“ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ”

– ಮಾರಿಸನ್ ಮನೋಹರ್.

cats, kitten, ಬೆಕ್ಕು

ಟರ‍್ಕಿ, ಸೌದಿ‌ ಅರೇಬಿಯಾದಲ್ಲಿ ಬೆಕ್ಕುಗಳನ್ನು ಮುದ್ದುಮಾಡಿದಶ್ಟೂ ನಾಯಿಗಳನ್ನು ಹಗೆ ಮಾಡುತ್ತಾರೆ! ನಾಯಿಗಳು ನಿಯತ್ತಾಗಿರುತ್ತವೆ. ತನ್ನ ಮಾಲೀಕನ ಜೊತೆಗೇ ಇದ್ದು ಅವನ ಮನಸ್ಸನ್ನು ಕುಶಿಗೊಳಿಸಲು ಏನೆಲ್ಲಾ ಕಸರತ್ತು ಮಾಡುತ್ತವೆ. ಆದರೆ ಬೆಕ್ಕುಗಳು ಹಾಗಲ್ಲ, ಅವುಗಳಿಗೆ ಸಾಕುವವರೇ ಕುಶಿ ನೀಡಬೇಕು. ಬೆಕ್ಕುಗಳು ಸಾಕುವವರ ಜೊತೆ ಹೆಚ್ಚಿನ ಒಡನಾಟ ಇಟ್ಟುಕೊಳ್ಳುವುದಿಲ್ಲ, ದಿನವೆಲ್ಲಾ ಸೋಮಾರಿಯಾಗಿ ನಿದ್ದೆ ಹೊಡೆಯುತ್ತಾ ಬಿದ್ದಿರುತ್ತವೆ. ಬೆಕ್ಕುಗಳು ಬಹುತೇಕ ಎಲ್ಲ ದೇಶಗಳಲ್ಲಿಯೂ ಕಂಡುಬರುತ್ತವೆ. ಬೆಕ್ಕುಗಳಿಂದ ತುಂಬಿರುವ ಜಪಾನಿನ ಆವೋಶಿಮಾ ನಡುಗಡ್ಡೆ ‘ಬೆಕ್ಕುಗಳ ನಡುಗಡ್ಡೆ‘ (Cat Island) ಎಂದೇ ಕರೆಸಿಕೊಳ್ಳುತ್ತದೆ. ಮನೆಮನೆ ತಿರುಗುವ ಸಾಮಾನ್ಯ ಬೆಕ್ಕುಗಳಿಂದ ಹಿಡಿದು ಸಾವಿರಾರು ಡಾಲರ್ ಬೆಲೆಯಿರುವ ಬೆಕ್ಕುಗಳೂ ಇವೆ!

ಬೆಕ್ಕುಗಳ ರಂಗುರಂಗಿನ ತಳಿಗಳು

ಬೆಕ್ಕುಗಳು ಪ್ರದಾನವಾಗಿ ಬಿಳಿ, ಕಪ್ಪು, ಕಂದು, ಬೂದು, ಬೂರು (ಶುಂಟಿ ಬಣ್ಣ), ನೀಲಿ ಬಣ್ಣಗಳಲ್ಲಿ ಕಂಡುಬರುತ್ತವೆ. ಎರಡು ಮೂರು ಬಣ್ಣಗಳು ಸೇರಿರುವ, ಪಟ್ಟೆ-ಪಟ್ಟೆ, ತ್ಯಾಪೆ ಇರುವ ಬೆಕ್ಕುಗಳೂ ಹೇರಳವಾಗಿ ಕಾಣಸಿಗುತ್ತವೆ. ಬೆಕ್ಕುಗಳಲ್ಲಿ ಹಲವು ತಳಿಗಳಿವೆ. ಬಂಗಾಳ ಹುಲಿಯಂತೆ  ಪಟ್ಟೆಗಳು ಇರುವ ‘ಬೆಂಗಾಲ್’ ಬೆಕ್ಕು, ಮೆತ್ತನೆಯ ಬಿಳಿ ತುಪ್ಪಳವುಳ್ಳ ‘ಪರ‍್ಶಿಯನ್’ ತಳಿ ಬೆಕ್ಕು, ಪುಟ್ಟ ಪುಟಾಣಿ ‘ಮಂಚಕಿನ್’, ಮೈಯೆಲ್ಲ ಮೋಡದ ಸಾಲುಗಳ ಹಾಗಿರುವ ‘ಅಮೆರಿಕನ್ ಶಾರ‍್ಟ್ ಹೇರ‍್’, ಮೂತಿಸುಟ್ಟ ಪಗ್ ನ ಹಾಗೆ ಇರುವ ‘ಸಯಾಮೀಸ್’, ಕೇವಲ ತೊಗಲು ಕಾಣುವ ‘ಸ್ಪಿಂಕ್ಸ್’, ನೀಲಿ ಬಣ್ಣದ ‘ರಶಿಯನ್ ಬ್ಲೂ’, ಚಿಕ್ಕಬಾಲದ ‘ಬಾಬ್ ಟೇಲ್’, ಇಂಡಿಯಾ ಬೆಕ್ಕುಗಳ ಹಾಗೇ ಇರುವ ‘ಈಜಿಪ್ಟ್ ಮಾವ್ ‘, ಚಿರತೆಯಂತೆ ಚುಕ್ಕೆಗಳುಳ್ಳ ‘ಸವಾನ್ನಾ’ ಹಾಗೂ ಮುದುಕರಂತಹ ಮೂತಿಯುಳ್ಳ ‘ಡೆವಾನ್ ರೆಕ್ಸ್’ – ಹೀಗೇ ಇನ್ನೂ ತುಂಬಾ (ಅಡ್ಡ)ತಳಿಗಳೂ ಇವೆ.

ಈಜಿಪ್ಟಿನಲ್ಲಿ ಬೆಕ್ಕುಗಳ ‘ಮಮ್ಮಿಗಳು’!

ಬಸ್ತೇಟ್, Bastet, ಬೆಕ್ಕು, cat

ಬಸ್ತೇಟ್

ಹಿಂದೆ ಈಜಿಪ್ತಿನಲ್ಲಿ ಬೆಕ್ಕುಗಳ ಪೂಜೆ ನಡೆಯುತ್ತಿತ್ತು. ಬೆಕ್ಕಿನ ಮೂತಿಯುಳ್ಳ ದೈವ ‘ಬಸ್ತೇಟ್’ ಪಲವತ್ತತೆಯ ಸಂಕೇತವೆಂದು ನಂಬಲಾಗಿತ್ತು. ಬೆಕ್ಕುಗಳು ಸತ್ತ ಮೇಲೆ ಅವುಗಳನ್ನೂ ಮಮ್ಮಿಗಳನ್ನಾಗಿ ಮಾಡಿ, ಅರಸರ ಪಿರಮಿಡ್ಡುಗಳ ಒಳಕೋಣೆಗಳ ಸಮಾದಿಗಳಲ್ಲಿ ಇಡಲಾಗುತ್ತಿತ್ತು. ಇಂತಹ ಮಮ್ಮಿಗಳನ್ನು ಹಳಮೆಯರಿಗರು(historians) ಅರಕೆ ನಡೆಸುವಾಗ ಹೊರತೆಗೆದಿದ್ದಾರೆ. ಈಜಿಪ್ಶಿಯನ್ನರು ಬೆಕ್ಕುಗಳು ತಮ್ಮ ದೈವ ‘ರಾ’ ನನ್ನು ಪ್ರತಿನಿದಿಸುತ್ತವೆ ಎಂದು ನಂಬಿದ್ದರು. ಅವರ ನಂಬಿಕೆ ಪ್ರಕಾರ ಹಾವುಗಳು ಪರೋಹನ ಹಗೆಗಳು; ಅವುಗಳನ್ನು ಕೊಂದು ತಿನ್ನುವ ಬೆಕ್ಕುಗಳು ಅವರ ರಕ್ಶಣೆ ಮಾಡುವ ದೈವಗಳು. ಕೆಟ್ಟ ಶಕ್ತಿಗಳಿಂದ ಜಗತ್ತನ್ನು ಬೆಕ್ಕುಗಳೇ ಕಾಪಾಡುತ್ತವೆ ಎಂಬುದು ಅವರ ನಂಬಿಕೆಯಾಗಿತ್ತು. ಅದರಿಂದಾಗಿಯೇ ಕೊರಳಲ್ಲಿ ಬೆಕ್ಕಿನ ಕಣ್ಣನ್ನು ಹೋಲುವ ಪದಕ ಹಾಕಿಕೊಳ್ಳುವ ನಡೆ ಶುರುವಾಗಿದ್ದು.

ಪ್ರಾಣ ಕಾಪಾಡಿದ ಬೆಕ್ಕು: ಚೀನಾ-ಜಪಾನಿನ ಕತೆ

ಚೀನಾ, ಜಪಾನಿನಲ್ಲಿ ಬೆಕ್ಕಿನ ಕುರಿತು ಅಚ್ಚರಿಯೆನಿಸುವ ಕತೆಗಳಿವೆ. ಒಂದು ಕತೆಯಂತೆ, ಒಬ್ಬ ಅಕ್ಕಸಾಲಿಗ ಜೋರಾಗಿ ಸುರಿಯುತ್ತಿದ್ದ ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಕೆಳಗೆ ನಿಂತಿದ್ದ. ಆ ಮರದ ಎದುರುಗಡೆ ಒಂದು ಬೌದ್ದ ಗುಡಿ ಇತ್ತು. ಗುಡಿಯ ಪಡಸಾಲೆಯಲ್ಲಿ ತನ್ನ ಮೈ ನೆಕ್ಕಿಕೊಳ್ಳುತ್ತಾ ಇದ್ದ ಬೆಕ್ಕು, ಈ ಅಕ್ಕಸಾಲಿಗನನ್ನು ನೋಡಿತು. ಬೆಕ್ಕು ತನ್ನ ಬಲಗೈಯನ್ನು ಎತ್ತಿ ಅವನನ್ನು ಗುಡಿಯ ಒಳಗೆ ಬರಲು ಸನ್ನೆ ಮಾಡಿತು. ಬೆಕ್ಕು ಮಾಡಿದ ಸನ್ನೆಯಿಂದ ಅಚ್ಚರಿಗೊಂಡ ಅಕ್ಕಸಾಲಿಗ, ಮರದ ಕೆಳಗಿನಿಂದ ಹೊರಟು ಬೆಕ್ಕು ಕುಳಿತಿದ್ದ ಗುಡಿಯ ಪಡಸಾಲೆಗೆ ಬಂದು ಸೇರಿದ. ಅವನು ಅತ್ತ ಹೊಗುತ್ತಲೇ ಆತ ನಿಂತಿದ್ದ ಮರ ಬಯಂಕರ ಸಿಡಿಲು ಬಡಿದು ಸುಟ್ಟುಹೋಯಿತು. ಅಕ್ಕಸಾಲಿಗ ತನ್ನ ಜೀವ ಕಾಪಾಡಿದ ಬೆಕ್ಕಿನ ಕೈ ಎತ್ತಿದ ರೂಪದ ಒಂದು ಬಂಗಾರದ ಬೊಂಬೆ ಮಾಡಿಸಿ ಗುಡಿಗೆ ಕೊಟ್ಟ. ಈಗಲೂ ಕೂಡ ಕೈ ಎತ್ತಿದ ಬೆಕ್ಕಿನ ಬೊಂಬೆಗಳು ಹಾಗೂ ಚಿತ್ರಗಳು ಚೀನಾ-ಜಪಾನಿಯರ ಅಂಗಡಿಗಳಲ್ಲಿ ಕಾಣುತ್ತವೆ.

ಕಿವಿ-ಮೂಗು ಬಲು ಚೂಟಿ; ಆದರೆ ಬಣ್ಣಗಳ ವಿಚಾರದಲ್ಲಿ ಮಂದ

ಬೆಕ್ಕುಗಳು ಹೆಚ್ಚಾಗಿ ಜಾಗದ ಜೊತೆ ತಮ್ಮನ್ನು ಗುರುತಿಸಿಕೊಳ್ಳುತ್ತವೆ. ತಮ್ಮ ಏರಿಯಾಗಳಿಗೆ ಬೇರೆ ಬೆಕ್ಕುಗಳನ್ನು ಬರಗೊಡುವುದೇ ಇಲ್ಲ. ಇರುಳೆಲ್ಲಾ ಗರ್ ಗರ್ ಎಂದು ಸದ್ದು ಮಾಡುತ್ತಾ, ಕಚ್ಚಾಡುತ್ತಾ ಆ ಬೇರೆ ಬೆಕ್ಕುಗಳನ್ನು ಓಡಿಸಿಬಿಡುತ್ತವೆ. ಬೆಕ್ಕುಗಳು ತುಂಬಾ ಮೆಲುವಾದ ಹಾಗೂ ಹೆಚ್ಚಿನ ಸಲದೆಣಿಕೆಯ(frequency) ಸದ್ದುಗಳನ್ನು ಚೆನ್ನಾಗಿ ಕೇಳಿಸಿಕೊಳ್ಳುತ್ತವೆ. ಸೂಕ್ಶ್ಮ ವಾಸನೆಗಳನ್ನು  ಕಂಡು ಹಿಡಿಯುವಲ್ಲಿ ಬೆಕ್ಕುಗಳು ತುಂಬಾ ಚೂಟಿ. ಆದರೆ ಬಣ್ಣಗಳನ್ನು ಗುರುತಿಸುವಲ್ಲಿ ಇವು ತುಂಬಾ ಮಂದ. ಸಾಮಾನ್ಯವಾಗಿ ಹೆಣ್ಣು ಬೆಕ್ಕು ನೋಡುವುದಕ್ಕೆ ಸಪೂರವಾಗಿ ಚಿಕ್ಕದಾಗಿರುತ್ತದೆ. ಗಂಡು ಬೆಕ್ಕು ದಪ್ಪಗೆ ಗಡದ್ದಾಗಿರುತ್ತದೆ. ಹೆಣ್ಣು ಬೆಕ್ಕಿನ ತಲೆ ಚೂಪಾಗಿ ಚಿಕ್ಕದಾಗಿದ್ದರೆ, ಗಂಡು ಬೆಕ್ಕಿನದ್ದು ಗುಂಡಗೆ, ದಪ್ಪವಾಗಿರುತ್ತದೆ. ಹೆಣ್ಣು ಬೆಕ್ಕು ಒಂದು ಬಾರಿಗೆ ಒಂದರಿಂದ ನಾಲ್ಕು ಮರಿಗಳನ್ನು ಹಾಕುತ್ತದೆ. ಬೆಕ್ಕುಗಳು ಹಸಿವಿಗೆ ಕಟ್ಟುಬಿದ್ದು ರೊಟ್ಟಿ, ಹಾಲು, ಅನ್ನ ತಿನ್ನುತ್ತವೆಯೇ ಹೊರತು, ಉಳಿದ ಹೊತ್ತಿನಲ್ಲಿ ಅವು ಪಕ್ಕಾ ಮಾಂಸಾಹಾರಿಗಳು!

(ಚಿತ್ರ ಸೆಲೆ: pexels.com, wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: