ಮಕ್ಕಳ ಬುದ್ದಿವಂತಿಕೆಗೆ ಅಂಕಪಟ್ಟಿಗಳು ಮಾನದಂಡವೇ?

–  ಅಶೋಕ ಪ. ಹೊನಕೇರಿ.

ಅಂಕಪಟ್ಟಿ, Marks Card

ನಾವು ಓದುತ್ತಿದ್ದ ಕಾಲದಲ್ಲಿ “ಪಾಸಾಯ್ತು” ಎಂಬ ಪದವೇ ಅಪ್ಯಾಯಮಾನವಾಗಿತ್ತು. ಏಕೆಂದರೆ ಅತೀ ಬುದ್ದಿವಂತ ವಿದ್ಯಾರ‍್ತಿ ಪಸ್ಟ್ ಕ್ಲಾಸ್ ನಲ್ಲಿ(60% ಅಂಕ ಗಳಿಕೆ) ಪಾಸಗುವುದೇ ಅತೀ ಉಚ್ಚ ಶ್ರೇಣಿಯಾಗಿತ್ತು. ಆದರೆ ಇಂದಿನ ದಿನಗಳಲ್ಲಿ ವಿದ್ಯಾರ‍್ತಿಗಳು ಗರಿಶ್ಟ ಅಂಕ ಗಳಿಕೆಯ ಮಟ್ಟ ಎಲ್ಲಿಗೆ ಬಂದು ನಿಂತಿದೆ ಎಂದರೆ ಅದು 100% ಅಂಕ ಗಳಿಕೆಗೆ. ಕಡೆಯ ಪಕ್ಶ 95% ಅಂಕ ಬರದಿದ್ದರೆ ಅದು ವಿದ್ಯಾರ‍್ತಿಗಳ ಬವಿಶ್ಯಕ್ಕೆ ಅವಮಾನ. ಇನ್ನೂ 80%-85% ಅಂಕ ಗಳಿಕೆ ಸಾಮಾನ್ಯ ವಿದ್ಯಾರ‍್ತಿಗಳ ಅಂಕ ಗಳಿಕೆಯಾಗಿದೆ ಎನ್ನುವಶ್ಟರ ಮಟ್ಟಿಗೆ ಬಂದು ನಿಂತಿದೆ ಈ ಅಂಕಗಳಿಕೆಯ ಹುಚ್ಚಾಟ. ಇನ್ನೂ 65%-70% ಅಂಕಗಳೆಲ್ಲ ಪೇಲಾದದ್ದಕ್ಕೆ ಸಮ ಎನ್ನುವ ಹಾಗೆ ನೋಡಲಾಗುತ್ತದೆ. ಈ ಕಡೆಯ ಸಾಲಿನ ಅಂಕ ಗಳಿಕೆಯ ವಿದ್ಯಾರ‍್ತಿಗಳು  ಒಂದು ರೀತಿ ಸನ್ನಿಗೊಳಗಾದಂತೆ ಕಿನ್ನರಾಗಿ ಒಮ್ಮೊಮ್ಮೆ ಪಾಸಾದ ಎಲ್ಲ ವಿಶಯಗಳನ್ನು ರಿಜೆಕ್ಟ್ ಮಾಡಿ ಮತ್ತೆ ಹೊಸತಾಗಿ ಪರೀಕ್ಶೆ ಬರೆದು ಹೆಚ್ಚು ಅಂಕ ಗಳಿಸುವ ಹುಚ್ಚಾಟಕ್ಕೂ ಮುಂದಾಗಿದ್ದಿದೆ. ನೋಡಿ ಕಾಲ ಎಲ್ಲಿಂದ ಎಲ್ಲಿಗೆ ಬಂತು ಅಲ್ವ!! 60%-70% ಅಂಕ ಗಳಿಸಿದ ವಿದ್ಯಾರ‍್ತಿಗಳ ಪಾಡೇ ಹೀಗಾದರೆ ಇನ್ನೂ ಪೇಲಾದವರ ಕತೆ ಏನು? ಬಹುಶಹ ಅವರಿಗೆ ಈ ಬೂಮಿಯೇ ಬಾಯಿ ತೆರೆದು ನುಂಗಿ ಬಿಡಬೇಕೆಂದು ಕಾಣಿಸುತ್ತದೆ.

ಹೌದು ಇಶ್ಟಕ್ಕೂ ಈ ಅಂಕವೇ ಎಲ್ಲದಕ್ಕೂ ಮಾನದಂಡವೇ? ಈ ಅಂಕ ಎನ್ನುವುದು ಶೈಕ್ಶಣಿಕ ಕ್ಶೇತ್ರದಲ್ಲಿನ ಮಾನದಂಡವಾದಂತೆ, ಉದ್ಯೋಗ ದಕ್ಕಿಸಿಕೊಳ್ಳುವುದಕ್ಕೂ ಮಾನದಂಡವಾಗಬಹುದೇ ಹೊರತು ಇದೇ ಜೀವನ ಆಗಲಾರದು. ಈ ಅಂಕ ಗಳಿಕೆ ಎನ್ನುವುದು ವಿದ್ಯಾರ‍್ತಿಗಳಿಗಿಂತ ಅವರ ಪೋಶಕರಿಗೆ ದೊಡ್ಡ ಪ್ರತಿಶ್ಟೆಯ ಪ್ರಶ್ನೆ ಆಗಿಬಿಟ್ಟಿದೆ. ಮಕ್ಕಳು ಅತಿ ಹೆಚ್ಚು ಅಂಕ ಗಳಿಸಿದರೆ ಸಮಾಜದಲ್ಲಿ ಇವರ ಗೌರವ ಪ್ರತಿಶ್ಟೆ ಹೆಚ್ಚಿಸುತ್ತದೆ ಎನ್ನುವ ಅನಿಸಿಕೆ. ಮಕ್ಕಳು ಗಳಿಸಿದ ಹೆಚ್ಚು ಅಂಕಗಳನ್ನು ಎಲ್ಲರಲ್ಲೂ ಹೆಮ್ಮೆಯಿಂದ ಹೇಳಿಕೊಂಡು, ನಮ್ಮ ಮಕ್ಕಳು ಎಶ್ಟು ಬುದ್ದಿವಂತರು ಎಂಬುದನ್ನು ಹೆಚ್ಚುಗಾರಿಕೆಯಾಗಿ ಕೊಚ್ಚಿಕೊಳ್ಳಬಹುದಾಂತ ವಿಶಯವಾಗಿ ಬಿಡುತ್ತದೆ ಇವರಿಗೆ. ಪೋಶಕರಿಗೇನು ಗೊತ್ತು ಈ ಅಂಕ ಗಳಿಕೆಗೋಸ್ಕರ ಮಕ್ಕಳು ಮಾನಸಿಕವಾಗಿ ಎಶ್ಟು ನೋವು ಅನುಬವಿಸಿ, ಹಗಲು ರಾತ್ರಿ ನಿದ್ದೆಗೆಟ್ಟು, ತಮ್ಮ ಹುಡುಗತನ, ಬಾಲ್ಯದ ಸವಿ, ವಿದ್ಯಾರ‍್ತಿ ದೆಸೆಯ ಕುಶಿ ಇವೆಲ್ಲಕ್ಕೂ  ತರ‍್ಪಣ ಬಿಟ್ಟು ಬಂದಿತ ಗೂಡಿನ ಹಕ್ಕಿಯಂತೆ ಒಳಗೆ ಕುಳಿತು ಓದಿ ಓದಿ ಪರೀಕ್ಶೆಯಲ್ಲಿ ಅಂಕ ಗಳಿಸಿರುತ್ತಾರೆ ಎಂದು? ಇಶ್ಟೆಲ್ಲ ಶ್ರಮ ಹಾಕಿ, ಮಾನಸಿಕ ನೋವುಗಳನುಬವಿಸಿ ಅಕಸ್ಮಾತ್ ಯಶಸ್ಸು ಗಳಿಸದೆ ಹೋದರೆ ವಿದ್ಯಾರ‍್ತಿಗಳು ಯಾವ ತೀರ‍್ಮಾನಕ್ಕೆ ಬರುತ್ತಾರೆಂದರೆ ನಾನು ಈ ಬೂಮಿಯ ಮೇಲೆ ಬದುಕಲು ನಾಲಾಯಕ್ಕು, ನಾನು ಸಾಮಾನ್ಯ ವಿದ್ಯಾರ‍್ತಿಗಿಂತಲು ಕಳಪೆ ವಿದ್ಯಾರ‍್ತಿ ಎಂದು ಆತ್ಮಹತ್ಯೆಯಂತಹ ತೀರ‍್ಮಾನಕ್ಕೂ ಬಂದು ಬಿಡುವುದಿದೆ. ನೀವೇ ಹೇಳಿ ಪ್ರಾಣಕ್ಕಿಂತ ಹೆಚ್ಚೆ ಈ ಅಂಕ, ಈ ಪ್ರತಿಶ್ಟೆ?

ಪ್ರಪಂಚವೆಂಬುದು ನಮ್ಮ ಊಹೆಗೂ ನಿಲುಕದಶ್ಟು ವಿಶಾಲವಾಗಿದೆ. ಈ ಬುವಿಯ ಮೇಲೆ ಸರ‍್ವ ಚರಾಚರಗಳು ಬದುಕುತ್ತಿವೆ. ಹುಟ್ಟಿದ ಪ್ರತಿಯೊಂದು ಜೀವಿಗೂ ಇಲ್ಲಿ ಆಹಾರ, ನೀರು ಆ ಬಗವಂತ ಒದಗಿಸುತ್ತಾನೆ. ಮನುಶ್ಯನು ಬದುಕಲು ಈ ಪ್ರಪಂಚದಲ್ಲಿ ಲಕ್ಶಾಂತರ ಅವಕಾಶಗಳಿವೆ, ದಾರಿಗಳಿವೆ. ಹಾಗೇಯೇ ದುಡಿಮೆಗೂ ಬೇಕಾದಶ್ಟು ಅವಕಾಶಗಳಿವೆ. ಹಾಗಾಗಿ ಎಲ್ಲ ವಿದ್ಯಾರ‍್ತಿಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಪರಿ ಮೊದಲು ನಾವು ಬಿಡಬೇಕು. ಹೆಚ್ಚು ಅಂಕ ಗಳಿಸಿದವ ಬುದ್ದಿವಂತ, ಕಡಿಮೆ ಗಳಿಸಿದವ ದಡ್ಡ ಎನ್ನುವ ತಾರತಮ್ಯ ಮೊದಲು ನಾವುಗಳು ಬಿಟ್ಟು ಅವರ ಬುದ್ದಿಶಕ್ತಿಯನುಸಾರ ಅವರ ಶ್ರಮದ ಅನುಸಾರ ಅಂಕ ಗಳಿಸುತ್ತಾರೆ ಎಂಬ ಸರಳ ಸತ್ಯವನ್ನರಿಯಬೇಕು. ಅವರವರ ಶಕ್ತ್ಯಾನುಸಾರ ಅವರು ಉದ್ಯೋಗ ಪಡೆದು, ದುಡಿದು ಜೀವನ ನಡೆಸುತ್ತಾರೆ ಎಂಬ ಸರಳ ಸತ್ಯವನ್ನು ಮೊದಲು ಪೋಶಕರು ಮನಗಂಡು ಹೆಚ್ಚು ಅಂಕ ಗಳಿಕೆಗಾಗಿ ಹಾಕುವ ನಿರಂತರ ಒತ್ತಡವನ್ನು ಮೊದಲು ನಿಲ್ಲಿಸಬೇಕು. ನಂತರ ತಮ್ಮ ಮಕ್ಕಳಲ್ಲಿ ಮನೋಸ್ತೈರ‍್ಯ ತುಂಬಿ ಅಂಕಕ್ಕಿಂತಲೂ ಮಿಗಿಲಾದ ಬೇರೆ ಪ್ರಪಂಚ ಇದೆ ಎನ್ನುವ ವಾಸ್ತವತೆ ಮೂಡಿಸಬೇಕು. ಇಲ್ಲಿ ಒಂದು ಗಾದೆ ಮಾತು ನೆನಪಿಗೆ ಬರುತ್ತದೆ “ಹುಟ್ಟ್ಸಿದ್ ಸಿವಾ ಹುಲ್ಲು ಮೇಯಸಾಕಿಲ್ವ” ಎಂದು. ಇದು ಸೂಕ್ತ ಉದಹಾರಣೆ.

ವಿದ್ಯಾರ‍್ತಿಗಳಲ್ಲಿ ಕೆಲವರು ದಡ್ಡ ಎನಿಸಿಕೊಂಡು ಹೆಚ್ಚು ಅಂಕ ಗಳಿಸಲಾಗದೆ ಪೇಲ್ ಆಗುತ್ತಾರೆ. ಆದರೆ ಅವರಲ್ಲಿ ಕೆಲವರು ಎಂದಿಗೂ ತಲೆ ಕೆಡಿಸಿಕೊಳ್ಳದೆ ಯಾವುದಾದರೊಂದು ಕೆಲಸ ಮಾಡಿ ಬಹಳ ಆತ್ಮಸ್ತೈರ‍್ಯದಿಂದ ಜೀವನ ನಡೆಸುತ್ತಾರೆ. ಅಂತವರು ಎಂದೂ ಜೀವನ ಹೀಗೆ ಇರಬೇಕು ಎಂದು ಲೆಕ್ಕಚಾರ ಹಾಕಿ ಬದುಕುವುದಿಲ್ಲ ಮತ್ತು ಬದುಕಿನ ಕ್ಶಣ ಕ್ಶಣವನ್ನು ಮುಕ್ತವಾಗಿ, ಕುಶಿಯಾಗಿ ಆನಂದಿಸುತ್ತಿರುತ್ತಾರೆ. ಅವರಿಗೆ ಈ ಅಂಕಪಟ್ಟಿಯೆಂಬ ಕನ್ನಡಿ ಎದುರಿಗಿರದೆ ಆತ್ಮಸ್ತೈರ‍್ಯ ಮತ್ತು ಸಾಮಾನ್ಯ ತಿಳುವಳಿಕೆಯೇ(Common sense) ಅವರನ್ನು ಹೊಳಪಿನ ವಜ್ರವನ್ನಾಗಿ ಮಾಡಿ ಬಿಟ್ಟಿರುತ್ತವೆ. ನಮ್ಮ ಓದು, ಈ ನಮ್ಮ ಅಂಕಪಟ್ಟಿಯ ಗೌಜು ಗದ್ದಲ ಮುಗಿದ ಮೇಲೆ ನಮ್ಮ ಜೀವನ ಸುಲಲಿತವಾಗಿ ನಡೆಸಲು ಸಾಮಾನ್ಯ ತಿಳುವಳಿಕೆ, ಆತ್ಮಸ್ತೈರ‍್ಯ, ಮತ್ತು ನಾವು ಆಲೋಚಿಸಿ ಇಡುವ ಹೆಜ್ಜೆಗಳು ಮಾತ್ರ ಉಪಯೋಗಕ್ಕೆ ಬರುತ್ತವೆಯೇ ವಿನಹ ಅಂಕಪಟ್ಟಿಗಳಲ್ಲ. ಅವುಗಳ ಮಿತಿ ಮುಗಿದ ಮೇಲೆ ಅಂಕಪಟ್ಟಿಯೂ ಒಂದು ರೀತಿಯ ರದ್ದಿ ಪೇಪರ‍್ರೇ!! ಮಕ್ಕಳಿಗೆ ಈ  ಸತ್ಯವನ್ನು ನಾವು ಹೇಳಿಕೊಟ್ಟು ಎದೆಗಾರಿಕೆಯಿಂದ ಜೀವನ ನಡೆಸುವುದನ್ನು, ಕಶ್ಟ ಬಂದಾಗ ಎದುರಿಸುವ ಮನೋದೈರ‍್ಯವನ್ನು ಜವಾಬ್ದಾರಿಯುತ ತಂದೆ ತಾಯಿಗಳಾದ ನಾವು ಅವರಿಗೆ ಹೇಳಿಕೊಡಬೇಕಾಗಿದೆ.

ಕೇವಲ ಅಂಕಗಳಿಕೆ..ಅಂಕಗಳಿಕೆ ಎಂದು ಮಕ್ಕಳ ಅಬಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಕಸಿದುಕೊಳ್ಳುವುದು ಬೇಡ. ಬರೀ ಓದು ಓದು ಎಂದು ಅವರನ್ನು ಗೂಬೆಗಳಾಗಿಸುವುದು ಬೇಡ. ಈ ಜಗತ್ತಿನಲ್ಲಿ ಎಶ್ಟೋ ಜನ ಹೆಚ್ಚು ವಿದ್ಯಾಬ್ಯಾಸ ಮಾಡದೆ ಹೆಸರು, ಕೀರ‍್ತಿ ಗಳಿಸಿದ್ದಾರೆ. ಅದಕ್ಕೆ ಉದಾಹರಣೆ ನಮ್ಮ ಕನ್ನಡ ಚಿತ್ರರಂಗದ ದಿಗ್ಗಜ, ಕನ್ನಡಿಗರ ಕಣ್ಮಣಿ ದಿವಂಗತ ಡಾ‌. ರಾಜ್ ಕುಮಾರ್, ಪ್ರಪಂಚಾದ್ಯಂತ ಬಹಳಶ್ಟು ಜನಕ್ಕೆ ಉದ್ಯೋಗ ನೀಡಿ ಬೀಗುತ್ತಿರುವ ಸಾಪ್ಟವೇರ್ ಕಂಪೆನಿಯ ಬಿಲ್ ಗೇಟ್. ಇಂತಹ ಬಹಳಶ್ಟು ಉದಾಹರಣೆಗಳಿವೆ. ಇಂತಹವರ ಆತ್ಮಚರಿತ್ರೆಯನ್ನು ವಿದ್ಯಾರ‍್ತಿಗಳಿಗೆ ವಿವರಿಸುವುದರಿಂದ ಕೇವಲ ಅಂಕ ಗಳಿಸುವ ಯಂತ್ರವಾಗಿ ಒಂದು ಗುಮಾಸ್ತೆ ಹುದ್ದೆ ಹಿಡಿಯದೆ, ಒಬ್ಬ ಉದ್ಯಮಿಯಾಗಿ ಬೆಳೆದು ಲಕ್ಶಾಂತರ ಮಂದಿಗೆ ಉದ್ಯೋಗ ನಿಡುವಂತ ಬುದ್ದಿವಂತ, ಶಕ್ತಿವಂತ, ಯುಕ್ತಿವಂತ ವ್ಯಕ್ತಿಯಾಗಿ ಬೆಳೆಯುವಂತೆ ಮಾಡಬಹುದಾಗಿದೆ. ಅಂಕ ಗಳಿಕೆ ಎಂಬ ಮರೀಚಿಕೆಯ ಬೆನ್ನ ಹತ್ತಿ ಮಕ್ಕಳಿಗೆ ಅವರತನವನ್ನ ಕಳೆದುಕೊಳ್ಳುವಂತೆ ಮಾಡಬಾರದು ಎಂಬ ಸಂದೇಶ ಮತ್ತು ಸಣ್ಣ ಕಳಕಳಿಯಶ್ಟೇ.

( ಚಿತ್ರಸೆಲೆ : indiatoday.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: