“ಸರ, ಚಿಲ್ಲರ ಇಲ್ರಿ”
– ವೆಂಕಟೇಶ ಚಾಗಿ.
ದೀಪಾವಳಿ ಹಬ್ಬ ಬರ‍್ತಿದ್ದಂಗ ಅಕ್ಕ ಪೋನ್ ಮಾಡಿ ‘ನೀ, ಈ ಸಾರಿ ಬರಾಕಬೇಕು, ಅಪ್ಪಾಗ ಹೇಳ್ತೀನಿ. ತಪ್ಪಿಸಬ್ಯಾಡ . ಪ್ರತಿಸಾರಿ ದೀಪಾವಳಿ ಹಬ್ಬಕ್ಕ ಹುಬ್ಬಳ್ಳಿಗೆ ಬಾ ಅಂದ್ರ ಅದೂ ಇದೂ ಅಂತ ಹೇಳಿ ತಪ್ಪಿಸ್ಕೋತಿ. ಈ ಸಲ ಮಿಸ್ ತಪ್ಸಿದ್ರ ನಾ ಸಂಕ್ರಾಂತಿಗೆ ನಿಮ್ಮ ಊರಿಗೆ ಬರೋದಿಲ್ಲ ನೋಡು ಮತ್ತ” ಅಂತ ಅವಾಜ್ ಹಾಕಿದ್ಲು. ‘ನನಗೂ ಈ ದೀಪಾವಳಿಗೆ ದಾರವಾಡಕ ಹೋಗ್ಬೇಕು ಅಂತ ಆಸೆ ಐತಿ. ಆದ್ರ ಏನಾದ್ರೂ ಒಂದು ನೆಪದಾಗ ಹೋಗೋದು ಮಿಸ್ ಆಗ್ತಿತ್ತು. ಈ ಸಾರಿ ಏನಾದ್ರೂ ಸರಿ ಅಪ್ಪಗ ಹೇಳಿ ಹೋಗಬೇಕು’ ಅಂತ ನಿರ‍್ದಾರ ಮಾಡಿದ್ದೆ.
ದೀಪಾವಳಿಗೆ ಎರಡು ದಿನ ಬಾಕಿ ಇದ್ದಾಗ ಅಪ್ಪ ಕೈಯಾಗ ಐದು ನೂರು ರೂಪಾಯಿ ಕೊಟ್ಟರು. “ಹುಬ್ಬಳ್ಳಿ ಬಸ್ಸು ಹತ್ತು, ಆಮೇಲೆ ದಾರವಾಡ ಬಸ್ ಹಿಡಿದು ಅಕ್ಕನ ಮನೀಗೆ ಹೋಗು . ಬಸ್ ಸ್ಟ್ಯಾಂಡ್ ಗೆ ಹೋದ್ಮೇಲೆ ಅಕ್ಕಾಗ ಪೋನ್ ಮಾಡು, ನಿನ್ ಮಾಮಾ ಬಂದು ಕರ‍್ಕೊಂಡು ಹೋಗ್ತಾನ. ಇಲ್ಲಾಂದ್ರ ಆಟೋ ಹಿಡ್ಕೊಂಡು ಮನೀಗೆ ಹೋಗು” ಅಂತಾ ಹೇಳಿ ಕಳಿಸಿದ್ರು.
ರಾತ್ರಿ ಸರಿಯಾಗಿ ಪೋಣೆ ಹನ್ನೊಂದು ಆಗಿತ್ತು. ಬಸ್ ನಿಲ್ದಾಣದಲ್ಲಿ ಹುಬ್ಬಳ್ಳಿ ಬಸ್ ನಿಂತಿತ್ತು. ಬಸ್ಸು ಬೇಗ ಸಿಕ್ತಪ್ಪಾ ಅಂತ ಕುಶಿ ಆಗಿ ಬಸ್ ಹತ್ತಿದೆ. ಟಿಕೆಟ್ ಗೆ ಅಂತ ಕಂಡಕ್ಟರ್ ಗೆ 500 ರೂಪಾಯಿ ನೋಟು ಕೊಟ್ಟೆ. ಕಂಡಕ್ಟರ್ ಸಾಹೇಬ್ರು “ಚಿಲ್ರೆ ಕೊಡಪ್ಪಾ ಗಟ್ಟಿ ನೋಟು ಕೊಟ್ರ ಚಿಲ್ಲರೆ ನಾ ಎಲ್ಲಿಂದ ತರ‍್ಲಿ?” ಅಂತ ಅಂದ್ರು. ಇದೇನ್ ಪಜೀತಿ ಬಂತು ಅಂದ್ಕೋತ “ಸರ, ನನ್ನ ಅಂತೇಲೆ(ಹತ್ರ) ಚಿಲ್ರೆ ಇಲ್ರಿ. ನಮ್ಮಪ್ಪ 500 ರೂಪಾಯಿ ಗಟ್ಟಿ ನೋಟು ಕೊಟ್ಟಾರ, ಅದನ್ನ ನಾ ನಿಮಗ ಕೊಟ್ಟೇನಿ” ಅಂದೆ. “ಚಿಲ್ರ ತಗೋಂಡ ಬರ‍್ಬೇಕಪ್ಪ . ಎಲ್ರೀಗೂ ನಾನೆಲ್ಲಿಂದ ಚಿಲ್ರ ತರ‍್ಲಿ…? ಇಳಿವಾಗ ಉಳಿದಿದ್ದು ರೊಕ್ಕ ತೊಗೊ” ಅಂತ ಕಂಡಕ್ಟರ್ ಅಂದ್ರು. ಟಿಕೆಟ್ ಸಿಕ್ತಲ್ಲ ಅಂತ ಟಿಕೆಟ್ ಕಿಸೆಗೆ ಇಳಿಸಿ ಹಂಗ ನಿದ್ದಿ ಮಾಡಿದೆ.
ನಸಿಕ್ಲೆ ಚುಮುಚುಮು ಬೆಳಕು ಹರಿತಿದ್ದಂಗ, ಕಂಡಕ್ಟರ್ “ಹುಬ್ಬಳ್ಳಿ ಮಂದಿ ಇಳಿರ‍್ರಿ” ಅಂದ್ರು. ನನಗೂ ದಾರವಾಡ ಬಸ್ಸು ಹತ್ಬೇಕು ಅನ್ನೋ ತವಕ. ನಾನು ಬಸ್ಸು ಇಳಿದವ್ನ ದಾರವಾಡ ಬಸ್ಸು ಹುಡುಕಾಕ ಹೋದೆ. ದಾರವಾಡ ಬಸ್ಸು ಬಾಳ ರಶ್ಶು. ನನ್ನ ಮಗ್ಲ ನಿಂತ್ಕೊಂಡಿದ್ದ ಅಜ್ಜಿ “ಏ ತಮ್ಮಾ, ಯಾಕ ಅಶ್ಟು ಅವಸರ ಮಾಡ್ತಿ? ಈ ಬಸ್ಸು ಇಲ್ಲಾಂದ್ರ ಇನ್ನೊಂದು ಸಿಗ್ತದ” ಅಂತ ಹೇಳ್ತು. ಅಜ್ಜಿ ಮಾತಿಗೆ ‘ಹೂಂ’ ಅಂದು ಸುಮ್ನ ನಿಂತೆ. ಕಾಲಿನ ಹತ್ರ ಯಾವ್ದ ಟಿಕೆಟ್ ಬಿದ್ದುದ ನೋಡಿ, ನನ್ನ ಹುಬ್ಬಳ್ಳಿ ಬಸ್ ಟಿಕೆಟ್ ನೆನಪಾತು. “ಅಯ್ಯ, ಚಿಲ್ರ ಇಸ್ಗೋಳೋದ ಮರ‍್ತನಲ್ಲಾ” ಅಂತ ನೆನಪಾಗ್ತಿದ್ದಂಗ ಹುಬ್ಬಳ್ಳಿ ಬಸ್ ಹುಡುಕೋಕ ಶುರು ಮಾಡಿದೆ. ‘ಅಲಾ ಇವ್ನ ಇಲ್ಲೇ ಇತ್ತಲ್ಲೋ ಮಾರಾಯಾ. ಎಲ್ಲೋತೋ ಬಸ್ಸು…’ ಅಂತ ಮನಸನ್ಯಾಗ ಅಂದ್ಕೋಂಡು ಎಲ್ಲಾ ಕಡಿಗೆ ಹುಡುಕಿದ್ರೂ ಬಸ್ಸು ಕಾಣ್ಲಿಲ್ಲ. ಕಿಸೆದಾಗ ಹತ್ತು ಪೈಸೆನೂ ಇಲ್ಲ. ದಾರವಾಡಕ ಹೆಂಗ ಹೋಗಬೇಕಪಾ ಅನ್ನೋದ ಚಿಂತೆ ಆತು. ಮಗ್ಲ ನಿಂತ್ಕೊಂಡಿದ್ದ ಯಜಮಾನ ಮನುಶ್ಯ, “ಯಾಕೋ ತಮ್ಮಾ, ಇಶ್ಟೊಂದು ಯಾಕ ಚಡಪಡಿಸಾಕ ಹತ್ತಿ. ಸಪ್ ಮಾರಿ ಹಾಕ್ಕೊಂಡಿಯಲ್ಲ ಎಲ್ಲಿಗೆ ಹೊಂಟಿ?” ಅಂದಾಗ “ಹಂಗೇನಿಲ್ರಿ ಯಜಮಾನ್ರ. ಕಂಡಕ್ಟರ ಚಿಲ್ರ ಕೊಟ್ಟಿಲ್ರಿ, ನಂಗೂ ತೊಗೊಳ್ಳಾಕ ನೆನಪಾಗ್ಲಿಲ್ರಿ. ಈಗ ದಾರವಾಡಕ್ಕ ಹೋಗ್ಬೇಕ್ರಿ. ಕಂಡಕ್ಟರ್ ಸಿಗಾವಲ್ರಿ “ಅಂತ ಅಂದೆ. “ತಮ್ಮಾ, ಕಂಡಕ್ಟರ್ ಹತ್ರ ಚಿಲ್ರೆ ನೆಪ್(ನೆನಪ)ಮಾಡಿ ಇಸ್ಗೋಬೇಕಪಾ. ಹಿಂಗ ಬಾಳ ಜನಾ ಮರ‍್ತ ಬಿಡ್ತಾರಪ್ಪ ಇಸ್ಗೋಳೋದು. ಕಂಡಕ್ಟರ್ ಗಳೂ ನೆನಪುಮಾಡಿ ಕೊಡೊದಿಲ್ಲ” ಅಂತ ಗೊಣಗಿದರು. ಏನ್ ಮಾಡೋದು ಅಂತ ಹ್ಯಾಪ್ ಮಾರಿ ಮಾಡ್ಕೊಂಡು ಕಂಡಕ್ಟರ್ ಗೆ ಬೈಕೋತ ಕುಂತೆ. ಯಾರೂ ಗೊತ್ತಿಲ್ದ ಊರಾಗ ಯಾರ ಹತ್ರ ರೊಕ್ಕ ಕೇಳೋದು? ಹಿಂಗ ಚಿಂತಿ ಶುರು ಆಯ್ತು. ಯಾರ ಅಂತೇಲಾದ್ರೂ ಪೋನ್ ಇಸ್ಗೊಂಡು ಪೋನ್ ಮಾಡೂಣು ಅಂದ್ರೂ ಅಕ್ಕನ ನಂಬರ್ ನೆನಪಿಲ್ಲ. ದೇವ್ರ ನೀನ ನನ್ನ ಕಾಪಾಡ್ಬೇಕಪ್ಪಾ ಅಂತಿದ್ದಂಗ ಕಣ್ಣಾಗ ನಿದಾನಕ ಕಣ್ಣೀರು ಬರಾಕ ಶುರುವಾತು.
“ಲೇ ತಮ್ಮಾ, ಎಲ್ಲೆಲ್ಲೊ ನಿನ್ನ ಹುಡ್ಕೋದು …” ಅಂತ ಹಿಂದಿಂದ ಯಾರೋ ಹಿಂಗ ಅನ್ಕೋತ ಬರೂದು ಕೇಳಿಸ್ತು. ಈ ಊರಾಗ ನಂಗ್ಯಾರು ಕರಿತಾರ? ಅಂತ ಸುಮ್ನಾದೆ. ‘ಲೇ ತಮ್ಮಾ’ ಅನ್ನೋದು ಮತ್ತ ಮತ್ತ ಕೇಳಿದಾಗ, ಹಿಂದ ತಿರುಗಿ ನೋಡಿದ್ರ ಅದೇ ಹುಬ್ಬಳ್ಳಿ ಬಸ್ಸಿನ ಕಂಡಕ್ಟರ್. “ಸರ, ನೀವೇನ್ರಿ, ಹೇಳ್ರಿ ಸರ” ಅಂತ ಕುಶಿಯಿಂದ ಮುಕ ಅರಳ್ತು. ದೇವ್ರು ಅದಾನಪಾ ಅಂತ ಅನಿಸ್ತು. “ಲೇ ತಮ್ಮ, ನೆನಪಿಲೆ ಚಿಲ್ರ ಇಸ್ಗೊಳಾಕ ಆಗಲ್ಲೇನ ನಿನಗ. ಚಿಲ್ಲರ ಕೊಡ್ಬೇಕು ಅನ್ನದ್ರಾಗ ಓಡಿ ಹೋಗಿಪಾ. ತಗೋ ಚಿಲ್ರ” ಅಂತ ಅಂದ್ರು. ಕಂಡಕ್ಟರ್ ಟಿಕೆಟ್ ತಗೋಂಡು ಉಳಿದ ಚಿಲ್ರ ಕೊಟ್ಟರು. “ಬಾಳ ತ್ಯಾಂಕ್ಸ್ ರೀ ಸರ ರೊಕ್ಕ ಹೋತು ಅಂದ್ಕೊಂಡಿದ್ರಿ” ಅಂದೆ. “ಎಲ್ಲಾ ಕಂಡಕ್ಟರ್ ಗಳೂ ಹಂಗಿರಂಗಿಲ್ಲೋ ತಮ್ಮಾ, ರೊಕ್ಕಾ ಹುಶಾರಿ ಮತ್ತ ಕಳ್ಕೋಬ್ಯಾಡ, ದುನಿಯಾ ಸರಿ ಇಲ್ಲ” ಅಂತ ಹೇಳಿ ಕಂಡಕ್ಟರ್ ತಮ್ ಬಸ್ ಕಡೆ ಹೋದರು. ‘ಸವದತ್ತಿ ಯಲ್ಲವ್ವ ನೀನ ನನ್ನ ಕಾಪಾಡಿದೆವ್ವ’ ಅಂತ ಮನಸ್ಸಿನ್ಯಾಗ ಅಂದ್ಕೋತಾ ದಾರವಾಡ ಬಸ್ ಹತ್ತಿದೆ.
(ಚಿತ್ರ ಸೆಲೆ: pixabay)
ಇತ್ತೀಚಿನ ಅನಿಸಿಕೆಗಳು