ಚೈನಾದಲ್ಲಿ ಹಾವಳಿ ಎಬ್ಬಿಸಿರುವ ಕೊರೊನಾ ವೈರಸ್

– ಮಾರಿಸನ್ ಮನೋಹರ್.coronavirus, ಕೊರೋನಾ ವೈರಸ್

 

ಚೈನಾದ ಹೂಬೈ ಪ್ರಾಂತದಲ್ಲಿ ಹೊಸದಾಗಿ ಕೊರೊನಾ(nCoV) ಎಂಬ ವೈರಸ್ ಹುಟ್ಟಿಕೊಂಡಿದೆ. 2019ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಇದು ಕಾಣಿಸಿಕೊಂಡಿದ್ದು ಜನವರಿ 2020 ವರೆಗೆ ಒಟ್ಟು 2,862 ಮಂದಿಗೆ ಈ ವೈರಸ್ ಸೋಂಕು ತಗುಲಿ 82 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಹೆಚ್ಚಿನವರು ಚೈನಾ ನಾಡಿನ ವುಹಾನ್ ಜಿಲ್ಲೆಯವರು. ಈ ವೈರಸ್ ಸೋಂಕಿಗೆ ತಿರುಮದ್ದು (vaccine) ಇಲ್ಲದಿರುವುದರಿಂದ ಸೋಂಕು ತಗುಲದೇ ಇರುವ ವುಹಾನ್ ನ ಮಂದಿಯ ಮೇಲೂ ಕಡು ನಿಗಾ ಇಡಲಾಗಿದೆ. ವುಹಾನ್ ನಿಂದ ಯಾರೂ ಹೊರಗೆ ಹೋಗದಂತೆ ಕಟ್ಟಳೆ ಹಾಕಿದ್ದಾರೆ, ಇದಲ್ಲದೇ ಇತರೆ 12 ಪಟ್ಟಣಗಳಿಂದ ಮಂದಿ ಹೊರಗೆ ಹೋಗುವುದಕ್ಕೆ ತಡೆ ಹಾಕಲಾಗಿದೆ. ಈ ತರಹ ಪಟ್ಟಣಕ್ಕೆ ಕಾವಲು ಹಾಕಿ ಒಳ ಬರುವ ಕಾಳುಕಡಿ, ಪೆಟ್ರೋಲ್ ಇತರೆ ದಿನನಿತ್ಯದ ಬೇಕುಗಳನ್ನೂ ತಡೆಹಿಡಿದಿರುವುದರಿಂದ ಕೆಲ ದಿನಗಳಲ್ಲಿ ಅವುಗಳ ಕೊರತೆಯೂ ಆಗಲಿದೆ.

ಅಲ್ಲಿನ ಸರಕಾರ ತೆಗೆದುಕೊಳ್ಳುತ್ತಿರುವ ಕಡು ಮುನ್ನೆಚ್ಚರಿಕೆ ಕ್ರಮಗಳಿಂದಾಗಿ 40 ಮಿಲಿಯನ್ ಮಂದಿ ಪ್ರಬಾವಕ್ಕೆ ಒಳಗಾಗಿದ್ದಾರೆ. ಚೈನಾದ ಎಲ್ಲ ತಿರುಗಾಟದ ಜಾಗಗಳನ್ನು (tourist) ಮುಚ್ಚಲಾಗಿದ್ದು, ಮಂದಿ ಗುಂಪಾಗಿ ಸೇರುವುದನ್ನೂ ತಡೆ ಹಿಡಿಯಲಾಗಿದೆ. ಬೀಜಿಂಗ್‌ನ ಚೆಲುವಿನ ಅರಮನೆ ಪಾರ‍್ಬಿಡನ್ ಸಿಟಿಯಲ್ಲಿ ನಡೆಯಬೇಕಾಗಿದ್ದ ಚೀನೀಯರ ಹೊಸ ವರುಶದ ಸಡಗರಕ್ಕೂ ತಡೆ ಬಿದ್ದಿದೆ. ಚೈನಾ ಗೋಡೆ ನೋಡಲು ಬರುವವರಿಗೂ ಅನುಮತಿಯಿಲ್ಲ. ನಾಡಿನ 70,000 ಓಡುತಿಟ್ಟ ಮನೆಗಳನ್ನು ಮುಚ್ಚಿಸಲಾಗಿದೆ. ಚೈನಾದ ಹೊಸ ವರುಶ ಶುರುವಾಗಿದ್ದು ಇದರಿಂದ ಬಿಕ್ಕಟ್ಟು ಹೆಚ್ಚಾಗಿದೆ. ಮಂದಿ ರಜೆಯ ಮೇಲೆ ತಮ್ಮ ಊರುಗಳಿಗೆ ಓಡಾಡುತ್ತಿರುವುದು ಹೆಚ್ಚಾಗಿದ್ದು, ಗಾಳಿದೇರು ನಿಲ್ದಾಣ (airport) ಮತ್ತು ರೈಲ್ವೇ ನಿಲ್ದಾಣ ಗಳಲ್ಲಿ ತಪಾಸಣೆ ಹೊರೆ ಹೆಚ್ಚಾಗಿದೆ. ಎಲ್ಲರಿಗೂ ಮುಕಗವಸು ಹಾಕಿಕೊಳ್ಳುವಂತೆ ತಾಕೀತು ಮಾಡಿದ್ದಾರೆ. ಕಲಿಮನೆ, ಕಾಲೇಜು, ಯುನಿವರ‍್ಸಿಟಿ ಅಲ್ಲದೇ ರೆಸ್ಟೊರೆಂಟ್ ಗಳನ್ನು ಮುಚ್ಚಿಸಲಾಗಿದೆ.

ಗಾಳಿದೇರು ನಿಲ್ದಾಣಗಳಲ್ಲಿ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಪೋಲಿಸ್ ಸಿಬ್ಬಂದಿ ಕಟ್ಟುನಿಟ್ಟಿನ ಹದ್ದಿನ ಕಣ್ಣು ಇಟ್ಟರೆ ಅಲ್ಲಿಯೇ ಬೀಡು ಬಿಟ್ಟಿರುವ ಮದ್ದುಸಿಬ್ಬಂದಿ (medical staff) ತಮಗೆ ಕೊಡ ಮಾಡಲ್ಪಟ್ಟಿರುವ ಬಿಸಿ-ತೋರುಕಗಳಿಂದ (thermo-monitor) ಮಂದಿಯ ಮೈಬಿಸಿ ತಪಾಸಣೆ ಮಾಡುತ್ತಿದ್ದಾರೆ. ಒಟ್ಟು 50,000 ಮದ್ದು ಸಿಬ್ಬಂದಿಯನ್ನು ಹೂಬೈ ಪ್ರಾಂತ್ಯಕ್ಕೆ ಕಳುಹಿಸಲಾಗಿದೆ. ಮಂದಿ ಸಾರಿಗೆಯನ್ನು (public transport) ನಿಲ್ಲಿಸಲಾಗಿದ್ದು ಮಂದಿ ತಮ್ಮ ಕಾಸಗಿ ಕಾರು, ಇನ್ನಿತರೆ ಬಂಡಿಗಳಲ್ಲಿ ಓಡಾಡುವಂತಾಗಿದೆ. ಗಾಳಿದೇರು ನಿಲ್ದಾಣಗಳಲ್ಲಿ ಬಿಸಿತೋರುಕ ಕಂಪ್ಯೂಟರ್ ಗಳು ಪ್ರತಿದಿನ ಸಾವಿರಾರು ಮೊಗಗಳನ್ನು ತಪಾಸಣೆ ಮಾಡುತ್ತಿವೆ. ಚೈನಾ ದೇಶಕ್ಕೆ ಬೇಟಿಕೊಟ್ಟು ತಮ್ಮ ದೇಶಕ್ಕೆ ಹಿಂದಿರುಗಿದವರಲ್ಲಿ ಆಸ್ಟ್ರೇಲಿಯಾ, ಜಪಾನ್, ಪ್ರಾನ್ಸ್, ತೈಲ್ಯಾಂಡ್, ಕೊರಿಯಾ, ಅಮೆರಿಕ ನಾಡುಗಳ ಕೆಲವರಲ್ಲಿ ಈ ಸೋಂಕಿನ ಉರಿಬೇನೆ (fever) ಕಂಡುಬಂದಿದೆ. ಚೈನಾದ ಪಕ್ಕದ ನಾಡುಗಳಾದ ಮಂಗೋಲಿಯಾ ಮತ್ತು ಬಡಗಣ ಕೊರಿಯಾ ತಮ್ಮ‌ ಗಡಿಬಾಗಿಲುಗಳನ್ನು ಕೊರೊನಾ ವೈರಸ್ ನಿಂದಾಗಿ ಮುಚ್ಚಿಬಿಟ್ಟಿವೆ.

ಈ ಕೊರೊನಾ ವೈರಸ್ ವುಹಾನ್ ನ ಹೂಯಾನಾನ್ ಕಡಲುಣಿಸು ಸಗಟು ಮಾರುಕಟ್ಟೆಯಿಂದ ( Huanan seafood wholesale market) ಹುಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಸಗಟು ಮಾರುಕಟ್ಟೆಯಲ್ಲಿ ಸಿವಿಟ್ ಬೆಕ್ಕು ಎಂಬ ಬ್ಯಾನ್ ಮಾಡಿದ ಅಡವಿ ಪ್ರಾಣಿಯನ್ನು ಮಾರಲಾಗುತ್ತಿತ್ತು. ಇದರಿಂದಲೇ ಈ ವೈರಸ್ ಸೋಂಕು ಹರಡಿರಬಹುದು ಎಂದು ಹಾಂಕಾಂಗ್ ಯುನಿವರ‍್ಸಿಟಿಯ ವೈರಸ್ ಅರಿಮೆಗಾರ ಲಿಯೋ ಪೂ‌ನ್ ಹೇಳಿದ್ದಾರೆ. ಆದರೆ ನಿಜವಾಗಿ ಈ ಕೊರೊನಾ ವೈರಸ್ ನ ಸೆಲೆ ಇನ್ನೂ ಕಚಿತವಾಗಿ ಗೊತ್ತಾಗಲಿಲ್ಲ. ಆದರೆ ಈ ವೈರಸ್ ಪ್ರಾಣಿಗಳಿಂದಲೇ ಮಂದಿಗೆ ಹರಡಿದ್ದು, ಅಲ್ಲಿಂದ ಮಂದಿಯಿಂದ ಮಂದಿಗೆ ಹರಡುತ್ತಾ ಬಂದಿದೆ ಎಂದು ಹೇಳಲಾಗಿದೆ. ಈ ಕೊರೊನಾ ವೈರಸ್ ಸೋಂಕಿದ ಒಬ್ಬ ರೋಗಿ 14 ಮದ್ದು ಸಿಬ್ಬಂದಿಗೆ ಈ ಸೋಂಕನ್ನು ದಾಟಿಸಿದ್ದಾನೆ. ಈ ಕೊರೊನಾ ವೈರಸ್ ತುಂಬಿಬರಲು (incubation) ಎರಡರಿಂದ ಹತ್ತು ದಿನಗಳು ಬೇಕು. ಇದರಿಂದ ಯಾರಿಗೆ ಈ ಕೊರೊನಾ ಉರಿಬೇನೆ ಬಂದಿದೆ ಎಂದು ಕಂಡು ಹಿಡಿಯುವುದು ಕಶ್ಟಕರವಾಗಿ ಹೋಗಿದೆ. ಈ ವೈರಸ್ ನ ಸೋಂಕು ತಗುಲಿದ ಮೂರು ನಾಲ್ಕು ದಿನಗಳಾದ ಮೇಲೆ ಅದರ ಲಕ್ಶಣಗಳು ತೋರಿ ಬರುತ್ತವೆ.

ಈ ಕೊರೊನಾ ವೈರಸ್ ಸಾರ‍್ಸ್ ತರಹದ ವೈರಸ್ ಆಗಿದೆ. ಇದನ್ನು RNA ವೈರಸ್ ಎಂದು ಗುರುತಿಸಲಾಗಿದೆ. ಈ ತರಹದ ವೈರಸ್ ಗಳು ಪ್ರಾಣಿಗಳಿಗೆ ಸೋಂಕು ತರುತ್ತವೆ. ಈ ವೈರಸ್ ತನ್ನಲ್ಲಿ ಮಾರ‍್ಪಾಟು (mutation) ಮಾಡಿಕೊಂಡು ಪ್ರಾಣಿಗಳಿಂದ ಮಂದಿಗೆ ತಗುಲಿದೆ. 2002-03 ರಲ್ಲಿ ಸಾರ‍್ಸ್ (SARS) ಎಂಬ ವೈರಸ್ ಬಾವಲಿಗಳಿಂದ ಸಿವಿಟ್ ಬೆಕ್ಕುಗಳಿಗೆ ತಗುಲಿತ್ತು ಅಲ್ಲಿಂದ ಮುಂದಕ್ಕೆ ಮಂದಿಗೆ ತಗುಲಿತು. ಆಗ ಸಾರ‍್ಸ್ ವೈರಸ್ ಸೋಂಕು 8,098 ಮಂದಿಗೆ ತಗುಲಿತ್ತು ಅದರಲ್ಲಿ 774 ಮಂದಿ ಸಾವನ್ನಪ್ಪಿದ್ದರು. 2012 ರಲ್ಲಿ ತೋರಿಬಂದ ಮಾರ‍್ಸ್ (MERS) ವೈರಸ್ ಸೋಂಕು ಒಂಟೆಗಳಿಂದ ಮಂದಿಗೆ ತಗುಲಿತ್ತು. ಆಗ ಸೋಂಕು ತಗುಲಿದ 2,494 ಮಂದಿಯಲ್ಲಿ 858 ಮಂದಿ ಸಾವನ್ನಪ್ಪಿದ್ದರು. ಈಗ 2019 ರ ಡಿಸೆಂಬರ್ ನಲ್ಲಿ ಈ ಕೊರೊನಾ ವೈರಸ್ ತೋರಿಬಂದಿದೆ. ಇದು ಯಾವ ಪ್ರಾಣಿಯಿಂದ ಮಂದಿಗೆ ತಗುಲಿದೆ ಎಂದು ಇನ್ನೂ ಕಚಿತವಾಗಿ ಗೊತ್ತಾಗಿಲ್ಲ. ಹೂಯಾನಾನ್ ಸಗಟು ಮಾರುಕಟ್ಟೆಯಲ್ಲಿ ಮಾರಲ್ಪಟ್ಟ ಸಿವಿಟ್ ಬೆಕ್ಕುಗಳು ಇಲ್ಲವೇ ಹಾವುಗಳಿಂದ ಬಂದಿರಬಹುದು ಎಂದು ಹೇಳಲಾಗಿದೆ. ಈ ವೈರಸ್ ನ ಪರಿಣಾಮಗಳನ್ನು ಹತ್ತಿಕ್ಕಲು ಅಲ್ಲಿನ ಸರಕಾರ 8.74 ಬಿಲಿಯನ್ ಡಾಲರ್ ಹಣವನ್ನು ಕರ‍್ಚು ಮಾಡಿದೆ. ವುಹಾನ್ ಪ್ರಾಂತ್ಯದಲ್ಲಿ ಕೊರೊನಾ ವೈರಸ್ ತಗುಲಿದವರ ಆರಯ್ಕೆಗೆಂದು ಒಂದು ದೊಡ್ಡದಾದ ಮದ್ದುಮನೆಯನ್ನು ಕೇವಲ ಏಳು ದಿನಗಳಲ್ಲಿ ಕಟ್ಟಿಸಲಾಗುವದು ಎಂದು ಗೋಶಣೆ ಮಾಡಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: youtube1, youtube2, youtube3, wiki)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: