ಬ್ರೆಕ್ಟ್ ಕವನಗಳ ಓದು – 3 ನೆಯ ಕಂತು

– ಸಿ.ಪಿ.ನಾಗರಾಜ.

ದೊಡ್ಡೋರ ಬಗ್ಗೆ ನಾ ಮಾತಾಡೋಲ್ಲಪ್ಪ

(ಅನುವಾದ: ಕೆ.ಪಣಿರಾಜ್)

ತೈಮೂರನಿಗೆ ಲೋಕ ಗೆಲ್ಲುವಾಸೆ ಇತ್ತಂತೆ
ಅವನ ಆಸೆ ನನಗರ್ಥವಾಗೋಲ್ಲಪ್ಪ
ಒಂದು ಗಡಿಗೆ ಹೆಂಡ ಕುಡಿದು
ಲೋಕ ಮರೆತುಬಿಡಬೋದು
ಹಾಗಂತ
ಅಲೆಗ್ಸಾಂಡರನ ಬಗ್ಗೆ ನಾನು ಮಾತಾಡೋಲ್ಲಪ್ಪನಾನು ಹೇಳೋದಿಷ್ಟೇ
ನಾವು ಹೊಗಳಿ ಅಟ್ಟಕ್ಕೇರ್ಸೋ ಮಹಾನ್ ಪುರುಷರು
ನಮ್ಮ ದೈನಂದಿನ ಬವಣೆಗಳನ್ನು ನೀಗಿಸೋರಲ್ಲ
ಮಹಾವೀರರು
ಹಂಡೆ ಬೆವರು ಸುರಿಸಿರ್ಬೋದು ಕಣ್ರೀ
ಆದ್ರೆ ಅವ್ರು
ಸ್ವಂತದ ಕಾಲ ಮೇಲೆ ನಿಂತದ್ದಿಲ್ಲ
ಸೇದಿ ಕುಡಿದು ದಕ್ಕಿಸಿಕೊಂಡವರಲ್ಲ
ಎದೆಗೊರಗಿದ ಇನಿಯಳ ರಮಿಸಿದಂಥೋರಲ್ಲ
ಇಂಥೋರ ತಾಕತ್ತು
ಅಷ್ಟಕ್ಕಷ್ಟೇ ಇರಬೇಕು ಕಣ್ರೀ.

“ಹರಿತವಾದ ಹತಾರಗಳಿಂದ ಸಜ್ಜಾಗಿರುವ ಸೇನೆಯ ಬಲದ ಮೂಲಕ ಜನರನ್ನು ಸಾವು ನೋವಿಗೆ ಗುರಿಮಾಡಿ ಜಗತ್ತನ್ನು ಗೆಲ್ಲಲು ಹೊರಟವರು ಮಹಾನ್ ಕ್ರೂರಿಗಳೇ ಹೊರತು ಮಹಾವೀರರಲ್ಲ” ಎಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

ದೊಡ್ಡೋರ=ದೊಡ್ಡವರನ್ನು; ಬಗ್ಗೆ=ಕುರಿತು; ನಾ=ನಾನು; ಮಾತಾಡೋಲ್ಲಪ್ಪ= ಮಾತನಾಡುವುದಿಲ್ಲ;

ತೈಮೂರ್ ಲಂಗ್ (ಕ್ರಿ.ಶ.1336-1445) . ಈತ ಹುಟ್ಟಿದ್ದು ರಶ್ಯಾ ದೇಶದ ಕೆಶ್ ಎಂಬ ಹಳ್ಳಿಯಲ್ಲಿ. ಜಗತ್ತನ್ನೇ ಗೆಲ್ಲಬೇಕೆಂಬ ದೊಡ್ಡ ಆಶೆಯನ್ನು ಹೊಂದಿದ್ದ ಈತ ಮೊದಲು ಒಂದು ಸಣ್ಣ ಪ್ರಾಂತ್ಯದ ಪಾಳೆಯಗಾರನಾಗಿದ್ದ. ಕ್ರಿ.ಶ.1383 ರಲ್ಲಿ ಪರ್‍ಶಿಯ ದೇಶದ ಮೇಲೆ ದಂಡಯಾತ್ರೆಯನ್ನು ಶುರುಮಾಡಿದ ತೈಮೂರ್ ಲಂಗನು ದೊಡ್ಡ ಸೇನೆಯೊಡನೆ ಅನೇಕ ದೇಶಗಳನ್ನು ಗೆದ್ದು, ಕ್ರಿ.ಶ.1398 ರಲ್ಲಿ ಇಂಡಿಯಾ ದೇಶದ ಮೇಲೆ ದಂಡೆತ್ತಿ ಬಂದು ದೆಹಲಿಯನ್ನು ಕೊಳ್ಳೆಹೊಡೆದು ಹಿಂತಿರುಗಿದ್ದ.

ಲೋಕ=ಜಗತ್ತು/ಪ್ರಪಂಚ; ಗೆಲ್ಲುವ+ಆಸೆ; ಗೆಲ್ಲು=ಜಯಿಸು; ನನಗೆ+ಅರ್ಥ+ಆಗೋಲ್ಲಪ್ಪ; ಆಗೋಲ್ಲಪ್ಪ=ಆಗುವುದಿಲ್ಲ;

ಅವನ ಆಸೆ ನನಗರ್ಥವಾಗೋಲ್ಲಪ್ಪ=ಲೋಕವನ್ನೇ ಗೆಲ್ಲಬೇಕೆಂಬ ತೈಮೂರನ ಆಸೆಯ ಅಂತಿಮ ಗುರಿಯೇನು ಎಂಬುದೇ ನನಗೆ ತಿಳಿಯುವುದಿಲ್ಲ. ಏಕೆಂದರೆ ಈ ರೀತಿ ಜಗತ್ತನ್ನು ಗೆಲ್ಲಲು ಹೊರಟಾಗ ಹೆಜ್ಜೆಹೆಜ್ಜೆಗೂ ಜನರನ್ನು ಹಿಂಸೆಗೆ ಗುರಿಮಾಡುತ್ತ ಮುಂದೆ ಸಾಗಬೇಕು. ಗೆದ್ದ ನಂತರ ಅವನೇನು ಈ ಜಗತ್ತಿನಲ್ಲಿ ಚಿರಂಜೀವಿಯಾಗಿ ಇರುವುದಿಲ್ಲ;

ಗಡಿಗೆ=ಮಣ್ಣಿನ ಕೊಡ/ಮಣ್ಣಿನ ಬಿಂದಿಗೆ; ಹೆಂಡ=ಕುಡಿದಾಗ ಮತ್ತನ್ನು ಉಂಟು ಮಾಡುವ ಪಾನೀಯ;

ಒಂದು ಗಡಿಗೆ ಹೆಂಡ ಕುಡಿದು ಲೋಕ ಮರೆತುಬಿಡಬೋದು=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಯಾಗಿವೆ. ಹೆಂಡವನ್ನು ಕುಡಿದು ಅಮಲೇರಿದ ವ್ಯಕ್ತಿಯು ಇಡೀ ಜಗತ್ತೇ ತನ್ನದೆಂಬಂತೆ ತಿಳಿದುಕೊಂಡು ಆನಂದಪಡುವ ಒಳಮಿಡಿತಗಳನ್ನು ಹೊಂದಿರುತ್ತಾನೆ;

ಹಾಗಂತ=ಅದೇ ರೀತಿಯಲ್ಲಿ;

ಅಲೆಗ್ಸಾಂಡರ್ ( ಕ್ರಿ.ಪೂ.356-323). ‘ಅಲೆಗ್ಸಾಂಡರ್ ದಿ ಗ್ರೇಟ್’ ಎಂದು ಹೆಸರುವಾಸಿಯಾಗಿರುವ ಅಲೆಗ್ಸಾಂಡರನು ಗ್ರೀಸ್ ದೇಶದ ಒಬ್ಬ ಮಹಾನ್ ದಂಡನಾಯಕ. ಗ್ರೀಸ್ ದೇಶಕ್ಕೆ ಸೇರಿದ ಮಸೆಡೊನಿಯ ರಾಜ್ಯದ ರಾಜ. ಅಲೆಗ್ಸಾಂಡರನು ತನ್ನ ಜೀವಿತ ಕಾಲದಲ್ಲಿ ಬಹು ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದನು. ಇವನ ದಂಡಯಾತ್ರೆಯು ಗ್ರೀಸಿನಿಂದ ಹಿಡಿದು ಇಂಡಿಯಾ ದೇಶದ ಹಿಮಾಲಯದ ತಪ್ಪಲಿನವರೆಗೂ ವಿಸ್ತರಿಸಿತ್ತು. ಇಡೀ ಜಗತ್ತನ್ನೇ ಗೆದ್ದು ಎಲ್ಲೆಲ್ಲಿಯೂ ಗ್ರೀಕರ ನಾಗರಿಕತೆಯನ್ನು ನೆಲೆಗೊಳಿಸಬೇಕೆಂಬುದು ಇವನ ದೊಡ್ಡ ಆಸೆಯಾಗಿತ್ತು. ಆದರೆ ಇಂಡಿಯಾ ದೇಶದ ಮೇಲಣ ದಂಡಯಾತ್ರೆಯ ನಂತರ ಸಿಂದೂ ನದಿಯನ್ನು ದಾಟಿ ಕ್ರಿ.ಪೂ.325 ರಲ್ಲಿ ಸೂಸ್ ಎಂಬ ಪಟ್ಟಣವನ್ನು ಸೇರಿದ. ಅಲ್ಲಿಂದ ಬ್ಯಾಬಿಲೋನ್ ನಗರಕ್ಕೆ ಹೋದಾಗ, ಜ್ವರದ ಕಾಯಿಲೆಗೆ ಗುರಿಯಾಗಿ ಕೇವಲ 32 ನೆಯ ವಯಸ್ಸಿನಲ್ಲಿಯೇ ಸಾವನ್ನಪ್ಪಿದನು.

ಬಗ್ಗೆ=ಕುರಿತು; ಮಾತಾಡೋಲ್ಲಪ್ಪ=ಮಾತನಾಡುವುದಿಲ್ಲ;

ಹಾಗಂತ ಅಲೆಗ್ಸಾಂಡರನ ಬಗ್ಗೆ ನಾನು ಮಾತಾಡೋಲ್ಲಪ್ಪ=ಅದೇ ರೀತಿಯಲ್ಲಿ ಜಗತ್ತಿನಲ್ಲಿಯೇ ಹೆಸರುವಾಸಿಯಾಗಿರುವ ಅಲೆಗ್ಸಾಂಡರನನ್ನು ಕುರಿತು ನಾನು ಏನನ್ನೂ ಮಾತನಾಡುವುದಿಲ್ಲ; ಏಕೆಂದರೆ ಅಲೆಗ್ಸಾಂಡರ್ ಮತ್ತು ತೈಮೂರ್ ನಡೆಸಿದ ದಂಡಯಾತ್ರೆಗಳಿಂದ ರಣರಂಗದಲ್ಲಿ ಸಾವಿರಾರು ಮಂದಿ ಸಾವುನೋವುಗಳಿಗೆ ಬಲಿಯಾಗುತ್ತಿದ್ದರು. ಇವರ ಸೇನೆಯು ಗೆದ್ದು ವಶಪಡಿಸಿಕೊಂಡ ಪ್ರಾಂತ್ಯಗಳಲ್ಲಿದ್ದ ಗಂಡಸರು ಮತ್ತು ಮಕ್ಕಳನ್ನು ಕೊಂದು, ಹೆಂಗಸರನ್ನು ವಶಪಡಿಸಿಕೊಂಡು, ಅವರ ಮೇಲೆ ಅತ್ಯಾಚಾರವನ್ನು ನಡೆಸಿ, ಅವರ ಒಡವೆ ವಸ್ತುಗಳನ್ನು ಲೂಟಿ ಮಾಡಿ, ಊರಿಗೆ ಬೆಂಕಿಯನ್ನೊಡ್ಡುತ್ತಿದ್ದರು. ಈ ರೀತಿ ಮಾನವ ಸಮುದಾಯದ ಸಂಕಟಕ್ಕೆ ಕಾರಣವಾಗುವ ಇಂತಹವರನ್ನು ಮಹಾವೀರರೆಂದು ಕರೆಯದೆ, ಮಹಾಕ್ರೂರಿಗಳೆಂದು ಗುರುತಿಸಬೇಕು ಎಂಬ ಆಶಯವನ್ನು ಈ ನುಡಿಗಳು ಹೊಂದಿವೆ;

ನಾನು ಹೇಳೋದಿಷ್ಟೆ=ನಾನು ಹೇಳುತ್ತಿರುವುದು ಒಂದು ಸರಳವಾದ ಸಂಗತಿ; ಹೊಗಳು=ಕೊಂಡಾಡು/ಸ್ತುತಿಸು/ಬಣ್ಣಿಸು; ಅಟ್ಟಕ್ಕೆ+ಏರ್ಸೋ; ಏರ್ಸೋ=ಏರಿಸುವ;

ಹೊಗಳಿ ಅಟ್ಟಕ್ಕೇರಿಸು=ಇದೊಂದು ನುಡಿಗಟ್ಟು. ಯಾವುದೇ ವ್ಯಕ್ತಿಯ ನಡೆನುಡಿಯನ್ನು ಇಂಪಾದ ಪದಗಳಲ್ಲಿ ಬಣ್ಣಿಸುತ್ತ, ಅವರನ್ನು ಎಲ್ಲರಿಗಿಂತ ದೊಡ್ಡವರೆಂದು ಪರಿಗಣಿಸುವುದು; ಮಹಾನ್=ದೊಡ್ಡದು/ಅತ್ಯುತ್ತಮವಾದುದು; ದೈನಂದಿನ=ದಿನನಿತ್ಯದ/ಪ್ರತಿದಿನದ; ಬವಣೆ=ತೊಂದರೆ/ಸಂಕಟ;

ನಮ್ಮ ದೈನಂದಿನ ಬವಣೆಗಳು=ಜಗತ್ತಿನಲ್ಲಿರುವ ನಾವೆಲ್ಲರೂ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯವನ್ನು ಪಡೆದು ನೆಮ್ಮದಿಯಿಂದ ಜೀವನವನ್ನು ನಡೆಸಲು ಹಂಬಲಿಸುತ್ತಿರುತ್ತೇವೆ. ಆದರೆ ಇವು ಎಲ್ಲರಿಗೂ ಸಾಕಾಗುವಶ್ಟು ದೊರೆಯದೆ ಜಗತ್ತಿನ ಜನಸಮುದಾಯದಲ್ಲಿ ಬಹುತೇಕ ಮಂದಿ ಪ್ರತಿನಿತ್ಯ ಪರಿತಪಿಸುತ್ತಿದ್ದಾರೆ;

ನೀಗಿಸು=ಪರಿಹರಿಸು/ನಿವಾರಿಸು/ಇಲ್ಲದಂತೆ ಮಾಡು;

ನಾವು ಹೊಗಳಿ ಅಟ್ಟಕ್ಕೇರ್ಸೋ ಮಹಾನ್ ಪುರುಷರು ನಮ್ಮ ದೈನಂದಿನ ಬವಣೆಗಳನ್ನು ನೀಗಿಸೋರಲ್ಲ=ಮಹಾವ್ಯಕ್ತಿಗಳೆಂದು ನಾವು ಹೊಗಳಿ ಕೊಂಡಾಡುವ ತೈಮೂರ್ ಮತ್ತು ಅಲೆಕ್ಸಾಂಡರ್ ಅಂತಹವರು ಜಗತ್ತಿನಲ್ಲಿರುವ ಜನರ ದಿನನಿತ್ಯದ ಸಂಕಟಗಳನ್ನು ಪರಿಹರಿಸುವಂತಹವರಲ್ಲ. ಜಗತ್ತಿನ ಜನಸಮುದಾಯಕ್ಕೆ ನೋವನ್ನು ಕೊಡುವವರು;

ಹಂಡೆ=ಲೋಹದ ದೊಡ್ಡ ಪಾತ್ರೆ;

ಹಂಡೆ ಬೆವರು ಸುರಿಸಿರ್ಬೋದು=ಇದೊಂದು ರೂಪಕ. ದಂಡಯಾತ್ರೆಯನ್ನು ಮಾಡುವಾಗ ತುಂಬಾ ಅಡೆತಡೆಗಳನ್ನು ಎದುರಿಸಿ ಕೆಚ್ಚು, ಪರಾಕ್ರಮ ಮತ್ತು ಪರಿಶ್ರಮದಿಂದ ಜಯವನ್ನು ಪಡೆದಿರಬಹುದು;

ಸ್ವಂತ ಕಾಲ ಮೇಲೆ ನಿಲ್ಲು=ಇದು ಒಂದು ರೂಪಕ. ವ್ಯಕ್ತಿಯು ತನ್ನೊಬ್ಬನ ಪರಿಶ್ರಮದಿಂದಲೇ ಜೀವನದಲ್ಲಿ ತಾನು ಅಂದುಕೊಂಡ ಗುರಿಯನ್ನು ಮುಟ್ಟುವುದು;

ಮಹಾವೀರರು ಹಂಡೆ ಬೆವರು ಸುರಿಸಿರ್ಬೋದು ಕಣ್ರೀ. ಆದ್ರೆ ಅವ್ರು ಸ್ವಂತದ ಕಾಲ ಮೇಲೆ ನಿಂತದ್ದಿಲ್ಲ=ಮಹಾವೀರರೆಂದು ಹೆಸರು ಪಡೆದವರೆಲ್ಲರೂ ಸೇನೆಯಲ್ಲಿರುವ ಸಾವಿರಾರು ಮಂದಿ ಹೋರಾಟಗಾರರ ಬಲಿದಾನದಿಂದ ದೊಡ್ಡ ದೊಡ್ಡ ಜಯಗಳನ್ನು ಪಡೆದು ದೇಶ ವಿದೇಶಗಳನ್ನು ಗೆದ್ದಿದ್ದಾರೆಯೇ ಹೊರತು, ತಮ್ಮೊಬ್ಬರ ಶಕ್ತಿಯಿಂದಲೇ ಗೆದ್ದಿಲ್ಲ;

ಸೇದು=ಬೀಡಿ ಸಿಗರೇಟು ಮುಂತಾದವನ್ನು ಬಳಸುವುದು; ಕುಡಿದು=ಮಾದಕ ಪಾನೀಯಗಳನ್ನು ಸೇವಿಸುವುದು; ದಕ್ಕಿಸಿಕೊಂಡವರು+ಅಲ್ಲ; ದಕ್ಕು=ದೊರಕು/ಸಿಕ್ಕು/ಅರಗು; ದಕ್ಕಿಸುಕೊಂಡವರು=ಅರಗಿಸಿಕೊಂಡವರು/ತಮ್ಮದನ್ನಾಗಿ ಮಾಡಿಕೊಂಡವರು;

ಸೇದಿ ಕುಡಿದು ದಕ್ಕಿಸಿಕೊಂಡವರಲ್ಲ=ಮಹಾವೀರರೆಂದು ಹೆಸರುವಾಸಿಯಾದ ಇವರೆಲ್ಲರೂ ಜಗತ್ತಿನಲ್ಲಿ ಕೋಟಿಗಟ್ಟಲೆ ಜನರು ತಮ್ಮ ನಿತ್ಯ ಜೀವನದಲ್ಲಿ ಬೀಡಿ ಸಿಗರೇಟುಗಳನ್ನು ಸೇದುತ್ತ, ಮಾದಕ ಪಾನೀಯಗಳನ್ನು ಕುಡಿಯುತ್ತ ಪಡೆಯುವ ಸರಳವಾದ ಆನಂದವನ್ನಾಗಲಿ ಇಲ್ಲವೇ ನೆಮ್ಮದಿಯನ್ನಾಗಿ ಪಡೆದವರಲ್ಲ;

ಎದೆಗೆ+ಒರಗಿದ; ಒರಗು=ನೆಮ್ಮು/ಮಲಗು; ಇನಿಯಳು=ಪ್ರಿಯತಮೆ/ಒಲಿದವಳು; ರಮಿಸಿದಂಥೋರ್+ಅಲ್ಲ; ರಮಿಸು=ಆನಂದಪಡಿಸು;

ಎದೆಗೊರಗಿದ ಇನಿಯಳ ರಮಿಸಿದಂಥೋರಲ್ಲ=ಒಲವು ನಲಿವಿನಿಂದ ಬಳಿಸಾರಿ ಬಂದು ಎದೆಯ ಮೇಲೆ ಒರಗಿದ ಇನಿಯಳನ್ನು ಪ್ರೀತಿಯಿಂದ ಮುದ್ದಾಡಿ, ಅವಳೊಡನೆ ಜತೆಗೂಡಿ ಆನಂದಪಡುವಂತಹ ನಡೆನುಡಿಯನ್ನು ಹೊಂದಿಲ್ಲದವರು. ಅಂದರೆ ಮಾನವ ಸಹಜವಾದ ಕಾಮ ಪ್ರೇಮದ ಒಳಮಿಡಿತಗಳನ್ನೇ ಕಡೆಗಣಿಸಿದವರು;

ಇಂಥೋರ=ಇಂತಹವರ/ಮಾನವ ಸಹಜವಾಗಿ ನಡೆದುಕೊಳ್ಳದೆ ಮಾನವ ಸಮುದಾಯದ ಬದುಕನ್ನೇ ನಾಶಮಾಡವವರ; ತಾಕತ್ತು=ಕಸುವು/ಶಕ್ತಿ/ಬಲ; ಅಷ್ಟಕ್ಕಷ್ಟೇ=ದೊಡ್ಡದಾಗಿ ಹೇಳಿಕೊಳ್ಳುವಂತಹುದಲ್ಲ/ಅತಿ ಸಾಮಾನ್ಯವಾದುದು;

ಇಂಥೋರ ತಾಕತ್ತು ಅಷ್ಟಕ್ಕಷ್ಟೇ ಇರಬೇಕು ಕಣ್ರೀ.=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ಮಹಾವೀರರೆಂದು ಹೆಸರನ್ನು ಪಡೆದವರು ಬಹಿರಂಗದಲ್ಲಿ ಮಹಾಬಲಶಾಲಿಗಳಂತೆ ಕಂಡುಬಂದರೂ, ಅಂತರಂಗದಲ್ಲಿ ಮಾನವ ಸಹಜವಾದ ಪ್ರೀತಿ,ಕರುಣೆ ಮತ್ತು ಗೆಳೆತನದ ಒಳಮಿಡಿತಗಳಿಲ್ಲದ ದುರ್‍ಬಲರು. ಸಹಮಾನವರೊಡನೆ ಜತೆಗೂಡಿ ಒಲವು ನಲಿವು ನೆಮ್ಮದಿಯಿಂದ ಬಾಳಲಾರದವರು;

ಸಹಮಾನವರನ್ನು ಕೊಲ್ಲುವವನು ದೊಡ್ಡವನಲ್ಲ; ಸಹಮಾನವರೊಡನೆ ಜತೆಗೂಡಿ ನೆಮ್ಮದಿಯಿಂದ ಬಾಳುವವನು ದೊಡ್ಡವನು ಎಂಬ ಸಂದೇಶವನ್ನು ಈ ಕವನ ಹೇಳುತ್ತಿದೆ.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks