ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 12ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ಸತ್ಯವಿಲ್ಲದವಂಗೆ
ನಿತ್ಯನೇಮವೇಕೆ?. (631-59)

ಸತ್ಯ+ಇಲ್ಲದ+ಅವಂಗೆ; ಸತ್ಯ=ನಿಜ/ದಿಟ/ವಾಸ್ತವ; ಇಲ್ಲದ=ಇಲ್ಲದಿರುವ; ಅವಂಗೆ=ಅವನಿಗೆ;

ಸತ್ಯವಿಲ್ಲದವಂಗೆ=ತನ್ನ ದಿನನಿತ್ಯದ ವ್ಯವಹಾರಗಳಲ್ಲಿ ಸತ್ಯದ ನಡೆನುಡಿಯಿಂದ ಬಾಳದವನಿಗೆ; ಸತ್ಯದ ನಡೆನುಡಿ ಎಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ಕೆಲಸಗಳು ತನ್ನ ಹಿತವನ್ನು ಕಾಯುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕು;

ನಿತ್ಯ=ಪ್ರತಿದಿನವೂ; ನೇಮ+ಏಕೆ; ನೇಮ=ವ್ರತ/ನೋಂಪಿ/ದೇವರನ್ನು ಒಲಿಸಿಕೊಳ್ಳಲು, ದೇವರ ಕರುಣೆಗೆ ಪಾತ್ರರಾಗಲು ಮಾಡುವ ಜಪ/ತಪ/ಪೂಜೆ/ಉಪವಾಸ/ಜಾಗರಣೆ ಮುಂತಾದ ಆಚರಣೆ. ಈ ಆಚರಣೆಯಲ್ಲಿ ತೊಡಗಿದಾಗ ವ್ಯಕ್ತಿಯು ಹೀಗೆಯೆ ಇರಬೇಕು/ಮಾಡಬೇಕು/ನಡೆದುಕೊಳ್ಳಬೇಕು ಎಂಬ ಕಟ್ಟಲೆ/ನಿಯಮವಿರುತ್ತದೆ; ಏಕೆ=ಯಾವುದಕ್ಕೆ ಬೇಕು/ಪ್ರಯೋಜನವೇನು;

ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡದ ವ್ಯಕ್ತಿಯು ಮಾಡುವ ಯಾವುದೇ ಬಗೆಯ ದೇವರ ಪೂಜೆಯಿಂದ ಇಲ್ಲವೇ ಆಚರಣೆಯಿಂದ ಏನೊಂದು ಪ್ರಯೋಜನವಿಲ್ಲ.

ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ
ದೂರ ದುರ್ಜನರ ಸಂಗವದು ಭಂಗವಯ್ಯಾ (134-21)

ಸಾರ=ಒಳ್ಳೆಯದು/ಉತ್ತಮವಾದುದು/ಮೇಲಾದುದು; ಸಜ್ಜನ=ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿ; ಸಂಗ=ಗೆಳೆತನ/ಒಡನಾಟ/ಸಹವಾಸ/ಸ್ನೇಹ; ಲೇಸು=ಒಳ್ಳೆಯದು/ಹಿತಕರವಾದುದು/ಮಂಗಳಕರವಾದುದು; ಕಂಡ+ಅಯ್ಯಾ; ಕಾಣು=ನೋಡು/ತಿಳಿ/ಅರಿ;

ಸಜ್ಜನರ ಸಂಗ ಲೇಸು ಕಂಡಯ್ಯಾ=ಒಳ್ಳೆಯ ನಡೆನುಡಿಯುಳ್ಳವರ ಜತೆಗಿನ ಗೆಳೆತನ/ಒಡನಾಟ/ವ್ಯವಹಾರ ವ್ಯಕ್ತಿಗೆ ಜೀವನದಲ್ಲಿ ಒಳಿತಿನ ದಾರಿಯಲ್ಲಿ ಸಾಗುವಂತೆ ಮಾಡಿ, ಒಲವು ನಲಿವು ಆನಂದವನ್ನು ನೀಡುತ್ತದೆ.

ದೂರ=ಎರವಾದುದು/ಹಾನಿಯನ್ನುಂಟು ಮಾಡುವುದು/ಕೆಟ್ಟದ್ದು; ದುರ್ಜನ=ಕೆಟ್ಟ ನಡೆನುಡಿಯುಳ್ಳ ವ್ಯಕ್ತಿ; ಸಂಗ+ಅದು; ಅದು=ಆ ರೀತಿಯ ನಂಟು/ಅಂತಹ ಒಡನಾಟ/ಗೆಳೆತನ; ಭಂಗ+ಅಯ್ಯಾ; ಭಂಗ=ಅಪಮಾನ/ಸೋಲು/ನಾಶ/ಹಾನಿ;

ದುರ್ಜನರ ಸಂಗವದು ಭಂಗವಯ್ಯಾ=ಕೆಟ್ಟ ನಡೆನುಡಿಯುಳ್ಳವರ ಗೆಳೆತನ/ಒಡನಾಟ/ವ್ಯವಹಾರವು ವ್ಯಕ್ತಿಗೆ ಎಂದಿದ್ದರೂ ಹಾನಿ/ಕೇಡು/ಸಾವು/ನೋವನ್ನು ತರುತ್ತದೆ ಮತ್ತು ಸಮಾಜದಲ್ಲಿ ನಾಲ್ಕು ಮಂದಿಯ ಮುಂದೆ ಅಪಮಾನದಿಂದ ತಲೆತಗ್ಗಿಸುವಂತಹ ಸನ್ನಿವೇಶ ಎದುರಾಗುತ್ತದೆ.

ಆದ್ದರಿಂದ ಕೆಟ್ಟ ನಡೆನುಡಿಯುಳ್ಳವರಿಂದ ದೂರವಿರಬೇಕು. ಒಳ್ಳೆಯ ನಡೆನುಡಿಯುಳ್ಳವರ ಹತ್ತಿರವಿರಬೇಕು.

ಸ್ನೇಹ ತಪ್ಪಿದ ಠಾವಿನಲ್ಲಿ
ಗುಣವನರಸುವರೆ ಅಯ್ಯಾ?. (127-20)

ಸ್ನೇಹ=ಗೆಳೆತನ/ವ್ಯಕ್ತಿಗಳ ನಡುವೆ ಪರಸ್ಪರ ಒಳಿತನ್ನು ಬಯಸುವ ಮತ್ತು ಒಳಿತನ್ನು ಮಾಡುವ ಒಳಮಿಡಿತಗಳನ್ನು ಮನಸ್ಸಿನಲ್ಲಿ ಹೊಂದಿರುವುದು; ತಪ್ಪು=ಹಾಳಾಗು/ಕೆಡು; ಠಾವಿನ+ಅಲ್ಲಿ; ಠಾವು=ಜಾಗ/ನೆಲೆ/ಎಡೆ/ತಾಣ;

ಗುಣ+ಅನ್+ಅರಸುವರೆ; ಗುಣ=ನಡತೆ/ವಿವೇಕ/ಸಜ್ಜನಿಕೆ/ಒಳ್ಳೆಯತನ; ಅನ್=ಅನ್ನು; ಅರಸು=ಹುಡುಕು; ಅರಸುವರೆೆ=ಹುಡುಕುತ್ತಾರೆಯೆ/ಕಾಣಲು ಪ್ರಯತ್ನಿಸುತ್ತಾರೆಯೆ;

ಸ್ನೇಹ ತಪ್ಪಿದ ಠಾವಿನಲ್ಲಿ ಗುಣವನರಸುವರೆ ಅಯ್ಯಾ=ಇಬ್ಬರು ವ್ಯಕ್ತಿಗಳ ಮನಸ್ಸನ್ನು ಒಲವು ನಲಿವು ನಂಬಿಕೆಯಿಂದ ಪರಸ್ಪರ ಬೆಸೆದಿದ್ದ ಗೆಳೆತನವು ಮುರಿದು ಬಿದ್ದಾಗ, ಅವರ ನಡುವಣ ಒಡನಾಟದಲ್ಲಿ ಒಳ್ಳೆಯ ನಡೆನುಡಿಗಳನ್ನು ಮತ್ತೆ ಕಾಣಲು ಆಗುವುದಿಲ್ಲ. ಏಕೆಂದರೆ ಇಬ್ಬರಲ್ಲಿ ಯಾರಾದರೊಬ್ಬರು ಒಲವಿನ ಮತ್ತು ನಂಬಿಕೆಯ ನಡೆನುಡಿಗಳಿಗೆ ದ್ರೋಹವನ್ನು ಬಗೆದಿರುತ್ತಾರೆ.

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: