ಪ್ರಕ್ರುತಿ ವಿಸ್ಮಯದ ‘ಬಿಡುವು ಪಡೆಯುವ’ ನೀರ ಬುಗ್ಗೆಗಳು

– ಕೆ.ವಿ.ಶಶಿದರ.

intermittent spring, ಬುಗ್ಗೆ

ನೀರಿನ ಬುಗ್ಗೆಗಳು ಜೀವರಾಶಿಗಳಿಗೆ ಪ್ರಕ್ರುತಿ ನೀಡಿರುವ ವಿಶೇಶ ಕೊಡುಗಗಳು ಎನ್ನಬಹುದು. ಜಗತ್ತಿನಾದ್ಯಂತ ಹಲವು ಬುಗ್ಗೆಗಳಿವೆ. ಚಿಲುಮೆಗಳಿಂದ ಸಾಮಾನ್ಯವಾಗಿ ಬೇಸಿಗಾಲ ಹೊರತುಪಡಿಸಿದರೆ ಬಹುತೇಕ ಸತತವಾಗಿ ನೀರು ಹರಿಯುತ್ತದೆ. ಆದರೆ ಕೆಲವೇ ನಿಮಿಶಗಳಶ್ಟು ಹೊತ್ತು ನೀರು ಹೊರಹಾಕಿ, ಕೆಲವು ನಿಮಿಶ ಬಿಡುವು ಪಡೆಯುವ(!) ಬುಗ್ಗೆಗಳಿವೆಯೆಂದರೆ ನೀವು ನಂಬಲೇ ಬೇಕು. ಹೀಗೆ ತಡೆತಡೆದು ನೀರು ಹೊರಹಾಕುವ ಕೆಲವೇ ಕೆಲವು ಬುಗ್ಗೆಗಳು ಜಗತ್ತಿನಲ್ಲಿವೆ. ಇದರ ಹಿಂದಿರುವ ವಿಶಯ ದಿಟವಾಗಿಯೂ ಅಚ್ಚರಿ ಮೂಡಿಸುತ್ತದೆ.

ಅಮೆರಿಕಾದಲ್ಲಿರುವ ಅಚ್ಚರಿಯ ಬುಗ್ಗೆಗಳು

ಅಮೇರಿಕಾದ ವ್ಯೋಮಿಂಗ್ ನಾಡಿನ ಸ್ವಿಪ್ಟ್ ಕ್ರೀಕ್ ಕಣಿವೆಯಲ್ಲಿ ಇಂತಹುದೊಂದು ಚಿಲುಮೆಯಿದೆ. ಇದು ತಡೆತಡೆದು ನೀರು ಹೊರಹಾಕುವ ವಿಶ್ವದ ಅತಿ ದೊಡ್ಡ ಬುಗ್ಗೆ ಎಂದು ಹೆಸರು ಪಡೆದಿದೆ. ಇದನ್ನು ‘ಇಂಟರ್‍ಮಿಟೆಂಟ್ ಸ್ಪ್ರಿಂಗ್’ ಎನ್ನುತ್ತಾರೆ. ‘ಪೀರಿಯಾಡಿಕ್ ಸ್ಪ್ರಿಂಗ್’ ಎಂಬ ಮತ್ತೊಂದು ಹೆಸರೂ ಸಹ ಇದಕ್ಕಿದೆ. ಇದು ಹದಿನೆಂಟು ನಿಮಿಶ ನೀರನ್ನು ಹೊರಹಾಕಿದರೆ ಮತ್ತೆ ಹದಿನೆಂಟು ನಿಮಿಶ ಸ್ತಬ್ದವಾಗುತ್ತದೆ. ಬೇರೆ ಬೇರೆ ಕಾರಣಗಳಿಂದ ಈ ಸಮಯದಲ್ಲಿ ಕೊಂಚ ಮಟ್ಟಿಗಿನ ಏರುಪೇರಾಗುವ ಸಾದ್ಯತೆ ಇದೆ.

ಎಬ್ಬಿಂಗ್ & ಪ್ಲೋಯಿಂಗ್ ಹೆಸರಿನ ಈ ಬಗೆಯ ಮತ್ತೊಂದು ಬುಗ್ಗೆ ಅಮೆರಿಕಾದ ರೋಜರ್‍ವಿಲ್ಲಾ ಬಳಿಯ ಹಾಕಿನ್ಸ್ ಕೌಂಟಿಯಲ್ಲಿದೆ. ಪ್ರತಿ ನಿಮಿಶಕ್ಕೆ 2000 ಲೀಟರ್‌ನಶ್ಟು ನೀರನ್ನು ಹೊರಹಾಕುವ ಈ ಬುಗ್ಗೆ ಪ್ರತಿ ಎರಡು ಗಂಟೆ ನಲವತ್ತೇಳು ನಿಮಿಶಕ್ಕೊಮ್ಮೆ ನೀರನ್ನು ಹರಿಸುತ್ತದೆ. ನಂತರ ನಿಸ್ತೇಜವಾಗುತ್ತದೆ.

‘ಜೆರುಸಲೆಂನ ಗಿಹೋದ್’ – ಪ್ರಾಚೀನ ಕಾಲದ ವಿಸ್ಮಯಕಾರಿ ಬುಗ್ಗೆ

ಇಂತಹುದೇ ಇನ್ನೊಂದು ಬುಗ್ಗೆ ಜೆರುಸಲೆಂನಲ್ಲಿರುವ ಗಿಹೋನ್. ಬಹಳ ಹಿಂದಿನಿಂದಲೂ ಡೇವಿಡ್ ನಗರದ ಮಂದಿಯು ಕುಡಿಯುವ ನೀರಿಗಾಗಿ ಇದನ್ನು ಅವಲಂಬಿಸಿದ್ದರು. ಕುಡಿಯಲು ಮಾತ್ರವಲ್ಲದೆ, ಆಹಾರ ಒದಗಿಸುತ್ತಿದ್ದ ಕಿಡ್ರಾನ್ ಕಣಿವೆಯ ಉದ್ಯಾನವನಗಳ ನೀರಾವರಿಗೆ ಕೂಡ ಇದರ ನೀರು ಬಳಕೆಯಾಗುತ್ತಿತ್ತು. ಗಿಹೋನ್ ಬುಗ್ಗೆಯಿಂದ ಚಳಿಗಾಲದಲ್ಲಿ ಪ್ರತಿದಿನ ಮೂರರಿಂದ ಐದು ಬಾರಿ ನೀರು ಹೊರ ಹಮ್ಮಿದರೆ, ಬೇಸಿಗೆಯಲ್ಲಿ ದಿನಕ್ಕೆರೆಡು ಬಾರಿಗೆ ಸೀಮಿತವಾಗಿತ್ತು. ಎಲ್ಲಾ ಕಾಲಕ್ಕೂ ಈ ಬುಗ್ಗೆಯಿಂದ ನೀರು ಬರುತ್ತಿಲಿಲ್ಲ. ಹೀಗಾಗಿ ಅಗತ್ಯ ಸಮಯದ ಉಪಯೋಗಕ್ಕಾಗಿ ‘ಪೂಲ್ ಆಪ್ ಸಿಲೋಮ್’ ಎಂಬ ದೊಡ್ಡ ಜಲಾಶಯವನ್ನು ಕಟ್ಟಿ, ಅದರಲ್ಲಿ ಬುಗ್ಗೆಯ ನೀರನ್ನು ಮುಂದಿನ ದಿನಗಳ ಕ್ರುಶಿಯ ಉಪಯೋಗಕ್ಕಾಗಿ ಸಂಗ್ರಹಿಸಿಡಲಾಗುತ್ತಿದೆ.

ತಡೆದು ತಡೆದು ನೀರನ್ನು ಹೊರಹಾಕುವ ಬುಗ್ಗೆಗಳ ಗುಣ ಲಕ್ಶಣಗಳನ್ನು ಅಲೆಗೆ ಹೋಲಿಸಬಹುದು. ಸೂಕ್ಶ್ಮವಾಗಿ ಗಮನಿಸಿದರೆ ಚಿಲುಮೆಯಿಂದ ಹೊರಹೊಮ್ಮುವ ನೀರಿನ ಮಟ್ಟ ಒಂದೇ ರೀತಿಯಲ್ಲಿ ಏರುಪೇರಾಗುವುದನ್ನು ಕಾಣಬಹುದು. ಈ ರೀತಿಯ ಬುಗ್ಗೆಗಳಲ್ಲಿ ಹಲವಾರು ವಿದಗಳಿವೆ. ಕೆಲವೆಡೆ ನೀರಿನ ಹರಿವು ಸಂಪೂರ‍್ಣವಾಗಿ ನಿಂತು ಮತ್ತೆ ಪ್ರಾರಂಬವಾಗುವುದು, ಮತ್ತೆ ಕೆಲವಡೆ ಹರಿವ ನೀರಿನ ಪ್ರಮಾಣ ಲಯಬದ್ದವಾಗಿ ಏರುಪೇರಾಗುವುದು ಕಂಡು ಬರುತ್ತದೆ. ಈ ಕುರಿತು ಅರಕೆ ನಡೆಸಿದ ವಿಗ್ನಾನಿಗಳು ಸಾಕಶ್ಟು ಸಿದ್ದಾಂತಗಳನ್ನು ಸೂಚಿಸಿದ್ದರೂ ಸಹ ಇದರ ಪಕ್ಕಾ ಕಾರಣ ಇನ್ನೂ ಮರೀಚಿಕೆಯಾಗಿಯೇ ಇದೆ. ಇದಕ್ಕೆ ಸೈಪನ್ ಪರಿಣಾಮ(siphon effect) ಕಾರಣವೆಂದು ವಿಗ್ನಾನಿಗಳು ಹೇಳುತ್ತಾರೆ.

ಏನಿದು ಸೈಪನ್ ಪರಿಣಾಮ?working of rhythmic spring

ತಡೆತಡೆದು ನೀರು ಹೊರಹಾಕುವ ಬುಗ್ಗೆಗೆ ಬರುವ ಅಂತರ‍್ಜಲದ ನೀರು ನಿರಂತರವಾಗಿ ಹರಿದು ಮೊದಲು ನೆಲದಡಿಯಲ್ಲಿರುವ ದೊಡ್ಡ ತೊಟ್ಟಿಯಲ್ಲಿ ಸಂಗ್ರಹವಾಗುತ್ತದೆ. ತೊಟ್ಟಿಯ ತಳದಿಂದ ನೀರು ಸಣ್ಣ ನಳಿಕೆಯ ಮೂಲಕ ಕೊಂಚ ಮೇಲಕ್ಕೆ ಹೋಗಿ ತದನಂತರ ಪೂರ‍್ಣ ಬಾಗಿ ತಲೆಕೆಳಗಾದ ‘U’ ಆಕಾರದಲ್ಲಿ ತಿರುವು ಪಡೆದು ಬೂಮಿಯ ಮೇಲೆ ಕೊನೆಯಾಗುತ್ತದೆ. ಬೂಗತ ತೊಟ್ಟಿಯಲ್ಲಿ ನೀರು ತುಂಬುತ್ತಿದ್ದಂತೆ ನಳಿಕೆಯೂ ತುಂಬುತ್ತಾ ಹೋಗುತ್ತದೆ. ತೊಟ್ಟಿಯಲ್ಲಿನ ನೀರಿನ ಮಟ್ಟ ನಳಿಕೆಯು ಬಾಗಿದ್ದ ಮಟ್ಟಕ್ಕಿಂತ ಹೆಚ್ಚಾದಾಗ ನೀರು ನಳಿಕೆಯಿಂದ ಕೆಳಕ್ಕೆ ಹರಿದು ಬುಗ್ಗೆಯಾಗಿ ಹೊರಹೊಮ್ಮುತ್ತದೆ.

ಒಮ್ಮೆ ಬುಗ್ಗೆಯಿಂದ ನೀರು ಹೊರಬರಲು ಪ್ರಾರಂಬವಾಯಿತೆಂದರೆ, ಸೈಪನ್ ಪರಿಣಾಮದಿಂದಾಗಿ ತೊಟ್ಟಿಯಲ್ಲಿರುವ ನೀರು ಬರಿದಾಗುವವರೆಗೂ ಬುಗ್ಗೆಯಿಂದ ನೀರು ಹೊರಹೊಮ್ಮುತ್ತಲೇ ಇರುತ್ತದೆ. ತೊಟ್ಟಿಯಲ್ಲಿನ ನೀರಿನ ಮಟ್ಟ ನಳಿಕೆಯ ಬಾಯಿಯ ಮಟ್ಟಕ್ಕಿಂತ ಕಡಿಮೆಯಾದಾಗ ನೀರು ಹೊರಹೊಮ್ಮುವುದು ನಿಲ್ಲುತ್ತದೆ. ಮತ್ತೆ ನೀರಿನ ಒಳ ಹರಿವಿನಿಂದ ತೊಟ್ಟಿ ತುಂಬುತ್ತಿದ್ದಂತೆ, ನೀರಿನ ಮಟ್ಟ ಹೆಚ್ಚಾಗಿ ನಳಿಕೆ ತುಂಬತೊಡಗುತ್ತದೆ. ನಳಿಕೆಯ ಬಾಗಿದ ಎತ್ತರಕ್ಕಿಂತ ನೀರಿನ ಮಟ್ಟ ಹೆಚ್ಚಾದಲ್ಲಿ ಬುಗ್ಗೆಯಿಂದ ನೀರು ಹೊರ ಹೊಮ್ಮಲು ಶುರುವಾಗುತ್ತದೆ.

ಪ್ರಕ್ರುತಿದತ್ತ ವಿಸ್ಮಯಗಳಲ್ಲೊಂದಾದ ಈ ಬಗೆಯ ಬುಗ್ಗೆಗಳು ಕೆಲವೇ ಕೆಲವಿದ್ದು, ಜಗತ್ತಿನಾದ್ಯಂತ ಈ ಸಂಕ್ಯೆ ನೂರಕ್ಕೂ ಕಡಿಮೆ ಎಂದು ಅದ್ಯಯನವೊಂದರಿಂದ ತಿಳಿದುಬಂದಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com, amusingplanet.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: