ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 7ನೆಯ ಕಂತು

–  ಸಿ.ಪಿ.ನಾಗರಾಜ.

ಅಲ್ಲಮಪ್ರಬು, allamaprabhu

ದಾಳಿಕಾರಂಗೆ ಧರ್ಮವುಂಟೆ. (134-149)

(ದಾಳಿ=ಲಗ್ಗೆ/ಆಕ್ರಮಣ/ಮುತ್ತಿಗೆ; ದಾಳಿಕಾರ=ಇತರರ ಮಾನ, ಪ್ರಾಣ, ಒಡವೆವಸ್ತು, ಆಸ್ತಿಪಾಸ್ತಿಗಳನ್ನು ದೋಚಲೆಂದು ಕ್ರೂರತನದಿಂದ ಹಲ್ಲೆ ಮಾಡುವ ವ್ಯಕ್ತಿ; ದಾಳಿಕಾರಂಗೆ=ದಾಳಿಕಾರನಿಗೆ/ದರೋಡೆಕೋರನಿಗೆ/ಲೂಟಿಕೋರನಿಗೆ;

ಧರ್ಮ+ಉಂಟೆ; ಧರ್ಮ=ಅರಿವು, ಒಲವು, ನಲಿವು, ಕರುಣೆಯಿಂದ ಕೂಡಿದ ನಡೆನುಡಿ/ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೂ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ನಡೆನುಡಿ; ಉಂಟೆ=ಇರುತ್ತವೆಯೇ/ಇರುವುದೇ;

ಜನರ ಆಸ್ತಿಪಾಸ್ತಿಗಳನ್ನು ಕೊಳ್ಳೆ ಹೊಡೆಯುವ ಮತ್ತು ಜಾತಿ, ಮತ, ದೇವರ ಹೆಸರಿನಲ್ಲಿ ಜನಸಮುದಾಯಗಳಲ್ಲಿ ಪರಸ್ಪರ ಅಪನಂಬಿಕೆ, ಅಸೂಯೆ ಮತ್ತು ಹಗೆತನವನ್ನುಂಟು ಮಾಡಿ, ಜನರು ಒಬ್ಬರು ಮತ್ತೊಬ್ಬರೊಡನೆ ಬಡಿದಾಡಿಕೊಂಡು ಸಾವು ನೋವುಗಳಿಗೆ ಬಲಿಯಾಗುವಂತೆ ಮಾಡಿ, ತಾನು ಮಾತ್ರ ಉನ್ನತವಾದ ಗದ್ದುಗೆಯನ್ನೇರಿ ನಾಡಿನ ಸಂಪತ್ತನ್ನು ದೋಚುವ ಕಪಟಿಯೂ ಕ್ರೂರಿಯೂ ಆದ ವ್ಯಕ್ತಿಯ ನಡೆನುಡಿಯಲ್ಲಿ ಸತ್ಯ, ನೀತಿ, ನ್ಯಾಯ ಮತ್ತು ಕರುಣೆಯ ಒಳಮಿಡಿತಗಳು ಇರುವುದಿಲ್ಲ.

ಮರನುಳ್ಳನ್ನಕ್ಕರ ಎಲೆ ಉಲಿವುದು ಮಾಬುದೆ
ಶರೀರ ಉಳ್ಳನ್ನಕ್ಕರ ವಿಕಾರ ಮಾಬುದೆ. (487-176)

( ಮರ+ಉಳ್ಳ್+ಅನ್ನಕ್ಕರ; ಮರ=ತರು/ಸಸ್ಯ; ಉಳ್ಳ್=ಇರು; ಅನ್ನಕ್ಕರ=ವರೆಗೆ/ತನಕ; ಉಳ್ಳನ್ನಕ್ಕರ=ಇರುವ ತನಕ/ಇರುವವರೆಗೆ; ಎಲೆ=ಮರದ ಕೊಂಬೆರೆಂಬೆಗಳಲ್ಲಿ ಬಿಟ್ಟಿರುವ ಎಸಳು/ದಳ; ಉಲಿ=ದನಿ/ಶಬ್ದ; ಉಲಿವುದು=ದನಿಗಯ್ಯುವುದು/ಶಬ್ದ ಮಾಡುವುದು; ಮಾಣ್=ಬಿಡು/ನಿಲ್ಲಿಸು/ತೊರೆ; ಮಾಣ್ಬುದೆ>ಮಾಬುದೆ; ಮಾಬುದೆ=ನಿಲ್ಲಿಸುವುದೆ/ಬಿಡುತ್ತದೆಯೆ;

ಶರೀರ=ಮಯ್/ದೇಹ; ವಿಕಾರ=ಬದಲಾವಣೆ/ಮಾರ‍್ಪಾಟು/ವಸ್ತುಗಳ-ಜೀವಿಗಳ ರೂಪದಲ್ಲಿ ಉಂಟಾಗುವ ವ್ಯತ್ಯಾಸ; ಶರೀರ ಉಳ್ಳನ್ನಕ್ಕರ ವಿಕಾರ ಮಾಬುದೆ=ಶರೀರದಲ್ಲಿ ಜೀವ ಇರುವ ತನಕ ಎಂದರೆ ಸಾವು ಬರುವವರೆಗೂ ಒಂದಲ್ಲ ಒಂದು ಬಗೆಯ ಒಳಮಿಡಿತಗಳು ವ್ಯಕ್ತಿಯ ಮಯ್ ಮನಗಳಲ್ಲಿ ಎಡೆಬಿಡದೆ ಮಿಡಿಯುತ್ತಿರುತ್ತವೆ.

ಜೀವಂತವಾಗಿರುವ ಮರದ ಕೊಂಬೆರೆಂಬೆಗಳಲ್ಲಿನ ಎಲೆಗಳು ಹೇಗೆ ಗಾಳಿಯ ಬಡಿತಕ್ಕೆ ಅಲ್ಲಾಡುತ್ತ ಪಟಪಟನೆ ದನಿಯನ್ನು ಮಾಡುತ್ತಿರುತ್ತವೆಯೋ ಅಂತೆಯೇ ಶರೀರದಲ್ಲಿ ಜೀವವಿರುವ ತನಕ ಪ್ರತಿಯೊಬ್ಬ ವ್ಯಕ್ತಿಯ ಮನದಲ್ಲಿ ಒಳ್ಳೆಯ ಮತ್ತು ಕೆಟ್ಟ ಒಳಮಿಡಿತಗಳು ತುಡಿಯುತ್ತಲೇ ಇರುತ್ತವೆ. ಆದ್ದರಿಂದ ವ್ಯಕ್ತಿಯು ತನ್ನ ಜೀವಿತದ ಕೊನೆ ಗಳಿಗೆಯ ತನಕ ಕೆಟ್ಟ ಒಳಮಿಡಿತಗಳನ್ನು ಹತ್ತಿಕ್ಕಿಕೊಂಡು ಬಾಳುವ ಎಚ್ಚರವನ್ನು ಹೊಂದಿರಬೇಕು.

ಮಾತಿನ ಮಾತಿನ ಮಹಂತರು ಹಿರಿಯರೆ. (230-156)

ಮಾತು=ನುಡಿ/ಸೊಲ್ಲು; ಮಹಂತ=ಒಲವು, ಆದರ, ಮನ್ನಣೆಗೆ ಪಾತ್ರನಾದ ವ್ಯಕ್ತಿ/ದೇಗುಲದ ಆಡಳಿತದ ಉಸ್ತುವಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ; ಹಿರಿಯರು=ವಯಸ್ಸು/ತಿಳುವಳಿಕೆ/ಒಳ್ಳೆಯ ನಡೆನುಡಿಗಳಲ್ಲಿ ದೊಡ್ಡವರು;

ಮಾತಿನ ಮಾತಿನ=ಯಾವುದೇ ಒಂದು ಒಳ್ಳೆಯ ಕೆಲಸವನ್ನು ಮಾಡದೆ ಬರಿ ಮಾತನಾಡುವುದರಲ್ಲಿಯೇ ತೊಡಗಿರುವುದು;

ಮಾತಿನ ಮಾತಿನ ಮಹಂತರು=ಸತ್ಯ/ನೀತಿ/ನ್ಯಾಯ/ವಾಸ್ತವದ ನುಡಿಗಳನ್ನು ಒಂದೇ ಸಮನೆ ಆಡುತ್ತ, ತಮ್ಮ ನಿತ್ಯ ಜೀವನದ ಆಚರಣೆಯಲ್ಲಿ ಅವನ್ನು ಅಳವಡಿಸಿಕೊಳ್ಳದೇ , ಮಾತನ್ನು ಚತುರತೆಯಿಂದ ಆಡುವುದನ್ನೇ ಒಂದು ಕಲೆಯನ್ನಾಗಿ ಮಾಡಿಕೊಂಡಿರುವ ವ್ಯಕ್ತಿಗಳು; ಹಿರಿಯರೆ=ದೊಡ್ಡವರೆ/ಮನ್ನಣೆಗೆ ಯೋಗ್ಯರೆ;

ಕೇಳುವವರ ಮನ ಸೆಳೆಯುವಂತೆ ಇಲ್ಲವೇ ಮನ ಮೆಚ್ಚಿಸುವಂತೆ ಸೊಗಸಾಗಿ ಮಾತನಾಡುವ ವ್ಯಕ್ತಿಗಳನ್ನು ದೊಡ್ಡವರೆಂದು ತಿಳಯಬಾರದು. ಏಕೆಂದರೆ ಮಾತಿಗಿಂತ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಕೆಲಸ ದೊಡ್ಡದು. ಆದ್ದರಿಂದ ಯಾವುದೇ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅವರು ಮಾಡುವ ಒಳ್ಳೆಯ ಕೆಲಸದಿಂದ ಒರೆಹಚ್ಚಿ ನೋಡಬೇಕೆ ಹೊರತು ಅವರು ಆಡುವ ಸೊಗಸಾದ ಮಾತುಗಳಿಂದಲ್ಲ ಎಂಬ ಅರಿವನ್ನು ಹೊಂದಿರಬೇಕು.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: