ಮಕ್ಕಳ ಕತೆ : ಸಾದನೆಯ ಹಾದಿ

– ವೆಂಕಟೇಶ ಚಾಗಿ.

plough,ರೈತ

ಕಮಲಾಪುರ ಎಂಬ ಊರಿನಲ್ಲಿ ರಾಮಯ್ಯ ಎಂಬ ರೈತನಿದ್ದನು. ರಾಮಯ್ಯ ತನಗೆ ತನ್ನ ಪೂರ‍್ವಿಕರಿಂದ ಬಂದ ಜಮೀನಿನಲ್ಲಿ ಉತ್ತಿ ಬಿತ್ತಿ ಬೆಳೆ ಬೆಳೆದು ಸುಕವಾಗಿ ಜೀವನ ಸಾಗಿಸುತ್ತಿದ್ದನು. ಯಾವುದೇ ಆಮೀಶಕ್ಕೆ ಅತೀ ಆಸೆಗೆ ಒಳಗಾಗದೇ ಕಶ್ಟಪಟ್ಟು ದುಡಿಯುವುದೇ ಅವನ ನಿತ್ಯ ಕಾಯಕವಾಗಿತ್ತು. ತನ್ನ ದಿನದ ಬಹುತೇಕ ಬಾಗವನ್ನು ಹೊಲಗದ್ದೆಗಳಲ್ಲಿ ಕಳೆಯುತ್ತಿದ್ದನು. ಕೆಲವು ಜನರು ಅವನನ್ನು ಆಸೆಬುರುಕ ಎಂತಲೂ ಲೋಬಿ ಎಂತಲೂ ಮತಿಹೀನ ಎಂತಲೂ ಕರೆಯುತ್ತಿದ್ದರು. ಆದರೂ ಯಾರ ಮಾತಿಗು ಗಮನ ಕೊಡದೆ ತನ್ನ ಕಾಯಕವನ್ನು ತಪ್ಪದೆ ಮಾಡುತ್ತಿದ್ದನು.

ರಾಮಯ್ಯನಿಗೆ ಒಬ್ಬ ಮಗನಿದ್ದನು. ಅವನ ಹೆಸರು ಕಮಲಾಕರ ಎಂದು. ಕಮಲಾಕರ ಅಪ್ಪನ ವಿರುದ್ದ ಗುಣಗಳನ್ನು ಹೊಂದಿದ್ದ. ಹೊಲದಲ್ಲಿ ದುಡಿಯುವುದರಿಂದ ಏನನ್ನೂ ಸಾದಿಸಲು ಸಾದ್ಯವಿಲ್ಲ. ತಾನೊಬ್ಬ ದೊಡ್ಡ ವಿದ್ವಾಂಸನಾಗಿ ಮಹಾರಾಜರಿಂದ ಸನ್ಮಾನಿತನಾಗಬೇಕು ಎಂಬ ಬಯಕೆ ಅವನಲ್ಲಿ ಮೂಡಿತ್ತು . ಇದಕ್ಕಾಗಿ ರಾಮಯ್ಯನೊಂದಿಗೆ ವಾಗ್ವಾದ ಮಾಡಿ ಶಾಸ್ತ್ರಾಬ್ಯಾಸಗಳಲ್ಲಿ ತೊಡಗುತ್ತಿದ್ದನು. ಕಾಯಕದ ಅರಿವಿಲ್ಲದ ಕಮಲಾಕರ ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದನು. ದೊಡ್ಡ ದೊಡ್ಡ ವಿದ್ವಾಂಸರೆದುರು ಸೋತು ಮನೆಗೆ ಬರುತ್ತಿದ್ದನು. ಆದರೂ ತನ್ನ ತಂದೆ ರಾಮಯ್ಯನಿಗೆ “ನೋಡುತ್ತಿರು ನಾನು ಒಂದಲ್ಲಾ ಒಂದು ದಿನ ಮಹಾರಾಜರಿಂದ ಸನ್ಮಾನಿತನಾಗುತ್ತೇನೆ. ಅದು ನಿನ್ನಿಂದ ಸಾದ್ಯವಿಲ್ಲ. ನೀನೋ ಅನಕ್ಶರಸ್ತ ರೈತ.” ಎಂದು ಹೀಯಾಳಿಸುತ್ತಿದ್ದನು. ರಾಮಯ್ಯ, ಮಗನ ಮಾತುಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ ತನ್ನ ಕಾಯಕದಲ್ಲಿ ಮಗ್ನನಾಗಿರುತ್ತಿದ್ದನು.

ಒಂದು ದಿನ ಮಹಾರಾಜರು ಮಾರುವೇಶದಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡುವಾಗ ರಾಮಯ್ಯನ ಹೊಲಗದ್ದೆಯ ಬಳಿ ಬಂದರು. ಸಮ್ರುದ್ದ ಪಸಲನ್ನು ಕಂಡು ಮಹಾರಾಜರು ಸಂತುಶ್ಟರಾದರು. ದೂರದಲ್ಲಿ ಕೆಲಸ ಮಾಡುತ್ತಿದ್ದ ರಾಮಯ್ಯನನ್ನು ಕರೆದು ರಾಮಯ್ಯನ ಕಾಯಕದ ಬಗ್ಗೆ ವಿಚಾರಿಸಿದರು. ರಾಮಯ್ಯನ ಪರಿಶ್ರಮ ಮಹಾರಾಜರನ್ನು ತುಂಬಾ ಸೆಳೆಯಿತು. ಮಾರುವೇಶದಲ್ಲಿದ್ದ ಮಹಾರಾಜರು ರಾಮಯ್ಯನಿಗೆ, “ರಾಮಯ್ಯ, ನಿನ್ನ ಕರ‍್ತವ್ಯ, ಶ್ರಮ ಕಂಡು ನನಗೆ ತುಂಬಾ ಸಂತಸವಾಗಿದೆ. ನಾಳೆ ಅರಮನೆಗೆ ಬಾ. ನನ್ನ ಮಕ್ಕಳಿಗೂ ನಿನ್ನ ಶ್ರಮದ ಪರಿಚಯ ಮಾಡಿಕೊಡುವಂತೆ” ಎಂದಾಗ, ರಾಮಯ್ಯ “ಬುದ್ದಿ ನೀವು ಯಾರು ಅಂತ ಅರಮನೆಯಲ್ಲಿ ಕೇಳಲಿ? ” ಎಂದಾಗ, ಮಹಾರಾಜ “ಅರಮನೆಯ ಸೇವಕರಿಗೆ ನಾನೊಬ್ಬ ರೈತ. ರೈತರ ಮಹಾಸೇವಕನ್ನು ನೋಡಬೇಕಿದೆ ಎಂದು ಹೇಳಿದರೆ ಸಾಕು ನನ್ನ ಬಳಿ ಕರೆದು ತರುತ್ತಾರೆ” ಎಂದಾಗ ರಾಮಯ್ಯ ಆಗಲಿ ಎಂದು ಒಪ್ಪಿಕೊಂಡ.

ಮರುದಿನ ರಾಮಯ್ಯ ತಾನು ಮಹಾರಾಜರ ಅರಮನೆಗೆ ಹೋಗಬೇಕು ಎಂದು ಮಗನ ಬಳಿ ಹೇಳಿದಾಗ, ಮಗ ಕಮಲಾಕರ “ಯಾರೋ ನಿನಗೆ ಸುಳ್ಳು ಹೇಳಿರಬೇಕು. ನೀನೊಬ್ಬ ಬಡ ರೈತ ‌. ಅಲ್ಲಿ ನಿನ್ನಿಂದಾಗುವ ಕೆಲಸವಾದರೂ ಏನಿದೆ?” ಎಂದಾಗ ರಾಮಯ್ಯ ಮಗನ ಮಾತನ್ನು ಲೆಕ್ಕಿಸದೇ ನೇರವಾಗಿ ಅರಮನೆಗೆ ಬಂದಾಗ ಬಟರು ರಾಮಯ್ಯನನ್ನು ವಿಚಾರಿಸಿ ರೈತರ ಮಹಾಸೇವಕನಾದ ಮಹಾರಾಜರ ಬಳಿ ಕರೆದುಕೊಂಡು ಬರುತ್ತಾರೆ. ರಾಮಯ್ಯನಿಗೆ ದಿಗ್ರ್ಬಮೆಯಾಗುತ್ತದೆ. ಮಹಾರಾಜರು , ರಾಮಯ್ಯನ ಕ್ರುಶಿ ಸಾದನೆಯನ್ನು ಸಬಿಕರಿಗೆಲ್ಲಾ ತಿಳಿಸುತ್ತಾರೆ. ರಾಮಯ್ಯನನ್ನು ಮಹಾರಾಜರು ಸನ್ಮಾನಿಸುತ್ತಾರೆ. ಇದನ್ನು ಕಂಡ ಕಮಲಾಕರನ ಅಹಂಕಾರವೆಲ್ಲಾ ಕರಗಿಹೋಗಿ ನಾಚಿಕೆಯಿಂದ ತಲೆತಗ್ಗಿಸುತ್ತಾನೆ. ಸಾದನೆಗೆ ವಿದ್ವಾಂಸನೇ ಆಗಬೇಕೆಂದಿಲ್ಲ. ಒಬ್ಬ ಸಾಮಾನ್ಯ ರೈತನಲ್ಲೂ ಸಾದನೆಯ ಗುಣವಿದೆ.” ಎಂದಾಗ ಅಂದಿನಿಂದ ಕಮಲಾಕರನೂ ತಂದೆಯ ಸಾದನೆಯ ಹಾದಿಯನ್ನು ಹಿಡಿಯುತ್ತಾನೆ.

(ಚಿತ್ರ ಸೆಲೆ: wiki)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.