ಸಾಮಾಜಿಕ ಜಾಲತಾಣಗಳ ಬಳಕೆ ಅತಿಯಾಗದಿರಲಿ

.

ಸಾಮಾಜಿಕ ಜಾಲತಾಣ, social media

ಸಂಚಾರಿ ದೂರವಾಣಿ/ಅಲೆಯುಲಿ (mobile phone) ಎಂಬುದೇ ಒಂದು ಮಾಯಾ ಪೆಟ್ಟಿಗೆ. ಗೂಗಲ್ ಸರ‍್ಚ್ ನಿಂದ ನೀವು ಕುಳಿತ ಜಾಗದಲ್ಲಿಯೇ ಪ್ರಪಂಚ ಪರ‍್ಯಟನೆ ಮಾಡಬಹುದು, ದೇಶ ವಿದೇಶಗಳ ಆಚಾರ,ವಿಚಾರ,ಅವರ ಸಂಸ್ಕ್ರುತಿ, ಆಹಾರ ಪದ್ದತಿ ಎಲ್ಲವನ್ನೂ ತಿಳಿದುಕೊಳ್ಳಬಹುದು. ಈ ಅಂತರ‍್ಜಾಲ ವ್ಯವಸ್ತೆಯಿಂದ ಪ್ರಪಂಚವೆಂಬುದು ನಮ್ಮ ಮುಶ್ಟಿಯಶ್ಟು ಕಿರಿದಾಗಿ ಬಿಟ್ಟಿದೆ.

ಈ ಅಂತರ‍್ಜಾಲದ ವ್ಯವಸ್ತೆಯಿಂದಾಗಿ ನೂರಾರು ‘ಆ್ಯಪ್’ಗಳು ಹುಟ್ಟಿಕೊಂಡಿವೆ. ಅವುಗಳಿಂದಾಗಿ ದಿನಚರಿಯ ಕೆಲವು ಕೆಲಸಗಳು ಸರಳಗೊಂಡು ಈ ಒತ್ತಡದ ಜೀವನಕ್ಕೆ ಸ್ವಲ್ಪ ವಿಶ್ರಾಂತಿ ಸಿಕ್ಕಿದೆ ಎಂದರೆ ತಪ್ಪಿಲ್ಲ. ಇದಕ್ಕೆ ಒಂದೆರಡು ಉದಾಹರಣೆ ಕೊಡಬಹುದಾದರೆ ಆ್ಯಪ್ ಮೂಲಕ ಬಸ್, ರೈಲು, ವಿಮಾನಯಾನಗಳ ಟಿಕೆಟ್ ಮುಂಗಡವಾಗಿ ಕಾದಿರಸಬಹುದು. ವಿದ್ಯುಚ್ಚಕ್ತಿ ಬಿಲ್, ಟಿವಿ ಕೇಬಲ್ ರಿಚಾರ‍್ಜ್, ಟೆಲಿಪೋನ್ ಬಿಲ್, ವಾಟರ್ ಬಿಲ್ ಸಂದಾಯ ಮಾಡಬಹುದು, ವಸ್ತುಗಳ ಕರೀದಿ, ಜನೋಪಯೋಗಿ ಸೇವೆ ಮುಂತಾದವುಗಳನ್ನು ಮನೆಯಲ್ಲಿ ಕುಳಿತೇ ಪಡೆಯಬಹುದು. ಆದ್ದರಿಂದ ಈ ಅಂತರ‍್ಜಾಲ, ಆ್ಯಪ್ ಇವೆಲ್ಲ ಮನುಶ್ಯರಿಗೆ ಬಹು ಉಪಯೋಗಿ ಎಂದರೂ ತಪ್ಪಿಲ್ಲ.

ಈ ಮೊಬೈಲ್ ಪೋನ್ ಸೆಟ್ಟುಗಳು ತರಾವರಿ ಹೊಸ ಹೊಸ ಗುಣ‌ಲಕ್ಶಣಗಳೊಂದಿಗೆ ಆವಿಶ್ಕಾರಗೊಳ್ಳುತ್ತಿರವುದರಿಂದ, ಅಂತರ‍್ಜಾಲದಲ್ಲಿ ಹೆಚ್ಚೆಚ್ಚು ಸಾಮಾಜಿಕ ಜಾಲತಾಣಗಳು  ಜನ್ಮ ತಳೆದು ಹೆಚ್ಚು ಸಕ್ರಿಯವಾಗಿವೆ. ಉದಾಹರಣೆಗೆ ವಾಟ್ಸ್ಯಾಪ್, ಪೇಸ್ಬುಕ್, ಟ್ವಿಟರ್, ಟಿಕ್ ಟಾಕ್, ಇನ್ಸ್ಟಾಗ್ರಾಂ, ಮುಂತಾದವು. ಅದರಲ್ಲೂ ವಾಟ್ಸ್ಯಾಪ್ ಸಾಮಾನ್ಯ ಜನರ ಜನಪ್ರಿಯ ಬಲು ಉಪಯೋಗಿ ಆ್ಯಪ್. ಇವುಗಳ ಮುಕೇನ ಪರಸ್ಪರ ಸಂಪರ‍್ಕ ಬಹಳ ಬೇಗ ಸಾದಿಸಬಹುದು ಮತ್ತು ಸುದ್ದಿಗಳನ್ನು ಬಹಳ ವೇಗವಾಗಿ ಹರಡಬಹುದು.

ಆದರೆ ಈ ಜಾಲತಾಣಗಳು ಎಶ್ಟು ಜನಪ್ರಿಯವೋ ಮನುಶ್ಯ ಅದರ ಇತಿಮಿತಿಯನ್ನು ಅರಿಯದೆ ಬಳಕೆ ಮಾಡಿದರೆ ಅಶ್ಟೆ ಅಪಾಯಕಾರಿ. ಇತ್ತೀಚಿನ ಜನರನ್ನು ನೀವು ನಿಗಾ ಇಟ್ಟು ನೋಡಿ ಅವರು ಬಸ್ ಸ್ಟ್ಯಾಂಡ್ ನಲ್ಲಿ ಇರಲಿ, ರೇಲ್ವೆ ಸ್ಟೇಶನ್ ನಲ್ಲಿರಲಿ, ವಿಮಾನ ನಿಲ್ದಾಣವಾಗಲಿ, ಮಾರುಕಟ್ಟೆ, ಕಚೇರಿ, ಆಸ್ಪತ್ರೆ, ಶಾಲೆ, ದೇವಸ್ತಾನ ಎಲ್ಲೆ ಇರಲಿ ತಲೆ ಬಗ್ಗಿಸಿಕೊಂಡು ವೀಳ್ಯಕ್ಕೆ ಸುಣ್ಣ ಬಳಿಯುವಂತೆ ಈ ಸಾಮಾಜಿಕ ಜಾಲತಾಣಗಳನ್ನು/ಆ್ಯಪ್ ಗಳನ್ನು ತೋರುವ ಮೊಬೈಲ್ ಗಳ ಮೇಲೆ ಕೈ ಆಡಿಸುತ್ತ ಕುಳಿತಿರುತ್ತಾರೆ. ಅವರ ಮೈ ಮೇಲೆ ಏನೇ ಹಾದು ಹೋದರು ಪರಿಗ್ನಾನವಿರುವುದಿಲ್ಲ. ಇದು ಅತ್ಯಂತ ಅಪಾಯಕಾರಿ ಸ್ತಿತಿ. ಇದರಿಂದಾಗಿ ಕಾರ‍್ಯ ಕ್ಶಮತೆ, ದುಡಿಮೆಯ ಯೋಜನೆ, ಓದಿನ ತೀವ್ರತೆ ಎಲ್ಲ ಏರುಪೇರಾಗುತ್ತದೆ ಮತ್ತು ಜನರು ಮೊಬೈಲ್ ಪೋನ್ ಗಳಿಗೆ ದಾಸರಾಗಿ ಒಂದು ರೀತಿಯ ಮಾನಸಿಕ ಅಸ್ವಸ್ತರಂತೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದೆನಿಸುತ್ತದೆ. ಇಂತಹ ಪರಿಸ್ತಿತಿಯಿಂದಾಗಿ ದುಡಿಯುವ ಕೈಗಳು ದುಡಿಯದೆ ಸೋಮಾರಿಗಳಾಗಿ, ದೇಶದ ಪ್ರಗತಿಗೆ ಮಾರಕವಾಗುತ್ತಿದ್ದಾರೆ ಎಂಬ ಎಚ್ಚರ ನಮಗಿರುವುದು ಒಳ್ಳೆಯದಲ್ಲವೇ?

ಈ ಸಾಮಾಜಿಕ ಜಾಲತಾಣಗಳಿಂದ ದೇಶ ವಿದೇಶಗಳ ಸುದ್ದಿ ಕ್ಶಣಮಾತ್ರದಲ್ಲಿ ಹರಡಿ,ಜನರಿಗೆ  ಅತಿ ಶೀಗ್ರವಾಗಿ ತಲುಪುತ್ತದೆ. ಒಳ್ಳೆಯ ಸುದ್ದಿ ಸಮಾಚಾರಗಳು, ಎಚ್ಚರಿಕೆ ಮೂಡಿಸುವ ಸುದ್ದಿಗಳು ಜನರಿಗೆ ಒಳಿತನ್ನುಂಟು ಮಾಡಿ, ಜಾಗ್ರುತರಾಗುವಂತೆ ಪ್ರೇರೇಪಿಸುತ್ತವೆ. ಇದೇ ಸೋಶಿಯಲ್ ಮೀಡಿಯಾಗಳಲ್ಲಿ ಕಪೋಲ ಕಲ್ಪಿತ ಗಟನೆಗಳು, ಜಾತಿ ಮತ ಪಂತಗಳ ಐಕ್ಯತೆಗೆ ದಕ್ಕೆ ತರುವಂತ ಸುದ್ದಿಗಳನ್ನು ಪಸರಿಸಿ ಜನಗಳ ಮದ್ಯೆ ಜಗಳ ಕಚ್ಚಾಟ ಹುಟ್ಟುಹಾಕಿ ದೇಶದ ಏಕತೆ,ಐಕ್ಯತೆಗೆ ದಕ್ಕೆ ತರಲೂಬಹುದು. ಇನ್ನೂ ಮುಂದುವರಿದು ವ್ಯಕ್ತಿಯ ವ್ಯಕ್ತಿತ್ವಕ್ಕೆ ದಕ್ಕೆ ತರುವ ವ್ಯಂಗ್ಯ, ಟೀಕೆ, ಮಾನಹರಣದಂತಹ ಸಂಗತಿಗಳು ಪ್ರಸರಿಸಿ  ವಿಪ್ಲವವನ್ನು ಸ್ರುಶ್ಟಿಸಬಹುದು. ಇನ್ನೂ ಮನೋರಂಜನೆ ಮನೋರಂಜನೆ ಎಂದು ಬೆಳಗಿನಿಂದ ಸಂಜೆಯವರೆಗೆ ಮೊಬೈಲ್ ಪೋನ್ ನಲ್ಲಿ ಮುಳುಗಿದ್ದು ಗೇಮ್ಸ್‌, ಚಾಟಿಂಗ್, ಸಿನಿಮಾ ಅಂತ ಕಾಲ ಕಳೆಯತೊಡಗಿದ್ದಾರೆ ಹಲವರು. ಹೀಗೆ ಮುಂದುವರಿದರೆ ದೇಶ ಸೋಮಾರಿಗಳ ಸಂತೆಯಾಗಿ, ಮನೋರೋಗಿಗಳ ಬೀಡಾಗಬಹುದು ಎಂದೆನಿಸದೇ ಇರದು.

ನಾವು ಯಾವುದೇ ವಸ್ತು ಅತವಾ ಯಾವುದೇ ವಿಚಾರವನ್ನು ತೆಗೆದುಕೊಂಡರೂ ಅವುಗಳಿಗೆ ಒಳ್ಳೆಯದು ಕೆಟ್ಟದ್ದು ಎಂಬ ಎರಡು ಮುಕಗಳಿದ್ದೆ ಇರುತ್ತವೆ. ನಾವು ಎಚ್ಚರಿಕೆಯಿಂದ ಹದವರಿತು ಅದರ ಒಳ್ಳೆಯ ಮುಕವನ್ನು ಅನುಸರಿಸಿದರೆ ನಾವು ಉತ್ತಮರಲ್ಲಿ ಉತ್ತಮರಾಗಿ ಹೊರಹೊಮ್ಮಿ ಜಾಣರಾಗುತ್ತೀವಿ ಮತ್ತು ಉತ್ಕ್ರುಶ್ಟ ವ್ಯಕ್ತಿತ್ವ ರೂಪಿಸಿಕೊಂಡು ದೇಶಕ್ಕೆ ಆಸ್ತಿಯಾಗಿ ಪರಿಣಮಿಸುತ್ತೀವಿ. ಅದರ ಇನ್ನೊಂದು ಕರಾಳ ಮುಕದ ಜೊತೆಗೆ ಒಗ್ಗೂಡಿ ಅದನ್ನೆ ಮೈಗೂಡಿಸಿಕೊಂಡರೆ ನಾವು ಕರಾಳ ವ್ಯಕ್ತಿತ್ವವನ್ನು ಹೊಂದಿ ವಿಕ್ರುತಿಯನ್ನು ಮೆರೆಯುತ್ತ ದೇಶಕ್ಕೆ ಹೊರೆಯಾಗುತ್ತೀವಿ, ಕಂಟಕಪ್ರಾಯರಾಗಿಬಿಡುತ್ತೀವಿ. ಆದ್ದರಿಂದ ಒಳ್ಳೆಯದೊ,ಕೆಟ್ಟದ್ದೊ ಆಯ್ಕೆ ನಮ್ಮದೇ. ಜೊತೆಗೆ ಕರ‍್ಚು ಮಾಡುವ ಹಣವೂ ನಮ್ಮದೇ. ಜಾಲತಾಣಗಳ ಬಳಕೆಯಲ್ಲಿ ಎಚ್ಚರವಿರಲಿ ಎಂಬುದೇ ಈ ಹೊತ್ತಿನ‌ ಕಳಕಳಿ.

( ಚಿತ್ರ ಸೆಲೆ:  wheelerblogs.files.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: