ಕ್ರಿಕೆಟ್‌ನಲ್ಲಿ ಯಾವಾಗಲೂ ಬೌಲರ್‍ರೆ ಬಲಿಪಶು!

– ಕೆ.ವಿ.ಶಶಿದರ.

ಕ್ರಿಕೆಟ್‌

ವಿಶ್ವದ ಎಲ್ಲಾ ಆಟಗಳನ್ನು ತೂಗಿದರೆ, ಕ್ರಿಕೆಟ್ ಆಟ ಜಂಟಲ್‍ಮನ್ಸ್ ಗೇಮ್ ಎಂದು ಕ್ಯಾತಿ ಪಡೆದಿದೆ. ಇದಕ್ಕೆ ಎರಡು ಕಾರಣವನ್ನು ಗುರುತಿಸಬಹುದು. ಒಂದು: ಬಹುಶಹ ಇದು ಇಂಗ್ಲೆಂಡ್ ನಲ್ಲಿ ಹುಟ್ಟು ಕಂಡಿದ್ದಕ್ಕಾಗಿ ಇರಬಹುದು. ಎರಡನೆಯದು: ವಿಶ್ವದಲ್ಲಿ ಕ್ರಿಕೆಟ್ ಆಡುವ ರಾಶ್ಟ್ರಗಳ ಸಂಕ್ಯೆ, ಪುಟ್ಬಾಲ್, ರಗ್ಬಿ, ಮುಂತಾದ ಟೀಮ್ ಗೇಮ್‌ಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ. ಆಂಗ್ಲರಿಗೆ ಯಾವಾಗಲೂ ತಮ್ಮದೇ ಶ್ರೇಶ್ಟ ಎಂಬ ಬಾವನೆ ತಲೆತಲಾಂತರದಿಂದ ಬೇರೂರಿದೆ.

ಕ್ರಿಕೆಟ್ ಆಟವನ್ನು ಯಾರೇ ಜಂಟಲ್ಮನ್ಸ್ ಗೇಮ್ ಎಂದು ಕರೆದರೂ ಈ ಆಟದಲ್ಲಿ ಮಲತಾಯಿ ದೋರಣೆ ಕಾಣಬಹುದು. ಹೇಗೆಂಬ ಅನುಮಾನ ತಲೆಯೆತ್ತಿರಬಹುದಲ್ಲವೆ? ಕ್ರಿಕೆಟ್ ಆಟದ ಎರಡು ಪ್ರಮುಕ ಅಂಗಗಳು ಬ್ಯಾಟಿಂಗ್ ಮತ್ತು ಬೌಲಿಂಗ್. ಬ್ಯಾಟಿಂಗ್, ಬೌಲಿಂಗ್ ಮಾಡುವವರು ಕ್ರಮವಾಗಿ ಬ್ಯಾಟ್ಸಮನ್ ಮತ್ತು ಬೌಲರ್. ಉಳಿದಂತೆ ಇರುವ ವಿಕೆಟ್ ಕೀಪರ್, ಪೀಲ್ಡರ್ ಇವರಿಗೆ ಏನಿದ್ದರೂ ನಂತರದ ಜಾಗ. ಈ ಪ್ರಮುಕ ಎರಡು ಅಂಗಗಳಾದ ಬ್ಯಾಟ್ಸಮನ್ ಮತ್ತು ಬೌಲರ್‌ಗಳನ್ನು ಗಮನಿಸಿದರೆ, ಬ್ಯಾಟ್ಸ್‌ಮನ್‍ಗೆ ಇರುವಶ್ಟು ಪ್ರಾಶಸ್ತ್ಯ ಬೌಲರ್‌ಗಳಿಗಿಲ್ಲ. ಹಾಗಾಗಿ ಬೌಲರ್‌ಗಳು ಮಲತಾಯಿ ದೋರಣೆಗೆ ಒಳಗಾದ ಕ್ರಿಕೆಟ್ ಕಲಿಗಳು!

ಕ್ರಿಕೆಟ್ ಇತಿಹಾಸ ಬಲ್ಲವರ ಚರ‍್ಚೆ ಯಾವಾಗಲು ಯಾವ ಬ್ಯಾಟ್ಸಮನ್ ಎಶ್ಟು ರನ್ ಹೊಡೆದ? ಯಾರು ಅತ್ಯಂತ ಉತ್ತಮ ಬ್ಯಾಟ್ಸಮನ್? ಆತನ ಸೆಂಚುರಿ ಎಂತಹ ಅಂಗಣದಲ್ಲಿ ಬಂತು, ಪಿಚ್ ಆತನಿಗೆ ಸಹಾಯ ಮಾಡುತ್ತಿತ್ತೆ? ಎಂಬ ವಿಶಯದ ಬಗ್ಗೆ ಹೆಚ್ಚು ಕೇಂದ್ರೀಕ್ರುತವಾಗಿರುತ್ತದೆ. ಆದರೆ ಇದೇ ರೀತಿಯ ಸೂಕ್ಶ್ಮ ಚರ‍್ಚೆಗಳು ಬೌಲರ್ ಬಗ್ಗೆ ಅಂದರೆ, ಬೌಲ್ ಮಾಡುತ್ತಿದ್ದವರು ಯಾರು? ಬಾಲ್ ಸ್ವಿಂಗ್ ಆಗುತ್ತಿತ್ತೇ? ಸ್ಪಿನ್ ಆಗುತ್ತಿತ್ತೆ?  ಎಂಬ ಮಾತುಗಳು ಇಲ್ಲವೇ ಇಲ್ಲ ಅತವಾ ಕಡಿಮೆಯೇ ಅಂತ ಹೇಳಬೇಕು.  ‘ಇದು ಬೌಲರ್ ಸ್ನೇಹಿ ಪಿಚ್ ಆದ ಕಾರಣ, ಆಟ ಸಪ್ಪೆಯಾಗಿತ್ತು ಹೆಚ್ಚು ರನ್ ಬರಲಿಲ್ಲ’, ಎಂಬ ಅಳಲು ಕಾಮೆಂಟೇಟರ್‌ನಿಂದ ಹಿಡಿದು ನೋಡುಗನವರೆಗೂ ಹಬ್ಬಿರುತ್ತದೆ.

ಇನ್ನೂ ಮುಂದುವರೆದರೆ, ಬೌಲರ್‌ಗಳದ್ದೂ ಸಹ ಕ್ರಿಕೆಟ್ ಆಟದಲ್ಲಿ ಅತ್ಯಂತ ಪ್ರಮುಕ ಪಾತ್ರವಿದೆ. ಆತ ಬೌಲ್ ಮಾಡದಿದ್ದಲ್ಲಿ ಆಟವೇ ಇಲ್ಲ!!! ಆದರೂ ಕ್ರಿಕೆಟ್‍ನಲ್ಲಿ ಬೌಲರ್‌ಗೆ ವಿದಿಸಿದಶ್ಟು ಕಟ್ಟುಪಾಡುಗಳು ಬ್ಯಾಟ್ಸ್‌ಮನ್‍ಗಳಿಗಿಲ್ಲ. ಆತ ಟೆಸ್ಟ್ ಮ್ಯಾಚ್‍ಗಳಲ್ಲಿ ಆರು ಬಾಲಿನ ಓವರ್‍ನಲ್ಲಿ ಎರಡಕ್ಕಿಂತ ಹೆಚ್ಚು ಬೌನ್ಸರ್ ಹಾಕುವಂತಿಲ್ಲ. ಬ್ಯಾಟ್ಸ್‌ಮನ್ ಪ್ರಾಣಕ್ಕೆ ಅಪಾಯ ತಪ್ಪಿಸಲು ಈ ಕ್ರಮ ಎನ್ನುವುದು ಆಡಳಿತಗಾರರ ಅಂಬೋಣ. ಇದು ಎಶ್ಟು ಸರಿ? ಬ್ಯಾಟ್ಸ್‌ಮನ್‍ಗೆ ಮಾರಣಾಂತಿಕವಾಗಲು ಈಗ ಅನುಮತಿಸಿರುವ ಎರಡೇ ಬೌನ್ಸರ್‌ಗಳು ಸಾಕಲ್ಲವೆ?

ಪಾಪಿಂಗ್ ಕ್ರೀಸ್‍ಗಿಂತ ಹೊರಗಡೆ ಕಾಲು ಇಟ್ಟು ಬೌಲ್ ಮಾಡಿದರೆ ನೋ ಬಾಲ್. ಅದಕ್ಕೆ ಪೆನಾಲ್ಟಿಯಾಗಿ ಬ್ಯಾಟಿಂಗ್ ತಂಡಕ್ಕೆ ಒಂದು ರನ್ ಬೇರೆ. ಗಾಯದ ಮೇಲೆ ಬರೆ. ಆದರೆ ಬ್ಯಾಟ್ಸ್‌ಮನ್ ಪಾಪಿಂಗ್ ಕ್ರೀಸ್ ಹೊರಗೆ ನಿಂತು ಬ್ಯಾಟ್ ಮಾಡಬಹುದು. ಯಾವುದೇ ಪೆನಾಲ್ಟಿ ಇಲ್ಲ. ಬದಲಿಗೆ ಅಂತಹವರನ್ನು ವೈಬವೀಕರಿಸಲಾಗುತ್ತದೆ. ಗಂಟೆಗೆ 150 ಕಿ.ಮೀ. ವೇಗದಲ್ಲಿ ಬೌಲ್ ಮಾಡಿದರೂ ಮುಂದೆ ಬಂದು ಆಡುವ ಎದೆಗಾರಿಕೆಯನ್ನು ಪ್ರಶಂಸಿಲಾಗುತ್ತೆ!!

ಇನ್ನೂ ವೈಡ್ ಬಾಲ್ ಬಗ್ಗೆ ಹೇಳುವ ಹಾಗೇ ಇಲ್ಲ. ಬ್ಯಾಟ್ಸ್‌ಮನ್‌ ಹೊಡೆಯುವಂತಹ ಬಾಲ್ ಹಾಕಿದರೆ ಅದು ಸರಿಯಾದ ಬೌಲಿಂಗ್. ಇಲ್ಲವಾದಲ್ಲಿ ವೈಡ್. ಇದರೊಡನೆ ಬೌನ್ಸರ್ ಹಾಗೂ ಬೀಮರ್ ಎಸೆದರೆ ಅವರಿಗೆ ವಾರ‍್ನಿಂಗ್ ಬೇರೆ. ಮೂರು ಬಾರಿ ಅದೇ ತಪ್ಪಾದರೆ ಅವರನ್ನು ಬೌಲಿಂಗ್‍ನಿಂದ ಅಮಾನತು ಮಾಡಲಾಗುತ್ತದೆ. ಈ ತರಹದ ಯಾವುದೇ ನಿಬಂದನೆ ಬ್ಯಾಟ್ಸ್‌ಮನ್‍ಗಳಿಗಿಲ್ಲ. ಬಲಗೈ ಅತವಾ ಎಡಗೈ ಬ್ಯಾಟ್ಸ್‌ಮನ್ ರಿವರ‍್ಸ್ ಸ್ವೀಪ್ ಸಹ ಮಾಡಬಹುದು. ಇದು ತಪ್ಪಲ್ಲ. ಮಲತಾಯಿ ದೋರಣೆಯ ಮತ್ತೊಂದು ಪ್ರಮುಕ ವಿಚಾರವೆಂದರೆ ಅಂಪೈರ್‌ಗಳ ಸಂಶಯದ ಲಾಬ ಯಾವಾಗಲೂ ಬ್ಯಾಟ್ಸ್‌ಮನ್‍ಗಳ ಪರವಾಗಿಯೇ ಇರುತ್ತದೆ ಎಂಬುದು.

ಇದೆಲ್ಲಾ ಟೆಸ್ಟ್ ಮ್ಯಾಚ್ ಕ್ರಿಕೆಟ್‍ಗೆ ಸಂಬಂದಿಸಿದ ವಿಶಯವಾದರೆ, ಏಕದಿನ ಅಂತರರಾಶ್ಟ್ರೀಯ ಹಾಗೂ ಟಿ-20 ಅಂತರರಾಶ್ಟ್ರೀಯ ಪಂದ್ಯಗಳಲ್ಲಿ ಬೌಲರ್‌ಗಳ ಕತೆಯೇ ಬೇರೆ. ಏಕದಿನ ಹಾಗೂ ಟಿ20 ಅಂತರರಾಶ್ಟ್ರೀಯ ಪಂದ್ಯಗಳಲ್ಲಿ ಬೌಲರ್ ಒಬ್ಬನಿಗೆ ಕ್ರಮವಾಗಿ ಹತ್ತು ಮತ್ತು ನಾಲ್ಕು ಓವರ್‌ಗಳನ್ನು ಮಾತ್ರ ಬೌಲ್ ಮಾಡಲು ಅವಕಾಶವಿದೆ. ಆದರೆ ಎರಡೂ ಪ್ರಕಾರಗಳಲ್ಲಿ ಬ್ಯಾಟ್ಸ್‌ಮನ್ ನೂರಾಗಲಿ, ಇನ್ನೂರಾಗಲಿ ಹೊಡೆಯತ್ತಾ ಹೋಗಬಹುದು. ಅವರಿಗೆ ಯಾವುದೇ ನಿಗದಿ ಇಲ್ಲ. ಇದು ನ್ಯಾಯ ಸಮ್ಮತವೆ? ಬೌಲರ್‌ಗಳಿಗೆ ಹೇರಿದಂತೆ ನಿರ‍್ಬಂದ ಬ್ಯಾಟ್ಸ್‌ಮನ್‌ಗಳಿಗೆ ಯಾಕೆ ಹೇರಿಲ್ಲ? ಎಂಬುದೇ ಯಕ್ಶಪ್ರಶ್ನೆ. ಇನ್ನಿಂಗ್ಸ್‌ನ ಓವರ್‌ಗಳನ್ನು ನಿಗದಿಗೊಳಿಸಿದ ಮೇಲೆ ಆ ಪರಿಮಿತಿಯಲ್ಲಿ ಒಬ್ಬ ಬೌಲರ್ ಎಶ್ಟು ಓವರ್ ಬೇಕಾದರೂ ಮಾಡಬಹುದು ಎಂದೇಕೆ ನಿಯಮ ಮಾಡಿಲ್ಲ? ಇದು ದ್ವಿಮುಕ ನೀತಿಯಲ್ಲವೇ? ಪಕ್ಶಪಾತವಲ್ಲವೇ?

ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್ ಕಾಲಿನ ಪಕ್ಕದಲ್ಲಿ ಬಾಲ್ ಹೋದರೂ ಸಹ ವೈಡ್ ಎಂದು ತೀರ‍್ಮಾನಿಸಿ, ಒಂದು ಇತರೆ ರನ್ನನ್ನು ಕೊಡುಗೆಯಾಗಿ ಬ್ಯಾಟಿಂಗ್ ತಂಡಕ್ಕೆ ನೀಡಲಾಗುವುದು. ಈ ಎರಡೂ ಪ್ರಕಾರಗಳಲ್ಲಿ ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳನ್ನು ದಂಡಿಸಲಿ, ಇದರಿಂದ ನೋಡುಗರಿಗೆ ಹೆಚ್ಚು ಕುಶಿ ದೊರಕಲಿ ಎಂಬ ಏಕೈಕ ಉದ್ದೇಶದಿಂದ, ಕ್ಶೇತ್ರ ರಕ್ಶಣೆಯಲ್ಲೂ ಸಹ ನಿರ‍್ಬಂದಗಳನ್ನು ಹೇರಿರುವುದು ಎಶ್ಟು ಸರಿ? ಇಲ್ಲಿಯೂ ಸಹ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲವಾಗುವಂತಹ, ಹೆಚ್ಚು ರನ್ ಪೇರಿಸಲು, ಸಿಕ್ಸರ್ ಬೌಂಡರಿಗಳನ್ನು ಸಲೀಸಾಗಿ ಬಾರಿಸಲು ಅನುಕೂಲವಾಗುವಂತಹ ಕಾಯ್ದೆಯನ್ನು ರೂಪಿಸಿರುವುದು ಜಗಜ್ಜಾಹೀರಾಗಿದೆ. ಪಾಪ ಬೌಲರ್‌ಗಳ ಪಾಡು ಹೇಳತೀರದು. 15 ಅತವಾ 20 ಮೀಟರ್‌ಗಳ ದೂರದಿಂದ ಬಯಂಕರ ವೇಗದಲ್ಲಿ ಓಡಿ ಬಂದು ಬೌಲ್ ಮಾಡುವ ಬೌಲರ್‌ಗಳ ಪರಿಶ್ರಮಕ್ಕೆ ಎಲ್ಲಿದೆ ಬೆಲೆ?

2019ರ ಏಕದಿನ ಅಂತರರಾಶ್ಟ್ರೀಯ ವಿಶ್ವಕಪ್‌ನಲ್ಲೂ ಸಹ ಚಾಂಪಿಯನ್ ಎಂದು ಗೋಶಣೆಯಾಗಿದ್ದು ಹೆಚ್ಚು ಬೌಂಡರಿ ಹೊಡೆದ ದೇಶ. ಕಡಿಮೆ ವಿಕೆಟ್ ಕಳೆದುಕೊಂಡ ರಾಶ್ಟ್ರಕ್ಕೆ ಕೊಡಬಹುದಿತ್ತಲ್ಲವೆ? ಇಲ್ಲೂ ಆ ಮಲತಾಯಿ ದೋರಣೆ ಮುಂದುವರೆದಿದ್ದು ಅಸಹನೀಯವಲ್ಲವೆ?

ಇಶ್ಟೆಲ್ಲಾ ನಿರ‍್ಬಂದನೆಗಳ ನಡುವೆಯೂ ದೇಶ ವಿದೇಶದ ಬೌಲರ್‌ಗಳು ಮಾಡಿರುವ ಸಾದನೆ, ದಾಕಲೆಗಳು ಅಪಾರ. ಅವುಗಳಲ್ಲಿ ಕೆಲವು ಅಪೂರ‍್ವ ದಾಕಲೆಗಳನ್ನು ಗಮನಿಸೋಣ.

1998ರ ವಿಸ್ಡನ್ ಪ್ರಕಾರ, ಕ್ರಿಕೆಟ್ ಪಂದ್ಯಾವಳಿಗಳ 120 ವರ‍್ಶಗಳ ಇತಿಹಾಸದಲ್ಲಿ ಕೇವಲ ಏಳು ಬೌಲರ್‌ಗಳು ಮಾತ್ರ ಒಂದೇ ಪಂದ್ಯದಲ್ಲಿ ಎರಡು ಬಾರಿ ಹ್ಯಾಟ್ರಿಕ್ ಸಾದನೆ ಮಾಡಿರುವ ದಾಕಲೆಯಿದೆ. ಆದರೆ ಒಂದೇ ಓವರ್‌ನಲ್ಲಿ ಎರಡು ಹ್ಯಾಟ್ರಿಕ್ ಪಡೆದ ದಾಕಲೆ ಇನ್ನೂ ಸ್ರುಶ್ಟಿಯಾಗಿಲ್ಲ. ನಂತರದ ವರ‍್ಶಗಳಲ್ಲಿ ಈ ಸಾದನೆ ಮಾಡಿದ್ದು, 1999ರ ಮಾರ್‍ಚ್‌ನಲ್ಲಿ ಪಾಕಿಸ್ತಾನದ ವಾಸಿಮ್ ಅಕ್ರಮ್, ಶ್ರೀಲಂಕಾ ವಿರುದ್ದ ಡಾಕಾದಲ್ಲಿ ನಡೆದ ಟೆಸ್ಟ್ ಮ್ಯಾಚ್ ಒಂದರಲ್ಲಿ ಈ ದಾಕಲೆಯನ್ನು ಸರಿಗಟ್ಟಿದ್ದಾರೆ.

ಒಂದೇ ಪಂದ್ಯದಲ್ಲಿ ಡಬಲ್ ಹ್ಯಾಟ್ರಿಕ್ ಸಾದನೆ ಮಾಡಿರುವ ಬೌಲರ್‌ಗಳ ವಿವರ ಹೀಗಿದೆ.
ಎ. ಶಾ -1884
ಎ. ಇ . ಟ್ರಾಟ್ -1907
ಟಿ. ಜೆ. ಮ್ಯಾತ್ಯೂಸ್ -1912
ಸಿ. ಡಬ್ಲ್ಯೂ. ಎಲ್. ಪಾರ‍್ಕರ್ -1924
ಆರ್. ಓ. ಜೆನ್ಕಿನ್ಸ್ -1949
ಜೆ. ಎಸ್. ರಾವ್ -1963-64
ಅಮೀನ್ ಲಕ್ಹಾನಿ -1978-79

ಈ ಬೌಲರ್‌ಗಳಲ್ಲಿ ಮಂಚೂಣಿಯಲ್ಲಿ ನಿಲ್ಲುವ ಇಬ್ಬರು ಬೌಲರ್‌ಗಳೆಂದರೆ ಎ. ಇ. ಟ್ರಾಟ್ ಮತ್ತು ಬಾರತದವರೇ ಆದ ಜೆ. ಎಸ್. ರಾವ್. ಇವರ ದಾಕಲೆಯೆಂದರೆ ಈ ಇಬ್ಬರು ಬೌಲರ್‌ಗಳು ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ಡಬಲ್ ಹ್ಯಾಟ್ರಿಕ್‍ ಗಳಿಸಿ ಮಹತ್ತರ ಸಾದನೆ ಮಾಡಿದ್ದಾರೆ. ಈ ದಾಕಲೆ ಸರಿಗಟ್ಟುವ ದಾಕಲೆ ಇದುವರೆಗೂ ಸ್ರುಶ್ಟಿಯಾಗಿಲ್ಲ. ಎ. ಇ. ಟ್ರಾಟ್‍ರವರ ದಾಕಲೆಯನ್ನು ಪರಿಗಣಿಸಿದರೆ, ಈತ ಕ್ರಿಕೆಟ್ ಕಾಶಿ ಎಂದೇ ಪರಿಗಣಿಸುವ ಲಾರ್‌ಡ್ಸ್ ಮೈದಾನದಲ್ಲಿ ಸಾಮರ‍್ಸೇಟ್ ವಿರುದ್ದದ ಪಂದ್ಯದಲ್ಲಿ ಈ ಸಾದನೆ ಮಾಡಿದ್ದಾರೆ. ಈತ ಆಪ್ ಬ್ರೇಕ್ ಬೌಲರ್. ಆ ಒಂದು ಓವರ್‌ನಲ್ಲಿ ಒಂದು ಹ್ಯಾಟ್ರಿಕ್ ಜೊತೆಗೆ ನಾಲ್ಕನೇ ಬಾಲಿನಲ್ಲಿ ನಾಲ್ಕನೇ ವಿಕೆಟ್ ಪಡೆದಿದ್ದು ಸಹ ದಾಕಲೆಯೇ. ಆತನ ಬೌಲಿಂಗ್ ದಾಕಲೆ ಇಲ್ಲಿಗೇ ನಿಲ್ಲಲಿಲ್ಲ. ಮತ್ತೆ ಅದೇ ಇನ್ನಿಂಗ್ಸ್‌ನಲ್ಲಿ ಮತ್ತೆ ಹ್ಯಾಟ್ರಿಕ್ ಗಳಿಸಿದ್ದು ಈಗ ಇತಿಹಾಸ. ಈ ಇನ್ನಿಂಗ್ಸ್‌ನಲ್ಲಿ ಆತನ ಬೌಲಿಂಗ್ ಅಂಕಿಅಂಶ 8 ಓವರ್, 3 ಮೇಡನ್, 20 ರನ್, ಏಳು ವಿಕೆಟ್. ಈ ಪಂದ್ಯ ಆಡುವಾಗ ಟ್ರಾಟ್‍ನ ವಯಸ್ಸು ಕೇವಲ 40 ವರ‍್ಶ!!!

ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಡಬಲ್ ಹ್ಯಾಟ್ರಿಕ್ ಸಾದನೆ ಮಾಡಿದ ಮತ್ತೊಬ್ಬರು, ಬಾರತದ ಜೆ. ಎಸ್. ರಾವ್. ಈತನ ದಾಕಲೆ ಬಹುಶಹ ಬಹಳ ಅಪರೂಪ. ನವೆಂಬರ್ 1963ರಲ್ಲಿ ಸರ‍್ವಿಸಸ್ ಪರವಾಗಿ ಆಡಿದ ಈತ ದೆಹಲಿಯಲ್ಲಿ ತಾನಾಡಿದ ಜಮ್ಮು ಮತ್ತು ಕಾಶ್ಮೀರದ ಮೇಲಿನ ಮೊದಲ ರಣಜಿ ಪಂದ್ಯದಲ್ಲೇ ಹ್ಯಾಟ್ರಿಕ್ ಗಳಿಸಿದ ದೀರ. ನಂತರದ ಪಂದ್ಯ ಅಮ್ರುತಸರದಲ್ಲಿ, ಉತ್ತರ ಪಂಜಾಬ್ ಮೇಲೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಈತ ಡಬಲ್ ಹ್ಯಾಟ್ರಿಕ್ ಗಳಿಸಿ ದಾಕಲೆ ಬರೆದ. ಬಾರತದಲ್ಲಿ ಇದನ್ನು ಇದುವರೆಗೂ ಯಾರಿಗೂ ಅಳಿಸಲಾಗಿಲ್ಲ. ರಾವ್ ಹ್ಯಾಟ್ರಿಕ್ ಪಡೆದ ನಂತರ ಮತ್ತೊಂದು ವಿಕೆಟ್ ಪಡೆದಿದ್ದು ಹೌದು. ಆದರೆ ಅದು ಐದನೇ ಎಸೆತದಲ್ಲಿ ಬಂದ ಕಾರಣ ಟ್ರಾಟ್ ಮಾಡಿದ್ದ, ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್, ದಾಕಲೆಯನ್ನು ಸರಿಗಟ್ಟಲಾಗಲಿಲ್ಲ. ಜೆ. ಎಸ್‌. ರಾವ್ ಮಾಡಿದ ದಾಕಲೆ, ಒಂದೇ ರುತುವಿನಲ್ಲಿ ಮೂರು ಬಾರಿ ಹ್ಯಾಟ್ರಿಕ್, ಸಾದನೆಯನ್ನು ಇದುವರೆಗೂ ಯಾರ ಕೈಲೂ ಮುರಿಯಲಾಗಿಲ್ಲ. ಇಂತಹ ಅಪೂರ‍್ವ ದಾಕಲೆಯ ಸರದಾರನಿಗೆ, ಬಾರತವನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ಪ್ರತಿನಿದಿಸುವ ಸದಾವಕಾಶ ಬರಲೇ ಇಲ್ಲ ಎಂಬುದು ವಿಪರ‍್ಯಾಸವೇ ಸರಿ.

ಪಾಕಿಸ್ತಾನದ ವಾಸಿಮ್ ಅಕ್ರಮ್‍ಗೂ ಮುನ್ನ ಟೆಸ್ಟ್ ಕಿಕೆಟ್‍ನಲ್ಲಿ ಈ ಸಾದನೆ ಮಾಡಿದವ ಆಸ್ಟ್ರೇಲಿಯಾದ ಟಿ. ಜೆ. ಮ್ಯಾತ್ಯೂಸ್. ಈತನ ವಿಕೆಟ್‍ಗಳು ಬಂದಿದ್ದು ಸೌತ್ ಆಪ್ರಿಕಾ ವಿರುದ್ದದ ಪಂದ್ಯದಲ್ಲಿ. ಸೌತ್ ಆಪ್ರಿಕಾದ ಮೊದಲ ಇನ್ನಿಂಗ್ಸ್‌ನಲ್ಲಿ  ಕೊನೆಯ ಮೂರು ವಿಕೆಟ್‌ಗಳನ್ನು ಈ ಲೆಗ್ ಸ್ಪಿನ್ ಬೌಲರ್ ನಿದಾನಗತಿ ಬೌಲ್ ಮಾಡಿ ಪಡೆದ. ನಂತರ ಪಾಲೋ-ಆನ್ ಆದ ಮೇಲೆ ಅದೇ ದಿನ, ಮ್ಯಾತ್ಯೂಸ್ ಎರಡನೆ ಇನ್ನಿಂಗ್ಸ್ ನಲ್ಲೂ ಮತ್ತೆ ಹ್ಯಾಟ್ರಿಕ್ ಸಾದನೆ ಮಾಡಿದ. ಮ್ಯಾತ್ಯೂಸ್ ಡಬಲ್ ಹ್ಯಾಟ್ರಿಕ್ ಸಾದನೆಯನ್ನೇನೋ ಮಾಡಿದ, ಆದರೆ ಇಡೀ ಪಂದ್ಯದಲ್ಲಿ ಆ ಆರು ವಿಕೆಟ್ ಹೊರತು ಪಡಿಸಿ ಬೇರೆ ವಿಕೆಟ್ ಕಬಳಿಸಲು ಸಾದ್ಯವಾಗಲಿಲ್ಲ. ಆತನ ಬೌಲಿಂಗ್ ಅಂಕಿ ಅಂಶ ಕ್ರಮವಾಗಿ 12-3-16-3 ಹಾಗೂ 8.1-3-8-3. ಈ ದಾಕಲೆಯನ್ನು ಬರೆಯುವಾಗ ಮ್ಯಾತ್ಯೂಸ್‍ಗೆ ಕೇವಲ 28 ವರ‍್ಶ ಮಾತ್ರ.

1884ರಲ್ಲಿ 42 ವರ‍್ಶ ವಯಸ್ಸಿನ ಮೀಡಿಯಮ್ ಪೇಸರ್ ಆಲ್ಪ್ರೆಡ್ ಶಾ, ನಾಟಿಂಗ್‍ಹ್ಯಾಮ್‌ಶೈರ್ ಮತ್ತು ಗ್ಲೌಸ್ಟರ್‌ಶೈರ್ ವಿರುದ್ದದ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ಸಾದನೆ ಮಾಡಿದ್ದರು. ಇದೇ ವಯಸ್ಸಿನ ಚಾರ್‍ಲ್‌ಸ್‌ ಪಾರ‍್ಕರ್ 1924 ರಲ್ಲಿ ಗ್ಲೌಸ್ಟರ್‌ಶೈರ್ ಪರ ಮಿಡ್ಲಸೆಕ್ಸ್ ವಿರುದ್ದ ಆಡುವಾಗ ಡಬಲ್ ಹ್ಯಾಟ್ರಿಕ್ ಗಳಿಸಿದ್ದ. 1949ರಲ್ಲಿ 32 ವರ‍್ಶ ವಯಸ್ಸಿನ ಲೆಗ್ ಸ್ಪಿನ್ ಗೂಗ್ಲಿ ಬೌಲರ್ ರೊಲೆಂಡ್ ಜೆನ್ಕಿನ್ಸ್, ಸರ‍್ರೆ ಎದುರಿನ ಪಂದ್ಯದಲ್ಲಿ ಈ ಸಾದನೆ ಮಾಡಿದ್ದ. ಮುಂದೆ ಈತ ಇಂಗ್ಲೇಂಡ್ ತಂಡದಲಿದ್ದು 9 ಟೆಸ್ಟ್ ಪಂದ್ಯವಾಡಿದ್ದ. ಅಕ್ಟೋಬರ್ 1978ರಲ್ಲಿ ಬಾರತದ ವಿರುದ್ದ ಮುಲ್ತಾನ್‍ನಲ್ಲಿ ನಡೆದ ಪ್ರತಮ ದರ‍್ಜೆ ಪಂದ್ಯದಲ್ಲಿ ಯಂಗ್ ಪಾಕಿಸ್ತಾನ್ ಇಲೆವಲ್ ಪರ ಆಡಿದ 20 ವರ‍್ಶದ ಎಡಗೈ ಸ್ಪಿನ್ನರ್ ಅಮೀನ್ ಲಕ್ಹಾನಿ ಎರಡೂ ಇನ್ನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ಸಾದನೆ ಮಾಡಿದ್ದ. ಅಶ್ಟು ಸಣ್ಣ ವಯಸ್ಸಿನಲ್ಲಿ ಇಂತಹ ಅದ್ಬತ ಸಾದನೆ ಮಾಡಿದ್ದರೂ, ಬಾರತದ ಜೆ. ಎಸ್. ರಾವ್‌ನಂತೆಯೇ ಈತ ಸಹ ಪಾಕಿಸ್ತಾನದ ಪರ ಟೆಸ್ಟ್ ಪಂದ್ಯವಾಡಲಿಲ್ಲ.

(ಮಾಹಿತಿ ಸೆಲೆ: lanka.net)

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: