್ – ಡಿಸೆಂಬರ್ ತಿಂಗಳಲ್ಲಿ ತುಂಬಾ ಜನಸಂದಣಿ ಇರುತ್ತದೆ. 

ಆಂದ್ರ ಪ್ರದೇಶದ ಅರಣ್ಯ ಇಲಾಕೆಯಿಂದ ಅರಕುವಿನಲ್ಲಿ ಪಾರೆಸ್ಟ್ ರೀಟ್ರೀಟ್ (forest retreat) ಎಂಬ ಸರ‍್ಕಾರೀ ರೆಸಾರ‍್ಟ್ ಲಬ್ಯ ಇದೆ. ಇಲ್ಲಿ ಕಡಿಮೆ ದರದಲ್ಲಿ ಪ್ರವಾಸಿಗರು ತಂಗಬಹುದು.ಇದನ್ನು ಉತ್ತಮವಾಗಿ ಅಬಿವ್ರುದ್ದಿಪಡಿಸಲಾಗಿದೆ. ರಾತ್ರಿ ಉಳಿದುಕೊಳ್ಳಲು ಡಾರ‍್ಮ್ ರೂಮ್ಸ್ (Dorm Rooms), ಟೆಂಟ್ (Tented Accommodation), ಕ್ಯಾಂಪ್ ಪಯರ್ (Camp Fire), ಇಕೋ ಕ್ಯಾಂಪ್ ಸ್ವೀಟ್ಸ್ (Eco Camp Suites), ವಾಕಿಂಗ್ ಟ್ರಾಕ್ಸ್ (Walking Tracks) ಲಬ್ಯವಿವೆ.

ಮರುದಿನ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ನಾವು ಮಾಡಗಡ ಸನ್ರೈಸ್ ವ್ಯೂ ಪಾಯಿಂಟ್ ಗೆ ಹೊರೆಟೆವು. ನಮ್ಮ ಅತಿತೇಯ ಗೆಳೆಯರು ತಮ್ಮ ಕಾರನ್ನು ಬೆಳಗಿನ ದಟ್ಟ ಮಂಜಿನಲ್ಲಿ ತುಂಬಾ ನಿದಾನವಾಗಿ ಓಡಿಸುತ್ತಿದ್ದರು. ಬೆಳಗಿನ ಕಾವಣದಲ್ಲಿ ಹೋಗುವ ದಾರಿಯು ಅಸ್ಪಶ್ಟವಾಗಿತ್ತು. ಮಾಡಗಡ, ಅರಕು ಕಣಿವೆಯಿಂದ ಸುಮಾರು 10 ಕಿಲೋ  ಮೀಟರ್ ದೂರದಲ್ಲಿದೆ. ನಾವುಗಳು ಅಲ್ಲಿ ತಲುಪಿದಾಗ ಸುಮಾರು ಬಹಳಶ್ಟು ಪ್ರವಾಸಿಗರು ಆಗಲೇ ಸೇರಿದ್ದರು. ಹೋಗುವ ದಾರಿ ದಾರಿವು ಕೂಡ ಇಳಿಜಾರಿನಿಂದ ಕೂಡಿದ ಮಣ್ಣಿನ ರಸ್ತೆಯಾಗಿತ್ತು. ಅಂತೂ ಬೆಟ್ಟ ಏರಿ ವ್ಯೂ ಪಾಯಿಂಟ್ಅನ್ನು ತಲುಪಿದೆವು.

ಮಾಡಗಡ ಒಂದು ಚಿತ್ತಾಕರ‍್ಶಕ  ಬೆಟ್ಟಪ್ರದೇಶ. ಸುತ್ತಲೂ ನೋಡಿದಾಗ ನಾವು ಮಂಜಿನ ಮೋಡಗಳ ಮೇಲೆ ಇದ್ದೇವೆ ಎಂದು ಬಾಸವಾಯಿತು.  ಪ್ರವಾಸಿಗರು ವಿವಿದ ರೀತಿಯಲ್ಲಿ ಪೋಟೋ ತೆಗೆಸಿಕೊಳ್ಳುತ್ತಿದ್ದರು. ಸ್ತಳೀಯ ವ್ಯಾಪಾರಸ್ತ ಮಹಿಳೆಯರು ಪ್ರವಾಸಿಗರಿಗೆ ಗಿರಿಜನರ ಮಹಿಳೆಯರ ರೀತಿ ಉಡುಪು ದರಿಸಿ ಪೋಟೋ ತೆಗಿಸಿಕ್ಕೊಳ್ಳಲು ನಾನಾ ಬಣ್ಣಗಳ ಸೀರೆ, ಇತರ ಅಲಂಕಾರಿಕ ಸಾಮಗ್ರಿಗಳನ್ನು  ಬಾಡಿಗೆಗೆ ಕೊಡುತ್ತಾರೆ.  ಬುಡಕಟ್ಟು ಜನರ ‘ದಿಂಸ’ ನ್ರುತ್ಯ ಇಲ್ಲಿ ನೋಡಲಿಕ್ಕೆ ಸಿಗುವುದು. ವಿಶೇಶವೆಂದರೆ ಪ್ರವಾಸಿಗರು ಈ ನ್ರುತ್ಯದಲ್ಲಿ ಬಾಗವಹಿಸುತ್ತಾರೆ. ಸರಳ ಹೆಜ್ಜೆಗಳ ಈ ನ್ರುತ್ಯ ಮಾಡಿದಾಗ ಮನಸ್ಸಿಗೆ ಮುದ ನೀಡುತ್ತದೆ. ಇದು ನನಗೆ ವಿಶೇಶ ಅನುಬವ ನೀಡಿತು. ಈ ಪ್ರದೇಶಕ್ಕೆ ಹೋಗಲು ಬಸ್ಸುಗಳ ವ್ಯವಸ್ತೆ ಕೂಡಾ ಇದೆ. ಬಲು ಸುಂದರವಾಗಿದೆ ಮಾಡಗಡ ಪ್ರದೇಶ. ಸರಳ ಉಡುಗೆಯ ಗಿರಿಜನ ಮಹಿಳೆಯರ ನೋಟ ಕಂಡು ನಾನು ಬೆರಗಾದೆನು.

‘ಮಾಡಗಡ’ ನೋಡಿದ ಬಳಿಕ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ನಾವು ಗಿರಿಜನರ ಮ್ಯೂಸಿಯಮ್ ನೋಡಲು ಹೋದೆವು. ಮ್ಯೂಸಿಯಮ್‌ನಲ್ಲಿ ನಾವು ಬುಡಕಟ್ಟು ಜನರ ಜೀವನದ ವಿವಿದ ಸ್ತರಗಳನ್ನು ನೋಡಿದೆವು. ಅವರ ಆಯುದಗಳು, ಮೀನು ಹಿಡಿಯುವ ವಿವಿದ ಬಿದಿರಿನ ಬುಟ್ಟಿಗಳು (ದುಡಿ) ಕ್ರುಶಿ ಉಪಕರಣಗಳು, ದಾನ್ಯ ಸಂಗ್ರಹಿಸುವ ದೊಡ್ಡ ಮಣ್ಣಿನ ಮತ್ತು ಬಿದಿರಿನ ಹಂಡೆಗಳನ್ನು ಕಾಣಬಹುದು. ಅವರ ಕೊರಳಿನ, ಮೂಗಿನ ಆಬರಣಗಳು ಇಲ್ಲಿ ಪ್ರದರ‍್ಶನಕ್ಕಿವೆ. ಅವರು ಹಳೆಯ ನಾಣ್ಯಗಳಿಂದ ಮಾಡಿದ ಕೊರಳಿನ ಸರಗಳನ್ನು ಬಳಸುತ್ತಾರೆ. ಅವರ ಅಡುಗೆ ಮನೆಯ ವಿವಿದ ಮಾದರಿಯ ಮಣ್ಣಿನ, ಬಿದಿರಿನ ಗ್ರುಹ ಉಪಯೋಗಿ ವಸ್ತುಗಳು, ಮರದ ಬೀಸುವ ಕಲ್ಲುಗಳು, ಪಶುಗಳ ಬಾಯಿಗೆ ಹಾಕುವ ಮಗಡಗಳನ್ನು ಇಲ್ಲಿ ಪ್ರದರ‍್ಶಿಸಲಾಗಿದೆ.

ಈ ಮ್ಯೂಸಿಯಮ್ ಇನ್ನೊಂದು ವಿಶೇಶವೆಂದರೆ ಬುಡಕಟ್ಟು ಜನರ ಬೇರೆ ಬೇರೆ ಸನ್ನಿವೇಶದ ಪ್ರತಿಕ್ರುತಿಗಳನ್ನು ಉತ್ತಮ ಸಂರಕ್ಶಣೆಯಿಂದ ಅತ್ಯಂತ ಒಪ್ಪವಾಗಿ ಬಣ್ಣ ಬಳಿದು ಪ್ರದರ‍್ಶಿಸಲಾಗಿದೆ. ಅವರ ಬೇಟೆ, ಬೇಸಾಯ, ಮೀನು ಹಿಡಿಯುವ, ಆಹಾರ ತಯಾರಿಸುವ, ಡೋಲುಗಳು ಬಡಿಯುವ, ಹಬ್ಬದ ದ್ರುಶ್ಯಗಳು, ರೀತಿ ರಿವಾಜುಗಳು, ಆದಿವಾಸಿಗಳ ದೇವಾಲಯದ ಪ್ರತಿಕ್ರುತಿಗಳು ಮನಸ್ಸನ್ನು ಸೂರೆಗೊಳಿಸಿ ನಮ್ಮನ್ನು  ಗಿರಿಜನರ ಪ್ರಪಂಚಕ್ಕೆ ಕರೆದೊಯ್ಯುತ್ತವೆ.

ನಮ್ಮ ಎರಡನೇ ದಿನದ ಪ್ರವಾಸ ಕಟಕಿ ಜಲಪಾತದ್ದಾಗಿತ್ತು, ಇದರ ಬಗ್ಗೆ ಮುಂದಿನ ಕಂತಿನಲ್ಲಿ ತಿಳಿಯೋಣ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks