ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 8ನೆಯ ಕಂತು
– ಸಿ.ಪಿ.ನಾಗರಾಜ.
ಮಾತೆಂಬುದು ಜ್ಯೋತಿರ್ಲಿಂಗ (1444-273)
ಮಾತು+ಎಂಬುದು; ಮಾತು=ನುಡಿ/ಸೊಲ್ಲು; ಎಂಬುದು=ಎನ್ನುವುದು; ಜ್ಯೋತಿ=ಬೆಳಕು/ಕಾಂತಿ/ಪ್ರಕಾಶ/ತೇಜಸ್ಸು/ದೀವಿಗೆ/ದೀಪ; ಲಿಂಗ=ಶಿವನ ಸಂಕೇತವಾದ ವಿಗ್ರಹ;
ಜ್ಯೋತಿರ್ಲಿಂಗ=ಕಾಂತಿಯಿಂದ ಬೆಳಗುತ್ತಾ, ಎಲ್ಲೆಡೆ ಬೆಳಕಿನ ಕಿರಣಗಳನ್ನು ಹರಡುತ್ತಿರುವ ಲಿಂಗ; ‘ಜ್ಯೋತಿರ್ಲಿಂಗ’ ಎಂಬ ಪದವನ್ನು ಒಂದು ರೂಪಕವಾಗಿ ಬಳಸಲಾಗಿದೆ.
ವ್ಯಕ್ತಿಯು ಆಡುವ ಮಾತುಗಳನ್ನು ಬೆಳಗುತ್ತಿರುವ ಲಿಂಗಕ್ಕೆ ಹೋಲಿಸಲಾಗಿದೆ. ಲಿಂಗದಿಂದ ಹೊರಹೊಮ್ಮುತ್ತಿರುವ ಬೆಳಕಿನ ಕಿರಣಗಳು ಸುತ್ತಮುತ್ತಲಿನ ಕತ್ತಲೆಯನ್ನು ನಿವಾರಿಸಿ, ವ್ಯಕ್ತಿಯ ಕಣ್ಣ ಮುಂದಿರುವ ವಸ್ತು/ಜೀವಿಗಳನ್ನು ಸರಿಯಾಗಿ ಕಾಣುವುದಕ್ಕೆ ನೆರವಾಗುತ್ತವೆಯೋ, ಅಂತೆಯೇ ವ್ಯಕ್ತಿಯು ಆಡುವ ಮಾತುಗಳು ಕೇಳುಗರ ಮನದ ಆತಂಕ, ಕಳವಳ, ನೋವನ್ನು ನಿವಾರಿಸಿ ಕೇಳುಗರ ಮನಸ್ಸಿಗೆ ಮುದವನ್ನು ಮತ್ತು ಅರಿವನ್ನು ಮೂಡಿಸುವಂತಿರಬೇಕು. ವ್ಯಕ್ತಿಯು ಆಡುವ ಮಾತುಗಳು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವಂತಿರಬೇಕು.
ವಾಕಿನಿಂ ಪರಬ್ರಹ್ಮವ ನುಡಿವ
ಕುತರ್ಕಿಗಳ ಎಡೆಯಲ್ಲಿಮಾಗಿಯ ಕೋಗಿಲೆಯಂತೆ
ಮೂಗನಾಗಿರಬೇಕು. ( 1580-286)
ವಾಕ್+ಇನ್+ಇಂ; ವಾಕ್=ನುಡಿ/ಮಾತು; ಪರಬ್ರಹ್ಮ=ಪರಮಾತ್ಮ/ಜಗತ್ತಿನಲ್ಲಿರುವ ಸಕಲ ಜೀವಿಗಳ ಹುಟ್ಟಿಗೆ ಕಾರಣನಾದ ದೇವರು/ವೇದ ವೇದಾಂತಗಳ ವಿಚಾರ;
ನುಡಿವ=ಮಾತನಾಡುವ; ತರ‍್ಕ=ವ್ಯಕ್ತಿಯು ತಾನು ಹೇಳುತ್ತಿರುವ ವಿಚಾರವೇ ದಿಟವೆಂದು/ಸರಿಯೆಂದು ವಾದಿಸುವುದು; ತರ್ಕಿ=ತರ‍್ಕವನ್ನು ಮಾಡುವವನು/ವಾದದಲ್ಲಿ ತೊಡಗುವವನು; ಕುತರ್ಕಿ=ತಪ್ಪನ್ನೇ ಸರಿಯೆಂದು, ಸುಳ್ಳನ್ನೇ ಸತ್ಯವೆಂದು, ಕೆಟ್ಟದ್ದನ್ನೇ ಒಳ್ಳೆಯದೆಂದು, ಇಲ್ಲದ್ದನ್ನೇ ಇದೆಯೆಂದು ವಾದಿಸುವ ವ್ಯಕ್ತಿ; ಎಡೆ+ಅಲ್ಲಿ; ಎಡೆ=ಜಾಗ/ನೆಲೆ/ಹತ್ತಿರ/ಸಮೀಪ/ಮುಂದೆ;
ಪರಬ್ರಹ್ಮವ ನುಡಿವ ಕುತರ್ಕಿಗಳು=ಪರಲೋಕದಲ್ಲಿರುವ ಬ್ರಹ್ಮನೆಂಬ ದೇವರಿಂದ ಈ ಜಗತ್ತಿನ ಜೀವರಾಶಿಗಳೆಲ್ಲವೂ ಹುಟ್ಟಿವೆ. ಮಾನವನ ಜೀವನದಲ್ಲಿ ನಡೆಯುವ ಆಗುಹೋಗುಗಳಿಗೆ ಬ್ರಹ್ಮನು ವ್ಯಕ್ತಿಗಳ ಹಣೆಯಲ್ಲಿ ಬರೆದಿರುವ ‘ವಿದಿಲಿಕಿತ’ ವೇ ಕಾರಣವಾಗಿದೆ. ವ್ಯಕ್ತಿಯು ತನ್ನ ಹಿಂದಿನ ಜನ್ಮಗಳಲ್ಲಿ ಮಾಡಿರುವ ಪಾಪಪುಣ್ಯಗಳಿಗೆ ತಕ್ಕಂತೆ ಈ ಜನ್ಮದಲ್ಲಿ ಸಿರಿತನ ಇಲ್ಲವೇ ಬಡತನವನ್ನು , ನೋವು ನಲಿವನ್ನು ಹೊಂದುತ್ತಾನೆ. ದೇವರ ಇಚ್ಚೆಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಈ ಜಗತ್ತಿನಲ್ಲಿ ಅತ್ತಿತ್ತ ಅಲುಗದು ಎಂಬ ಸಂಗತಿಗಳನ್ನು ಹೇಳುವವರನ್ನು ಕುತರ‍್ಕಿಗಳೆಂದು ಕರೆಯಲಾಗಿದೆ. ಏಕೆಂದರೆ ಇಂತಹ ವಿಚಾರವನ್ನು ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ನಿರಾಕರಿಸುತ್ತಾರೆ.
ಮಾನವ ಜೀವಿಯ ಆಗುಹೋಗುಗಳಿಗೆ/ಏಳುಬೀಳುಗಳಿಗೆ ನಿಸರ‍್ಗದಲ್ಲಿ ನಡೆಯುವ ಸಂಗತಿಗಳು ಮತ್ತು ಮಾನವರ ನಡೆನುಡಿಗಳೇ ಕಾರಣವಾಗಿವೆ. ಮಾನವರ ಸಿರಿತನ ಬಡತನಕ್ಕೆ ಕಾರಣ ಬ್ರಹ್ಮನು ಬರೆದ ವಿದಿಲಿಕಿತವಲ್ಲ; ಸಮಾಜದಲ್ಲಿ ದೊಡ್ಡ ಗದ್ದುಗೆಯಲ್ಲಿರುವವರು ಮತ್ತು ಆಸ್ತಿಪಾಸ್ತಿ ಹಣ ಒಡವೆ ವಸ್ತುಗಳನ್ನು ತಮ್ಮದಾಗಿಸಿಕೊಂಡಿರುವ ಸಿರಿವಂತರು ದುಡಿಯುವ ವರ‍್ಗದ ಜನರನ್ನು ನಾನಾ ರೀತಿಗಳಲ್ಲಿ ವಂಚಿಸುತ್ತಿರುವುದು ಶ್ರಮಜೀವಿಗಳ ಹಸಿವು, ಬಡತನ, ಸಂಕಟಕ್ಕೆ ಕಾರಣವಾಗಿದೆ ಎಂಬ ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು. ವ್ಯಕ್ತಿಗಳ ಜೀವನದಲ್ಲಿನ ನೋವು ನಲಿವುಗಳಿಗೆ ವ್ಯಕ್ತಿಗಳ ಒಳ್ಳೆಯ ಇಲ್ಲವೇ ಕೆಟ್ಟ ನಡೆನುಡಿಗಳು ಕಾರಣವೇ ಹೊರತು ಬ್ರಹ್ಮನ ಬರೆದಿರುವ ಹಣೆಬರಹವಲ್ಲ. ಆದ್ದರಿಂದ ಪರಬ್ರಹ್ಮ ತತ್ವವನ್ನು ಕುತರ‍್ಕವೆಂದು ವಚನಕಾರರು ಅಲ್ಲಗಳೆದಿದ್ದಾರೆ;
ಮಾಗಿ=ಚಳಿಗಾಲ; ಕೋಗಿಲೆ+ಅಂತೆ; ಕೋಗಿಲೆ=ಒಂದು ಬಗೆಯ ಹಕ್ಕಿ. ಈ ಹಕ್ಕಿಯ ಕೂಗು ಕೇಳುವುದಕ್ಕೆ ಇಂಪಾಗಿರುತ್ತದೆ. ಬೇಸಿಗೆಯ ವಸಂತಕಾಲದಲ್ಲಿ ಮಾವಿನ ಚಿಗುರನ್ನು ತಿಂದಾಗ ಕೋಗಿಲೆಯು ಆನಂದದಿಂದ ಹಾಡುತ್ತದೆ ಎಂಬ ಕವಿ ಕಲ್ಪನೆಯಿದೆ. ಇಂತಹ ಕೋಗಿಲೆಯು ಮಾಗಿಯ ಕಾಲದಲ್ಲಿ ಅಂದರೆ ಚಳಿಗಾಲದಲ್ಲಿ ಚಳಿಯನ್ನು ತಡೆಯಲಾರದೆ ಕುಗ್ಗಿಹೋಗಿ ಮೂಕವಾಗಿರುತ್ತದೆ ಎಂಬ ಕಲ್ಪನೆಯು ಜನಮನದಲ್ಲಿದೆ; ಅಂತೆ=ಹಾಗೆ/ಆ ರೀತಿ;
ಮೂಗನ್+ಆಗಿ+ಇರಬೇಕು; ಮೂಗ=ಮಾತನ್ನಾಡಲು ಆಗದವನು/ಮಾತು ಬಾರದವನು; ಮಾಗಿಯ ಕೋಗಿಲೆ ಎಂಬ ನುಡಿಗಟ್ಟು ‘ದನಿಯೆತ್ತದೆ ಸುಮ್ಮನಿರಬೇಕು/ಪ್ರತಿಯಾಗಿ ಮಾತನಾಡದಿರಬೇಕು’ ಎಂಬ ತಿರುಳಿನ ರೂಪಕವಾಗಿ ಬಳಕೆಯಾಗಿದೆ.
ಉದ್ದೇಶಪೂರ‍್ವಕವಾಗಿ ಕಟ್ಟುಕತೆಯನ್ನೇ ದಿಟವೆಂದು ಹೇಳುವ ಕುತರ‍್ಕಿಗಳನ್ನು ಎಂದೆಂದಿಗೂ ತಿದ್ದುವುದಕ್ಕೆ ಇಲ್ಲವೇ ಅವರಲ್ಲಿ ಅರಿವನ್ನು ಮೂಡಿಸುವುದಕ್ಕೆ ಆಗುವುದಿಲ್ಲ. ಏಕೆಂದರೆ ಕುತರ‍್ಕಿಗಳು ಸಾಮಾಜಿಕ ವಾಸ್ತವವನ್ನು/ಸತ್ಯವನ್ನು ಎಂದೆಂದಿಗೂ ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ಅಂತಹವರ ಜತೆಯಲ್ಲಿ ಮಾತನ್ನಾಡುವುದರ ಬದಲು ಸುಮ್ಮನಿರಬೇಕು.
ಸಾಸವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ.(123-148)
ಸಾಸವೆ+ಅಷ್ಟು; ಸಾಸವೆ=ಒಂದು ಬಗೆಯ ಕಾಳು. ಇದನ್ನು ಅಡುಗೆಯಲ್ಲಿ ಒಗ್ಗರಣೆಯನ್ನು ಹಾಕಲು ಬಳಸುತ್ತಾರೆ. ರಾಗಿಯ ಕಾಳಿನಂತೆ ತುಂಬಾ ಚಿಕ್ಕದಾಗಿರುತ್ತೆ; ಅಷ್ಟು=ಆ ರೀತಿಯ ಗಾತ್ರ/ಅಳತೆ; ಸುಖ=ಆನಂದ/ನೆಮ್ಮದಿ/ನಲಿವು/ಹಿಗ್ಗು;
ಸಾಗರ+ಅಷ್ಟು; ಸಾಗರ=ಕಡಲು/ಸಮುದ್ರ; ದುಃಖ=ಸಂಕಟ/ನೋವು/ವೇದನೆ/ಕಳವಳ/ಅಳಲು; ನೋಡು=ಕಾಣು/ತಿಳಿ; ನೋಡಾ=ಅರಿತುಕೊಳ್ಳುವುದು/ತಿಳಿದುಕೊಳ್ಳುವುದು;
ವ್ಯಕ್ತಿಯ ಹುಟ್ಟಿನಿಂದ ಸಾವಿನ ತನಕ ಉಂಟಾಗುವ ನೋವು ನಲಿವಿನ ಸಂಗತಿಗಳಲ್ಲಿ ನೋವಿನ ಸಂಗತಿಗಳೇ ಹೆಚ್ಚಾಗಿರುತ್ತವೆ. ಏಕೆಂದರೆ ಯಾವುದೇ ವ್ಯಕ್ತಿಯ ಜೀವನ ಅವನೊಬ್ಬನ ನಡೆನುಡಿಗಳನ್ನೇ ಅವಲಂಬಿಸಿರುವುದಿಲ್ಲ. ಕುಟುಂಬದಲ್ಲಿರುವ ವ್ಯಕ್ತಿಗಳ ಜತೆಯಲ್ಲಿ ಹೊಂದಿರುವ ನಂಟು ಮತ್ತು ಸಹಮಾನವರೊಡನೆ ಪಡೆದಿರುವ ಒಡನಾಟವೆಲ್ಲವೂ ವ್ಯಕ್ತಿಯ ಬದುಕಿನ ಆಗುಹೋಗುಗಳಿಗೆ ಕಾರಣವಾಗುತ್ತವೆ.
ಜೀವನದ ಅನೇಕ ಸನ್ನಿವೇಶಗಳಲ್ಲಿ ವ್ಯಕ್ತಿಯು ತನ್ನದಲ್ಲದ ತಪ್ಪಿಗೆ ಬಲಿಯಾಗಬೇಕಾಗುತ್ತದೆ. ತನ್ನ ಮತ್ತು ತನ್ನವರು ಎನಿಸಿಕೊಂಡವರ ಬದುಕಿನಲ್ಲಿ ಉಂಟಾಗುವ ರೋಗರುಜಿನಗಳು, ಅವಗಡಗಳು, ಬಡತನ ಮತ್ತು ಅಪಮಾನದ ಪ್ರಸಂಗಗಳು ಹೆಚ್ಚಿನ ನೋವನ್ನು ಉಂಟುಮಾಡುತ್ತಿರುತ್ತವೆ.
ಅತಿ ಚಿಕ್ಕದಾಗಿರುವ ಸಾಸವೆಯ ಕಾಳನ್ನು ವ್ಯಕ್ತಿಯ ಬದುಕಿನ ನಲಿವಿಗೆ ಮತ್ತು ಅತಿ ವಿಸ್ತಾರವಾಗಿಯೂ ಆಳವಾಗಿಯೂ ಇರುವ ಸಾಗರದ ಪ್ರಮಾಣವನ್ನು ವ್ಯಕ್ತಿಯ ಬದುಕಿನಲ್ಲಿ ಉಂಟಾಗುವ ನೋವಿಗೆ ರೂಪಕಗಳನ್ನಾಗಿ ಚಿತ್ರಿಸಲಾಗಿದೆ.
( ಚಿತ್ರ ಸೆಲೆ: lingayatreligion.com )
ಇತ್ತೀಚಿನ ಅನಿಸಿಕೆಗಳು