ಪಾಲಾಕ್ಶಿ ಪ್ರಸಂಗ

ಅಶೋಕ ಪ. ಹೊನಕೇರಿ.

ಕಗ್ಗತ್ತಲು, Dark Night

‘ತಾಂಡವ ಮೂರ‍್ತಿ ಬಿಲ್ಡಿಂಗ್’ ಎಂದರೆ ಅದು ಕಂಚಗನೂರಿನಲ್ಲಿ ಪ್ರಸಿದ್ದಿ. ಹಳೆಯ ಕಾಲದ ಮರದ ಅಟ್ಟಣಿಗೆ ಹಾಕಿ ಕಟ್ಟಿದ ಮಹಡಿ ರೂಂಗಳು. ದೂರದೂರಿನ ವಿದ್ಯಾರ‍್ತಿಗಳಿಗೆ ಈ ತಾಂಡವ ಮೂರ‍್ತಿ ಮಹಲಿನ ರೂಂಗಳು  ಒಂದು ರೀತಿಯಲ್ಲಿ ವರದಾನ. ಕಡಿಮೆ ಬಾಡಿಗೆಯ ಸಾಮಾನ್ಯ ರೂಂಗಳಿವು. ತಾಂಡವ ಮೂರ‍್ತಿಗಳು ಹೆಸರಿಗೆ ತಕ್ಕ ಹಾಗೆ ಗಜಗಾತ್ರ. ಜೋರುದನಿಯುಳ್ಳ ರೂಂಗಳ ಸಾಹುಕಾರ.

ಪಾಲಾಕ್ಶಿಯ ಪದವಿ ಓದಿನ ಒದ್ದಾಟಕ್ಕೆ ಕಂಚಗನೂರಿನ ಪದವಿ ಕಾಲೇಜು ಹತ್ತಿರವಾಗಿತ್ತು. ಇವನೂರು ಬಸರಿಕಟ್ಟೆಯಿಂದ ಸುಮಾರು ನಲವತ್ತು ಕಿಲೋಮೀಟರ್ ದೂರ ಕಂಚಗನೂರು. 35 ವರ‍್ಶದ ಕೆಳಗೆ ಈಗಿನಂತೆ ಬಸ್ಸಿನ ಓಡಾಟದ ವ್ಯವಸ್ತೆ ಇಲ್ಲದ ಕಾರಣ. ಹೆಚ್ಚಿನ ಓದಿನ ಹಂಬಲ ಇರುವ ಕಂಚಗನೂರಿನ ಸುತ್ತಮುತ್ತದ ಊರಿನ ವಿದ್ಯಾರ‍್ತಿಗಳು ಕಾಲೇಜಿಗೆ ಅಡ್ಮಿಶನ್ ಪಡೆದ ಮೇಲೆ ಹಾಸ್ಟೆಲ್ ಸೇರ ಬಯಸದವರು ವಸತಿಯ ವ್ಯವಸ್ತೆಗೆ ತಾಂಡವ ಮೂರ‍್ತಿ ಬಿಲ್ಡಿಂಗಿನ ರೂಂಗಳನ್ನು ಪಡೆಯಲು ಎಡತಾಕುತಿದ್ದರು. ಅಂದು ಈ ಬಿಲ್ಡಿಂಗ್ ನಲ್ಲಿ ರೂಂ ಪಡೆಯುವುದು ಸುಲಬದ ಮಾತಾಗಿರಲಿಲ್ಲ. ಅಶ್ಟು ಬೇಡಿಕೆ ಇವರ ರೂಂಗಳಿಗೆ.

ಪಾಲಾಕ್ಶಿ ಬಿಎ ಪದವಿಗೆ ಕಾಲೇಜಿನಲ್ಲಿ ಅಡ್ಮಿಶನ್ ಪಡೆದು ರೂಂ ಬಾಡಿಗೆಗೆ ಪಡೆಯಲು ತಾಂಡವ ಮೂರ‍್ತಿ ಬಿಲ್ಡಿಂಗಿಗೆ ಎಡತಾಕಿದ. ಕೆಳಗಡೆ ಐದು ಮನೆಗಳು, ಸಂಸಾರಸ್ತರಿಗೆ ಬಾಡಿಗೆ ಕೊಟ್ಟಿದ್ದರೆ ಮೇಲಿನ ಹದಿಮೂರು ರೂಂಗಳು ವಿದ್ಯಾರ‍್ತಿಗಳಿಗೆ ಮೀಸಲು. ಬೆಳಿಗ್ಗೆನೇ ಮೂರ‍್ತಿಗಳು ಸಿಗುವುದು, ಅದೂ ಎಂಟು ಗಂಟೆಯೊಳಗೆ. ಆನಂತರ ಅವರು ತಮ್ಮ ತೋಟಕ್ಕೆ ಹೋಗಿ ಬಿಡುತ್ತಾರೆ. ಪಾಲಾಕ್ಶಿ ಅಲ್ಲಿಗೆ ಹೋದಾಗ ಬೆಳಿಗ್ಗೆ ಏಳು ಗಂಟೆ ಇರಬಹುದು. ತಾಂಡವ ಮೂರ‍್ತಿಗಳು ಪೂಜೆ ಮಾಡುತ್ತಿದ್ದರಂತೆ. ಹಾಲಿನಲ್ಲಿ ಕಾಯಲು ಹೇಳಿ ಹೋದ ಅವರ ಮಗ.  ಒಂದು ತಾಸು ದೇವರ ಪೂಜೆ ಮುಗಿಸಿಕೊಂಡು  ಬಂದರು. ಅವರ ಹೆಸರಿಗೆ ತಕ್ಕ ಹಾಗೆ ಗಜಗಾತ್ರದ ಕಾಯ, ಕುಂಬಳಕಾಯಿ ಗಾತ್ರದ ಮುಕ, ಕಣ್ಣಿಗೆ ದಪ್ಪ ಕನ್ನಡಕ ಸಿಗಿಸಿಕೊಂಡಿದ್ದು ನೋಡಿದರೆ ಗೊತ್ತಾಗುತಿತ್ತು ಇವರು ತಾಂಡವ ನ್ರುತ್ಯ ಮಾಡಿದರೆ ಬೂಮಿ ಬಂಜನವಾಗುತ್ತದೆ ಎಂದು. ಬಂದವರೇ, “ಏನಪ್ಪ ನಿನ್ನ ಹೆಸರು” ಎಂದರು.

“ಸರ್, ನಾನು ಪಾಲಾಕ್ಶ. ನಮ್ಮೂರು ಬಸರಿಕಟ್ಟೆ ಸರ್. ಈ ವರ‍್ಶ ಪ್ರತಮ ಬಿ ಎ ಪದವಿಗೆ ಇಲ್ಲಿ ಕಾಲೇಜು ಸೇರಿಕೊಂಡಿದ್ದೇನೆ. ನೀವು ರೂಂ ಕೊಟ್ಟರೆ ಇಲ್ಲಿಯೇ  ಇದ್ದುಕೊಂಡು ಓದು ಮುಗಿಸುತ್ತೇನೆ ಸರ‍್”

ಅದಕ್ಕೆ ಮೂರ‍್ತಿಗಳು “ನೋಡಪ್ಪ ಮೊದಲು ಡಿಗ್ರಿ ಹುಡುಗ್ರಿಗೆ ರೂಂ ಕೊಡ್ತಿದ್ದೆ ಆದರೆ ಅವರ ದಾಂದಲೇ ಬಹಳ ಆಗಿದ್ರಿಂದ ಬರೀ ಪಿಯುಸಿ ಹುಡುಗರಿಗಶ್ಟೆ ಕೊಡ್ತಿದ್ದೀನಿ ಕಣಯ್ಯ” ಎಂದರು. “ಇಲ್ಲ ಸರ್ ನಾನು ಆ ತರಹದ ಹುಡುಗ ಅಲ್ಲ. ನಮ್ಮ ಹಣಕಾಸಿನ ಪರಿಸ್ತಿತಿಯೂ ಕೂಡ ಅಶ್ಟು ಚೆನ್ನಾಗಿಲ್ಲ. ಇಲ್ದಿದ್ರೆ ನಾನು ಹಾಸ್ಟೆಲ್ಗೆ ಸೇರ‍್ತಿದ್ದೆ. ನಾನು ಓದಿ ಪದವಿ ಪಡೆಯಲಂತನೇ ಬಂದವನು. ನಾನು ಬೇರೆ ವಿದ್ಯಾರ‍್ತಿಗಳಂತೆ ದುಂಡಾವರ‍್ತನೆ ಮಾಡೋನಲ್ಲ ಸರ‍್”

“ಸರಿಯಪ್ಪ  ನಿನ್ನ ನೋಡಿದರೆ ಒಳ್ಳೆ ಹುಡುಗನಂತೆ ಕಾಣ್ತಿಯ. ನಿನ್ನ ಪುಣ್ಯ ಒಂದೇ ಒಂದು ರೂಂ ಉಳಿದಿದೆ. ಎಲ್ಲ ರೂಂಗಳು ಪಿಯುಸಿ ಹುಡುಗರಿಂದ ಬರ‍್ತಿಯಾಗಿದೆ. ನೀನೊಬ್ಬನೆ ಡಿಗ್ರಿ ಹುಡುಗ ಇದ್ದುಕೊಂಡು ಓದಿಕೊಂಡು ಹೋಗು. ತಿಂಗಳಿಗೆ ಎಪ್ಪತ್ತು ರೂಪಾಯಿ ಬಾಡಿಗೆ, ಆರು ತಿಂಗಳ ಬಾಡಿಗೆ ಅಡ್ವಾನ್ಸ್ ಕೊಡಬೇಕು. ಮೇಲಿನ ಹದಿಮೂರು ರೂಂಗಳಿಗೆ ಕೆಳಗಡೆ ಮೂರು ಟಾಯ್ಲೆಟ್,  ಮೂರು ಬಾತ್ ರೂಂ ಇದೆ. ಇದರಲ್ಲೆ ಎಲ್ಲರೂ ಅಡ್ಜೆಸ್ಟ್ ಮಾಡಿಕೊಂಡು ಉಪಯೋಗಿಸ್ಬೇಕು. ನೀರು ನೋಡಿ ಬಳಕೆ ಮಾಡಬೇಕು. ಕರೆಂಟ್ ಬಿಲ್ ಹದಿಮೂರು ಜನಕ್ಕೂ ಹಂಚಿ ಬರುತ್ತೆ. ಅದನ್ನ ತಿಂಗಳು ತಿಂಗಳು ಕಟ್ಟ ಬೇಕು” – ಹೀಗೆ ತಾಂಡವ ಮೂರ‍್ತಿಗಳು ತಮ್ಮ ರೂಂ ಬಾಡಿಗೆ ಪಡೆಯುವ ಕರಾರುಗಳನ್ನು ಹೇಳಿದರು. ಅವರ ಕರಾರಿಗೆ ಒಪ್ಪಿ ಆರು ತಿಂಗಳ ಬಾಡಿಗೆ ಅಡ್ವಾನ್ಸ್ ಕೊಟ್ಟು ಪಾಲಾಕ್ಶಿ ರೂಂ ಪ್ರವೇಶ ಮಾಡಿದ. ಮಣ್ಣಿನ ಅಟ್ಟಣಿಗೆಯ ಮನೆ. ಮನೆಯ ಮುಂದೆ ಸುಮಾರು ಅರ‍್ದ ಎಕರೆ  ತೆಂಗಿನ ತೋಟ ಜೊತೆಗೆ ವಿವಿದ ಹೂ ತರಕಾರಿಗಳನ್ನು ಬೆಳೆಯುತಿದ್ದರು. ವಿದ್ಯಾರ‍್ತಿಗಳು ರೂಂಗೆ ಹೋಗಬೇಕೆಂದರೆ ಆ ಅರ‍್ದ ಎಕರೆ ತೋಟದಲ್ಲಿ ಹಾದು ರೂಂಗೆ ಹೋಗಬೇಕು. ಮನೆಯ ಹಿಂದುಗಡೆ ದೊಡ್ಡ ದರೆ, ಅದರ ಮೇಲೆ ಒತ್ತೊತ್ತಾಗಿ ಬೆಳೆದ ಮರಗಳು. ಹೀಗೆ ಒಂದು ಎಕರೆ ವಿಸ್ತಾರದಲ್ಲಿ ತಾಂಡವ ಮೂರ‍್ತಿಗಳ ಸಾಮ್ರಾಜ್ಯವಿತ್ತು.

ಕಾಲೇಜು ಪ್ರಾರಂಬವಾಯ್ತು. ಪಾಲಾಕ್ಶ  ಸೀಮೆಣ್ಣೆ ಬತ್ತಿ ಸ್ಟೊವ್ ಇಟ್ಟಕೊಂಡು ನಿತ್ಯ ಅನ್ನ ತಿಳಿ ಸಾರು, ಒಮ್ಮೊಮ್ಮೆ ಆ ತಿಳಿ ಸಾರಿಗೆ ಕೋಳಿ ಮೊಟ್ಟೆ ಒಡೆದು ಹಾಕಿ ಎಗ್ ಕರಿ ಮಾಡಿಕೊಂಡು ಉಣ್ಣುತ್ತಿದ್ದ. ವಾರಕ್ಕೊಮ್ಮೆ ಊರಿಗೆ ಹೋಗುತ್ತಿದ್ದ ಪಾಲಾಕ್ಶಿ, ಬರುವಾಗ ಊರಿಂದ ಸೀಮೆಣ್ಣೆ, ಒಂದೆರಡು ತರಹದ ತರಕಾರಿ, ಅಕ್ಕಿ ಬೇಳೆ, ಎಣ್ಣೆ, ಕಾರದಪುಡಿ ಇವೆಲ್ಲವನ್ನೂ, ಅವರಮ್ಮ ಕಟ್ಟಿಕೊಟ್ಟದ್ದನ್ನು ತರುತಿದ್ದ. ಅವರಮ್ಮ ಇದನ್ನು ಜೋಪಾನವಾಗಿ ಬಳಸು ಎಂದು ಕಿವಿ ಮಾತು ಹೇಳಿ ಕಳುಹಿಸುತಿದ್ದಳು. ಕಾಲೇಜಿಗೆ ಶಿಸ್ತಿನಿಂದ ಹೋಗಿ ಬರುತಿದ್ದ ಇವನು, ಇರುವ ಒಂದೆರೆಡು ಜೊತೆ ಬಟ್ಟೆಗಳನ್ನು ಚೆನ್ನಾಗಿ  ಒಗೆದುಕೊಂಡು ಬಳಸುತಿದ್ದ. ಬೇರೆ ಬೇರೆ ಊರಿನಿಂದ ಬಂದ ಹುಡುಗರ ಪರಿಚಯವಾಯ್ತು. ರೂಂನಲ್ಲಿದ್ದು ಬೋರಾದಾಗ ಸ್ವಲ್ಪ ಹೊತ್ತು ಹರಟಲು ಅಕ್ಕ ಪಕ್ಕದವರ ರೂಂಗೂ ಹೋಗಿ ಬರುತಿದ್ದ ಪಾಲಾಕ್ಶಿ. ತನ್ನ ರೂಂನಿಂದ ಮೂರನೆ ರೂಂನಲ್ಲಿ ನಾಗರಾಜ್ ಪ್ರತಮ ಪಿಯುಸಿ ಹುಡುಗ ಇದ್ದ. ತನ್ನ ಪಕ್ಕದ ರೂಂನಲ್ಲಿ ದ್ವಿತೀಯ ಪಿಯುಸಿ ಹುಡುಗ ಪ್ರಕಾಶ್ ಇರುತಿದ್ದ. ಪಾಲಾಕ್ಶಿ ಸಾಮಾನ್ಯವಾಗಿ ಮಾತನಾಡುವುದಾದರೆ ಅದು ಪ್ರಕಾಶ್ ಇಲ್ಲ ನಾಗರಾಜ್. ಇವರೊಡನೆ ಸ್ವಲ್ಪ ಸಲಿಗೆ ಬೆಳೆಸಿಕೊಂಡಿದ್ದ. ಉಳಿದ ರೂಮಿನ ಹುಡುಗರ ಒಡನಾಟ ಊಟಾ ಆಯ್ತ…. ತಿಂಡಿ ಆಯ್ತಾ… ಇಲ್ಲ ಎದುರುಬದುರಾದಾಗ ಮುಗಳ್ನಗೆಗೆ ಮಾತ್ರ ಸೀಮಿತವಾಗಿತ್ತು.

ಪಾಲಾಕ್ಶಿ ಎಂದಿನಂತೆ ಊಟ ಆದ ಮೇಲೆ ಸ್ವಲ್ಪ ಹೊತ್ತು ಟೈಮ್ ಪಾಸ್ಗೆ ಹರಟಲು ಪ್ರಕಾಶನ ರೂಂಗೆ ಹೋದ.  ಆಗ ಪ್ರಕಾಶ್ “ಪಾಲಾಕ್ಶಣ್ಣ ನಿನ್ನೆ ಅಮವಾಸ್ಯೆನ…? ಎಂದ  ” ಹಾಂ… ಇರಬೇಕು ಪ್ರಕಾಶ್. ಊರಲ್ಲಿದ್ದಾಗ ಇವೆಲ್ಲ ತಿಳಿತಿತ್ತು, ಏಕೆಂದರೆ ನಮ್ಮಮ್ಮ ಹುಣ್ಣಿಮೆ, ಅಮವಾಸ್ಯೆ ಅಂತ ಮನೆಯಲ್ಲಿ ಪೂಜೆ ಪುನಸ್ಕಾರ  ಮಾಡುತಿದ್ದಳು. ಇಲ್ಲಿಗೆ ಬಂದ ಮೇಲೆ ಅದೆಲ್ಲ ಮರೆತೆ ಹೋಗಿದೆ”.

“ಇಲ್ಲ ಪಾಲಾಕ್ಶಣ್ಣ ನಾನು  ಈ ರೂಂ ನಲ್ಲಿ ಇರಕ್ಕ್ ಹಿಡ್ದು ಎರಡು ವರ‍್ಶ ಆಯ್ತು. ಹಿಂದಿನ ಸೀನಿಯರ್ ಹುಡುಗರು ಹೇಳ್ತಿದ್ರು ಈ ಜಾಗದಲ್ಲಿ ಮೋಹಿನಿ ಕಾಟ ಇದೆಯಂತೆ ಅಮಾಸೆಗೊಮ್ಮೆ ಮದ್ಯರಾತ್ರೀಲಿ ಗಲ್…ಗಲ್… ಅಂತ ಗೆಜ್ಜೆ ಸೌಂಡ್ ಬರುತ್ತೆ… ಒಂತರ ಕೀರಲು ಕಂಟದಲ್ಲಿ ನರಳಿದಂಗೆ ಶಬ್ದ ಬರುತ್ತೆ…!? ಅಂತ ಹೇಳಿದ್ರು… ನನಗೂ ಒಂದೆರಡು ಸರ‍್ತಿ ಆ ಸದ್ದು ಕೇಳ್ಸಿದೇ..ನಿನ್ನೆ ರಾತ್ರಿ ಸುಮಾರು 12 ಗಂಟೆ ಇರಬಹುದು. ಈ ನಾಗರಾಜ್ ಜೋರಾಗಿ ಕಿರುಚಾಡಿ ಮಂಚದ ಮೇಲಿಂದ ದೊಪ್ ಎಂದು ಬಿದ್ದ ಸದ್ದಾಯ್ತು. ನಾನೇ ಆಮೇಲಿ  ಅವನ ರೂಂಗೆ ಹೋಗಿ ಬಾಗಿಲು ಬಡ್ದೆ ಎಶ್ಟೋ ಹೊತ್ತಿನ ಮೇಲೆ ಅವನು ಬಾಗಿಲು ತೆಗೆದ. ಯಾಕೊ ಸುಸ್ತಾದಂತೆ ಕಾಣಸ್ತಿದ್ದ. ಯಾಕೋ ನಾಗ್ ಎಂದೆ..”

‘ನನಗೆ ಎದೆ ಮೇಲೆ ಏನೋ ಗಟ್ಟಿಯಾಗಿ ಕುಳಿತಂಗೆ ಆಗಿತ್ತು…. ಮತ್ತೆ ಎಶ್ಟು ಕೂಗಿದ್ರೂ ಬಾಯಿಂದ ಸ್ವರಾನೇ ಹೊರಡ್ತಿರ‍್ಲಿಲ್ಲ. ಬರೀ ಕಿರಲು ಸ್ವರಾನೇ ಬರ‍್ತಿತ್ತು.. ಆಮೇಲೆ ಮೈಯೊಳಗಿನ ಎಲ್ಲ ಶಕ್ತಿ ಒಟ್ಟುಗೂಡ್ಸಿ ಒಂದ್ಸರಿ ಜೋರಾಗಿ ಕೂಗಿದೆ. ದೇಹನ ಬಲವಾಗಿ ಒದರಿ ಹೊರಳಿಸಿದೆ. ಆಗ್ಲೆ ನೋಡು ಮಂಚದಿಂದ ಬಿದ್ದಿದ್ದು” ಎಂದ.

“ನೋಡ್ರಿ ಪ್ರಕಾಶ್ ಈ ದೆವ್ವ ಬೂತ ಅನ್ನೊದೆಲ್ಲ ಬ್ರಮೆ. ಅದೊಂದು ಮಾನಸಿಕ ಸ್ತಿತಿ… ನಮ್ಮೊಳಗಿನ ಒತ್ತಡ, ತುಮುಲ, ಬಯ ಇವೆಲ್ಲ, ನಾವು ನಿದ್ದೆ ಮಾಡುತ್ತಿರುವಾಗ ಸುಪ್ತ ಮನಸ್ಸು ಜಾಗ್ರುತವಾಗಿ, ಮೇಲೆ ಹೇಳಿದ ಎಲ್ಲ ವಿಶಯವೂ ಸಂಕೀರ‍್ಣವಾಗಿ ಈ ರೀತಿ ಗೋಜಲು ಗೋಜಲಾದ ಕನಸು ಬೀಳುತ್ತವೆ ಅಶ್ಟೆ. ನಾವು ಸತ್ಯವನ್ನು ಶೋದಿಸಿ ನೋಡಿದರೆ ಅಲ್ಲಿ ನಮ್ಮ ಬ್ರಮೆ ಬಿಟ್ಟು ಬೇರೇನೂ ಇರೊಲ್ಲ. ಇವೆಲ್ಲ ವೈಗ್ನಾನಿಕ ಸತ್ಯ. ನಮ್ಮೊಳಗಿನ ಬಯವೇ ನಮಗೆ ದೆವ್ವ, ಬೂತ, ಮೋಹಿನಿ ಅಂತ ಬ್ರಮೆಯಾಗಿ ಕಾಡುತ್ತದೆ ಅಶ್ಟೆ ಪ್ರಕಾಶ್”.ಎಂದು ಪಾಲಾಕ್ಶಿ ವಿವರಿಸಿದ. “ಏನೋ ಅಣ್ಣ  ನನಗೊಂದು ಅರಿವಿಗೆ ಬಾರದೆ ಗೊಂದಲವಾಗ್ತ ಇದೆ” ಎಂದು “ಅಣ್ಣ ನನಗೆ ನಿದ್ದೆ ಬರ‍್ತಾ ಇದೆ ಮಲಗ್ತೀನಿ” ಎಂದು ಹಾಸಿಗೆಯ ಮೇಲೆ ಉರುಳಿಕೊಂಡ.

ಈ ಗಟನೆ ನಡೆದು ಮೂರು ತಿಂಗಳಾಯಿತು. ಪಿಯುಸಿ ಹುಡುಗರೆಲ್ಲ ಪರೀಕ್ಶೆ ಮುಗಿಸಿಕೊಂಡು ಊರಿಗೆ ತೆರಳಿದ್ದರು. ತಾಂಡವಮೂರ‍್ತಿ ಬಿಲ್ಡಿಂಗ್ ಹುಡುಗರಿಲ್ಲದೆ ಬಿಕೋ ಎನಿಸುತ್ತಿದೆ. ಪಾಲಾಕ್ಶಿ ಪದವಿ ವಿದ್ಯಾರ‍್ತಿಯಾದ್ದರಿಂದ ಅವನ ಪರೀಕ್ಶೆಗಳೆಲ್ಲ ಲೇಟಾಗಿ ಶುರುವಾಗುತ್ತೆ. ಹಾಗಾಗಿ ಪರೀಕ್ಶೆ ಮುಗಿಯದೆ ಊರಿಗೂ ಹೋಗೊ ಹಾಗಿಲ್ಲ. ಮೇಲಂತಸ್ತಿನ ಎಲ್ಲ ರೂಂಗಳು ಕಾಲಿ. ಅಶ್ಟು ರೂಂಗಳು ಬೀಗ ಜಡಿದಿದ್ದರೆ ಪಾಲಾಕ್ಶಿ ಒಬ್ಬನ ರೂಂ ಮಾತ್ರ ತೆರೆದಿದೆ. ಸಾಯಂಕಾಲ ಏಳು ಗಂಟೆಯಾಗಿರಬಹುದು ಬರ‍್ಜರಿ ಮಳೆಯಾಗಲು ಕರಿ ಮುಗಿಲು ತಯಾರಿ ಮಾಡಿಕೊಳ್ಳುತ್ತಿತ್ತು. ಇಡೀ ಆಗಸಕ್ಕೆ ಕರಿ ಮೆತ್ತಿಕೊಂಡು ಗಾಡ ಕತ್ತಲಾಗಿದೆ. ಮಿಂಚುಗಳ ಸೆಳಕು. ಗುಡುಗಿನ ಸದ್ದು, ಸಿಡಿಲಿನ ಅಬ್ಬರ‌. ಬರ‍್ರನೆ ಗಾಳಿ ಬೀಸುತ್ತಿದ್ದಂತೆ ಪಟ್ಟನೆ ಕರೆಂಟ್ ಹೋಯ್ತು. ಎಲ್ಲ ಕಡೆ ಬ್ರಹ್ಮಾಂಡ ಕತ್ತಲು…ಕತ್ತಲು…. ಪಾಲಾಕ್ಶಿ ಬೆಳಗ್ಗಿಂದ ಪರೀಕ್ಶೆಗೆ ಓದಿ ಓದಿ ಸುಸ್ತಾಗಿದ್ದ. ರೂಂ ಪೂರ‍್ಣ ಕತ್ತಲಾಗಿದೆ. ಕತ್ತಲಲ್ಲಿ ತಡಕಾಡಿ ಮೊಂಬತ್ತಿ ಹಚ್ಚಿದ,  ಹೊಟ್ಟೆ ಹಸೀತಿತ್ತು, ನಿನ್ನೆ ತಂದಿಟ್ಟ ಬ್ರೆಡ್ಗೆ ಜಾಮ್ ಹಚ್ಚಿಕೊಂಡು ತಿಂದು ನೀರು ಕುಡಿದ. ಏನೋ ಒಂತರ ಮಂಪರು, ಗಾಡಾಂದಕಾರವನ್ನು ಸೀಳಿ ಮೊಂಬತ್ತಿಯ ಬೆಳಕಿನ ಕಿರಣ ನುಗ್ಗಿ ಬರುತ್ತಿದೆ. ಆದರೆ ಏನು ಸ್ಪಶ್ಟವಾಗಿ ಕಾಣುತ್ತಿಲ್ಲ. ಒಂದು ರೀತಿಯ  ನಶೆ ಏರಿದಂತೆ ಇಡಿ ದೇಹವೇ ಮಣಬಾರವಾದಂತೆ ಬಾಸವಾಗುತ್ತಿದೆ.

ಅಲ್ಲೆಲ್ಲೋ ಮೂಲೆಯಲ್ಲಿ ಗಲ್..ಗಲ್.. ಗೆಜ್ಜೆಯ ಸದ್ದು ಕೇಳಿ ಬರುತ್ತಿದೆ!! ಪಾಲಾಕ್ಶಿ ಹಾಸಿಗೆಯ ಮೇಲೆ ಉರುಳಿ ಎಶ್ಟೊ ಹೊತ್ತಾಗಿದೆ, ತನ್ನ ಎದೆಯ ಮೇಲೆ ಏನೋ ಬಾರವಾದ ವಸ್ತು ಕುಳಿತಂತೆ, ಒಂದಿಂಚು ಹೊರಳಾಡಲು ಆಗುತ್ತಿಲ್ಲ, ನಿದಿರೆಯ ಮಂಪರು ಬಿಡಲೊಲ್ಲದು. ಇದ್ದಕ್ಕಿದ್ದಂತೆ ಎದೆಯ ಮೇಲಿನ ಬಿಗಿತ ಹೆಚ್ಚಾಗುತ್ತಿದೆ ಉಸಿರಾಡಲು ಕಶ್ಟವಾಗುತ್ತಿದೆ. ಬಹುಶಹ ನಾಗರಾಜ್ ಹೇಳಿದಂತೆ ಇದು ಮೋಹಿನಿಯೇ ಇರಬೇಕು. ಪಾಲಾಕ್ಶಿ ಕೂಗಲು ಪ್ರಯತ್ತಿಸಿದ.. ಊಹೂಂ… ಬಾಯಿಂದ ದನಿಯೇ ಹೊರಡುತ್ತಿಲ್ಲ, ಏಳಲು ಆಗುತ್ತಿಲ್ಲ. ಬಹಳ ಹೊತ್ತು ಹೊರಳಾಡಿ ಹೊರಳಾಡಿ ಪ್ರಯತ್ನ ಪಟ್ಟು ತನ್ನ ಶಕ್ತಿಯೆಲ್ಲ ಒಗ್ಗೂಡಿಸಿ ಜೋರಾಗಿ ಮೈಕೊಡವಿಕೊಂಡು ಚೀರುತ್ತ ಎದ್ದ. ಪಾಲಾಕ್ಶಿಯ ಮೈ ನಡುಗುತ್ತಿದೆ. ಎತ್ತೆತ್ತೆಲೂ ಗಾಡಾಂದಾಕಾರ, ಮಿಂಚಿನ ಸೆಳಕು ಇಡೀ ರೂಂ ಅನ್ನು ಪಳಗುಟ್ಟಿಸುತ್ತಿದೆ. ಗುಡುಗು ಸಿಡಿಲಿನ ಅಬ್ಬರ, ದೋ ಎಂಬ ಮಳೆಯ ಆರ‍್ಬಟ. ಒಂದು ಕ್ಶಣ ಪಾಲಾಕ್ಶಿಗೆ ತಾನೆಲ್ಲಿದ್ದೇನೆ ಎಂಬುದು ಅರ‍್ತವಾಗದೆ ಗಾಬರಿ ಬಿದ್ದ. ಆ ಗೆಜ್ಜೆ ಸದ್ದು…?!! ಆ.‌.. ಮೋ..ಹಿ….ನಿ…!!? ಅಲ್ಲೆಲ್ಲೂ ಮೂಲೆಯಲ್ಲಿ ಕಿರುಗುಟ್ಟುವ ಸದ್ದು…ಮದ್ಯೆ ಮದ್ಯೆ  ಗಲ್.. ಗಲ್.‌‌.. ಸದ್ದು.

ತಾನು ಹಚ್ಚಿದ ಮೊಂಬತ್ತಿ ಆರಿ ಹೋಗಿದೆ. ಎದ್ದು ಹೋಗಿ ಮತ್ತೊಂದು ಮೊಂಬತ್ತಿ ಬೆಳಗಲು ದೈರ‍್ಯ ಸಾಲದು. ಸ್ವಲ್ಪ ಹೊತ್ತು ಸಾವರಿಸಿಕೊಂಡು ನಂತರ ತನ್ನೆಲ್ಲ ದೈರ‍್ಯ ಒಗ್ಗೂಡಿಸಿಕೊಂಡು ಎದ್ದು ಹೋಗಿ ಮೊಂಬತ್ತಿ ಬೆಳಗಿಸಿದ. ಅರೆ ಬಾಗಿಲು ತೆರೆದೇ ಇದೆ!!? ಬಾಗಿಲಿನಿಂದ ಒಳ ತೂರುವ ಮಿಂಚಿನ ಬೆಳಕು ಇಡಿ ರೂಂ ಅನ್ನೆ ಪಳಗುಟ್ಟಿಸುತ್ತಿದೆ. ಓಹೋ… ನಾನು ಮಲಗುವ ಮುನ್ನ ಬಾಗಿಲು ಹಾಕುವುದು ಮರೆತಿರಬೇಕು. ಆದರೆ ಈ  ಗಲ್.. ಗಲ್.. ಸದ್ದು ಕೀರಲು ದ್ವನಿ ಏನಿದು ಬಹುಶಹ ಮೋಹಿನಿ ಅಂತಿದ್ದರಲ್ಲ ಅವಳೆ ಏನಾದರು ರೂಂಗೆ ಹೊಕ್ಕಳಾ?!! ಸರಿ.. ಏನೇ ಅಗಲಿ ಆ ಸದ್ದು ಏನೆಂದು ನೋಡೆ ಬಿಡುವ ಎಂದು ದೈರ‍್ಯ ತಂದುಕೊಂಡು ಸದ್ದು ಬರುವತ್ತ ಮೊಂಬತ್ತಿ ಬೆಳಕು  ಹಾಯಿಸುತ್ತ ನಡೆದ…ಮೂಲೆಯಲ್ಲಿ ಎರಡು ಕಣ್ಣುಗಳು ಬೆಳಕಿಗೆ ಪಳಗುಟ್ಟುತ್ತಿದೆ ಮತ್ತಶ್ಟು ದೈರ‍್ಯ ತಂದು ಕೊಂಡು ಪಾಲಾಕ್ಶಿ ಹತ್ತಿರ ಹೋಗಿ ನೋಡಿದರೆ ನಾಯಿ ಕುನ್ನಿ ಚಳಿಗೆ ನಡುಗುತ್ತ ಕುಳಿತಿದೆ.. ಮಳೆ ಗಾಳಿಯ ಆರ‍್ಬಟಕ್ಕೆ ತಡೆಯಲಾರದೆ ಹೊರಗೆ ಗೋಣಿ ಚೀಲದ ಮೇಲೆ ಮಲಗುತಿದ್ದ ನಾಯಿ ಕುನ್ನಿ ತೆರೆದ ಬಾಗಿಲಿಂದ ಒಳ ಬಂದು ಮೂಲೆ ಸೇರಿ ಮಳೆ ಚಳಿಯಿಂದ ರಕ್ಶಿಸಿಕೊಳ್ಳುವ ಪ್ರಯತ್ನ ಮಾಡುತಿತ್ತು. “ಅಯ್ಯೋ ನಿನ್ನ ಮನೆ ಹಾಳಾಗೋಗ ನಾನು ಮೋಹಿನಿ ಅಂತಾ ಬ್ರಮೆಯಲ್ಲಿ ಇದ್ದೆನಲ್ಲೋ…ಸರಿ ಬೆಳಕು ಹರಿಯುವವರೆಗೂ ಮೂಲೆಲೆ ಬಿದ್ಕೊ” ಎಂದ.  ಆದರೆ ಈ ಗಲ್… ಗಲ್… ಸದ್ದು ಏನೆಂಬುದು ತಿಳಿಯದಾಯ್ತು. ಬಿಟ್ಟು ಬಿಟ್ಟು ಬರುತಿದ್ದ ಸದ್ದಿನ ಕಡೆಗೆ ಬೆಳಕು ಹಾಯಿಸಿ ನೋಡಿದರೆ ಜೀರುಂಡೆ ಒಳಗೆ ಸೇರಿಕೊಂಡು ಸದ್ದು ಮಾಡುತ್ತಿದೆ. “ರಾತ್ರಿಯ ನೀರವ  ಮೌನದಲಿ ಗೆಜ್ಜೆ ಸದ್ದಿನಂತೆ ನನಗೆ ಬ್ರಮೆ ತರಿಸಿದೆಯಾ ಕಳ್ಳ ಜೀರುಂಡೆಯೇ?” ಎಂದು ಅದನ್ನು ಎತ್ತಿ ಹೊರಬಿಟ್ಟು ಬಾಗಿಲು ಹಾಕಿದ.

“ಹಾಗಾದರೆ…. ಇದುವರೆಗೂ ನಾನು ಬಯಪಟ್ಟುಕೊಂಡಿದ್ದೆಲ್ಲ ಬರೀ ಬ್ರಮೇ…ಬರೀ ಕನಸು…!!?” ಎಂದು ತನ್ನ ಪುಕ್ಕಲುತನಕ್ಕೆ ಒಳಗೆ  ನಕ್ಕು ಮುಸುಕೆಳೆದು ಮಲಗಿದ ಪಾಲಾಕ್ಶಿ ಬೆಳಿಗ್ಗೆ ಎಶ್ಟೊತ್ತಿಗೆ ಎದ್ದನೊ ಅವನಿಗೆ ತಿಳಿಯದು.

( ಚಿತ್ರಸೆಲೆ : pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: