ಮಳೆ ತಂದ ಬೆಚ್ಚನೆಯ ನೆನಪುಗಳು…
– ಯೋಶಿಕ ರಾಜು.
ಮಳೆ ಹನಿಗಳು ನೆಲಕ್ಕೆ ಬಿದ್ದಾಗ ನೂರಾರು ನೆನಪುಗಳು ಕಣ್ಣೆದುರಿಗೆ ಬರುತ್ತೆ. ಕೆಲವು ಹನಿಗಳು ಕಣ್ಣಲ್ಲಿ ಹನಿಗಳನ್ನು ತರಿಸಿದರೆ ಇನ್ನೂ ಕೆಲವು ತುಟಿಗಳನ್ನು ಅಗಲಕ್ಕೆಳೆಯುತ್ತೆ. ಮೋಡ ಕರಗಿ ಬರೋ ಈ ರಸ ಯಾತ್ರೆ ನಮ್ಮ ಹಾಗೆ ಮರಕ್ಕೂ ಮಣ್ಣಿಗೂ ಸ್ವಲ್ಪ ಮಟ್ಟಿಗೆ ಇಶ್ಟ. ನಮ್ಮ ಕರಾವಳಿಯಲ್ಲಂತೂ ಬರೋ ಮಳೆಗೂ, ಬೀಸೋ ಗಾಳಿಗೂ ಯಾವ ಲೆಕ್ಕನೂ ಇಲ್ಲ. ಬಕೆಟ್ಟಿಂದ ನೀರು ಸುರಿದ ಹಾಗೆ ಮಳೆ ಬರ್ತಾ ಇರುತ್ತೆ. ಅದಕ್ಕೆ ಒಂದು ಇಂಟರ್ವಲ್ಲೇ ಇಲ್ಲ. ಹೀಗೆ ಸುರಿದ ಮಳೆಗೆ ಬಿರು ಬೇಸಿಗೆಗೆ ಒಣಗಿ ಅಲ್ಲಲ್ಲಿ ನಾಲ್ಕು ಕೊಡ ನೀರು ತುಂಬಿಕೊಂಡಿದ್ದ ನದಿ, ಹಳ್ಳಗಳೆಲ್ಲ ಉಕ್ಕಿ ಉಕ್ಕಿ ಹರೀತಾ ಇರುತ್ತೆ.
ನಮ್ಮ ಮನೆಯ ಹತ್ತಿರ ಒಂದು ನದಿಯಿದೆ. ಇದು ದರ್ಮಸ್ತಳದಿಂದ ಬೆಂಗಳೂರಿಗೆ ಹೋಗೋ ದಾರಿಯಲ್ಲಿ ಇರೋದ್ರಿಂದ ದಿನೇದಿನೇ ಇದರ ಸೆಲ್ಪಿ ಅಬಿಮಾನಿಗಳು ಹೆಚ್ಚುತ್ತಲೇ ಇದ್ದಾರೆ, ನಾನು ಎಲ್ ಕೆ ಜಿಗೆ ಹೋಗುವಾಗ ಇದು ತುಂಬಿದ್ಯಾ ಅಂತ ಮಳೆ ಬಿದ್ದ ದಿನ ಶಾಲೆಯಿಂದ ಬರುವಾಗ ನೋಡ್ತಿದ್ದೆ. ಒಂದಿನ ಸಹಜಕ್ಕಿಂತ ಹೆಚ್ಚಿನ ನೀರು ಕಂಡು ನಮ್ಮ ಸ್ಕೂಲ್ ಬಸ್ಸಿನಲ್ಲಿರುವ ಮಕ್ಕಳೆಲ್ಲ ಕಿರಿಚಿದಾಗಲೇ ನಂಗೆ ಗೊತ್ತಾಗಿದ್ದು ನನ್ನ ಹಾಗೆ ಎಲ್ಲರೂ ಈ ನದಿಯನ್ನು ನೋಡ್ತಾ ಇದ್ರು ಅಂತ. ವಿಶೇಶ ಅಂದ್ರೆ ನಾನು ಇತ್ತೀಚೆಗೆ ಬೆಂಗಳೂರಿಗೆ ಕೆಲಸಕ್ಕೆ ಹೋಗಿ ಸ್ವಲ್ಪ ದಿನದಲ್ಲೇ ಸುದ್ದಿ ಬಂತು, ಮಳೆಗೆ ಆ ನದಿಯ ಮೇಲಿರುವ ಸೇತುವೆಯನ್ನು ಮುಳುಗಿಸುವಶ್ಟು ನೀರು ಬಂತು ಅಂತ. ಅಂತೂ ಅದು ಗಮ್ಮತ್ತಾಯ್ತು.
ಮಳೆಯ ಒಂದು ಬೇಜಾರಿನ ನೆನಪೇನು ಅಂದ್ರೆ, ಹೋಮ್ ವರ್ಕಿನ ರಗಳೆಯಿಲ್ಲದೆ, ಮಾವಿನ ಕಾಯಿ, ಹಲಸಿನ ಕಾಯಿ, ಅಜ್ಜಿ ಮನೆ, ಆರಾಮದ ನಿದ್ದೆ, ಬಿಸಿ ಬಿಸಿ ಮದ್ಯಾಹ್ನದ ಊಟ ಅಂತೆಲ್ಲಾ ಕುಶಿ ಕುಶಿಯಾಗಿದ್ದ ಬೇಸಿಗೆ ರಜೆ ಮುಗಿದು ಶಾಲೆ ಶುರುವಾಗೋ ಹೊತ್ತು. ಬೆಳಗ್ಗೆ ಆ ತಣ್ಣನೆಯ ಮಳೆಯ ಹಿನ್ನಲೆ ಸಂಗೀತದಲ್ಲಿ, ‘ನಮ್ಮ ಶಾಲೆ, ಮಳೆಗೆ ಬಿದ್ದು ಹೋಯಿತು, ಯಾಕೋ ಇವತ್ತು ಏಕಾಏಕಿ ರಜೆ ಕೊಟ್ರು’ ಅಂತೆಲ್ಲ ಕನಸು ಕಾಣುತ್ತಿರುವಾಗ “ಗಂಟೆ ಏಳಾಯ್ತು” ಅಂತ ಅಮ್ಮನ ಕೂಗು. ಎದ್ದು ರೆಡಿಯಾಗುವಾಗ ನಾಳೆಯಾದ್ರು ಕಂಡ ಕನಸು ನಿಜವಾಗಬೇಕು ಅಂತ ದೇವರಲ್ಲಿ ಸಣ್ಣದೊಂದು ಕೋರಿಕೆ. ಅಂತೂ ಶಾಲೆಗೆ ಹೊರಟ್ರೆ ಅದೇ ಹೊತ್ತಿಗೆ ನಮ್ಮ ಡುಮ್ಮ ಬ್ಯಾಗುಗಳನ್ನ ಒದ್ದೆ ಮಾಡಲು ನಮ್ಮ ಗರಿಗರಿ ಒಣಗಿದ ಕೊಡೆಯನ್ನು ನೆನೆಸಲು ಒಂದು ದೊಡ್ಡ ಮಳೆ! ಎಲ್ಲಾ ದಿನವೂ ಇದೇ ಕತೆ. ‘ಶಾಲೆಗೆ ಹೋಗ್ಲೇಬೇಕಾ? ಓದದಿದ್ರೂ ಬದುಕಬಹುದು’ ಅಂತೆಲ್ಲ ಡೈಲಾಗ್ ಹೊಡೆದು ಕೊಡೆ ಬಿಡಿಸಿ ಶಾಲೆಗೆ ಹೊರಡ್ತಾ ಇದ್ವಿ. ಮಳೆ ಜೊತೆಗೇ ನಂಗೆ ಜ್ವರ ಬಂದು ಶಾಲೆಗೆ ರಜೆ ಹಾಕಿ ಒಂದೆರಡು ದಿನ ಮನೇಲಿ ಆರಾಮಾಗಿರೋದು(?) ಮಳೆಯ ಮತ್ತೊಂದು ಚಳಿ ನೆನಪು.
ಮಳೆ ನೀರು ಹಂಚಿನ ಮೇಲೆ ಬಿದ್ದು, ಅದು ಹಂಚಿನ ಅಂಚಿನಿಂದ ಸರಸರ ಅಂತ ಕೆಳಗೆ ಬಿಳೋದು ನೋಡೋದೇ ಒಂತರಾ ಚಂದ. ಈ ನೀರು ನೋಡ್ತಾ ನಿಂತ್ರೆ ಸಮಯ ಹೋಗೋದೇ ಗೊತ್ತಾಗಲ್ಲ. ಹೀಗೆ ನೀರು ಬಿದ್ದು ಬಿದ್ದು ಅದು ಬೀಳೋ ಜಾಗದಲ್ಲಿ ಮಣ್ಣೆಲ್ಲಾ ಹೋಗಿ ಬರೇ ಕಲ್ಲೇ ಕಾಣುತ್ತಾ ಇರುತ್ತೆ. ಹೀಗೆ ಮನೆ ಸುತ್ತಲೂ ನೀರು ಹರಿದು ಮಳೆಗಾಲ ಮುಗಿಯೋವಶ್ಟರಲ್ಲಿ ಮನೆ ಸುತ್ತಲೂ ಮಣ್ಣಿದ್ದ ಕಡೆ ಚಿಕ್ಕ ಚಿಕ್ಕ ಕಲ್ಲು ಕಾಣುತ್ತೆ. ಆ ಕಲ್ಲುಗಳ ಮೇಲೆ ತಮ್ಮನ ಜೊತೆ ಕಾಗದದ ದೋಣಿ ಬಿಡೋದು ಮತ್ತೊಂದು ನೆನಪಿನ ಹನಿ.
ಅಂತೂ ಮಳೆಗಾಲವೊಂದು ಮುಗಿಯೋವಶ್ಟರಲ್ಲಿ ಅನೇಕ ಹೊಸ ಹಳ್ಳಗಳು ಹರೀತಿರುತ್ತೆ, ಹಳೇ ಹಳ್ಳಿಗಳು ಸೊರಗಿರುತ್ತೆ, ಜನರಂತೂ ಜಡಿ ಮಳೆಯಾದ್ರೂ ರಣ ಬಿಸಿಲಾದ್ರೂ ಹಾಗೇ ಇರ್ತಾರೆ. ಆದ್ರೆ ಮಕ್ಕಳಂತೂ ಬೈದಾಡಿಕೊಂಡು ಶುರುವಾಗಿದ್ದ ಮಳೆಗಾಲವನ್ನ ತುಂಬಾ ಮಿಸ್ ಮಾಡ್ತಿರ್ತಾರೆ. ನಮ್ಮ ಬಾಲ್ಯದ ನೆನಪಿಗೆ ತುಂತುರು ಹನಿಗಳನ್ನು ಪೋಣಿಸಿ ಮಳೆಗಾಲ ಕಳೆ ತಂದಿದೆ. ತುಂತುರು ಹನಿಗಳು ಆಲಿಕಲ್ಲುಗಳಾದ್ರೂ ಮಕ್ಕಳಿಗೆ ಕುಶಿನೇ. ಆದ್ರೆ ಒಂದಿಶ್ಟು ಬ್ರೇಕ್ ಸಿಕ್ರೆ ನಮ್ಮಪ್ಪ ಕೆಲ್ಸಕ್ಕೆ ಹೊರಡಬಹುದಿತ್ತು, ನಮ್ಮಮ್ಮ ಬಟ್ಟೆ ಒಣಗಕ್ಕೆ ಹಾಕ್ಬೋದಿತ್ತು, ಇವ್ರೆಲ್ಲ ಹೊರಗೆ ಹೋದ್ರೆ ನಾವಿಬ್ರು ಸೇರಿ ತಿಂಡಿ ಕದೀಬಹುದಿತ್ತು. ಬ್ರೇಕ್ ಪ್ಲೀಸ್!!
( ಚಿತ್ರ ಸೆಲೆ : newsable.asianetnews.com )
ಇತ್ತೀಚಿನ ಅನಿಸಿಕೆಗಳು