ಪ್ರತಿಬೆ ಮತ್ತು ಪ್ರೋತ್ಸಾಹ : ಒಂದು ಕಿರುಬರಹ

ಪ್ರಕಾಶ್‌ ಮಲೆಬೆಟ್ಟು.

ಪ್ರತಿಬೆ, Talent

ಸಾಮಾನ್ಯವಾಗಿ ಪ್ರತಿಯೊಬ್ಬ ಮನುಶ್ಯನಲ್ಲೂ ಯಾವುದಾದರೂ ಒಂದು ಪ್ರತಿಬೆ ಇರುತ್ತದೆ. ಆದರೆ ಎಶ್ಟೋ ಬಾರಿ ಸುಪ್ತವಾಗಿರುವ ಪ್ರತಿಬೆ ಬೆಳಕಿಗೆ ಬರದೇ ಮುದುಡಿ ಹೋಗುವ ಸಂಬವನೀಯತೆಯೇ ಹೆಚ್ಚು. ಹಿಂದೆ ಎಲ್ಲೋ ಓದಿದ ನೆನಪು, ಬಹುಶಹ ಚೀನಾದಲ್ಲಿ ಅಂತ ಕಾಣುತ್ತೆ. ಮಗುವನ್ನು ಒಂದು ಕೋಣೆಯಲ್ಲಿ ಕೂರಿಸಿ ಅದರ ಸುತ್ತ ಅನೇಕ ವಸ್ತುಗಳನ್ನು ಇಡುತ್ತಿದ್ದರಂತೆ – ಲೇಕನಿ, ಪುಸ್ತಕ, ಚೆಂಡು ಹೀಗೆ ಬೇರೆ ಬೇರೆ ವಸ್ತುಗಳು. ಮಗು ಯಾವ ವಸ್ತುವನ್ನು ಆರಿಸಿಕೊಳ್ಳುತ್ತದೆಯೋ ಆ ವಿಶಯದಲ್ಲಿ ಮಗುವಿಗೆ ಆಸಕ್ತಿಯಿದೆ ಎಂಬುದು ಅವರ ನಂಬಿಕೆ. ಉದಾಹರಣೆಗೆ ಚೆಂಡನ್ನು ಆರಿಸಿಕೊಂಡ್ರೆ ಆ ಮಗು ಒಬ್ಬ ಆಟಗಾರನಾಗಬಹುದೆಂಬ ನಂಬಿಕೆಯಿಂದ, ಮಗು ಬೆಳೆಯುತ್ತ ಹೋದಂತೆ ಅದಕ್ಕೆ ಪೂರಕವಾದ ವಾತಾವರಣವನ್ನು ಸ್ರುಶ್ಟಿ ಮಾಡಿಕೊಡುತ್ತಿದ್ದರಂತೆ. ಈ ರೀತಿಯಾಗಿ ಮಕ್ಕಳಲ್ಲಿರುವ ಪ್ರತಿಬೆ ಗುರುತಿಸಿ ಪ್ರೋತ್ಸಾಹಿಸುತ್ತಿದ್ದರಂತೆ. ಅಚ್ಚರಿಯ ವಿಚಾರ ಅಲ್ವಾ!

ಪ್ರತಿಬೆಗಳು ಮುದುಡಿ ಹೋಗಲು ಕಾರಣಗಳು ಹಲವು. ತಮ್ಮೊಳಗೆ ಇರುವ ಪ್ರತಿಬೆ, ಸಾಮರ‍್ತ್ಯದ ಬಗ್ಗೆ ಅರಿವಿದ್ದರೂ ಪೂರಕವಾದ ವಾತಾವರಣವಿಲ್ಲದೆ ತಮ್ಮ ಕನಸಿಗೆ ಎಳ್ಳು ನೀರು ಬಿಟ್ಟ ಎಶ್ಟೋ ಜನರನ್ನು ನಮ್ಮ ಸಮಾಜದಲ್ಲಿ ಕಂಡಿದ್ದೇವೆ. ಆದರೆ ನಾನಿಲ್ಲಿ ಹೇಳಹೊರಟಿರುವುದು ತಮ್ಮ ಪ್ರತಿಬೆಯ ಬಗ್ಗೆ ಅರಿವಿಲ್ಲದೆ ಅತವಾ ಯಾರೂ ಗುರುತಿಸದೆ ಮನಸಿನಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಬೆಯ ಬಗ್ಗೆ.

ಹೌದು ಎಶ್ಟೋ ಬಾರಿ ನಮಗೆ ನಮ್ಮದೇ ಸಾಮರ‍್ತ್ಯದ ಬಗ್ಗೆ ಅರಿವು ಇರುವುದಿಲ್ಲ. ಆದರೆ ಅದನ್ನು ಗುರುತಿಸಿ, ಪ್ರೋತ್ಸಾಹಿಸಿ, ಹುರಿದುಂಬಿಸುವ ಗುರು ನಮಗೆ ದೊರೆತರೆ!? ಹೌದು ಪ್ರತಿಬೆಯನ್ನು ಗುರುತಿಸುವ ಗುರು ನಾವಾಗಬೇಕು. ಇಲ್ಲಿ ಗುರುವು ಪೋಶಕರಾಗಿರಬಹುದು, ಅಣ್ಣ-ತಮ್ಮ-ಅಕ್ಕ-ತಂಗಿ-ಗೆಳೆಯ-ಗೆಳತಿ ಯಾರಾದರೂ ಆಗಿರಬಹುದು.​ ನಮ್ಮ ಮಕ್ಕಳು ಯಾವುದಾದರೂ ಚಿತ್ರ ಬಿಡಿಸಿಕೊಂಡೋ, ಕತೆ ಬರೆದುಕೊಂಡೋ ಅತವಾ ಯಾವುದೊ ಒಂದು ಹೊಸ ವಿಚಾರವನ್ನು ಇಟ್ಟುಕೊಂಡು ನಮ್ಮ ಬಳಿ ಬಂದಾಗ ಅದನ್ನು ನೋಡುವ, ಅವರ ಮಾತು ಕೇಳುವ ತಾಳ್ಮೆ ನಮ್ಮಲ್ಲಿರಬೇಕು. ಅವರು ಮಾಡಿದ್ದು ಚೆನ್ನಾಗಿದೆಯೋ ಇಲ್ಲವೋ ಅದು ಬೇರೆ ವಿಚಾರ. ಆದರೆ ಬೆನ್ನುತಟ್ಟಿ ಹುರಿದುಂಬಿಸಿ, ಇನ್ನು ಚೆನ್ನಾಗಿ ಮಾಡುವಂತೆ ಪ್ರೇರೇಪಿಸಿದಾಗ ಕಂಡಿತವಾಗಲೂ ನಮ್ಮ ಮಕ್ಕಳು ಇನ್ನು ಹೆಚ್ಚು ಪ್ರಯತ್ನ ಪಟ್ಟು, ತಮ್ಮ ಕೆಲಸವನ್ನು ಇನ್ನೂ ಚೆನ್ನಾಗಿ ಮಾಡಿಕೊಂಡು ನಮ್ಮ ಮುಂದೆ ಬಂದು ನಿಲ್ಲುವರು. ನಾವು ನಿರ‍್ಲಕ್ಶ್ಯ ತೋರಿದರೆ ಅವರಲ್ಲಿ ಅಡಗಿರುವ ಪ್ರತಿಬೆ ಹಾಗೆ ಮುದುಡಿ ಹೋಗುವ ಸಾದ್ಯತೆಗಳು ಹೆಚ್ಚು.

ನೀವು ಕನ್ನಡ ಕೋಗಿಲೆ ಕಾರ‍್ಯಕ್ರಮ ನೋಡಿದವರಾಗಿದ್ದರೆ ಪಟಾಕಿಯಂತಿದ್ದ ಪುಟ್ಟ ಅರ‍್ಜುನ್ ಇಟಗಿ ಬಗ್ಗೆ ನಿಮಗೆ ಗೊತ್ತಿರುತ್ತದೆ. ಅವನ ತಂದೆ ಒಮ್ಮೆ ಕೆಲಸ ಮುಗಿಸಿ ಮನೆಗೆ ಬರುವಾಗ ಮಗ ‘ರಾಜಕುಮಾರ’ ಚಲನಚಿತ್ರದ ‘ಬೊಂಬೆ ಹೇಳುತೈತೆ’ ಹಾಡನ್ನು ಹಾಡುವುದನ್ನು ಕೇಳಿಸಿಕೊಳ್ಳುತ್ತಾರೆ. ಮಗನ ಪ್ರತಿಬೆ ಕಂಡು ಬೆರಗಾದ ಅವನ ಅಪ್ಪ ಮುಂದೆ ಮಗ ಹಾಡುವಂತೆ ಪ್ರೇರೇಪಿಸುತ್ತಾರೆ. ಮುಂದಿನ ಕತೆ ನಿಮಗೆಲ್ಲಾ ಗೊತ್ತೇ ಇದೆ.

ಈ ವಿಶಯ ಕೇವಲ ಮಕ್ಕಳಲ್ಲಿರುವ ಪ್ರತಿಬೆಗೆ ಮಾತ್ರ ಸೀಮಿತವಾದುದಲ್ಲ.​ ನಮ್ಮ ಅಣ್ಣ-ತಮ್ಮ-ಅಕ್ಕ-ತಂಗಿಯರಲ್ಲಿ, ಗೆಳೆಯರಲ್ಲಿ ಯಾವುದಾದರು ಪ್ರತಿಬೆ ಇರಬಹುದು. ಆದರೆ ಅವರು, ಮುಜುಗರದಿಂದ ಇಲ್ಲವೇ ಮೊದಲು ಆದ ಕೆಟ್ಟ ಅನುಬವದಿಂದ ತಮ್ಮ ಪ್ರತಿಬೆಯನ್ನು ಬೆಳೆಯ ಬಿಡದೆ ಸುಮ್ಮನೆ ಕೂತಿರಬಹುದು. ನಮಗೆ ಅದರ ಅರಿವಿದ್ದರೆ ನಾವು ಸುಮ್ಮನೆ ಕೂರಬಾರದು. ಅವರನ್ನು ಹುರಿದುಂಬಿಸಬೇಕು, ಅವಕಾಶ ಒದಗಿಸಿ ಕೊಡಬೇಕು. ಆಗ ಮಾತ್ರ ನಾವು ಒಬ್ಬ ಒಳ್ಳೆಯ ಸ್ನೇಹಿತ, ಪಾಲಕರು, ಸಹೋದರ ಸಹೋದರಿ ಎನಿಸಿಕೊಳ್ಳುತ್ತೇವೆ. ನಾನು ಚೆನ್ನಾಗಿ ಬರೆಯುತ್ತೀನೋ ಇಲ್ವೋ ನನಗೆ ಗೊತ್ತಿಲ್ಲ. ಆದರೆ ನಾನು ಬರೆಯಲು ಮೂಲಕಾರಣ ನನ್ನ ಒಬ್ಬ ಆತ್ಮೀಯ ಗೆಳೆಯ. ನಾ ಬರೆಯಬಲ್ಲೆ ಎಂಬುದನ್ನು ನನಗೆ ತೋರಿಸಿಕೊಟ್ಟ ಗೆಳೆಯ. ನನ್ನ ಸಹಪಾಟಿಯ ಗುರುತಿಸುವಿಕೆಯಿಂದ ನಾನು ಬರೆಯಬಲ್ಲೆ ಎಂಬ ಅರಿವು ನನ್ನಲ್ಲಿ ಮೂಡಿತು.

ಆದ್ದರಿಂದ, ನಮ್ಮಲ್ಲಿರುವ ಪ್ರತಿಬೆಯನ್ನು ಬೆಳಕಿಗೆ ತಂದರೆ ಸಾಲದು, ಇತರರಲ್ಲಿ ಅಡಗಿರುವ ಪ್ರತಿಬೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಮ್ಮಿಂದಾಗಬೇಕು, ಅವರಲ್ಲಿರುವ ಸಾಮರ‍್ತ್ಯವನ್ನು ಹೊರಗೆಳೆಯುವ ಗುರು ನಾವಾಗಬೇಕು. ಅದು ಬದುಕಿಗೂ ಸಾರ‍್ತಕತೆ ತಂದು ಕೊಡುತ್ತದೆ.

( ಚಿತ್ರ ಸೆಲೆ : clipart-library.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.