ಈ ಪಿಸ್ತೂಲು ತುಂಬಾ ವಿಚಿತ್ರ ಮತ್ತು ದುಬಾರಿ ಕೂಡ!!

– ಕೆ.ವಿ.ಶಶಿದರ.

ದುಬಾರಿ ಪಿಸ್ತೂಲು, Expensive Pistol

ಇದೊಂದು ವಿಶಿಶ್ಟ ವಿನ್ಯಾಸ ಹೊಂದಿರುವ ಪಿಸ್ತೂಲ್. ಅಂದಾಜು 914 ಗ್ರಾಂನಶ್ಟು (2.015 ಪೌಂಡ್) ತೂಕವುಳ್ಳ ಪಿಸ್ತೂಲ್. ಬೇರೆ ಗನ್ನುಗಳಿಗಾಗಲಿ, ಪಿಸ್ತೂಲಿಗಾಗಲಿ ಇದರ ಹೋಲಿಕೆ ಸಲ್ಲ. ಯಾಕೆಂದರೆ ಇದು ತೀರಾ ಬೇರೆಯದಾಗಿರುವ ಪಿಸ್ತೂಲ್.

ಈ ಪಿಸ್ತೂಲು ಚಿಮ್ಮಿಸುವ ಗುಂಡು ಪ್ರಾಣವನ್ನು ತೆಗೆಯುವುದಿಲ್ಲ!

ಈ ಪಿಸ್ತೂಲ್ ಅನ್ನು ಉಪಯೋಗಿಸಿಕೊಂಡು ನೀವು ಯಾರಿಗೆ ಬೇಕಾದರೂ ಶೂಟ್ ಮಾಡಬಹುದು. ಇದರಿಂದ ಹೊರ ಹೊಮ್ಮುವ ಬುಲೆಟ್ ಯಾರ ಪ್ರಾಣವನ್ನೂ ತೆಗೆಯುವುದಿಲ್ಲ. ಎದೆ ಸೀಳುವುದಿಲ್ಲ. ರಕ್ತದೋಕುಳಿ ಆಡುವುದಿಲ್ಲ. ಅಸಲಿಗೆ ಇದರ ಟ್ರಿಗರ್ ಒತ್ತಿದರೆ ಇದರಿಂದ ಹಾರುವುದು ಬುಲೆಟ್ಟುಗಳಲ್ಲ. ಬದಲಿಗೆ ಅಪ್ಯಾಯಮಾನವಾದ ಸುಗಂದ ದ್ರವ್ಯ. ಅದರ ಸಿಂಪಡಿಕೆ ಚಕಿತಗೊಳಿಸುವುದಲ್ಲದೆ ಮನಸ್ಸಿಗೆ ಮುದ ನೀಡುತ್ತದೆ.

ಯಾವುದೇ ಪಿಸ್ತೂಲ್ ತೆಗೆದುಕೊಂಡರೂ ಅದರಲ್ಲಿ ಅದಕ್ಕಾಗಿ ತಯಾರಿಸಿದ ಬುಲೆಟ್ ಮಾತ್ರ ಉಪಯೋಗಿಸುವುದು ಅನಿವಾರ‍್ಯ. ಬೇರಾವ ಬುಲೆಟ್ ಸರಿಹೊಂದುವುದಿಲ್ಲ. ಆದರೆ ಇದರಲ್ಲಿ ಹಾಗಿಲ್ಲ. ತಮಗಿಶ್ಟ ಬಂದ ಸುಗಂದ ದ್ರವ್ಯವನ್ನು ತುಂಬಿ ತಮ್ಮಿಶ್ಟದವರಿಗೆ ಸಿಂಪಡಿಸಿ ತಾವೂ ಆನಂದಿಸಿ, ಅವರಿಗೂ ನಲಿವು ಉಂಟು ಮಾಡಬಹುದು.

ಈ ಪಿಸ್ತೂಲು ಈ ಕಾರಣಕ್ಕಾಗಿ ದುಬಾರಿ!

ದುಬಾರಿ ಪಿಸ್ತೂಲು, Expensive pistol ಈ ಪಿಸ್ತೂಲಿನ ಹೊರ ಮೈಗೆ ಚಿನ್ನದ ಲೇಪನ ಮಾಡಿಲ್ಲ. ಬದಲಿಗೆ ಪಿಸ್ತೂಲನ್ನು 24 ಕ್ಯಾರೆಟ್ ಚಿನ್ನದಲ್ಲೇ ತಯಾರಾಗಿದೆ. ಕಾರ‍್ಯನಿರ‍್ವಹಣೆಯ ಹಾಗೂ ದಕ್ಶತೆಯ ದ್ರುಶ್ಟಿಯಿಂದ ಹಲವು ಒಳ ಬಿಡಿಬಾಗಗಳನ್ನು ಪ್ಲಾಸ್ಟಿಕ್ ಹಾಗೂ ಸ್ಟೀಲ್ ಉಪಯೋಗಿಸಿ ತಯಾರಿಸಲಾಗಿದೆ. ಬಂಗಾರದ ಬಳಕೆ ಟ್ರಿಗರ್ ನ ಸುಗಮ ಚಾಲನೆಗೆ ಸರಿಹೊಂದುವುದಿಲ್ಲ ಎಂದು ಟ್ರಿಗರ್ ಗಾಗಿ ಬಂಗಾರದ ಬದಲು ಸ್ಟೀಲ್ ಬಳಸಲಾಗಿದೆ.

ಇದನ್ನು ‘ಒಲವಿನ ಪಿಸ್ತೂಲು’ ಎನ್ನಬಹುದು!

ಈ ಅದ್ಬುತ ಪಿಸ್ತೂಲ್‍ನಲ್ಲಿ ಬುಲೆಟ್ ಶೇಕರಿಸಿಡುವ ಜಾಗದಲ್ಲಿ ಪರ್‍ಪ್ಯೂಮ್ ಡಬ್ಬಿಯೊಂದನ್ನು ಅಳವಡಿಸಲಾಗಿದೆ. ನಿಮಗೆ ಹಿಡಿಸುವ ಸುಗಂದ ದ್ರವ್ಯವನ್ನು ಅದರಲ್ಲಿ ತುಂಬಿ ನೀವು ಇಶ್ಟ ಪಡುವವರಿಗೆ ಶೂಟ್ ಮಾಡಬಹುದು. ಮೊದಲಿಗೆ ಅವರು ಹೆದರಿ ಅದರಿಂದ ಪಾರಾಗಲು ಪ್ರಯತ್ನಿಸಿದರೂ, ನಂತರ ಮುಕದಲ್ಲಿ ನಗೆ ಮೂಡಿ, ಸುಗಂದ ದ್ರವ್ಯದ ಕಂಪಿಗೆ ಮಾರುಹೋಗಿ ದೈರ‍್ಯವಾಗಿ ಎದೆಯೊಡ್ಡಿ ನಿಲ್ಲುವ ಸಾಹಸ ಮಾಡುತ್ತಾರೆ. ಅದಕ್ಕಾಗೇ ಇದನ್ನು ‘ಒಲವಿನ ಪಿಸ್ತೂಲ್’ ಎನ್ನಲಡ್ಡಿಯಿಲ್ಲ.

ಇದರ ಬೆಲೆ ಎಶ್ಟು ಗೊತ್ತಾ?

ಪ್ರೀತಿಗೆ ಬೆಲೆ ಕಟ್ಟಲು ಸಾದ್ಯವಿಲ್ಲ ಅಲ್ಲವೆ? ಆದರೆ ಪ್ರೀತಿಸಿದವರನ್ನು ಶೂಟ್ ಮಾಡಲು ಬಳಸುವ ಈ ಪಿಸ್ತೂಲ್ ಕರೀದಿಸಲು ನೀಡಬೇಕಿರುವ ಮೊತ್ತ ಕೇವಲ 1,08,230 ಡಾಲರ್ ಗಳು (ಅಂದಾಜು 75 ಲಕ್ಶ ರೂಪಾಯಿಗಳು)! ಉಳ್ಳವರು ತಾವು ಇಶ್ಟ ಪಡುವವರಿಗೆ, ಉಡುಗೊರೆಯಾಗಿ ನೀಡಲು ಇದಕ್ಕಿಂತಾ ಉತ್ತಮ ವಸ್ತು ಬೇರೊಂದಿರಲಾರದು.

ಈಗ ಹೇಳಿ ಇದು ಪ್ರೇಮಿಗಳಿಗಾಗಿ ಒಂದೊಳ್ಳೆ ಉಡುಗೊರೆ ಆಗಬಹುದಲ್ಲವೇ? 🙂

( ಮಾಹಿತಿ ಮತ್ತು ಚಿತ್ರ ಸೆಲೆ:  elitechoice.org, luxurylaunches.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.