ಅನಿಸಿಕೆ : ಒಂದು ಕಿರುಬರಹ

ವಿನಯ ಕುಲಕರ‍್ಣಿ.

ಅನಿಸಿಕೆ, opinion

ಹಿಂದಿರುಗಿ ನೋಡಿದಾಗ ಎಶ್ಟೊಂದು ವಿಶಯಗಳ ಸಮಂಜಸತೆ ಅಶ್ಟಿತ್ತೆ ಅನ್ನಿಸುವದೇ ಬಹಳ. ಕಾಲ ಕಾಲಕ್ಕೆ ಸುತ್ತಲಿನ ಜಗತ್ತಿನೊಡನೆ ನಾವು ಮಾರ‍್ಪಡಾಗೇ ಹೋಗುತ್ತಿರುತ್ತೇವೆ, ಆದರೆ ಆ ಪ್ರಕ್ರಿಯೆ ನಡೆಯುವಾಗ ಅದರೊಡನೆ ನಮ್ಮ ಸಂಬಂದ ಏನು ಎಂಬುದು ಮುಕ್ಯ. ಅರ‍್ತಗಳನ್ನೇ ಮೂಲ ಉದ್ದೇಶವನ್ನಾಗಿಸಿಕೊಂಡು ನೋಡ ಹೊರಟರೆ ನಡೆದ ಒಂದೇ ಗಟನೆಗೆ ಸಾವಿರಾರು ಮುಕಗಳು. ಹಿಂದೆಲ್ಲೂ ಕಂಡಿರಲಿಲ್ಲ, ಬಹುಶಹ ಅದನ್ನು ನೋಡಿ ತಿಳಿಯುವ ದ್ರುಶ್ಟಿಕೋನದ ಅವಶ್ಯಕತೆಯೂ ಆಗ ಇದ್ದಿರದಿಲ್ಲಬಹುದು. ಈಗಿನ ಬೇಡಿಕೆಯಂತೆ ಮನಸ್ಸಿನ ಆಸೆಯು. ‘ನಮಗೇನು ಬೇಕು ಎಂಬುದಕ್ಕಿಂತ ಬೇರೆಯವರ ದ್ರುಶ್ಟಿಯಲ್ಲಿ ನಮಗೇನು ಇರಬೇಕು’ ಎಂಬುದೇ ಮಾನ್ಯತೆ ಪಡೆಯುತ್ತಿದೆ. ಅಂದಿನ ಕಾಲದ ನಿಕಟವರ‍್ತಿಗಳು ಇಂದು ಮುಂದೆ ಬಂದರೂ ಮುಕ ತಿರುಗಿಸಿ ಅತ್ತ ನೋಡದ ಸ್ತಿತಿ. ಪ್ರತಿಯೋರ‍್ವರಲ್ಲೂ ಇದೆ ನಿಜ ಎಂದಲ್ಲ , ಆದರೆ ಅಂದು ಬೇಕಿದ್ದು ಇಂದು ಬೇಡವಾದ ಬಹಳಶ್ಟು ಉದಾಹರಣೆಗಳು ಲಬ್ಯ . ಅಲ್ಲಿದ್ದದ್ದು ನಮಗೆ ಬೇಕಿದ್ದದ್ದು ಇನ್ನೂ ಅಲ್ಲೇ ಇರುವಾಗ ಹುಟ್ಟಿದ ಜಿಗುಪ್ಸೆ ಕೇವಲ ಕಾಲದ ಅದೀನವಾದದ್ದೇ?

ನಡೆದ ಎಲ್ಲ ವಿಶಯಗಳ ಒಂದು ಕ್ಲಿಶ್ಟ ರೂಪವೇ ನಮ್ಮ ಇಂದಿನ ಮನಸ್ಸು ಮತ್ತು ಅದರ ದ್ರುಶ್ಟಿಕೋನಗಳು – ಅಬಿಪ್ರಾಯಗಳು. ಆಗಿನಿಂದ ಒಂದು ವಿಶಯದ ಬಗ್ಗೆ ವಿವರಣೆಯಾಗಿ ಬಂದು ತಲೆ ಹೊಕ್ಕಿರುವ ಚಿಕ್ಕ ಯೋಚನೆ ಕೂಡ, ಇಂದಿನ ಅದೇ ವಿಶಯದ ಬಗೆಗಿನ ಆಸಕ್ತಿ ನಿರಾಸಕ್ತಿಯ ಪರಿಮಾಣ ಹೇಳಬಲ್ಲದು. ಎಲ್ಲದನ್ನೂ ದಿಕ್ಕರಿಸಿ ಮೊದಲಿನಿಂದ ಮತ್ತೆ ಸ್ಪಶ್ಟವಾಗಿ ಗಮನಿಸಲು ಸಾದ್ಯವೇ? ಒಂದು ವೇಳೆ ವಿಶೇಶ ಸಾದನೆಯಿಂದ ಇದು ಸಿದ್ದಿಸಿದಲ್ಲಿ ಅದೆಶ್ಟರ ಮಹತ್ ಬದಲಾವಣೆ ಸಾದ್ಯ? ಕೇವಲ ಕ್ಶಣಗಳ ಅಂತರದಲ್ಲಿ. ಅಬಿಪ್ರಾಯ ರೂಪುಗೊಳ್ಳುವ ಮುಂಚೆ ಮುಂದೆ ಇನ್ನೊಂದು ಕ್ಶಣದ ಆಗಮನ, ಮತ್ತೆ ಕಂಡದ್ದರ ಹೊಸ ನೋಟ. ಹೀಗೆ ನಡೆಯುತ್ತಲೇ ಹೋದರೆ ಕೇವಲ ಮೂಕಸಾಕ್ಶಿಯಾಗಿ ಎಲ್ಲವನ್ನು ನೋಡಬಹುದಾದೀತು. ಅಂದಿನ ಮುಂದಿನ ಯೋಚನೆಗಳ ಬಾರ ಇಳಿಯುತ್ತಲೇ ಮನಸ್ಸಿಗೆ ತನ್ನ ನಿಜ ತೂಕದ ಬೆಲೆ ಗೊತ್ತಾಗಬಹುದು.

ಅಂದು ಅಶ್ಟಿಶ್ಟವಾಗಿ ಹೋದವರು ಇಂದೇಕೆ ಅಶ್ಟು ದೂರ ನಿಂತರು? ಅವರ ಮೇಲಿನ ಅಬಿಪ್ರಾಯ ಬದಲಾವಣೆಗೆ ಅವರು ಕಾರಣವೇ, ಇಲ್ಲ ನಾವೇ ಕಾರಣವೇ? ಇಲ್ಲ ಸುತ್ತಲಿನ ಜಗತ್ತು ತಂದೊಡ್ಡಿದ ಪ್ರಸಂಗಗಳು ಕಾರಣವೇ? ಎಲ್ಲವನ್ನು ನಿರ‍್ದಿಶ್ಟವಾಗಿ ಇದೆ ಎಂದು ಹೇಳಿದರೂ, ಅದು ಇಂದಿಗೆ ಈ ಕ್ಶಣಕ್ಕೆ ಮೌಲ್ಯ ಹೊಂದಿರುವದಾಗಿರಬಹುದು. ಒಂದು ಕ್ಶಣದ ಅನಿಸಿಕೆ ನಂತರದ ಕ್ಶಣದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದು. ನಾವು ನಾವಾಗೇ ಮಾಡಿಕೊಂಡ ವಾದಗಳೇ ನೆನಪನ್ನೂ ಮೀರಿ ಆಚೆ ಹೋಗಿವೆ. ಇನ್ನು ಯಾರೋ ಏನೋ ಯಾರ ಮುಂದೆಯೋ ಅಂದರು ಎನ್ನಲಾಗುವ ಒಂದು ಸಣ್ಣ ವಿಶಯ ಅದೆಶ್ಟು ಸಲ ಮನಸ್ಸನ್ನು ಗಾಸಿ ಮಾಡೀತು.

ಮಾತನಾಡಿ ಆಚೆ ನಿಲ್ಲುವದು ಸುಲಬ. ಕೆಳಗೆ ನಿಂತು ಬಾರ ಎತ್ತಿದಾಗಲೇ ಕಟಿಣತೆ ಅರ‍್ತವಾಗುವಂತಹದ್ದು. ‘ನಮ್ಮವರು’ ಎಂದು ಇಂದು ಎನಿಸಿಕೊಂಡವರು ನಾಳೆಗಳ ಲೆಕ್ಕದಲ್ಲಿ ಇನ್ನೆಲ್ಲಿರುತ್ತಾರೋ. ಈಗಿನ ಸಾದ್ಯತೆ ಮೇಲೆ ಜೀವನದ ಕೊನೆಯನ್ನು ಅಳೆಯಲಾಗದು. ಬರ ಬರುತ್ತಾ ಬದಲಾವಣೆ ಆಗಬೇಕಾದದ್ದೇ. ಬದಲಾಗುವಾಗ ಕಂಡು ಗುರುತಿಸಿಕೊಂಡರೆ ಬದಲಾಗಿದ್ದಕ್ಕೆ ಬೆಲೆ ಇರುವದಿಲ್ಲ. ನಡುವೆ ಒಂದು ಸಣ್ಣ ಅಂತರ ಅವಶ್ಯಕ. ಪ್ರೀತಿಯ ಪ್ರಮಾಣದ ಹುಚ್ಚಿನಲ್ಲಿ ಏನೇನೋ ನಡೆದಿವೆ. ಜನರು ಅದಕ್ಕೆ ಕೊಡುವ ಅರ‍್ತ, ಮಾಡಿಕೊಂಡವರ ತಲೆಯೊಳಗಿದ್ದ ಆಲೋಚನೆಗೆ ಅಜಗಜಾಂತರ. ಇವರಿಲ್ಲದೆ ಬದುಕೇ ನಿಲ್ಲಬಹುದು – ಯೋಚಿಸಿ ನೋಡಿ. ಇವರುಗಳು ನಮ್ಮ ಜೀವನದ ವ್ಯಾಪ್ತಿಯನ್ನಿ ದಾಟಿದರೆ ನಮ್ಮ ಗತಿ ಏನು ಎಂದು. ಬಹುಶಹ ಒಂದೈದು ಹೆಸರುಗಳು ತಲೆಗೆ ಬರಬಹುದು. ಅದರಲ್ಲೂ ಆತ್ಮೀಯತೆಗನುಗುಣವಾಗಿ ಯಾರು ಮೊದಲು ಯಾರು ಐದನೆಯವರು ಎಂಬ ಲೆಕ್ಕ. ಅದೇನಿದ್ದರೂ ಇವತ್ತಿಗೆ ಈಗಿನ ನಿಮಿಶಕ್ಕೆ. ಮುಂದೆ ಬರುವದರ ಯಾವ ಸೂಚನೆಯೂ ನಮಗಿಲ್ಲ. ಅದಕ್ಕೆಂದೇ ಪ್ರೀತಿಯ ಸೋಗಿನಲ್ಲಿ ಅದಿಕಾರದ ಚಲಾವಣೆಯಲ್ಲೇ ಕಾಲ ವ್ಯಯ. ನಿಜವಾದ ಪ್ರೀತಿಯಲ್ಲಿ ಅಪರಿಮಿತ ಸ್ವಾತಂತ್ರ್ಯವಿದೆ. ಕೊಟ್ಟು ನೋಡಬಹುದು – ಮರಳಿ ಪಡೆವಾಗ ಆ ಬಾವನೆಗಳ ರುಚಿ ಏನೆಂಬುದು. ಹಾಕಿದ ಕುಣಿಕೆಗೂ ಒಂದು ಮಿತಿ. ಇಂದಿಲ್ಲ ನಾಳೆ ಬಿಚ್ಚಿಕೊಳ್ಳಲೇಬೇಕು, ಇಲ್ಲವೇ ಅದರಲ್ಲೇ ಸುತ್ತಿಕೊಂಡು ಉಸಿರು ಮರೆಯಬೇಕು.

ನಮ್ಮ ನೆಮ್ಮದಿಗೆ ಕಾರಣರಾದವರಿಗೆ ಇನ್ನೂ ಹೆಚ್ಚಿನ ನೆಮ್ಮದಿ ನೀಡುವದು ಕರ‍್ತವ್ಯ . ಆದರೆ ಅದಕ್ಕೇನು ಬೇಕೆಂಬ ಜಾಣ್ಮೆ ಅವಶ್ಯಕ. ನಮ್ಮ ಇಶ್ಟಗಳನ್ನೇ ಅವರ ಮೇಲೆ ಹೇರಿದರೆ ಬಲವಂತಕ್ಕೆ ಒಪ್ಪಿಗೆ ಸಿಗಬಹುದು. ಕೇವಲ ನಮ್ಮ ಒಟ್ಟಿಗೆ ಇರುವಿಕೆಯ ಕಾರಣವೇ ಅವರನ್ನು ಅಶ್ಟು ಕುಶಿಯಿಂದ ಇಡಬಲ್ಲದ್ದಾದರೆ, ಅವರಿಗೆ ನಿಜವಾಗಲೂ ಇಶ್ಟ ಪಟ್ಟಿರುವದನ್ನ ಇಶ್ಟವಾಗಿರೋರು ತಂದು ನೀಡಿದಾಗ ಇನ್ನೇನಾಗಲಿಕ್ಕಿಲ್ಲ. ಸ್ವಾತಂತ್ರ್ಯ ಯಾರು ಯಾರಿಗೂ ಕೊಡುವ ವಸ್ತು ಅಲ್ಲ, ಆದರೆ ಅದರ ದಾರಿಯಲ್ಲಿ ನಿಲ್ಲುವುದು ಕ್ರಮೇಣ ತಪ್ಪಬೇಕು. ಯಾಕೆಂದರೆ ಆ ತರ ನಡೆದುಕೊಳ್ಳಲು ಗಟ್ಟಿ ಮನಸ್ಸು ಗಟ್ಟಿ ಹೆಜ್ಜೆ ಎರಡೂ ಅವಶ್ಯಕ. ಅವರ ಸಂತೋಶ ನಮ್ಮಲ್ಲಿ ಸಮಾದಾನ ತರುವ ಸ್ತಿತಿ ತಲುಪಲು ಹಿರಿದಾದ ಸಾದನೆಯೇ ಬೇಕು.

( ಚಿತ್ರ ಸೆಲೆ : quantachange.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: