ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 7ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ತನ್ನ ವಿಚಾರಿಸಲೊಲ್ಲದು
ಇದಿರ ವಿಚಾರಿಸಹೋಹುದೀ ಮನವು
ಏನ ಮಾಡುವೆನೀ ಮನವನು
ಎಂತು ಮಾಡುವೆನೀ ಮನವನು. (38-14)

ತನ್ನ=ತನ್ನನ್ನು; ವಿಚಾರಿಸಲ್+ಒಲ್ಲದು; ವಿಚಾರಿಸು=ಕೇಳು/ಪ್ರಶ್ನಿಸು/ಯಾವುದೇ ಸಂಗತಿಯ ಸರಿ ತಪ್ಪುಗಳನ್ನು ಒರೆಹಚ್ಚಿನೋಡುವುದು/ಕಾರ‍್ಯ ಕಾರಣಗಳ ಹಿನ್ನೆಲೆಯಲ್ಲಿ ಯಾವುದೇ ಒಂದು ಸಂಗತಿಯ ವಾಸ್ತವವನ್ನು ತಿಳಿಯುವುದು; ಒಲ್=ಬಯಸು/ಇಚ್ಚಿಸು; ಒಲ್ಲದು=ಬಯಸದು/ಇಚ್ಚಿಸದು;

ತನ್ನ ವಿಚಾರಿಸಲೊಲ್ಲದು=ವ್ಯಕ್ತಿಯಾಗಿ ತನ್ನ ನಡೆನುಡಿಯಲ್ಲಿರುವ ಕುಂದುಕೊರತೆಗಳೇನು/ಇತಿಮಿತಿಗಳೇನು/ಸರಿ ತಪ್ಪುಗಳು ಯಾವುವು ಎಂಬುದನ್ನು ತಾನೇ ಒರೆಹಚ್ಚಿ ನೋಡಿ ತಿಳಿಯಲು ಬಯಸುವುದಿಲ್ಲ. ಅಂದರೆ ವ್ಯಕ್ತಿಯು ತನ್ನ ನಡೆನುಡಿಯಲ್ಲಿನ ತಪ್ಪುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ;

ಇದಿರ=ಬೇರೆಯವರನ್ನು/ಅನ್ಯರನ್ನು/ಇತರರನ್ನು; ವಿಚಾರಿಸ+ಹೋಹುದು+ಈ; ವಿಚಾರಿಸ=ವಿಚಾರಿಸಲು/ಕೇಳಲು/ಪ್ರಶ್ನಿಸಲು/ಸರಿ ತಪ್ಪುಗಳನ್ನು ಒರೆಹಚ್ಚಿ ನೋಡಲು; ಹೋಹುದು=ಹೋಗುವುದು; ಈ ಮನವು=ನನ್ನ ಮನಸ್ಸು; ಏನ=ಏನನ್ನು ; ಮಾಡುವೆನ್+ಈ; ಎಂತು=ಯಾವ ರೀತಿಯಲ್ಲಿ/ಯಾವ ಬಗೆಯಲ್ಲಿ;

ಏನ ಮಾಡುವೆನೀ ಮನವನು ಎಂತು ಮಾಡುವೆನೀ ಮನವನು=ಯಾವಾಗಲೂ ಬೇರೆಯವರ ನಡೆನುಡಿಯಲ್ಲಿನ ತಪ್ಪುಗಳನ್ನು ಕೆದಕಿ, ಅವರನ್ನು ಹೀಯಾಳಿಸಲು/ಕಡೆಗಣಿಸಲು/ಅಪಮಾನಿಸಲು ಹಾತೊರೆಯುವ ಈ ನನ್ನ ಮನಸ್ಸನ್ನು ಯಾವ ಬಗೆಯಲ್ಲಿ ಹತೋಟಿಯಲ್ಲಿಟ್ಟುಕೊಳ್ಳಲಿ/ಹೇಗೆ ತಾನೆ ಇಂತಹ ಕೆಟ್ಟ ರೀತಿಯಲ್ಲಿ ವರ‍್ತಿಸುತ್ತಿರುವ ನನ್ನ ಮನಸ್ಸನ್ನು ಸರಿಮಾಡಿಕೊಳ್ಳಲಿ;

ಎಲ್ಲ ವ್ಯಕ್ತಿಗಳಲ್ಲೂ ಈ ಬಗೆಯ ಮಾನಸಿಕ ರೋಗವಿದೆ. ರೋಗದ ಪ್ರಮಾಣದಲ್ಲಿ ಹೆಚ್ಚು ಕಡಿಮೆಯ ಅಂತರವಿದೆ. ಇಂತಹ ರೋಗದಿಂದ ವ್ಯಕ್ತಿಯು ತಾನು ಪಾರಾಗಬೇಕೆಂಬ ಅರಿವನ್ನು ಮೊದಲು ಪಡೆಯಬೇಕು ಮತ್ತು ಅನಂತರ ತನ್ನ ನಡೆನುಡಿಗಳಲ್ಲಿ ಎಚ್ಚರ ತಪ್ಪದಂತೆ ಬಾಳುವುದನ್ನು ಕಲಿಯಬೇಕು ಎಂಬ ಸಂಗತಿಯನ್ನು ಈ ನುಡಿಗಳು ಸೂಚಿಸುತ್ತಿವೆ.

ದಿಟವ ನುಡಿವುದು
ನುಡಿದಂತೆ ನಡೆವುದು. (237-28)

ದಿಟ=ನಿಜ/ಸತ್ಯ/ವಾಸ್ತವ; ನುಡಿ=ಹೇಳು/ಮಾತನಾಡು; ದಿಟವ ನುಡಿವುದು=ನಿಜವನ್ನಾಡುವುದು/ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟು ಮಾಡುವಂತಹ ಒಳ್ಳೆಯ ನುಡಿಗಳನ್ನಾಡುವುದು; ನುಡಿದ+ಅಂತೆ; ಅಂತೆ=ಹಾಗೆ/ಅದೇ ರೀತಿಯಲ್ಲಿ/ಬಗೆಯಲ್ಲಿ; ನುಡಿದಂತೆ=ಮಾತನಾಡಿದಂತೆ;

ನಡೆ=ನಡವಳಿಕೆ/ಕೆಲಸಗಳನ್ನು ಮಾಡುವುದು/ವರ‍್ತನೆ; ನುಡಿದಂತೆ ನಡೆವುದು=ಒಳ್ಳೆಯದನ್ನು ಬಾಯಲ್ಲಿ ಹೇಳುವ ರೀತಿಯಲ್ಲಿ ವ್ಯಕ್ತಿಯು ತನ್ನ ನಿಜ ಜೀವನದ ವ್ಯವಹಾರಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವುದು.

ಧೃತಿಗೆಟ್ಟು ಅನ್ಯರ ಬೇಡದಂತೆ
ಮತಿಗೆಟ್ಟು ಪರರುವ ಹೊಗಳದಂತೆ
ಪರಸತಿಯರ ರತಿಗೆ ಮನ ಹಾರದಂತೆ
ಎನ್ನ ಪ್ರತಿಪಾಲಿಸು ಕೂಡಲಸಂಗಮದೇವಾ. (263-30)

ಧೃತಿ+ಕೆಟ್ಟು; ಧೃತಿ=ದಿಟ್ಟತನ/ಕೆಚ್ಚು; ಕೆಡು=ಅಳಿ/ನಾಶವಾಗು/ಇಲ್ಲವಾಗು/ಕಳೆದುಹೋಗು; ಕೆಟ್ಟು=ಅಳಿದು/ನಾಶವಾಗಿ/ಇಲ್ಲವಾಗಿ; ಅನ್ಯರ=ಬೇರೆಯವರನ್ನು/ಇತರರನ್ನು; ಬೇಡದ+ಅಂತೆ; ಬೇಡು=ಯಾಚಿಸು/ದೀನನಾಗಿ ಕೇಳು; ಅಂತೆ=ಹಾಗೆ/ಆ ರೀತಿ;

ಧೃತಿಗೆಟ್ಟು ಅನ್ಯರ ಬೇಡದಂತೆ=ಜೀವನದಲ್ಲಿ ಬರುವ ಎಡರು ತೊಡರುಗಳಿಂದಾಗಿ ಮಾನಸಿಕವಾಗಿ ಕುಗ್ಗಿ ಕುಸಿದು, ದೀನತೆಯಿಂದ ಇತರರ ಮುಂದೆ ಕಯ್ಯೊಡ್ಡಿ ಬಾಳದಂತೆ;

ಮತಿ+ಕೆಟ್ಟು; ಮತಿ=ತಿಳಿವು/ಅರಿವು; ಮತಿಗೆಟ್ಟು=ಸರಿ/ತಪ್ಪುಗಳನ್ನು, ಒಳಿತು/ಕೆಡುಕುಗಳನ್ನು ಒರೆಹಚ್ಚಿ ನೋಡುವ ಮಾನಸಿಕ ಕಸುವು/ಶಕ್ತಿ ಕಳೆದುಹೋಗಿ; ಪರ=ಅನ್ಯ/ಬೇರೆ/ಇತರ; ಪರರುವ=ಇತರರನ್ನು; ಹೊಗಳದ+ಅಂತೆ; ಹೊಗಳು=ಕೊಂಡಾಡು/ಬಣ್ಣಿಸು/ಗುಣಗಾನ ಮಾಡು/ಯಾವುದೇ ವಸ್ತು-ಜೀವಿ-ವ್ಯಕ್ತಿಯ ಬಗ್ಗೆ ಮಾತನಾಡುವಾಗ, ಅದರಲ್ಲಿ/ಅವರಲ್ಲಿ ಕಂಡುಬರುವ ವಾಸ್ತವ ಸಂಗತಿಗಳ ಜತೆಗೆ ಇಲ್ಲಸಲ್ಲದ ಸಂಗತಿಗಳನ್ನು ಸೇರಿಸಿಕೊಂಡು ಮಾತನಾಡುವುದು;

ಮತಿಗೆಟ್ಟು ಪರರುವ ಹೊಗಳದಂತೆ=ವ್ಯಕ್ತಿಯು ತನ್ನ ಅಗತ್ಯವನ್ನು/ಆಸೆಯನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದ ಇತರರನ್ನು ಕೊಂಡಾಡುತ್ತ, ತನ್ನ ವಿವೇಕವನ್ನು ಮತ್ತು ವ್ಯಕ್ತಿತ್ವವನ್ನು ಕಳೆದುಕೊಂಡು ಬಾಳದಂತೆ;

ಸತಿ=ಹೆಂಡತಿ/ಮಡದಿ/ಹೆಣ್ಣು; ಪರಸತಿ=ಮತ್ತೊಬ್ಬನ ಮಡದಿ/ಬೇರೆಯವನ ಹೆಂಡತಿ; ರತಿ=ಹೆಣ್ಣು ಗಂಡು ಪರಸ್ಪರ ಕಾಮದ ನಂಟನ್ನು ಹೊಂದುವುದು; ಹಾರದ+ಅಂತೆ; ಹಾರು=ಬಯಸು/ಹಂಬಲಿಸು/ಇಚ್ಚಿಸು;

ಪರಸತಿಯರ ರತಿಗೆ ಮನಹಾರದಂತೆ=ಬೇರೆಯವರ ಹೆಂಡತಿಯರೊಡನೆ ಕಾಮದ ನಂಟನ್ನು ಪಡೆಯಬೇಕೆಂಬ ಹಂಬಲಕ್ಕೆ ಒಳಗಾಗದಂತೆ/ಮಾನಸಿಕ ತುಡಿತಕ್ಕೆ ಬಲಿಯಾಗದಂತೆ;

ಎನ್ನ=ನನ್ನನ್ನು; ಪ್ರತಿಪಾಲಿಸು=ಕಾಪಾಡು/ನಡೆಸು; ಕೂಡಲಸಂಗಮದೇವ=ಬಸವಣ್ಣನ ಮೆಚ್ಚಿನ ದೇವರು.

ಒಳಿತು ಕೆಡುಕಿನ ಒಳಮಿಡಿತಗಳಿಂದ ತುಡಿಯುವ ಮನಸ್ಸಿನ ತುಯ್ದಾಟವನ್ನು ನಿಯಂತ್ರಿಸಿಕೊಂಡು, ಒಳ್ಳೆಯ ನಡೆನುಡಿಗಳಿಂದ ಬಾಳಲು ಬೇಕಾದ ಅರಿವು ಮತ್ತು ಎಚ್ಚರವನ್ನು ಹೊಂದುವುದಕ್ಕಾಗಿ ವ್ಯಕ್ತಿಯು ಕೂಡಲಸಂಗಮದೇವನಲ್ಲಿ ಮೊರೆಯಿಡುತ್ತಿದ್ದಾನೆ.

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: