ವಾಣಿ ವಿಲಾಸಪುರ ಜಲಾಶಯ (ಮಾರಿಕಣಿವೆ ಜಲಾಶಯ)

– ನವೀನ್ ಜಿ. ಬೇವಿನಾಳ್.

ವಿವಿಸಾಗರ, vvsagar
ವಾಣಿ ವಿಲಾಸಪುರ ಜಲಾಶಯ ಬೆಂಗಳೂರಿನಿಂದ ಸರಿಸುಮಾರು 160 ಕಿ.ಮೀ ದೂರದಲ್ಲಿದೆ. ರಾಶ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ನಗರ ಹಿರಿಯೂರು, ಅಲ್ಲಿಂದ ಕೇವಲ 20 ಕಿ.ಮೀ. ಹೊಸದುರ‍್ಗ ಮಾರ‍್ಗದಲ್ಲಿ ಹೊರಟು ನೋಡಿದರೆ ವಿ. ವಿ. ಪುರ ಅಂದರೆ ವಾಣಿ ವಿಲಾಸ ಪುರ ಎಂಬ ಹೋಬಳಿಯಲ್ಲೇ ಇರುವುದು ವಾಣಿ ವಿಲಾಸಸಾಗರ ಜಲಾಶಯ.

ಅಂದಿನ ಬ್ರಿಟಿಶ್ ಅದಿಕಾರಿಯಾಗಿದ್ದ ಸರ್ ಮಾರ‍್ಕ್ ಕಬ್ಬನ್ ಅವರು ಇಲ್ಲಿ ಒಂದು ಅಣೆಕಟ್ಟು ಕಟ್ಟಿಸಲು ಆಲೋಚನೆ ಮಾಡಿದರು. ತದ ನಂತರ ಆಗಿನ ಮೈಸೂರಿನ ದಿವಾನರಾಗಿದ್ದ ಶೇಶಾದ್ರಿ ಅವರು 1897ರಲ್ಲಿ ಈ ಜಲಾಶಯಕ್ಕೆ ಬೇಕಿರುವ ಪೂರ‍್ವಕೆಲಸಗಳನ್ನು ಪ್ರಾರಂಬಿಸಿ ಸರಿಸುಮಾರು 1907 ರ ಹೊತ್ತಿಗೆ ಎಲ್ಲ ಕೆಲಸಗಳನ್ನು ಮುಗಿಸಿದರು. ವಾಣಿ ವಿಲಾಸಸಾಗರ ಜಲಾಶಯವು ಸರಿಸುಮಾರು 22 ಟಿಎಂಸಿ ನೀರನ್ನು ತನ್ನಲ್ಲಿ ಇರಿಸಿಕೊಳ್ಳುವ ಸಾಮರ‍್ತ್ಯ ಹೊಂದಿದೆ. ಈ ಜಲಾಶಯವು 405 ಮೀ. ಉದ್ದವಿದೆ ಹಾಗೂ 50 ಮೀ. ಎತ್ತರವಿದೆ. ವಾಣಿ ವಿಲಾಸಸಾಗರ ಜಲಾಶಯವು ಕರ‍್ನಾಟಕದ ಅತ್ಯಂತ ಹಳೆಯ ಜಲಾಶಯವಾಗಿದೆ. ಇದಕ್ಕೆ ಹೊಂದಿಕೊಂಡೇ, ಹಿಂಬಾಗದಲ್ಲಿ ಶ್ರೀ ಕಣಿವೆ ಮಾರಮ್ಮ ದೇವಸ್ತಾನವಿದೆ, ದೇವಸ್ತಾನಗಳಲ್ಲಿ ದೇವರ ಮೂರ‍್ತಿಯ ಮುಕ ಮತ್ತು ಮುಂಬಾಗಕ್ಕೆ ಪೂಜೆ ಮಾಡುವುದು ಸಹಜ. ಆದರೆ ಇಲ್ಲಿ ಮಾರಮ್ಮ ತಾಯಿಯ ಬೆನ್ನಿಗೆ ಪೂಜೆ ನಡೆಸುತ್ತಾರೆ.

1898 ರ ಹೊತ್ತಿಗೆ ಎಲ್ಲ ಕೆಲಸಗಳು ಆರಂಬವಾಗಿದ್ದವು. ಆಗ ನೀರಿನ ರಬಸ ತಡೆಯಲು ಯಾರಿಂದ ಕೂಡ ಸಾದ್ಯವಾಗದೇ ಹೋಯಿತು. ಆಗಿನ ಮೈಸೂರು ರಾಜರಾಗಿದ್ದ ನಾಲ್ವಡಿ ಕ್ರಿಶ್ಣರಾಜ ಒಡೆಯರ್ ಅವರು ಜೋತಿಶ್ಯದ ಮೊರೆ ಹೋದರು. ಆಗ ಅಲ್ಲಿ ತಾಯಿ ಮಾರಮ್ಮನ ದೇವಸ್ತಾನ ಕಟ್ಟಲಾಯಿತು. ಆ ದೇವಿಯು ತನ್ನ ಕಾಲಿನಿಂದ ಆ ನೀರಿನ ರಬಸವನ್ನು ತಡೆಹಿಡಿದಿದ್ದಾಳೆ ಎನ್ನುವುದು ಆಗಿನ ಕಾಲದಿಂದ ನಂಬಿಕೊಂಡು ಬಂದಿರುವ ಕತೆ. ಈ ಜಲಾಶಯದ ಪೂರ‍್ತಿ ಹೊಣೆಗಾರಿಕೆ ಹೊತ್ತವರು ತಾರಾ ಚಂದಾ ದಲಾಲ್ ಎಂಬ ಸಿವಿಲ್ ಇಂಜಿನಿಯರ್. ಇವರು ನಾಲ್ವಡಿ ಕ್ರಿಶ್ಣರಾಜ ಒಡೆಯರ್ ಅವರಿಂದ ನೇರವಾಗಿ ನೇಮಕವಾಗಿದ್ದರು. ಚಿತ್ರದುರ‍್ಗ ಜಿಲ್ಲೆಗೆ ಈ ಜಲಾಶಯದ ನೀರು ಒಂದು ವರದಾನ.

ವಾಣಿ ವಿಲಾಸ ಜಲಾಶದ ಅಣೆಕಟ್ಟನ್ನು ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ವೇದ ಮತ್ತು ಅವತಿ ಎರಡು ನದಿಗಳ ಸಮಾಗಮವೇ ಈ ವೇದಾವತಿ. ವೇದಾವತಿಯು ಪಶ್ಚಿಮ ಗಟ್ಟದ ಸಾಲಿನ ಬಾಬಾ ಬುಡನ್ ಗಿರಿಯಲ್ಲಿ ಹುಟ್ಟಿ ಹೊಸದುರ‍್ಗ ಮಾರ‍್ಗವಾಗಿ ಹರಿದು ಬಂದು ವಾಣಿ ವಿಲಾಸ ಸಾಗರ ಜಲಾಶಯ ಸೇರುತ್ತದೆ. ಈ ನದಿಯು ಮುಂದೆ ಹರಿಯುತ್ತಾ ಹಿರಿಯೂರು ಸಮೀಪ ಕೂಡಲಿ ಎಂಬ ಗ್ರಾಮದಲ್ಲಿ ಸುವರ‍್ಣಮುಕಿ ನದಿಯೊಂದಿಗೆ ಬೆರೆತು, ಚಳ್ಳಕೆರೆ ಮಾರ‍್ಗವಾಗಿ ಆಂದ್ರಪ್ರದೇಶ ಪ್ರವೇಶಿಸಿ, ನಂತರ ಬಂಗಾಳ ಕೊಲ್ಲಿ ಸೇರುತ್ತದೆ. ವೇದಾವತಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿಸಿದ ಮೇಲೆ ಹಿರಿಯೂರು, ಹೊಸದುರ‍್ಗ, ಚಿತ್ರದುರ‍್ಗ ಮತ್ತು ಚಳ್ಳಕೆರೆ ಪ್ರದೇಶಕ್ಕೆಲ್ಲ ಕುಡಿಯುವ ಮತ್ತು ನೀರಾವರಿ ಅನುಕೂಲ ಸಿಗುವ ಹಾಗಾಯಿತು. ಹೆಚ್ಚಿನ ನೀರನ್ನು ಬಾರತೀಯ ರಕ್ಶಣಾ ಪಡೆಯ ಸಂಶೋದನಾ ಗಟಕವಾದ ಡಿ. ಆರ್. ಡಿ. ಓ., ಬಾಬಾ ಅಣು ಸಂಶೋದನಾಲಯ, ಬಾರತೀಯ ವಿಜ್ನಾನ ಕೇಂದ್ರ, ಬಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ತೆಗಳಿಗೂ ಒದಗಿಸಲಾಗುತ್ತಿತ್ತು.

ಆದರೆ ಈ ಜಲಾಶಯ ಈಗ ನೀರಿಲ್ಲದೆ ಪರದಾಡುತ್ತಿದೆ. ಜೊತೆಗೆ ಸುತ್ತಮುತ್ತಲಿನ ಜನರನ್ನು ಪರದಾಡಿಸುತ್ತಿದೆ. ಈ ಜಲಾಶಯವನ್ನು ಮಾಡಿದಾಗಿನಿಂದ ಕೇವಲ 2 ಬಾರಿ ಪೂರ‍್ತಿಯಾಗಿದೆ ಎಂದು ಇತಿಹಾಸ ಹೇಳುತ್ತದೆ. ನಮ್ಮ ಅಜ್ಜ ಹೇಳುತ್ತಿದ್ದರು ‘ನಾನು ನಿನ್ನ ವಯಸಿನಲ್ಲಿದ್ದಾಗ ಈ ಜಲಾಶಯ ಬರ‍್ತಿಯಾಗಿತ್ತು’ ಅಂತ. ಹಿಂದೆ ಇಲ್ಲಿ ಕಬ್ಬು ಬೆಳೆಯಲಾಗುತ್ತಿತ್ತು. ಆಗ ಮೈಸೂರಿನ ಒಡೆಯರ್ ಅವರು ಹಿರಿಯೂರಿನಲ್ಲಿ ಒಂದು ಸಕ್ಕರೆ ಕಾರ‍್ಕಾನೆ ಕೂಡ ಸ್ತಾಪಿಸಿದ್ದರು. ಆದರೆ ಈಗ, ಅದು ಕೂಡ ಈ ಜಲಾಶಯದಲ್ಲಿ ನೀರಿಲ್ಲದ ಕಾರಣ ಮುಚ್ಚಿದೆ. ಕಳೆದ 10-15 ವರ‍್ಶಗಳ ರೈತರ ಹೋರಾಟದ ಪರಿಣಾಮವಾಗಿ, ಸರ‍್ಕಾರ ಇಲ್ಲಿನ ಮಂದಿಯ ಪರದಾಟ ನೋಡಿ, ಬದ್ರಾವತಿಯಿಂದ ಬರುವ ಬದ್ರಾ ನದಿಯ ನೀರನ್ನೂ ಈ ಜಲಾಶಯಕ್ಕೆ ಹಾಯಿಸುವ ಕೆಲಸಕ್ಕೆ ಒತ್ತುಕೊಟ್ಟಿದೆ. ಅದರ ಪಲಿತಾಂಶವಾಗಿ ಮೊದಲಿಗೆ, ಪ್ರತಿ ವರ‍್ಶ 2 ಟಿಎಂಸಿ ನೀರು ಸೇರಿಸಿಕೊಳ್ಳುವ ಬಾಗ್ಯವನ್ನ ಈ ಜಲಾಶಯ ಈಗ ಪಡೆದುಕೊಂಡಿದೆ.  ಬದ್ರಾ ಮೇಲ್ದಂಡೆ ಯೋಜನೆಯು ಆದಶ್ಟು ಬೇಗ ಮುಗಿದರೆ ರೈತರ ಬದುಕು ಹಸನಾಗುವುದು ಹಾಗೂ ಕುಡಿಯುವ ನೀರಿಗಾಗಿ ಜನರ ಬವಣೆಯೂ ತಪ್ಪಲಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: vjnl.in),

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Naveen Bevinal says:

    ದನ್ಯವಾದಗಳು

ಅನಿಸಿಕೆ ಬರೆಯಿರಿ:

%d bloggers like this: