ಎಲ್ಲರನ್ನೂ ಸುತ್ತಿರುವ ‘ಹತ್ತಿ’

– ಮಾರಿಸನ್ ಮನೋಹರ್.

cotton, ಹತ್ತಿ

ಚಿಕ್ಕವನಿದ್ದಾಗ ಬೈಕಿನ ಮೇಲೆ ಊರಿಗೆ ಹೋಗುತ್ತಿರುವಾಗ ಅಕ್ಕ ಪಕ್ಕದ ಹೊಲಗಳಲ್ಲಿ ಗಿಡಗಳು ಕಾಣಿಸಿದವು. ಅವು ಏನೆಂದು ನನ್ನ ನೆಂಟನಿಗೆ ಕೇಳಿದಾಗ ಅವನು “ಅದು ಹತ್ತಿ” ಅಂತ ಹೇಳಿದ. ನಾನು ಹತ್ತಿಯು ಹಾಸ್ಪಿಟಲ್ ನಲ್ಲಿ ತಯಾರಿಸುತ್ತಾರೆ ಅಂತ ತಿಳಿಕೊಂಡಿದ್ದೆ! ಮೊದಲ ಬಾರಿಗೆ ಹತ್ತಿಯ ಗಿಡಗಳನ್ನು ನೋಡಿ ಅದು ಗಿಡದಲ್ಲಿ ಬೆಳೆಯುತ್ತೆ ಅಂತ ಗೊತ್ತಾಗಿ ನಾನು ಚಕಿತನಾಗಿದ್ದೆ. ಗಿಡದಲ್ಲಿ ಬೆಳೆಯುವ ಹತ್ತಿಯು ಹೊಲದಿಂದ ಹೊರಟು ಶಾಪಿಂಗ್ ಮಾಲ್ ಗಳಲ್ಲಿ ನಮಗೆ ಒಪ್ಪವಾದ ಉಡುಪಾಗುವ ಪರಿ ನನ್ನಲ್ಲಿ ಬೆರಗು ಹುಟ್ಟಿಸುತ್ತದೆ. ಸಿಂದೂ ಕಣಿವೆ ನಾಗರೀಕತೆ ಮಂದಿಗೆ ಹತ್ತಿಯ ಬೇಸಾಯ ಮತ್ತು ನೇಕಾರಿಕೆ ಎರಡೂ ಗೊತ್ತಿದ್ದವು. ಹತ್ತಿಯ ಕೈಮಗ್ಗದಿಂದ ಉಡುಪು ನೇಯ್ದುಕೊಳ್ಳುತ್ತಿರುವ ಹೆಂಗಸಿನ ತಿಟ್ಟವಿರುವ ಬಿಲ್ಲೆಗಳು ಮೊಹೆಂಜದಾರೋ ಪಳಿಯುಳಿಕೆಗಳಲ್ಲಿ ಸಿಕ್ಕಿವೆ.

ಮೈಗೆ ಹಾಯೆನಿಸುವ ಹತ್ತಿಯ ಬಟ್ಟೆಗಳು

ಮಜ್ಜಿಗೆ ಮತ್ತು ಬಿಳಿ ಹತ್ತಿ ಬಟ್ಟೆಗಳು ಇಂಡಿಯಾದ ಒಣಗಾಳಿಗೆ ಹೇಳಿ ಮಾಡಿಸಿದ್ದು‌. ಮಜ್ಜಿಗೆ ನಮ್ಮ ಒಳಮೈಗೆ ತಂಪನ್ನು ಉಂಟು ಮಾಡಿದರೆ ಹತ್ತಿ ಬಟ್ಟೆಗಳು ನಮ್ಮ ಹೊರಮೈ ಯನ್ನು ತಂಪಾಗಿ ಇಡುತ್ತವೆ. ಹತ್ತಿ ಬಟ್ಟೆಯಲ್ಲಿ ಗಾಳಿ ಒಳಗೆ ಹೊರಗೆ ಚೆನ್ನಾಗಿ ಆಡುತ್ತದೆ. ಇದರಿಂದ ಗಾಳಿ ನಮ್ಮ ಮೈಗೆ ಚೆನ್ನಾಗಿ ಬಡಿದು ನಮ್ಮ ಚರ‍್ಮದ ಮೇಲಿಂದ ಬೆವರನ್ನು ಹೀರಿಕೊಳ್ಳುತ್ತದೆ. ಇದರಿಂದ ನಮ್ಮ ಮೈಚರ‍್ಮವು ಚೆನ್ನಾಗಿ ಉಸಿರಾಡುತ್ತಾದೆ. ಇದರಿಂದ ನಮ್ಮ ಮೈಬಿಸಿಯು ತಣಿದು ಹಾಯಾಗಿ ಅನ್ನಿಸುತ್ತದೆ.

ಹತ್ತಿಯ ಹಿಂದಿದೆ ಒಂದು ಕ್ರೂರತೆಯ ಕತೆ

ಹತ್ತಿಗೆ ಮೆದುತನವಿದೆ, ಆದರೆ ಅಮೆರಿಕದ ರಾಜ್ಯಗಳಲ್ಲಿ ಹತ್ತಿಗೆ ಗುಲಾಮಗಿರಿಯ ಕ್ರೂರ ಹಳಮೆಯಿದೆ ಇದೆ. ಅಮೆರಿಕದ ರಾಜ್ಯಗಳಲ್ಲಿ ಹತ್ತಿ ಬೇಸಾಯ ದೊಡ್ಡ ಪ್ರಮಾಣದಲ್ಲಿ ಲಾಬದಾಯಕ ಉದ್ದಿಮೆಯಾಗಿ ಇತ್ತು. ಆದರೆ ಅದನ್ನು ಆಪ್ರಿಕಾದಿಂದ ಕರೆತಂದ ಗುಲಾಮರಿಂದ ನಡೆಸುತ್ತಿದ್ದರು. ಆಪ್ರಿಕಾದ ಗುಲಾಮರನ್ನು ಹತ್ತಿಯ ನೂರಾರು ಎಕರೆ ಹೊಲಗಳಲ್ಲಿ ಕಟಿಣವಾಗಿ ದುಡಿಸುತ್ತಿದ್ದರು. ಹತ್ತಿಯ ವಹಿವಾಟು ತುಂಬಾ ಲಾಬದಾಯಕವಾಗಿತ್ತು. ಇದರಿಂದ ಮಾರುಕಟ್ಟೆಯೂ ದೊಡ್ಡದಾಯ್ತು. ಹಳೆಯ ಕೊಳಕಾದ ಬಟ್ಟೆಯನ್ನು ಉಟ್ಟುಕೊಳ್ಳುತ್ತಿದ್ದ ಗುಲಾಮರು ಹೊಚ್ಚ ಹೊಸ ಬಿಳಿಯ ಮತ್ತು ಮೆದುವಾದ ಹತ್ತಿಯನ್ನು ಬಿಡಿಸಿ ಹೊರೆ ಕಟ್ಟಿ ಹತ್ತಿ ಗಿರಣಿಗಳಿಗೆ ಕಳುಹಿಸುತ್ತಿದ್ದರು.

ಕೆಲಸಗಾರರಿಗೆ ಒಂದು ಮಳೆಗಾಲಕ್ಕೆ (ಒಂದು ವರ‍್ಶಕ್ಕೆ ಅನ್ನುವ ಹಾಗೆ) ಎರಡು ಸಲ ಹೊಸ ಬಟ್ಟೆ ಸಿಗುತ್ತಿತ್ತು. ಅವರು ಬಿಡಿಸುತ್ತಿದ್ದ ಹತ್ತಿಯು ಬಟ್ಟೆಯಾಗಲು ಒಂದು ತಿಂಗಳು ತೆಗೆದುಕೊಳ್ಳುತ್ತಿತ್ತು ಆದರೆ ಅವರಿಗೆ ತಲುಪಲು ಆರು ತಿಂಗಳು ತೆಗೆದುಕೊಳ್ಳುತ್ತಿತ್ತು! ಹತ್ತಿಯ ವಹಿವಾಟು ಹೆಚ್ಚಿದಂತೆ ಆಪ್ರಿಕಾದಿಂದ ಗುಲಾಮರನ್ನೂ ಹೆಚ್ಚಿನ ಸಂಕ್ಯೆಯಲ್ಲಿ ತಂದರು. ಆಪ್ರಿಕಾದ ಗುಲಾಮರನ್ನು ಅಮೆರಿಕೆಗೆ ಆಮದು ಮಾಡಿಕೊಂಡು ಅವರಿಂದ ಬಿಡಿಸಲ್ಪಟ್ಟ ಹತ್ತಿ ಮತ್ತು ಬಟ್ಟೆಗಳನ್ನು ಬೇರೆ ಹೊರನಾಡುಗಳಿಗೆ ರಪ್ತು ಮಾಡುತ್ತಿದ್ದರು. ಹಣದಿಂದ ಮಾರಿಕೊಂಡ ಕೆಲಸಗಾರರು ಹತ್ತಿ ಹೊಲಗಳಲ್ಲಿ ತಮ್ಮ ಬದುಕಿನುದ್ದಕ್ಕೂ ಮಾಲೀಕನ ಬಳಿ ದುಡಿಯುತ್ತಿದ್ದರು. ಕೂಲಿಗೆ ಜನರನ್ನು ತಂದು ಕೆಲಸ ಮಾಡಿಸುವ ಪದ್ದತಿಯೂ ಇತ್ತು ಆದರೆ ಅದು ತುಂಬಾ ತುಟ್ಟಿಯಾದ ವಿದಾನವಾಗಿತ್ತು, ಹೊರನಾಡಿನಿಂದ ಬಂದ ಈ ಕೆಲಸಗಾರರು ತಮ್ಮ ಬದುಕೆಲ್ಲಾ ಕಡಿಮೆ ಕರ‍್ಚಿನಲ್ಲಿ ದುಡಿಯುತ್ತಿದ್ದರು.

ಗಿರಣಿ ತಂದ ಬದಲಾವಣೆ

ಹಿಂದಿನಿಂದ ನಡೆದು ಬಂದ ಹಾಗೆ ಮಂದಿ ಹತ್ತಿ ಹೊಲಕ್ಕೆ ಹೋಗಿ ಅಲ್ಲಿಂದ ಹತ್ತಿಯನ್ನು ಗಿಡಗಳಿಂದ ಬಿಡಿಸಿ ತಂದು ಮನೆ ಅಂಗಳ, ಪಡಸಾಲೆಗಳಲ್ಲಿ ಗುಡ್ಡೆ ಹಾಕಿ ಕೈಗಳಿಂದಲೇ ಹತ್ತಿ ಬೀಜ ಹೆಕ್ಕಿ ತೆಗೆದು, ಬೀಜದಿಂದ ಹತ್ತಿಯನ್ನು ಬೇರೆ ಮಾಡುತ್ತಿದ್ದರು. ಇದನ್ನು ಮಾಡಲು ತುಂಬಾ ಹೊತ್ತು ಬೇಕಾಗುತ್ತಿತ್ತು ಮತ್ತು ಐದಾರು ಮಂದಿ ಸೇರಿ ದುಡಿಯುತ್ತಿದ್ದುದ್ದರಿಂದ ಕರ‍್ಚಿನ ಬಾಬತ್ತಾಗಿತ್ತು. ಅಮೆರಿಕದ ಎಲ್ಲೀ ವಿಟ್ನೀ 1793 ರಲ್ಲಿ ‘ಹತ್ತಿ ಕೈಗಿರಣಿ’ ಕಂಡುಹಿಡಿದ. ನಡೆಸಲು ತುಂಬಾ ಸರಳವಾಗಿತ್ತು ಈ ಕೈಗಿರಣಿ, ಇದಕ್ಕೆ ಮಿಂಚು ಬೇಕಾಗಿರಲಿಲ್ಲ. ಪೆಟ್ಟಿಗೆಯಂತಹ ಈ ಗಿರಣಿಯಲ್ಲಿ ಒಂದು ಕಡೆ ಗಿಡದಿಂದ ಬಿಡಿಸಿ ತಂದ ಹತ್ತಿಯ ಉಂಡೆಗಳನ್ನು ಹಾಕಿ ಕೈಯಿಂದಲೇ ತಿರುಗಿಸಿದರೆ ಸಾಕು ಮತ್ತೊಂದು ಕಡೆಯಿಂದ ಹತ್ತಿಯಿಂದ ಬೀಜ ಬೇರ‍್ಪಟ್ಟು ಹಸನಾದ ಹತ್ತಿ ಹೊರಗೆ ಬಂದು ಬೀಳುತ್ತಿತ್ತು.

ಈ ಹೊಸಮಾಟಕ್ಕೆ (innovation) ಅವನು ಪೇಟೆಂಟ್ ಪಡೆದುಕೊಂಡ. ಈ ‘ಹತ್ತಿ ಕೈಗಿರಣಿ’ ಕಂಡು ಹಿಡಿಯಲು ಕ್ಯಾತರೀನ್ ಗ್ರೀನ್ ಎಂಬ ಹೆಂಗಸೊಬ್ಬಳು ಹಣಕಾಸಿನ ನೆರವು ನೀಡಿದ್ದಳು. ಈ ಕೈಗಿರಣಿ ಬಂದ ಮೇಲೆ ಅಮೆರಿಕೆಯ ತೆಂಕಣ ರಾಜ್ಯಗಳಲ್ಲಿ ಕೆಲಸಗಾರರ ಬೇಡಿಕೆ ಇನ್ನೂ ಹೆಚ್ಚಾಯಿತು! ಈ ಹತ್ತಿ ಕೈಗಿರಣಿ ಕ್ರಾಂತಿಯನ್ನೇ ಉಂಟು ಮಾಡಿತು. ಈ ಕೈಗಿರಣಿಯನ್ನು ಮಾರ‍್ಪಡಿಸಿ ಮಿಂಚಿನಿಂದ ನಡೆಯುವ ಗಾಣಗಿರಣಿಯಾಗಿ (ಮಶೀನು) ಮಾಡಿದ ಮೇಲಂತೂ ಇಡೀ ಜಗತ್ತು ಬದಲಾಯಿತು. ದಿನಗಳಲ್ಲಿ ತಯಾರಾಗುತ್ತಿದ್ದ ಉಡುಪುಗಳು ಈಗ ಸೆಕೆಂಡುಗಳಲ್ಲಿ ತಯಾರಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟು ಪೈಪೋಟಿ ಹೆಚ್ಚಾಯಿತು. ಇಡೀ ಜಗತ್ತು ಹೊಸದೊಂದು ಮಿಂಚಿನ ಗಾಣಗಿರಣಿಗಳ ಲೋಕಕ್ಕೆ ಕಾಲಿಟ್ಟಿತು. ಮೊದಲು ಮೈಮುಚ್ಚುತ್ತಿದ್ದ ಉಡುಪುಗಳು ಈಗ ಮಂದಿಯ ಗುರುತನ್ನು ಹೊರ ಹೊಮ್ಮಿಸುವ ಚಿಹ್ನೆಗಳಾಗಿ ಮಂದಿಯನ್ನು ಕಸ್ಟಮರ್ ಗಳಾಗಿ ಮಾಡಿ ಎಂದಿಗೂ ಸೆಳೆದವು.

ನೇಕಾರರ ಬದುಕು ಬಾರವಾಗಿಸಿದ ಹತ್ತಿ ಗಿರಣಿಗಳು

ಇಂಡಿಯಾದಲ್ಲೂ ಹತ್ತಿಗೆ ಕಹಿಯಾದ ಹಳಮೆಯಿದೆ. ಕೈಯಿಂದ ಹತ್ತಿ ಬಿಡಿಸುವ ಹೊತ್ತಿನ ವರೆಗೂ ಇಂಡಿಯಾದಲ್ಲಿ ಹತ್ತಿಯು ಕೈಮಗ್ಗಗಳಲ್ಲಿ ಬಟ್ಟೆಯಾಗುತ್ತಿತ್ತು. ಬ್ರಿಟಿಶರು ಇಂಡಿಯಾಕ್ಕೆ ಹತ್ತಿ ಗಿರಣಿಗಳನ್ನು ತಂದರು. ಇದರಿಂದ ಇಂಡಿಯಾದ ನೇಕಾರರಿಗೆ ಸಂಕಟವುಂಟಾಯಿತು. ಇಂಡಿಯಾದಲ್ಲಿ ಬೆಳೆದ ಹತ್ತಿಯು ಗಾಣದ ಗಿರಣಿಗಳಿಂದ ಬಿಡಿಸಲ್ಪಟ್ಟು ಇಂಗ್ಲೆಂಡಿನ ಲೀಡ್ಸ್, ಮ್ಯಾಂಚೆಸ್ಟರ‍್‌ ಪಟ್ಟಣಗಳನ್ನು ತಲುಪುತ್ತಿತ್ತು. ಇಂಡಿಯಾದ ಹತ್ತಿ ಬೆಳೆಗಾರರು ಹೆಚ್ಚಿನ ಲಾಬದ ಆಸೆಗಾಗಿ ಬ್ರಿಟನ್ನಿನ ಮರ‍್ಚೆಂಟ್ ಕಂಪನಿಗಳಿಗೆ ಹತ್ತಿಯನ್ನು ಮಾರುತ್ತಿದ್ದರು. ಇದರಿಂದ ನೇಕಾರರಿಗೆ ಹತ್ತಿಯೂ ಸಿಗುತ್ತಿರಲಿಲ್ಲ, ಒಂದು ವೇಳೆ ಸಿಕ್ಕರೂ ತುಟ್ಟಿಯಾಗಿರುತ್ತಿತ್ತು. ಮ್ಯಾಂಚೆಸ್ಟರ‍್‌ ಮತ್ತು ಲೀಡ್ಸ್ ಪಟ್ಟಣಗಳಲ್ಲಿ ಸಂಪೂರ‍್ಣ ಗಾಣಗಳಿಂದ ತಿರುಗುವ ಬಟ್ಟೆ ಕಾರ‍್ಕಾನೆಗಳು ಇದ್ದವು. ಅಲ್ಲಿಂದ ತಯಾರಾದ ಉಡುಪುಗಳು ನೆಟ್ಟಗೆ ಇಂಡಿಯಾದ ಮಾರುಕಟ್ಟೆಗೆ ಬಂದವು. ಇಲ್ಲಿನ ನೇಕಾರರಿಂದ ಮಾಡಲ್ಪಟ್ಟ ಉಡುಪುಗಳು ಕೈಯಿಂದ ಮಾಡಿದ್ದರಿಂದ ತುಟ್ಟಿಯಾಗಿದ್ದವು. ಬ್ರಿಟನ್ ನ ಬಟ್ಟೆ ಕಾರ‍್ಕಾನೆಗಳಲ್ಲಿ ಬಟ್ಟೆಗಳು ಹಿಂಡುತ್ಪಾದನೆ (mass production) ರೀತಿಯಲ್ಲಿ ತಯಾರಾಗಿದ್ದು ಅಗ್ಗವಾಗಿದ್ದವು. ಇದರಿಂದ ಇಂಡಿಯಾದ ನೇಕಾರರಿಗೆ ನಶ್ಟವಾಗಿ ಅವರ ಕಸುಬು ತಪ್ಪಿಹೋಯಿತು. ಮಿಂಚಿನ ಹತ್ತಿ ಗಾಣಗಳು ಮತ್ತು ಹತ್ತಿ ಗಿರಣಿಗಳು ಇಂಡಿಯಾಕ್ಕೆ ಬಂದವು. ಆದರೆ ಈ ಹೊಸಗಾಲಕ್ಕೆ ತೆರೆದುಕೊಳ್ಳದ ನೇಕಾರರು, ಕೈಮಗ್ಗಗಳು, ಬಣ್ಣಹಾಕುವವರು ಬಟ್ಟೆ ಮಾರುಕಟ್ಟೆಯಿಂದ ಹೊರ ಹೋಗಬೇಕಾಯಿತು.

ಹತ್ತಿಯ ಹೊರಮಾರುವಿಕೆ (export) ಮತ್ತು ಕೊಳ್ಳುವಿಕೆಗಳಿಂದಾಗಿ (import) ಸೂರತ್ ಮತ್ತು ಮುಂಬಯಿ ಪಟ್ಟಣಗಳು ಬೆಳೆಯುತ್ತಲೇ ಹೋದವು. ಹತ್ತಿ ಗಿರಣಿಗಳಿಂದಾಗಿ ಸೂರತ್ ಇಂಡಿಯಾದ ಮ್ಯಾಂಚೆಸ್ಟರ‍್‌ ಎಂದು ಕರೆಸಿಕೊಂಡಿತು. ಮುಂಬಯಿಯ ಕಟ್ಟಡಗಳನ್ನು ಕಲ್ಲಿನಿಂದ ಕಟ್ಟಿದ್ದಾರೆ, ಆದರೆ ಅದರ ಹಣಕಾಸಿನ ಅಡಿಪಾಯ ಹತ್ತಿಯಿಂದಾದದ್ದು. ಹತ್ತಿಯ ಕಮಿಶನ್ ಏಜೆಂಟ್ ವಹಿವಾಟಿನಲ್ಲಿ ಮೊದಲು ತೊಡಗಿಸಿಕೊಂಡವರು ಮುಂಬಯಿಯ ಪಾರಸಿಗಳು. ಪಾರಸಿಗಳು ವಾಯಿದಾ ವಹಿವಾಟಿನಲ್ಲಿ (future and forward market) ಎಶ್ಟು ನಿಪುಣರಾಗಿದ್ದರು ಅಂದರೆ ಬ್ರಿಟಿಶರು ತಮ್ಮ ಕಮಿಶನ್ ಏಜೆನ್ಸಿಗಳನ್ನು ನಡೆಸದಾಗಿ ಮುಚ್ಚಿಬಿಟ್ಟರು!

ಒಂದು ಕ್ಲಿಕ್ ನಲ್ಲಿ ಹತ್ತಿಯ ಮಾಡುಗೆಗಳು ನಿಮ್ಮ ಮುಂದೆ!

ಎಲ್ಲೀ ವಿಟ್ನೀಯು ಕಂಡುಹಿಡಿದ ಹತ್ತಿ ಕೈಗಿರಣಿಯಿಂದ ಮೊದಲು ಮಾಡಿಕೊಂಡ ಹತ್ತಿಯ ಹಾದಿ ಈಗ ಮಿಂದಾಣ ಮಾರುಕಟ್ಟೆ ಗಳಾದ ಅಮೆಜಾನ್, ಪ್ಲಿಪಕಾರ‍್ಟ್ ಮುಂತಾದ ಹೊಚ್ಚಹೊಸ ಲೋಕಕ್ಕೆ ಬಂದು ಸೇರಿದೆ. ಟೇಲರ್ ಬಳಿ ಹೋಗಿ ಬಟ್ಟೆ ಅಳತೆ ಕೊಟ್ಟು ಒಂದೆರಡು ದಿನ ಕಾದು ಕೂರುವಶ್ಟು ಹೊತ್ತು ಈಗ ಯಾರ ಬಳಿಯೂ ಇಲ್ಲ ಈಗ ಡಿಸೈನರ್ ಉಡುಪು ಮಾಡಿಕೊಡುವ ಮಿಂದಾಣಗಳೂ ಬಂದಿವೆ. ಹತ್ತಿಯನ್ನು ಹೊಲಗಳಿಂದ ಬಿಡಿಸುವದರಿಂದ ಹಿಡಿದು ನಮ್ಮ ಕೈಗೆ ತಯಾರಾದ ಉಡುಪು ತಂದುಕೊಡುವ ಮಿಂದಾಣಗಳವರೆಗೆ ಎಲ್ಲವನ್ನೂ ಮಶೀನುಗಳೇ  ಮಾಡುತ್ತಿವೆ. ಆನೆ ಗಾತ್ರದ ಮಶೀನುಗಳು ಹತ್ತಿಯನ್ನು ಹೊಲದಲ್ಲಿ ಹೆಕ್ಕುತ್ತವೆ. ಯಂತ್ರಗಳ ಕಲಿಕೆಯಿಂದಾಗಿ (machine learning) ಮಿಂದಾಣಗಳು ನಮಗೆ ಬೇಕಾದ ಒಪ್ಪಿನ ಪ್ರಾಡಕ್ಟ್ ಗಳ ಜಾಹೀರಾತನ್ನು ನಮ್ಮ ಮುಂದೆ ತಂದು ಇಡುತ್ತವೆ. ನಾವು ಒಂದು ಕ್ಲಿಕ್ ಒತ್ತಿದರೆ ಸಾಕು ಶಾಂಪಿಗ್ ಮಾಡಿದಂತೆಯೇ. ಹತ್ತಿಯು ಈಗ ಎಲ್ಲವನ್ನೂ ಎಲ್ಲರನ್ನೂ ತನ್ನ ದಾರಗಳಿಂದ ಸುತ್ತಿದೆ!

(ಮಾಹಿತಿ ಮತ್ತು ಚಿತ್ರ ಸಲೆ: wikipedia.org)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.