ಕವಿತೆ: ಅವನೇ ಅಪ್ಪ

–  ಶಶಾಂಕ್.ಹೆಚ್.ಎಸ್.

father, ಅಪ್ಪ

ನನ್ನ ಈ ಹುಟ್ಟಿನ ಕಾರಣಕರ‍್ತನವನು
ನನಗೀ ಬದುಕಿನ ಬಿಕ್ಶೆ ಇತ್ತವನು
ನನಗೆ ಹೆಸರು ಜೇವನ ನೀಡಿದವನು
ಅವನೇ ಅಪ್ಪ

ಬೆವರ ಹನಿಯ ಮಿಂಚಲಿ
ನನ್ನ ನಗುವನು ಕೊಂಡು ತರುವನು
ಕರೆ ಕರೆದು ಕಂದಾ ಎಂದು
ಪ್ರೀತಿಯಿಂದ ತುತ್ತ ನೀಡುವನು
ತನ್ನ ಹೆಗಲ ಮೇಲೆ ನನ್ನ ಕೂರಿಸಿಕೊಂಡು
ಬದುಕಿನ ಪಾಟ ಕಲಿಸಿದವನು
ನಾ ಆಯ ತಪ್ಪಿ ಎಡವಿ ಬಿದ್ದಾಗ
ನನ್ನ ಕೈ ಹಿಡಿದು ನಡೆಸಿದವನು
ಅವನೇ ಅಪ್ಪ

ಅವನನ್ನು ಹೆತ್ತವರಿಗೆ ಮಗನಾಗಿ
ತಾನು ಹೆತ್ತ ಮಕ್ಕಳಿಗೆ ಅಪ್ಪನಾಗಿ
ತನ್ನ ಮಡದಿಗೆ ಗಂಡನಾಗಿ
ಇಡೀ ಸಂಸಾರದ ನೊಗ ಹೊತ್ತು ಓಡುತ್ತಿರುವವನು
ಅವನೇ ಅಪ್ಪ

ಮಕ್ಕಳ ಎಲ್ಲ ಬೇಕು ಬೇಡಗಳ ಪೊರೈಸುತ್ತಾ
ತನ್ನ ಬೇಕು ಬೇಡಗಳ ಮರೆಯುವವನು
ಮಕ್ಕಳ ಉಜ್ವಲ ಬವಿಶ್ಯಕ್ಕಾಗಿ
ಹಗಲು ಇರುಳು ಕಶ್ಟ ಪಟ್ಟು ದುಡಿಯುವವನು
ಅವನೇ ಅಪ್ಪ

ತಾನೆಶ್ಟೇ ಕಶ್ಟದಲ್ಲಿದ್ದರೂ
ತನ್ನವರು ಸುಕವಾಗಿರಲಿ ಎಂದು ಬಯಸುವವನು
ತನ್ನ ಬಯಕೆಗಳ ತನ್ನಲೇ ಸಾಯಿಸಿ
ಮಡದಿ ಮಕ್ಕಳ ಬಯಕೆಯ ತೀರಿಸುವವನು
ಅವನೇ ಅಪ್ಪ

ಎಲ್ಲರು ಅಮ್ಮನನ್ನು ದೇವರೆಂದು ಕರೆಯುತ್ತಿದ್ದರೆ
ತನ್ನ ಮಡದಿಯ ಹೊಗಳುವುದ
ನೋಡಿ ಕುಶಿ ಪಡುವವನು ಅಪ್ಪ
ತನ್ನ ಮಕ್ಕಳ ಕುಶಿಯ ನೋಡಿ
ತನ್ನ ನೋವನ್ನು ಮರೆಯುವವನು ಅಪ್ಪ
ಎಲೆ ಮರೆಯ ಕಾಯಿಯ ತರಹ
ತೆರೆಯ ಹಿಂದೆಯೆ ಬದುಕುವವನು ಅಪ್ಪ
ನನ್ನ ಪರಪಂಚ ಅಪ್ಪ

(ಚಿತ್ರ ಸೆಲೆ: www.aeee.gr)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: