“ಹೀಟರ್ ಮೇಲೆ ಹಾಲು”

– ಮಾರಿಸನ್ ಮನೋಹರ್.

auto, trip, ಆಟೋ, ಪ್ರವಾಸ

ಆ ದಿನ ಮುಂಜಾನೆಯಿಂದ ದೊಡ್ಡಮ್ಮನ ಮನೆಗೆ ಹೋಗಲು ತಯಾರಿ ನಡೆಸಿದ್ದೆವು. ಅಲ್ಲಿಗೆ ನಾವು ಹೆಚ್ಚಾಗಿ ಹೋಗುತ್ತಿರಲಿಲ್ಲ. ನಾವಿರುವ ಜಾಗದಿಂದ ತುಂಬಾ ದೂರ, ಅಲ್ಲಿಗೆ ಸಮಯಕ್ಕೆ ಸರಿಯಾಗಿ ಬಸ್ಸು ಸಿಗುತ್ತಲೂ ಇರಲಿಲ್ಲ. ಅವರು ಕೆಲವೊಂದು ಸಲ ಆಟೋ ಮಾಡಿಕೊಂಡು ನನ್ನ ನಾಲ್ಕು ಅಣ್ಣ-ಅಕ್ಕಂದಿರೊಂದಿಗೆ ಬರುತ್ತಿದ್ದರು. ನಮ್ಮ ಮನೆ ಮುಂದೆ ಆಟೋ ಬಂದು ನಿಂತಿತೆಂದರೆ ಅದು “ದೊಡ್ಡಮ್ಮನೇ ಬಂದಿರಬೇಕು” ಅಂತ ಕರಾರುವಕ್ಕಾಗಿ ಕೂಗಿ ಕಿರುಚಿ ಹೇಳುತ್ತಿದ್ದೆವು. ಅಶ್ಟು ಅಪರೂಪ ನಾವು ಅವರು ಬಂದು-ಹೋಗುವುದು. ಬೇಸಿಗೆ ರಜವಾದ್ದರಿಂದ ನಮಗೆ ಮನೆ ಬಿಟ್ಟು ದೊಡ್ಡಮ್ಮನ ಊರಿಗೆ ಹೋಗುವುದು ಎಲ್ಲಿಲ್ಲದ ಕುಶಿ ತಂದಿತ್ತು. ನನಗೆ ಯಾಕೆ ವಿಶೇಶವಾಗಿ ಸಂತಸದ ಕಟ್ಟೆ ಒಡೆಯುತ್ತಿತ್ತೆಂದರೆ ನನ್ನ ದೊಡ್ಡಮ್ಮನ ಸಣ್ಣ ಮಗ, ನನಗಿಂತ ಸ್ವಲ್ಪ ದೊಡ್ಡವನು. ಅವನ ಬಳಿ ವಿಡಿಯೋ ಗೇಮ್ ಇತ್ತು. ಒಂದು ವಾರ ಇರಲು ಹೋಗುತ್ತಿದ್ದರಿಂದ ನಮ್ಮ ಮತ್ತು ಅಮ್ಮ-ಅಪ್ಪ ಅವರ ಬಟ್ಟೆಗಳನ್ನು ಬ್ಯಾಗುಗಳಲ್ಲಿ ತುರುಕುವ ಕೆಲಸ ಬರದಿಂದ ನಡೆಯುತ್ತಿತ್ತು. ಅದರ ಹೊಣೆ ನನ್ನ, ಅಣ್ಣನ ಮತ್ತು ತಂಗಿಯ ಮೇಲೆ ಹೊರಿಸಿದ್ದರು! ದೊಡ್ಡಮ್ಮನ ಮನೆಗೆ ಒಯ್ಯಲು ಶೇಂಗಾ ಹೋಳಿಗೆ ಮಾಡುತ್ತಿದ್ದಳು ಅವಳಿಗೆ ಹೆಲ್ಪರ್ ಆಗಿ ಪಕ್ಕದ ಮನೆ ಆಂಟಿಯೊಬ್ಬರು ಬಂದಿದ್ದರು.

ನಾವು ಎಲ್ಲ ಬಟ್ಟೆಗಳನ್ನು ಆಯಾ ಬ್ಯಾಗುಗಳಲ್ಲಿ ಸೇರಿಸಿ ನಮ್ಮ ಕೆಲಸಕ್ಕೆ ಒಂದು ಗತಿ ಕಾಣಿಸಿದೆವು ಅಂತ ಬೀಗಿದೆವು. ಬಹುಶಹ ಬಟ್ಟೆಗಳು ಬ್ಯಾಗುಗಳ ಒಳಗೆ ಉಸಿರುಕಟ್ಟಿ ಗೋಗರೆಯುತ್ತಿದ್ದವೋ ಏನೋ. ಬ್ಯಾಗುಗಳ ಉಬ್ಬಿದ ಹೊಟ್ಟೆಗಳನ್ನು ನೋಡಿ ನನ್ನ ಅಪ್ಪ-ಅಮ್ಮ ಬೈಯುವುದು ಒಂದು ಬಾಕಿಯಿತ್ತು, ಅಶ್ಟು ಬಿಗಿಯಾಗಿ ತುರುಕಿದ್ದೆವು! ಆದರೆ ಅಪ್ಪ ಊರಿಗೆ ಹೋಗುವ ದಿನವೂ ಆಪೀಸಿನ ರೆಜಿಸ್ಟರ್ ಹಿಡಿದುಕೊಂಡು ಕೂತಿದ್ದರು. ಅಮ್ಮನಿಗೆ ಅಡುಗೆ ಮನೆಯ ಕಡೆಯಿಂದ ಅಪ್ಪನನ್ನು ಮೊದಲು ಮಾಡಿ ನಮಗೆ ಸರದಿಯಂತೆ ಗೋಳು ಹೊಯ್ದುಕೊಳ್ಳುವುದು ತಡೆಯಿಲ್ಲದೆ ನಡೆಯುತ್ತಿತ್ತು. “ಬೇಗ ಹೋಗಿ ಆಟೋದವನಿಗೆ ಹೇಳಿಟ್ಟು ಬನ್ರೀ” ಅಂತ ಅಮ್ಮ ತುಂಬಾ ಸಲ ಹೇಳಿ ಆಗಿತ್ತು. ಅಪ್ಪ ಕದಲಲಿಲ್ಲ. ಅತ್ತಣಿಂದ ಯಾವ ರೆಸ್ಪಾನ್ಸ್ ಬಾರದೇ ಅಮ್ಮ ನನ್ನ ಹಾಗೂ ಅಣ್ಣನ ಕಡೆ ತಿರುಗಿ “ನೀವಾದ್ರೂ ಹೋಗಿ ಆಟೋದವನಿಗೆ ಹೇಳಿಟ್ಟು ಬನ್ನಿ” ಅಂದಳು.

ನಾನೂ, ಅಣ್ಣನೂ ಸರಕ್ಕನೇ ಹೊರಗೆ ಓಡಿಬಂದು ಸೈಕಲ್ ಏರಿದೆವು. ಅವನು ಪೆಡಲ್ ಮಾಡಿದ ನಾನು ಹಿಂದೆ ಕೂತಿದ್ದೆ. ಹಾಲಿನ ಡೈರಿಯ ಬಳಿ ಇದ್ದ ಆಟೋ ನಿಲ್ದಾಣಕ್ಕೆ ಬಂದು ಕೇಳಿದೆವು. ಎಲ್ಲರೂ “ಅಲ್ಲಿಗೆ ಬರೋದಿಲ್ಲ, ಹಿಂದಕ್ಕೆ ಬರುವಾಗ ಪ್ಯಾಸೆಂಜರ್ ಸಿಗೊಲ್ಲ” ಅಂತ ನೆವ ಹೇಳಿದರು. ಕೊನೆಗೆ ಒಬ್ಬ ಸಿಕ್ಕ ಅವನಿಗೆ ಕೇಳಿದಾಗ “ಆಯ್ತು ಬರ‍್ತೇನೆ, ನೂರು ರೂಪಾಯಿ ಆಗುತ್ತೆ ಅಂತ ಹೇಳಿ. ಅಲ್ಲಿಗೆ ಹೋದ ಮೇಲೆ ತಕರಾರು ಮಾಡಬಾರದು ಅಂತ ಈಗ್ಲೆ ಹೇಳಿಬಿಡ್ತೆನೆ, ಯಾವ್ ಟೈಮ್‌ಗೆ ಬರಬೇಕು?” ಅಂತ ಕೇಳಿದ. ಹೋಗುವ ಬರದಲ್ಲಿ ನಾವು ಅಮ್ಮನಿಗೆ ಅಪ್ಪನಿಗೆ ಯಾವ ಟೈಮ್ ಅಂತ ಕೇಳುವುದೇ ಮರೆತಿದ್ದೆವು!. “ಕೇಳಿ ಬರ‍್ತೇವೆ, ನೀನು ಇಲ್ಲೇ ಇರು” ಅಂತ ಆಟೋದವನಿಗೆ ಹೇಳಿದೆವು. ಅವನು “ನಾನು ಎಲ್ಲಿಗೆ ಹೋಗ್ತೇನೆ? ಬಂದದ್ದೇ ಆಟೋ ಓಡಿಸಲಿಕ್ಕೆ” ಅಂತ ಹೇಳಿ ಗುಟ್ಕಾ ಬಾಯಿಗೆ ಹಾಕ್ಕೊಂಡ. ನಾವು ಬಂದಶ್ಟೇ ಬೇಗ ಮನೆಗೆ ಓಡಿದೆವು. ಮನೆಗೆ ಬಂದು ಸೀದಾ ಅಪ್ಪನ ಬಳಿ ಹೋಗಿ “ಅಪ್ಪ ಆಟೋದವ ಟೈಮ್ ಕೇಳ್ತಾ ಇದ್ದಾನೆ” ಅಂದೆವು. “ಹೋಗೋದಕ್ಕೆ ಎಶ್ಟು ಬಾಡಿಗೆ ಕೇಳ್ದ?” ಅಂತ ಅಪ್ಪ ಕೇಳಿದರು. ನಾನು “ನೂರು… ನೂರು… ರೂಪಾಯಿ ” ಅಂತ ಕಣ್ಣರಳಿಸಿ ಹೇಳಿದೆ. ಅಪ್ಪ ತಲೆ ಅಲ್ಲಾಡಿಸಿ “ನಿಮ್ಮ ಅಮ್ಮನ್ನ ಹೋಗಿ ಕೇಳಿ” ಅಂತ ರೆಜಿಸ್ಟರ್ ನಲ್ಲಿ ಮತ್ತೆ ಮುಳುಗಿದರು. ನಾವು ಅಮ್ಮನ ಬಳಿ ಹೀಗೆ ಹೀಗೆ ಅಂತ ಹೇಳಿದೆವು, ಅಮ್ಮ ಯೋಚಿಸಿ “ಒಂಬತ್ತೂವರೆ” ಅಂದಳು. ಆಟೋದವನಿಗೆ ವರದಿ ಒಪ್ಪಿಸಿ ಒಂಬತ್ತೂವರೆಗೆ ಮನೆಗೆ ಬರುವಂತೆ ಹೇಳಿ ಬಂದೆವು.

ಅಣ್ಣ ತನ್ನ ಪ್ಯಾಂಟಿನ ಜೇಬಿನ ಒಳಗೆ ಬಾಲ್ ಹಾಕಿ ಬ್ಯಾಟ್ ಕೈಯಲ್ಲೇ ಹಿಡಿದುಕೊಂಡು ಕುರ‍್ಚಿ ಮೇಲೆ ಕೂತಿದ್ದ. ಅಪ್ಪ ಕೊನೆಗೂ ತನ್ನ ರಿಜಿಸ್ಟರ್ ಬಿಟ್ಟು ಹೊಸ ಬಟ್ಟೆಗಳನ್ನು ಹಾಕಿಕೊಂಡು ತಯಾರಾದರು. ನಾವು ಎಲ್ಲ ಬ್ಯಾಗುಗಳನ್ನು ತಂದು ಹೊರಗೆ ಪಡಸಾಲೆಯಲ್ಲಿ ಸಾಲಾಗಿ ಇಟ್ಟಿದ್ದೆವು. ಅಪ್ಪ ಹೊರಗೆ ಬಂದು ಅವುಗಳ ತುಂಬಿದ ಹೊಟ್ಟೆಗಳನ್ನು ನೋಡಿ “ಯಾರನ್ನು ತುಂಬಿದ್ದೀರಿ ಇದರಲ್ಲಿ?!” ಅಂತ ಕೇಳಿದರು. ನಾನು ಅಣ್ಣ ನಕ್ಕು “ಬಟ್ಟೆ, ಬಟ್ಟೆ” ಅಂದೆವು. ಅಮ್ಮ ಇನ್ನೂ ತಯಾರಾಗುತ್ತಲೇ ಇದ್ದಳು. ಹೋಳಿಗೆ ಮಾಡುವುದು ಮುಗಿದಿತ್ತು. ಮಾಡಿದ ಎಲ್ಲ ಅಡಿಗೆಗಳನ್ನು ಡಬ್ಬಗಳಲ್ಲಿ ನಾವು ಸ್ಕೂಲಿಗೆ ಒಯ್ಯುತ್ತಿದ್ದ ಟಿಪಿನ್‌ಗಳಲ್ಲಿ ಅಮ್ಮ ತುಂಬಿದ್ದಳು. ಹಿಂದಿನ ದಿನ ರಾತ್ರಿ ಕರ‍್ಜಿಕಾಯಿ ಚಕ್ಕುಲಿ ಮುರುಕ್ಕುಲು ಮಾಡಿದ್ದಳು. ಅವುಗಳಲ್ಲಿ ಮುಕ್ಕಾಲು ಅದಾಗಲೇ ಕಾಲಿಯಾಗಿದ್ದವು! ಪಪ್ಪ ಅಮ್ಮನಿಗೆ “ತಯಾರ್ ಆದೇನೇ…?” ಅಂತ ಕೂಗಿದರು. ಒಳಗಿಂದ ಉತ್ತರ ಬರಲಿಲ್ಲ, ಮಾತಾಡದ್ದಕ್ಕೆ ಕಾರಣ ರಿಜಿಸ್ಟರ‍್! “ನಿಮ್ಮ ಕಡೆಯವರ ಮನೆಗೆ ಹೋಗುವಾಗ ಅಹಾ ಏನು ಕುಶಿ, ಏನು ಸಂಬ್ರಮ, ನನ್ನ ಕಡೆಯವರ ಮನೆಗೆ ನಾವು ಹೋಗುವುದೇ ಅಪರೂಪ ,ಇವತ್ತೂ ಆಪಿಸ್ ಕೆಲಸ ಮಾಡುವುದಾ? ಒಂದೇ ಒಂದು ಕೆಲಸಕ್ಕೂ ಕೈಹಚ್ಚಲಿಲ್ಲ, ಡಬ್ಬಿ ಕೆಳಗಿಳಿಸಲಿಲ್ಲ ಹಾಲು ತರಲಿಲ್ಲ. ಎಲ್ಲ ನಾನೇ ಮಾಡ್ಕೋಬೇಕು” ಅಂದಳು ಅಮ್ಮ. ಅದಕ್ಕೆ ಅಪ್ಪ “ಹಾಲು ತಂದಿದ್ದೇನೆ ಆಗಲೇ, ಅಡುಗೆ ಮನೆಲಿ ಇಟ್ಟಾಯ್ತು” ಅಂತ ಎಲ್ಲರಿಗೂ ಕೇಳುವ ಹಾಗೆ ತಮಾಶೆಯಾಗಿ ಹೇಳಿದರು. ತಂಗಿ ಅಮ್ಮನ ಜೊತೆಗೆ ತಯಾರು ಆಗುತ್ತಿದ್ದಳು.

“ಆಟೋ ಬಂತ್, ಆಟೋ ಬಂತ್…”ಅಂತ ನಾನು ಅಣ್ಣ ಕಿರುಚಿದೆವು. ದೂರದಿಂದ ಆಟೋ ಕುಲುಕಾಡುತ್ತಾ ನಮ್ಮ ಮನೆಯ ಕಡೆ ಬಂತು. ಯಾವಾಗಿನಿಂದಲೋ ಗೇಟಿನ ಹೊರಗೆ ನಾವು ಕಾಯುತ್ತಾ ನಿಂತಿದ್ದೆವು! ಆಟೋದವನಿಗೆ ಅಡ್ರೆಸ್ ಹೇಳಿದ್ದೆವು. ಆಟೋವನ್ನು ಟರ‍್ನ್ ಮಾಡಿ ಗೇಟಿನ ಮುಂದೆ ಬಂದು ನಿಂತ. ನಾನೂ ಅಣ್ಣ ಎಲ್ಲ ಬಟ್ಟೆಗಳಿದ್ದ ಬ್ಯಾಗುಗಳನ್ನು,ತಿಂಡಿ ತಿನಿಸಿನ ಟಿಪಿನ್ ಕ್ಯಾನ್ ಡಬ್ಬಿಗಳಿದ್ದ ಬ್ಯಾಗುಗಳನ್ನು ಆಟೋದಲ್ಲಿ ಲೋಡ್ ಮಾಡಿದೆವು. ಅಪ್ಪ ಮನೆಯ ಸುತ್ತಮುತ್ತ ಓಡಾಡಿ ಬೆಲೆಬಾಳುವ ವಸ್ತುಗಳನ್ನು ತಂದು ಮನೆಯ ಒಳಗಡೆ ಇಟ್ಟು, ನಮ್ಮ ಸೈಕಲ್ ಗಳು, ಬೈಕಿಗೆ ಸರಪಣಿಯಿಂದ ಕೀಲಿ ಹಾಕಿದರು. ಮನೆಗೂ ಕೀಲಿ ಹಾಕುವಶ್ಟರಲ್ಲಿ ತಂಗಿ ಅಮ್ಮ ಹೊರಗೆ ಬಂದರು. “ಓಹ್ ನೀವು ಒಳಗೆ ಇದ್ದಿದ್ರಾ?!” ಅಂತ ಹೇಳಿದರು. ಅಮ್ಮನ ಮುನಿಸು ಮುಂದುವರೆದಿತ್ತು. ಆಟೋದಲ್ಲಿ ಮುಂದೆ ಅಣ್ಣ, ನಾನೂ ಕೂತೆವು ಅಮ್ಮ, ತಂಗಿ ಹಿಂದೆ ಕೂತರು. ಅವಳು ಆಟೋದ ಹಿಂದಿನ ಬಾರಿನ ಮೇಲೆ ಕೂರುತ್ತೇನೆ ಅಂತ ಹಟ ಹಿಡಿದಿದ್ದಳು. ಚಿಕ್ಕವಳಾದ್ದರಿಂದ ಅಮ್ಮ ಆಕೆಗೆ ಕೂರಲು ಬಿಡಲಿಲ್ಲ. ಅಪ್ಪ ಮನೆಗೆ ಎಲ್ಲ ಬಂದೋಬಸ್ತ್ ಮಾಡಿ, ಕೀಲಿ ಹಾಕಿ, ಗೇಟ್ ಎಳೆದು ಅದಕ್ಕೂ ಕೀಲಿ ಹಾಕಿ ಆಟೋದ ಕಡೆ ಬಂದು ಹಿಂದೆ ಕೂತರು.

ಆಟೋ ಸ್ಟಾರ‍್ಟ್ ಆಯ್ತು. ನಮ್ಮ ಗಲ್ಲಿಯನ್ನು ದಾಟಿ, ದೊಡ್ಡ ಹಾದಿಗೆ ಬಂತು ಅಲ್ಲಿಂದ ಆಟೋದವ ಸ್ಪೀಡ್ ಹೆಚ್ವಿಸಿ ಆಟೋ ಓಡಿಸಿದ. ಅರ‍್ದ ಗಂಟೆ ಆದ ಮೇಲೆ ದೊಡ್ಡಮ್ಮನ ಮನೆ ಮುಟ್ಟಿದ್ದೆವು. ಅವರು ಅಶ್ಟೇ, ನನ್ನ ಕಸಿನ್ ಗಳೆಲ್ಲರೂ ದೂರದಿಂದಲೇ ಆಟೋ ನೋಡಿ ನಾವೇ ಇರಬೇಕೆಂದು ಗೇಟ್ ಹತ್ತಿರ ನಾಲ್ಕೂ ಜನ, ಅವರ ನಾಯಿ ಜೊತೆ ಬಂದು ನಿಂತಿದ್ದರು. ಆಟೋ ಬಂದು ದೊಡ್ಡಮ್ಮನ ಮನೆ ಮುಂದೆ ಬಂದು ನಿಂತಿತು. ನಾನು ಅಣ್ಣ ಅದಾಗಲೇ ಆಟೋದಿಂದ ಹೊರಗೆ ಜಿಗಿದಾಗಿತ್ತು. ಆಮೇಲೆ ಅಮ್ಮ-ಅಪ್ಪ, ತಂಗಿ ಹೊರಗೆ ಇಳಿದರು. ದೊಡ್ಡಮ್ಮ ಮನೆಯಿಂದ ಹೊರಗೆ ಬಂದಳು. ಅಪ್ಪ ಆಟೋದವನ ಹತ್ತಿರ “ಎಂಬತ್ತು ರೂಪಾಯಿ ತಗೋ” ಅಂತ ಚೌಕಾಶಿ ಮಾಡ್ತಾ ಇದ್ದ. ಆಟೋದವ ಕೈ, ತಲೆ ಅಲ್ಲಾಡಿಸುತ್ತಾ ಆಗೋಲ್ಲ ಆಗೋಲ್ಲ ಅಂತ ಹೇಳ್ತಾ ಇದ್ದರು. ಗೇಟಿನ ಬಳಿ ಬಂದ ಅಮ್ಮ ಒಮ್ಮೆಗೆ ಗಕ್ಕನೇ ನಿಂತು, ಅಪ್ಪನ ಕಡೆಗೆ ಹಿಂದಕ್ಕೆ ತಿರುಗಿ “ರೀ… ಹೀಟರ್ ಮೇಲೆ ಹಾಲು ಕಾಯಲಿಕ್ಕೆ ಇಟ್ಟಿದ್ದೆ ರೀ… ಹೀಟರ್ ಬಂದ್ ಮಾಡೋದಕ್ಕೆ ಮರೆತೋಯ್ತು” ಅಂದಳು! ದೊಡ್ಡಮ್ಮ, ಅವಳ ಗಂಡ, ಅಮ್ಮನ ಗುರುತಿನವರೂ, ಕಿವಿ ಕೇಳದ ಅಜ್ಜಿ, ಎಲ್ಲರೂ ನಗಾಡಿದರು. ಅಪ್ಪ ಪೆಚ್ಚು ಮೋರೆ ಹಾಕಿಕೊಂಡು ಅದೇ ಆಟೋದ ಒಳಗೆ ಕೂತುಕೊಂಡು” ಎಲ್ಲಿಂದ ಬಂದಿಯೋ ಅಲ್ಲಿಗೆ ನಡಿ, ಸ್ಪೀಡಾಗಿ ಹೋಗು” ಅಂದರು. ಆಟೋದವ ಮುಕ ಅರಳಿಸಿಕೊಂಡು ಉತ್ಸಾಹದಿಂದ ಆಟೋ ಟರ‍್ನ್ ಮಾಡಿಕೊಂಡು ಟುರ‍್ರ್ …ಟುರ‍್ರ್… ಅಂತ ಆಟೋ ಓಡಿಸಿಕೊಂಡು ಹೋದ. ಕಿವಿ ಕೇಳದ ಅಜ್ಜಿ ಅಮ್ಮನ ಬಳಿ ಬಂದು “ಯಾಕೆ ನಿನ್ನ ಗಂಡ ಹಿಂದಕ್ಕೆ ಹೋದ, ಯಾಕೆ ಎಲ್ಲರೂ ನಗ್ತಾ ಇದ್ದಾರೆ?!” ಅಂತ ಕೇಳಿದಳು.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *