ಕನ್ನೆಕುಡಿ ಕಟ್ನೆ
– ಕಲ್ಪನಾ ಹೆಗಡೆ.
ಕನ್ನೆಕುಡಿ ಸೊಪ್ಪು ಉತ್ತರ ಕನ್ನಡದ ಕಡೆ ಹೆಚ್ಚಾಗಿ ನೋಡಸಿಗುತ್ತದೆ. ಈ ಕನ್ನೆಕುಡಿ ಕಟ್ನೆಯನ್ನು ಉತ್ತರಕನ್ನಡ ಜಿಲ್ಲೆಯ ಹಳ್ಳಿಗಳಲ್ಲಿ ಅನ್ನದೊಂದಿಗೆ ತುಪ್ಪ ಹಾಕಿ ಸವಿಯುತ್ತಾರೆ. ಹಾಗೇ, ಇದನ್ನು ಬಾಣಂತಿಯರಿಗೆ ಕುಡಿಯಲು ಕೊಡುವುದೂ ಕೂಡ ವಿಶೇಶ.
ಏನೇನು ಬೇಕು?
- ಕನ್ನೆಕುಡಿ ಸೊಪ್ಪು
- 10 ಕಾಳು ಮೆಣಸು
- 1 ಚಮಚ ಜೀರಿಗೆ
- 1 ಚಮಚ ನಿಂಬೆ ರಸ
- 1 ಒಣಮೆಣಸಿನಕಾಯಿ
- 1/2 ಹೋಳು ಕಾಯಿತುರಿ
- ಬೆಳ್ಳುಳ್ಳಿ
- ಇಂಗು
- ರುಚಿಗೆ ತಕ್ಕಶ್ಟು ಉಪ್ಪು
ಮಾಡೋದು ಹೇಗೆ?
ಮೊದಲು ಕನ್ನೆಕುಡಿ ಸೊಪ್ಪನ್ನು ಚೆನ್ನಾಗಿ ತೊಳೆಯಿರಿ. ಕುಡಿಯಲ್ಲಿ ನಾರು ಇರತ್ತದೆ, ಅದನ್ನು ತೆಗೆದುಕೊಳ್ಳಿ. ತದನಂತರದಲ್ಲಿ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕನ್ನೆಕುಡಿ ಸೊಪ್ಪು, ಕಾಳು ಮೆಣಸು, ಜೀರಿಗೆಯನ್ನು ಹಾಕಿ ಹುರಿದು ಮಿಕ್ಸಿಗೆ ಹಾಕಿಕೊಳ್ಳಿ. ಅದಕ್ಕೆ ಕಾಯಿತುರಿ, ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ಮಿಕ್ಸಿ ಮಾಡಿಕೊಳ್ಳಿ. ಬಳಿಕ ಒಂದು ಪಾತ್ರೆಗೆ ಹಾಕಿ ಅದಕ್ಕೆ ಸ್ವಲ್ಪ ನೀರನ್ನು ಹಾಗೂ ರುಚಿಗೆ ತಕ್ಕಶ್ಟು ಉಪ್ಪು ಹಾಕಿ ತೆಳ್ಳಗೆ ಹದ ಮಾಡಿಕೊಳ್ಳಿ. ನಂತರ ಚೆನ್ನಾಗಿ ಕುದಿಸಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದು ಕಾದ ಬಳಿಕ ಸಾಸಿವೆ, ಜಜ್ಜಿದ ಬೆಳ್ಳುಳ್ಳಿ, ಇಂಗು, ಒಂದು ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಆನಂತರ ಬಾಣಲೆಗೆ ನಿಂಬೆ ರಸ ಮತ್ತು ಮೇಲೆ ತಿಳಿಸಿದಂತೆ ಹದ ಮಾಡಿದ ಸೊಪ್ಪು, ಕಾಯಿತುರಿ ಉಪ್ಪಿನ ಮಿಶ್ರಣವನ್ನು ಹಾಕಿ, ಸೌಟಿನಿಂದ ಚೆನ್ನಾಗಿ ತಿರುವುತ್ತಿರಿ. ಹೀಗೆ ತಯಾರಿಸಿದ ಕನ್ನೆಕುಡಿ ಕಟ್ನೆಯನ್ನು ಅನ್ನದೊಂದಿಗೆ ಸವಿಯಲು ನೀಡಿ.
ಇತ್ತೀಚಿನ ಅನಿಸಿಕೆಗಳು