ಕವಿತೆ: ಹೆಮ್ಮೆಯ ಬಾಪು

– ಚಂದ್ರಗೌಡ ಕುಲಕರ‍್ಣಿ.

gandhi, ಗಾಂದಿ

ಬರಿಮೈ ಪಕೀರನಾದರು ನೀನು
ಜಗಕೆ ಪ್ರೀತಿಯ ಬಂದು
ನಿನ್ನಯ ಮೂರ‍್ತಿನಿಲ್ಲಿಸಿರುವೆವು
ಕೂಟ ಕೂಟಕ್ಕೊಂದು

ಬೋಳುತಲೆ ದುಂಡು ಕನ್ನಡಕ
ನೀಳ ದೇಹದ ಬೆಡಗು
ಸತ್ಯ ಅಹಿಂಸೆ ಶಾಂತಿ ಚಳುವಳಿ
ಅದಮ್ಯ ಶಕ್ತಿಯ ಹಡಗು

ರಾಟಿಯ ನೂಲು ಬಳಸಿ ನೇಯ್ದ
ತುಂಡು ಎರಡು ಬಟ್ಟೆ
ಬೆವರಿನ ಬೆಲೆಯ ಸಾರುವವಲ್ಲ
ಜೋಡಿ ಬಲದ ರಟ್ಟೆ

ಹಾಸು ಬೀಸಿನ ನಡಿಗೆಗಾಗಿ
ಕೈಯಲ್ಲೊಂದು ಕೋಲು
ಮಾಡು ಇಲ್ಲವೆ ಮಡಿ ನುಡಿಗೆ
ದೇಶ ಬಕ್ತರ ಸಾಲು

ನೂರಾ ಐವತ್ತನೆಯ ವರುಶದ
ಹುಟ್ಟು ಹಬ್ಬ ಈಗ
ನಾಡಿನ ತುಂಬ ಜೇಂಕರಿಸುವುದು
ಪತಿತ ಪಾವನ ರಾಗ

ಪೋರಬಂದರದಲ್ಲಿ ಜನಿಸಿದ
ಮೋಹನದಾಸ ಪಾಪು
ನೆಲಮುಗಿಲುದ್ದ ಹಬ್ಬಿ ನಿಂತ
ಬಾರತ ಹೆಮ್ಮೆಯ ಬಾಪು

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: