ಒಲವಿನ ಚುಟುಕುಗಳು

ಬಸವರಾಜ ಡಿ. ಕಡಬಡಿ.

love, ಒಲವು

ನನ್ನೆಲ್ಲ ಕವನಗಳಿಗೆ ನೀನೆ ಕಾರಣ
ನೀನೆ ಓದದಿದ್ದರೆ ಬಂದರೆಶ್ಟು ಬಹುಮಾನ?

***

ನೀ ನಕ್ಕಾಗ ಉದುರಿದ
ಮುತ್ತುಗಳನ್ನೆಲ್ಲ ಶೇಕರಿಸಿಟ್ಟಿದ್ದರೆ
ಸಮುದ್ರಕ್ಕೇ ಸಾಲ ಕೊಡಬಹುದಿತ್ತೇನೋ?

***

ಆ ಕಾಳಿದಾಸನಿಗೂ
ಸಿಗಲಾರದ ನಿನ್ನಂತ
ಒಬ್ಬ ಪ್ರೇಮಿಯಿದ್ದಳೋ
ಎಂಬ ಬಲವಾದ ಸಂಶಯ ನನಗೆ
ಅದಕೆ ಕಾಳಿದಾಸ ಕವಿರತ್ನನಾದ!

***

ನೀನು ಎಲ್ಲದರಲ್ಲೂ
ಚೌಕಾಸಿ ಮಾಡುವುದನ್ನು ನೋಡಿದ್ದೇನೆ
ನನಗೇಕೆ ಪುಕ್ಕಟೆಯಾಗಿ
ನಿನ್ನ ನಗುವನ್ನು ಕೊಟ್ಟೆ?

***

ನಿನ್ನನ್ನು ಬೇಡಿ
ಎಲ್ಲ ದೇವರಿಗೂ ಹರಕೆಯ ದಾರ
ಕಟ್ಟಿ ಬಂದಿದ್ದೇನೆ ಮಾರಾಯ್ತಿ
ಒಂದ್ಸಾರಿ ಸಿಕ್ಕಿಬಿಡು, ದೇವರ ಹೆಸರುಳಿಸು

***

ನೀನು ಸಿಗದಿದ್ದರೆ
ಬದುಕಲಾರೆನೇನೋ
ನೀನು ಸಿಕ್ಕಬಿಟ್ಟರೆ
ಸತ್ತೇ ಹೋಗುತ್ತೇನೆ, ಕುಶಿಯಿಂದ!

***

ನೀನಿರದಿದ್ದರೆ
ಎರಡು ಅಂಕೆಯ
ಗಣಿತವೂ ಜಟಿಲ ನನಗೆ
ನೀನು ಜೊತೆಗಿದ್ದರೆ
ಕೋಟಿ ಕೋಟಿ ನಕ್ಶತ್ರಗಳನ್ನೆಲ್ಲ
ಎಣಿಸಿ ಗುಣಿಸಿ ಬಿಡುವೆ ಪಟಪಟನೆ!

***

ನಿನ್ನ ಪ್ರೀತಿಯ ನದಿ
ನನ್ನೆಲ್ಲ ಮನಸಿನ ಕಲ್ಮಶಗಳನ್ನು
ತೊಳೆದು ಹರಿದು ಹೋಗುತ್ತಿದೆ
ಆಣೆಕಟ್ಟು ಕಟ್ಟಿ ಹಿಡಿದಿಟ್ಟುಕೊಳ್ಳಲೇ?

***

ನಿನ್ನ ನೆನಪುಗಳೆಂಬ
ಏಣಿಯಿಂದ ನಾನು
ಆಗಸದ ತುದಿ ಮುಟ್ಟಿ ಬರುತ್ತಿರುತ್ತೇನೆ
ಕೆಲವೊಮ್ಮೆ ತಾರೆಗಳನ್ನೂ ಕಿತ್ತು ತರುತ್ತೇನೆ
ನಿನ್ನ ಕಿವಿಯೋಲೆಗೆ.

***

ಅಂದು ನೀನು ನನ್ನ ಎದೆಯ ಮೇಲೆ
ಹೆಜ್ಜೆ ಇಟ್ಟು ಹೋಗುವಾಗ ಕೇಳುವುದೇ ಮರೆತೇ
ನಿನಗೆ ನೋವಾಗಲಿಲ್ಲ ತಾನೇ?

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: