ಹನಿಗವನಗಳು

– ವೆಂಕಟೇಶ ಚಾಗಿ.

*** ಸಿಹಿ-ಕಹಿ ***

ಬರಲಿ ನೂರಾರು ಕಹಿ ನಾಳೆಗಳ ಬಳಗ
ಇರಲಿ ದ್ರುಡಮನಸು ನಶ್ವರದ ಎದೆಯೊಳಗ
ಕಹಿಯನುಂಡರೂ ಸಿಹಿಚೆಲ್ಲಿ ಬದುಕಿನೊಳಗ
ಜಯಿಸಿಬಿಡು ಜಗವನು ಮುದ್ದು ಮನಸೆ

*** ಹಳತು-ಹೊಸತು ***

ಕಳೆದ ವರುಶದ ಚಿಗುರು ಈಗ ಹಳತು
ಉದುರಿ ಹಳತು ಚಿಗುರುವುದು ಹೊಸತು
ಇರುವಲ್ಲೆ ಇದ್ದರೂ ಪ್ರಕ್ರುತಿಯ ನವ ಬೆರಗು
ಬಿಡು ನಿನ್ನ ಹಳೆ ಕೊರಗು ಮುದ್ದು ಮನಸೆ ||

*** ಸರಿ-ತಪ್ಪು ***

ಅವರಿವರ ತಪ್ಪುಗಳ ಎಣಿಕೆ ಅತಿ ಸುಲಬ
ತನ್ನ ಸರಿತಪ್ಪುಗಳ ಅರಿತವ ಅತಿ ವಿರಳ
ನಡೆಯುವಾಗ ಅಡಿಯ ಗಡಿಬಿಡಿ ಸಹಜ
ಅರಿತಾಗ ಅವ ಮನುಜ ಮುದ್ದು ಮನಸೆ

*** ಅಜೀರ‍್ಣ ***

ಹೊಟ್ಟೆ ಸೇರಿದ ಅನ್ನ ಜೀರ‍್ಣವಾಗಬೇಕು
ಕಿವಿಗೆ ಬಿದ್ದ ಮಾತು ಮಂತನಗೊಳ್ಳಬೇಕು
ತನುಮನದೊಳಗಣದ ಅಜೀರ‍್ಣದಿಂದಲೇ
ಬಹುರೋಗದ ಪಲ ತಪ್ಪದು ಮುದ್ದು ಮನಸೆ

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks