ಮಾತು ಚುಚ್ಚದಿರಲಿ – ಒಂದು ಕಿವಿಮಾತು

– ವೆಂಕಟೇಶ ಚಾಗಿ.

Talkning, ಮಾತು

ಮಾತೇ ಮುತ್ತು, ಮಾತೇ ಮ್ರುತ್ಯುಎಂಬ ಮಾತು ಅದೆಶ್ಟು ಸತ್ಯ ಎಂದರೆ ಮಾತಿನಿಂದಲೇ ಹಲವಾರು ಕಾರ‍್ಯಗಳು ನಡೆಯುತ್ತವೆ. ಮಾತಿನ ಮಹತ್ವ ಬಲ್ಲ ಕೆಲವರು ಮಾತಿನಿಂದ ಇಡೀ ಜಗತ್ತನ್ನೇ ಗೆಲ್ಲುತ್ತಾರೆ. ಮತ್ತೆ ಕೆಲವರು ಮಾತಿನಿಂದಲೇ ತೊಂದರೆಗೀಡಾಗುತ್ತಾರೆ. ಎಂತವರ ಮನಸ್ಸನ್ನೂ ತನ್ನತ್ತ ಸೆಳೆದು ಯಾವುದೇ ಕೆಲಸವನ್ನು ಅತೀ ಸರಳವಾಗಿ ಅಂದರೆ ಬೆಣ್ಣೆಯಿಂದ ಕೂದಲು ತೆಗೆದಂತೆ ಮಾಡಿಬಿಡುತ್ತಿದ್ದ ನನ್ನ ಕಾಲೇಜಿನ ಗೆಳೆಯ ಗಣೇಶ. ಕೆಲವೊಂದು ಕೆಲಸಗಳಿಗೆ ಅವನನ್ನು ನಾವು ಮುಂದಾಳುವಾಗಿ ಮಾಡುತ್ತಿದ್ದೆವು. ಈಗಲೂ ನನಗೆ ನೆನಪಿದೆ , ಯಾವುದೇ ಜಗಳವಾದಾಗ, ವಾಗ್ವಾದ ನಡೆಯುತ್ತಿದ್ದರೆ ತನ್ನ ಮಾತಿನ ಚತುರತೆಯಿಂದ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿ ವಾತಾವರಣವನ್ನು ತಿಳಿಗೊಳಿಸುತ್ತಿದ್ದ. ಅವನ ಸ್ನೇಹಿತರು ಏನಾದರೂ ಕರೀದಿ ಮಾಡುವುದಿದ್ದಲ್ಲಿ ಅವನನ್ನು ತಪ್ಪದೇ ಕರೆದುಕೊಂಡು ಹೋಗುತ್ತಿದ್ದರು. ವ್ಯಾಪಾರದಲ್ಲಿ ವ್ಯವಹಾರದ   ಚಾಣಾಕ್ಶ ಗುಣಗಳು ಅವನಲ್ಲಿ ಅಡಗಿದ್ದವು. ಅವನು ಎಲ್ಲರಿಗೂ ಇಶ್ಟವಾಗಿದ್ದು ಅವನ ಮಾತಿನಿಂದಲೇ.

ಗಣೇಶ ಕೇವಲ ಒಂದು ಉದಾಹರಣೆಯಾಗಿರಬಹುದು. ಆದರೆ ಎಲ್ಲರಿಗೂ ಮಾತಿನ ಚತುರತೆ ಇರಲ್ಲ. ಕೆಲವರ ಮಾತುಗಳು ಸಾಮಾನ್ಯವಾಗಿದ್ದರೂ, ಸರಳವಾಗಿದ್ದರೂ ಜಗಳಕ್ಕೆ ಅತವಾ ಗೊಂದಲಗಳಿಗೆ ಕಾರಣವಾಗುವುದು. ಕೆಲವು ಗಣ್ಯ ವ್ಯಕ್ತಿಗಳ ಮಾತಿನಿಂದ ಎಂತಹ ಗಟನೆಗಳು ನಡೆಯುತ್ತಿವೆ ಎಂಬುದು ನಮಗೆ ಗೊತ್ತು. ಆದ್ದರಿಂದ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂಬುದಂತೂ ಸತ್ಯ.

ಆತ್ಮೀಯತೆಯಿಂದ ನಾವು ಆಡುವ ಮಾತುಗಳು ಕೆಲವರಲ್ಲಿ ನಂಬಿಕೆ, ಬರವಸೆ, ಆಸಕ್ತಿಯನ್ನು ಹುಟ್ಟಿಸಬಹುದು. ಮಾತನ್ನು ಒಂದು ಚಾಕುವಿನಂತೆಯೂ ಬಳಸಬಹುದು. ಮಾತಿನ ಮೂಲಕ ಹಿಂಸೆಯನ್ನು ನೀಡುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಜರುಗುತ್ತವೆ. ಮಾತು ಆರೋಗ್ಯಯುತವಾಗಿರಬೇಕು ಆದರೆ ಮಾತು ಎಂದಿಗೂ ಇನ್ನೊಬ್ಬರ ಮನಸ್ಸನ್ನು ನೋಯಿಸದಿರುವಂತೆ ನೋಡಿಕೊಳ್ಳಬೇಕು. ಕೌಟುಂಬಿಕದಲ್ಲಿ ಸ್ನೇಹದಲ್ಲಿ, ಪ್ರೀತಿಯಲ್ಲಿ, ಹಲವಾರು ಸಮಯದಲ್ಲಿ ಕೆಲವೊಮ್ಮೆ ಮಾತುಗಳನ್ನು ಗಂಬೀರವಾಗಿ ತೆಗೆದುಕೊಳ್ಳುತ್ತಾರೆ ಎಂಬ ಯೋಚನೆಯನ್ನು ನಾವು ಮಾಡುವುದಿಲ್ಲ. ಚುಚ್ಚುಮಾತು ಕೆಲವೊಮ್ಮೆ ಜೀವವನ್ನು ತೆಗೆದುಕೊಂಡ ಅನೇಕ ಉದಾಹರಣೆಗಳನ್ನು ನಾವು ನಮ್ಮ ಜೀವನದಲ್ಲಿ, ಕತೆಗಳಲ್ಲಿ, ಇತಿಹಾಸದಲ್ಲಿ ಕಂಡಿದ್ದೇವೆ. ಚುಚ್ಚು ಮಾತು ಸಂಬಂದದಲ್ಲಿ ಒಡಕು ಮೂಡಲು ಅತವಾ ಸಂಬಂದ ಕಡಿದುಕೊಳ್ಳಲು ಕಾರಣವಾಗಬಹುದು. ಆದರೆ ಒಂದು ಮಾತನ್ನು ನೆನಪಿಟ್ಟುಕೊಳ್ಳಲೇಬೇಕು. ಆಡಿದ ಮಾತು ಒಡೆದ ಮುತ್ತು ಇದ್ದ ಹಾಗೆ. ಮಾತು ಆಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ನಮ್ಮ ಮಾತಿನ ಮೇಲೆ ಹತೋಟಿ ಇಟ್ಟುಕೊಳ್ಳುವುದು ಅತೀ ಮುಕ್ಯ. ನಮ್ಮ ಮಾತು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಬಹುಮುಕ್ಯವಾಗಿ ನಮ್ಮ ಮಾತು ಮತ್ತೊಬ್ಬರನ್ನು ಚುಚ್ಚದಿರಲಿ. ಮಾತೇ ಮಾಣಿಕ್ಯ ಅಲ್ಲವೇ!?

(ಚಿತ್ರ ಸೆಲೆ: needpix.com) 

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Prema Yeshavanth says:

    ನನ್ನಿ ವೆಂಕತೇಶ ಚಾಗಿಯವರೇ,
    ಮಾತಶ್ಟೆ ಅಲ್ಲ, ಕೆಲವರು ತಮ್ಮ ನಡವಳಿಕೆಯಿಂದಲೂ ಬೇರೆಯವರ ಮನಸಿಗೆ ನೊವನ್ನುಂಟುಮಾಡುತ್ತಾರೆ. ಆದ್ದರಿಂದ ನಾವು ಬೇರೆಯವ್ರನ್ನು ನಡಿಸಿಕೊಳ್ಳುವ ರೀತಿಯೂ ಮುಕ್ಯವಾಗುತ್ತದೆ ಎಂಬುದು ನನ್ನ ಅನಿಸಿಕೆ.

ಅನಿಸಿಕೆ ಬರೆಯಿರಿ: