ಹೋಳಿಗೆಯ ಜೊತೆ ಸವಿಯಿರಿ ‘ಆಂಬೂರು’

– ಮಾರಿಸನ್ ಮನೋಹರ್.

 

ಹೋಳಿಗೆಯ ಜೊತೆ ಮಾಡಲಾಗುವ ತಿಳಿ ಹುಳಿಸಾರಿಗೆ ‘ಆಂಬೂರು’ ಎಂಬ ಹೆಸರಿದೆ. ಬಡಗಣ ಕರ‍್ನಾಟಕದ ಕಡೆ ಮಾಡುವ ‘ಆಂಬೂರು’, ತುಂಬಾ ಹಳೇ ಕಾಲದ ಸಾರು! ಕರ‍್ನಾಟಕ, ಮಹಾರಾಶ್ಟ್ರ, ಗುಜರಾತ್, ಆಂದ್ರ, ತೆಲಂಗಾಣದಲ್ಲಿ ಹೋಳಿಗೆಯ ಜೊತೆ ಸವಿಯಲು ಇದನ್ನು ಮಾಡುತ್ತಾರೆ. ಈಗ ಹೇಳುತ್ತಿರುವುದು ಹೈದ್ರಾಬಾದ್ ಕರ‍್ನಾಟಕದ ಕಡೆಯ ಬಗೆ. ತೆಂಕಣ ಮಹಾರಾಶ್ಟ್ರದ ಕಾಂದೇಶ್ ಕಡೆಗೆ ಇದನ್ನು ‘ಕಟ್ಟಾ ಆಮ್ಟಿ ಸಾರ್’ (ಕಟ್ಟಿನ ಆಂಬೂರು ಸಾರು) ಅಂತ ಕರೆಯುತ್ತಾರೆ.

ಬೇಕಾಗುವ ಸರಕುಗಳು

 • ಕೊತ್ತಂಬರಿ
 • ಕರಿಬೇವು
 • ಟೊಮೆಟೋ ಹಣ್ಣು – 2
 • ಹುಣಸೇ ಹಣ್ಣು (ನಿಂಬೆಹಣ್ಣಿನ ಗಾತ್ರದಶ್ಟು)
 • ಸಾಸಿವೆ
 • ಜಿರೀಗೆ
 • ಎಣ್ಣೆ
 • ಉಪ್ಪು
 • ಕಾರ – ಒಂದೂವರೆ ಟೀ ಚಮಚ
 • ಅರಿಶಿಣ – ಅರ‍್ದ ಟೀ ಚಮಚ
 • ಈರುಳ್ಳಿ – 1
 • ಕೊಬ್ಬರಿ – 1/2 ಬಟ್ಟಲು ಇಲ್ಲವೇ 100 ಗ್ರಾಂ ಕೊಬ್ಬರಿ ಪುಡಿ
 • ಬೆಳ್ಳುಳ್ಳಿ – ಹಸಿಶುಂಟಿ ಪೇಸ್ಟ್ – ಟೀ ಚಮಚ
 • ಹೋಳಿಗೆ ಹೂರಣ – ಒಂದು ಚಮಚದಶ್ಟು (ಬೇಕಾದರೆ)
 • ಕಡಲೆಬೇಳೆ ಕಟ್ಟಿನ ನೀರು

ಮಾಡುವ ಬಗೆ

ಅರ‍್ದಗಂಟೆ ಮೊದಲೇ ನೆನಸಿಟ್ಟ ಹುಣಸೇಹಣ್ಣನ್ನು ಕಿವುಚಿ ರಸ ತೆಗೆದಿಟ್ಟುಕೊಳ್ಳಬೇಕು. ಬಾಣಲೆ, ಚರಿಗೆ ಇಲ್ಲವೇ ಬೋಗುಣಿಯಲ್ಲಿ ಒಂದೂವರೆ ಚಟಾಕು (1 ಚಟಾಕು = 50 ಗ್ರಾಂ) ಎಣ್ಣೆ ಕಾಯಲು ಇಟ್ಟು, ಅದರಲ್ಲಿ ಸಾಸಿವೆ, ಜೀರಿಗೆ ಹಾಕಿ‌ ಸಿಡಿಸಿ ಚಟಪಟ ಸದ್ದು ನಿಂತಾಗ ಕೊಯ್ದ ಈರುಳ್ಳಿ ತುಣುಕು ಹಾಕಿ ಬಂಗಾರ ಕಂದು ಬಣ್ಣ ಬರುವವರೆಗೆ ಕರಿಯಬೇಕು. ಆಮೇಲೆ ಕೊತ್ತಂಬರಿ ಸೊಪ್ಪು ಒಗ್ಗರಣೆಯಲ್ಲಿಯೇ ಹಾಕಬೇಕು. ಗ್ಯಾಸಿನ ಬಿಸಿಯನ್ನು ತಗ್ಗಿಸಿ ಎಣ್ಣೆಯಲ್ಲಿಯೇ ಕಾರ, ಅರಿಶಿಣ ಹಾಕಬೇಕು. ಇದರಿಂದ ಆಂಬೂರಿಗೆ ಹೊಳೆವ ಕೆಂಪು ಬಣ್ಣ ಬರುತ್ತದೆ. ಒಡನೇ ಕೊಯ್ದಿಟ್ಟ ಟೊಮೇಟೋ ಹಣ್ಣುಗಳ ತುಂಡುಗಳನ್ನು ಹಾಕಿ ತಾಳಿಸಬೇಕು, ಆಮೇಲೆ ಹುಣಸೇರಸ ಹಾಕಬೇಕು.

ಈ ರಸಕ್ಕೆ ಎಸರು (ಕುದಿ) ಬಂದಾಗ ಕಟ್ಟಿನ ನೀರು (ಕಡಲೆಬೇಳೆ ಕುದಿಸಿ ಸೋಸಿ ತೆಗೆದ ಕಟ್ಟು) ಹಾಕಬೇಕು. ಮತ್ತೆ ಕುದಿ ಬಂದಾಗ ಬೇಕಾದಶ್ಟು ನೀರು ಹಾಕಿಕೊಳ್ಳಿ. ಈ ನಡುವೆ ಹೆಂಚಿನ ಮೇಲೆ ಸ್ವಲ್ಪ ಈರುಳ್ಳಿ ತುಂಡನ್ನು ಹೆಂಚಿನ ಮೇಲೆ ಎಣ್ಣೆ ಹಾಕದೇ ಹುರಿಯಬೇಕು. ಅರ‍್ದ ಟೀಚಮಚ ಎಣ್ಣೆ ಹಾಕಿದಾಗ ಹೊಗೆ ಎದ್ದು ಈರುಳ್ಳಿ ತುಣುಕುಗಳಿಗೆ ಸುಟ್ಟ ಗಮ ತರುತ್ತದೆ. ಆಮೇಲೆ ಅದೇ ಕಾದ ಹೆಂಚಿನ ಮೇಲೆ ಕೊಬ್ಬರಿ ತುಣುಕು ಇಲ್ಲವೇ ಕೊಬ್ಬರಿ ಪುಡಿಯನ್ನು ತಗ್ಗಿದ ಬಿಸಿಯಲ್ಲಿ ಹುರಿದುಕೊಳ್ಳಬೇಕು ಈಗ ಎಣ್ಣೆ ಹಾಕುವುದು ಬೇಕಿಲ್ಲ. ಇವೆರಡನ್ನು ಜೊತೆಗೇ ಒರಳಲ್ಲಿ ಇಲ್ಲವೇ ಮಿಕ್ಸರಿನಲ್ಲಿ ತುಸು ತುಸುವಾಗಿ ನೀರು ಹಾಕುತ್ತಾ ರುಬ್ಬಿಕೊಳ್ಳಬೇಕು.

ಇಶ್ಟರಲ್ಲೇ ಆಂಬೂರು ಕುದಿಯುತ್ತಾ ಇರುತ್ತದೆ. ಅದಕ್ಕೆ ಈ ಸುಟ್ಟ ಈರುಳ್ಳಿ-ಕೊಬ್ಬರಿ ಪೇಸ್ಟ್ ಹಾಕಿ ಕರಿಬೇವಿನ ಎಲೆಗಳ ಜೊತೆಗೆ ಆಂಬೂರಿಗೆ ಹಾಕಬೇಕು. (ಕರಿಬೇವಿನ ಎಲೆಗಳನ್ನು ಒಗ್ಗರಣೆಯಲ್ಲಿ ಹಾಕಿದರೆ, ಕುದ್ದ ಮೇಲೆ ಗಮ ಕಡಿಮೆಯಾಗುತ್ತದೆ ಅದಕ್ಕೆ ಆಮೇಲೆ ಹಾಕುವುದು). ಆಂಬೂರಿನ ಗಮಗಮ ವಾಸನೆ ಅಡುಗೆ ಮನೆಯನ್ನು ತುಂಬಿಕೊಳ್ಳುತ್ತದೆ. ಸ್ವಲ್ಪ ಹೋಳಿಗೆಯ ಹೂರಣವನ್ನು ಸೇರಿಸಬೇಕು. ಹೂರಣದಲ್ಲಿನ ಏಲಕ್ಕಿ, ಒಣಶುಂಟಿ, ತಿನ್ನುವ ಸೋಂಪಿನ ಗಮ ಈ ಆಂಬೂರಿಗೆ ಸಿಗ್ನೇಚರ್ ಪರಿಮಳ ತರುತ್ತದೆ. ರುಚಿ ನೋಡಿ ಉಪ್ಪು, ಸ್ವಲ್ಪ ಬೆಲ್ಲವನ್ನು ಸೇರಿಸಿ.

ಇದನ್ನೆಲ್ಲ ಆದ ಮೇಲೆ ಸುಮಾರು ಹತ್ತು ನಿಮಿಶಗಳವರಗೆ ಕುದಿಸಿದರೆ ಆಂಬೂರು ರೆಡಿಯಾಗುತ್ತದೆ. ಬಡಗಣ ಕರ‍್ನಾಟಕದ ಮಂದಿ ಆಂಬೂರು ಸ್ವಲ್ಪ ಸಿಹಿಯಾಗಿ ಮಾಡುತ್ತಾರೆ, ಇದು ಮರುದಿನ ಇನ್ನೂ ರುಚಿಕಟ್ಟಾಗುತ್ತದೆ. ನಿಮಗೆ ಸಿಹಿ ಬೇಡವಾದರೆ ಬೆಲ್ಲ/ಹೂರಣ ಹಾಕಬಾರದು. ಬಿಸಿ ಬಿಸಿ ಹೋಳಿಗೆಯೊಂದಿಗೆ ಈ ಆಂಬೂರು ಹಾಗೂ ಪಕ್ಕದಲ್ಲಿ ‘ಪುಣಗೋಳಿ’ (ಒಂದು ಬಗೆಯ ಪಕೋಡಾ) ಇಲ್ಲವೇ ಕರಿದ ‘ಸಂಡಿಗೆ‘ ಇಡುತ್ತಾರೆ, ತಿನ್ನುವುದಕ್ಕೆ ಮಜವಾಗಿರುತ್ತೆ!

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: