ಸುಳ್ಳುಸುದ್ದಿ : ಕೆಡುಕು ಮತ್ತು ಸಾಮಾಜಿಕ ಜವಾಬ್ದಾರಿ
ಇಂಗ್ಲೀಶ್ ಬಾಶೆಯ ಪ್ರಸಿದ್ದ ಲೇಕಕ ಟೆರ‍್ರಿ ಪ್ರ್ಯಾಚೆಟ್ ಒಂದು ಕಡೆ ಬರೀತಾರೆ “ಸತ್ಯ ತನ್ನ ಪ್ರಪಂಚ ಪರ‍್ಯಟನೆಗಾಗಿ ಬೂಟುಗಳನ್ನು ದರಿಸುವ ಮೊದಲೇ ಸುಳ್ಳು ಒಮ್ಮೆ ಪ್ರಪಂಚದಾದ್ಯಂತ ಚಲಿಸಿ ಬಂದು ಬಿಟ್ಟಿರುತ್ತದೆ” ಎಂದು. ಎಶ್ಟು ನಿಜ ಅಲ್ವ. ಸಾಮಾಜಿಕ ಮಾದ್ಯಮಗಳ ಬರಾಟೆಯ ಈ ಯುಗದಲ್ಲಿ ಸುಳ್ಳು ಸುದ್ದಿ ಕ್ಶಣ ಮಾತ್ರದಲ್ಲಿ ಹಬ್ಬಿ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತಿರುವುದು ಸುಳ್ಳಲ್ಲ. “ಪ್ರತ್ಯಕ್ಶ ಕಂಡರೂ ಪ್ರಮಾಣಿಸಿ ನೋಡು” ಅಂತ ನಮ್ಮ ಹಿರಿಯರು ಹೇಳಿದ್ದಾರೆ. ಆದರೆ ಪ್ರಮಾಣಿಸಿ ನೋಡೋದು ಬಿಟ್ಟುಬಿಡಿ, ಪ್ರತ್ಯಕ್ಶ ಕಂಡರೂ ತಮ್ಮ ಕಣ್ಣುಗಳಿಗಿಂತ ಜಾಸ್ತಿ ಸುಳ್ಳು ವದಂತಿಗಳನ್ನು ನಂಬುವ ಕಾಲವಾಗಿದೆ ಇಂದು.
ಅಶ್ಟಕ್ಕೂ ಈ ಸುಳ್ಳು ವದಂತಿಗಳನ್ನು ಹಬ್ಬಿಸುವವರು ಯಾರು? ದ್ವೇಶ, ಅಸೂಯೆ, ಮತ್ಸರ, ಸ್ವಾರ‍್ತ ಮನಸುಗಳು ಸುಳ್ಳು ಸುದ್ದಿಯನ್ನು ಹೇಳಲು ಶುರು ಮಾಡಿದರೆ, ಮೂರ‍್ಕ, ಕುರುಡು ಮನಸುಗಳು ವದಂತಿಗಳನ್ನು ಹರಡುತ್ತವೆ ಮತ್ತು ಕಡೆಯದಾಗಿ ಮೂರ‍್ಕ ಮನಸುಗಳು ಇದನ್ನು ನಂಬಿ ಬಿಡುತ್ತವೆ. ನಶ್ಟ ಯಾರಿಗೆ? ಇದನ್ನು ಕಣ್ಣು ಮುಚ್ಚಿ ನಂಬಿ ಬಿಡುವ ಮಂದಿಗೆ!
ಈ ಸುಳ್ಳು ವದಂತಿಗಳು ನಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಜೀವನದಲ್ಲಿ ಉಂಟುಮಾಡುವ ಅನಾಹುತಗಳು ಊಹಿಸಿದರೇನೇ ಬಯವಾಗಿಬಿಡುತ್ತೆ. ನಮ್ಮ ದಿನನಿತ್ಯದ ಜೀವನದಲ್ಲೇ ನಡೆಯುವ ಗಟನೆಗಳ ಬಗ್ಗೆನೇ ಬೆಳಕು ಚೆಲ್ಲುವುದಾದರೆ, ಕೆಲ ದಿನಗಳ ಹಿಂದೆ ಹೀಗೆ ದಿನಪತ್ರಿಕೆ ತಿರುವಿ ಹಾಕುತ್ತಿದ್ದೆ. ಸಾಮಾಜಿಕ ಮಾದ್ಯಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಶಾ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದು ವದಂತಿ ಹಬ್ಬಿಸುವವರ ವಿರುದ್ದ ಕಟಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಮ್ಮ ರಾಜ್ಯದ ಶಿಕ್ಶಣ ಸಚಿವರು ಒಂದು ಎಚ್ಚರಿಕೆಯನ್ನು ಕೊಟ್ಟಿದ್ರು. ಯೋಚಿಸಿ ನೋಡಿ. ಎಶ್ಟೊಂದು ಮಕ್ಕಳ ಬವಿಶ್ಯ ಈ ಪರೀಕ್ಶೆಗಳಲ್ಲಿ ನಿರ‍್ದಾರವಾಗುತ್ತೆ. ಕಶ್ಟ ಪಟ್ಟು ಓದಿರುವ ಮಕ್ಕಳಿಗೆ ಪರೀಕ್ಶೆ ಮುಂದೂಡಲಾಗುತ್ತದೆ ಎಂದರೆ ಅತವಾ ಪರೀಕ್ಶೆ ಮುಂದೂಡಿದರೆ ಎಶ್ಟೊಂದು ಆತಂಕ, ಮಾನಸಿಕ ತಳಮಳ ಮತ್ತು ಪೋಶಕರಿಗೆ ಎಶ್ಟೊಂದು ಕಳವಳ. ಇಂತಹ ವದಂತಿಗಳು ಸಮಾಜದಲ್ಲಿ ಅಶಾಂತಿಯನ್ನುಟುಮಾಡುತ್ತವೆ ವಿನಾ ಬೇರೇನೂ ಲಾಬವಿಲ್ಲ. ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಮಕ್ಕಳ ಬವಿಶ್ಯದ ಜೊತೆ ಆಟವಾಡುವವರು ಎಶ್ಟೊಂದು ಕ್ರೂರ ಮನಸುಳ್ಳವರು!
ಅದೇನೋ ಗೊತ್ತಿಲ್ಲ, ಕೆಲವರಿಗೆ ಸುಳ್ಳು ವಂದತಿಗಳನ್ನು ಹಬ್ಬಿಸುವುದೇ ಒಂದು ಚಟವಾಗಿಬಿಟ್ಟಿದೆ. ಮೊನ್ನೆ ವಾಟ್ಸ್ಯಾಪ್ ನಲ್ಲಿ ಒಂದು ಸಂದೇಶ ತುಂಬಾನೇ ಹರಿದಾಡುತಿತ್ತು. ಯಾವಾಗಲೋ ಕಾಯಿಲೆ ಬಂದ ಒಂದು ಕೋಳಿಯ ಪೋಟೋವನ್ನು ವಾಟ್ಸ್ಯಾಪ್ ನಲ್ಲಿ ಹರಿಯಬಿಟ್ಟು, ಕೋಳಿಗೆ ಕರೋನ ವೈರಸ್ ಬಂದುಬಿಟ್ಟಿದೆ. ಕೋಳಿ ತಿನ್ನಬೇಡಿ ಅಂತ ಸುಳ್ಳು ಸುದ್ದಿ ಹಬ್ಬಿಸಿದರು. ವಿಶಯ ತುಂಬಾ ಚಿಕ್ಕದು. ಸಸ್ಯಾಹಾರಿಗಳು ನಾವು ಕೋಳಿ ತಿನ್ನಲ್ಲ ಅಂತ ನೆಮ್ಮದಿಯ ನಿಟ್ಟುಸಿರು ಬಿಟ್ಟರೆ, ಮಾಂಸಾಹಾರಿಗಳ ನಿದ್ದೇನೆ ಹಾಳಾಗಿಬಿಟ್ಟಿತು. ಅಯ್ಯೋ ದೇವ್ರೇ ನಾನು ನಿನ್ನೆ ತಾನೇ ಕೋಳಿ ಮಾಂಸ ತಿಂದಿದ್ದೆ, ನನಗೆ ಕಾಯಿಲೆ ಬರುತ್ತದೆಯೋ ಏನೋ ಅಂತ ತಮ್ಮ ಮಾನಸಿಕ ನೆಮ್ಮದಿ ಹಾಳು ಮಾಡಿಕೊಂಡ್ರು. ಇಂದು ಒಂದು ವಿಚಾರವಾದ್ರೆ ಪಾಪ ಬಡಪಾಯಿ ಮಾಂಸದ ಅಂಗಡಿಯವರು ವ್ಯಾಪಾರವಿಲ್ಲದೆ ಸೊರಗಿದ್ರು. ನೋಡಿ, ಒಂದು ಸಣ್ಣ ಸುಳ್ಳು ವದಂತಿಯಿಂದ ಹೇಗೆ ವೈಯಕ್ತಿಕ ಮತ್ತು ಸಾಮಾಜಿಕ ನೆಮ್ಮದಿ ಹಾಳಾಗಿ ಹೋಗಿಬಿಡುತ್ತೆ ಅಂತ.
ಇನ್ನು ಸುಳ್ಳು ವದಂತಿಗಳನ್ನು ಹಬ್ಬಿಸುವುದರಲ್ಲಿ ರಾಜಕೀಯ ಪಕ್ಶಗಳು ಮತ್ತು ಅದರ ಕಾರ‍್ಯಕರ‍್ತರದು ಎತ್ತಿದ ಕೈ. ತಮ್ಮ ವಿರೋದಿಗಳ ವಿಡಿಯೋಗಳನ್ನೂ, ಮಾತುಗಳನ್ನು ತಮಗೆ ಬೇಕಾದ ಹಾಗೆ ತಿರುಚಿ, ಇಲ್ಲವೇ ತಮ್ಮ ತಮ್ಮ ನಾಯಕರುಗಳನ್ನು ಅತಿಮಾನುಶ ಶಕ್ತಿಯುಳ್ಳವರನ್ನಾಗಿ ಚಿತ್ರಿಸಿ, ಸಾಮಾಜಿಕ ಮಾದ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ಸಮಾಜದ ಸ್ವಾಸ್ತ್ಯ ಕೆಡಿಸುವುದರಲ್ಲಿ ಇವರನ್ನು ಮೀರಿಸಲು ಯಾರಿಂದಲೂ ಸಾದ್ಯವಿಲ್ಲ. ಇವಕ್ಕೆ ಟಿವಿ ಮಾದ್ಯಮಗಳು ಕೂಡ ಹೊರತಾಗಿಲ್ಲ. ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಲು ತಮಗೆ ಬೇಕಾದ ಸುಳ್ಳು ಸುದ್ದಿಗಳನ್ನು, ವದಂತಿಯನ್ನು ಟಿವಿ ಮಾದ್ಯಮಗಳು ಹಬ್ಬಿಸಿಬಿಡುತ್ತವೆ.
ಕೆಲ ದಿನದ ಹಿಂದೆ ಪೇಸ್ಬುಕ್ ನಲ್ಲಿ ಒಂದು ವಿಡಿಯೋ ನೋಡಿದೆ. ನಗು ಬಂತು.ಯಾವುದೊ ಒಂದು ಟಿವಿ ಚಾನೆಲ್ ನಲ್ಲಿ ಪ್ರಳಯವಾಗುತ್ತೆ, ಮಂಗಳೂರು ಮುಳುಗಿ ಹೋಗುತ್ತೆ ಅಂತ ಸುದ್ದಿ ಪ್ರಸಾರ ಮಾಡಿದ್ರು. ಆ ಚಾನೆಲಿಗೆ ಮಂಗಳೂರಿನಿಂದ ಒಬ್ಬ ಜವಾಬ್ದಾರಿಯುತ ನಾಗರಿಕ ಕರೆ ಮಾಡಿ ಸರಿಯಾಗಿ ತರಾಟೆ ತೆಗೆದುಕೊಂಡ ವಿಡಿಯೋ ಅದು. ಸಾಮಾಜಿಕ ಜವಾಬ್ದಾರಿಯುಳ್ಳ ಟಿವಿ ಮಾದ್ಯಮ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಸಮಾಜದ ಸ್ವಾಸ್ತ್ಯವನ್ನು ಕೆಡಿಸುವ ಕೆಲಸ ಮಾಡಿದರೆ ಹೇಗೆ?
ಹಾಗಂತ ಎಲ್ಲ ಸುಳ್ಳು ವದಂತಿಗಳು ಕೆಟ್ಟವು ಅಂತೇನಲ್ಲ. ಕೆಲವೊಂದು ತಮಾಶೆಯ ಸುಳ್ಳು ಸುದ್ದಿಗಳು ಸಮಾಜದಲ್ಲಿ ಹರಡುತ್ತವೆ. ಇವನ್ನು ಕೇಳಿ ನಕ್ಕು ಮರೆತುಬಿಡಬಹುದು. ಆದರೆ ಬಹುತೇಕ ಸುಳ್ಳು ಸುದ್ದಿಗಳನ್ನು ತಮ್ಮ ಸ್ವಾರ‍್ತಕೋಸ್ಕರಾನೇ ಜನ ಹರಿಯಬಿಡುತ್ತಾರೆ. ಅವರ ಮೂಲ ಉದ್ದೇಶ ಇತರರಿಗೆ ಹಾನಿ ಮಾಡುವುದೇ ಆಗಿರುತ್ತೆ. ಜನ ಸತ್ಯಕ್ಕಿಂತ ಜಾಸ್ತಿ ಸುಳನ್ನೇ ನಂಬುತ್ತಾರೆ. ಎಶ್ಟೋ ಜನ ಇಂತಹ ಸುಳ್ಳು ವದಂತಿಗಳಿಗೆ ಬಲಿಯಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡ ಅಸಂಕ್ಯಾತ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ, ಅಂತಾ ಆಗುಹಗಳು ನಡೆಯುತ್ತಲೂ ಇವೆ. ಎರಡು ವರುಶಗಳ ಹಿಂದೆ ನಡೆದ ಒಂದು ಗಟನೆಯ ಬಗ್ಗೆ ನೆನಪು ಮಾಡಿಕೊಳ್ಳೋದಾದ್ರೆ, ‘ಮಕ್ಕಳ ಕಳ್ಳರಿದ್ದಾರೆ, ಎಚ್ಚರಿಕೆ’ ಎನ್ನುವ ಒಂದು ಸುಳ್ಳು ಸುದ್ದಿ ಸಾಮಾಜಿಕ ಮಾದ್ಯಮಗಳಲ್ಲಿ ಹರಿದಾಡಿದ ಪರಿಣಾಮ, ಸಾಮಾನ್ಯ ಜನ ಕೆಲವು ಅಮಾಯಕರನ್ನು ಮಕ್ಕಳ ಕಳ್ಳರೆಂದುಕೊಂಡು, ಅವರನ್ನು ಹೊಡೆದ ಪ್ರಕರಣಗಳು ದಾಕಲಾಗಿದ್ದೂ ಉಂಟು.
ಇನ್ನು ಈ ಸುಳ್ಳು ವದಂತಿಗಳು ಸಮಾಜದ ಮೇಲೆ ಬೀರುವ ಪರಿಣಾಮಗಳು ಊಹಿಸಲಸಾದ್ಯ. ಎಶ್ಟೋ ಬಾರಿ ಈ ಸುಳ್ಳು ವದಂತಿಗಳಿಂದ ಸಮಾಜ ಹೊತ್ತಿ ಉರಿದಿದೆ. ಅಪಾರ ಪ್ರಾಣ ಹಾನಿ, ನಶ್ಟ ಸಂಬವಿಸಿದೆ. ಸರ‍್ಕಾರವೇನೋ ಕೆಲವು ಸಂದರ‍್ಬಗಳಲ್ಲಿ ಇಂಟರ‍್ನೆಟ್ ಸ್ತಗಿತಗೊಳಿಸಿ, ಸುಳ್ಳು ಸುದ್ದಿ ಹರಡಿ ಹಾನಿಯಾಗದಂತೆ ತಡೆಯುವ ಪ್ರಯತ್ನ ಮಾಡುತ್ತದೆ ಎನ್ನುವುದು ನಿಜವಾದ್ರೂ ಅದು ಶಾಶ್ವತ ಪರಿಹಾರವಲ್ಲ. ಅಶ್ಟಕ್ಕೂ ಈ ಸಮಸ್ಯೆಗೆ ಶಾಶ್ವತ ಪರಿಹಾರವೂ ಇಲ್ಲ ಎಂದೆನಿಸುತ್ತದೆ. ಯಾವುದನ್ನೂ ನಂಬಬೇಕು, ಬಿಡಬೇಕು ಎನ್ನುವುದು ನಮ್ಮ ವಿವೇಚನೆಗೆ ಬಿಟ್ಟದ್ದು.
ಈ ಸಂದರ‍್ಬದಲ್ಲಿ ಒಂದು ಪ್ರಸಿದ್ದ ಕನ್ನಡ ಚಿತ್ರಗೀತೆ ನೆನಪು ಬರುತ್ತದೆ.
“ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿದಾನಿಸಿ ಯೋಚಿಸಿದಾಗ ನಿಜವು ತಿಳಿವುದು”. ಹೌದು ವಿವೇಚನೆಯಿಂದ ಯೋಚನೆ ಮಾಡಿದಾಗ, ಸುದ್ದಿಯ ಮೂಲ ಹುಡುಕಿದಾಗ ವದಂತಿಯಲ್ಲಿ ಕಾಳೆಶ್ಟು ಜೊಳ್ಳೆಶ್ಟು ಎಂದು ನಮಗೆ ತಿಳಿದುಬರುತ್ತದೆ.
ಕಡೆಯದಾಗಿ ಹೇಳೋದಾದ್ರೆ ‘ಸತ್ಯಕ್ಕೆ ಎಂದೂ ಸಾವಿಲ್ಲ. ಸುಳ್ಳು ಸುದ್ದಿ ಸೋಲಲಿ, ತಾಳ್ಮೆ ಮತ್ತು ಸತ್ಯ ಗೆಲ್ಲಲಿ. ಸಾಮಾಜಿಕವಾಗಿ ಮತ್ತು ವೈಯಕ್ತಿಕವಾಗಿ ಸುಳ್ಳು ವದಂತಿಗಳ ಪರಿಣಾಮವನ್ನು ತಡೆಯುವ ಶಕ್ತಿ ನಮ್ಮೆಲ್ಲರಿಗೂ ಸಿಗಲಿ’
( ಚಿತ್ರಸೆಲೆ : bbc.com )
ಇತ್ತೀಚಿನ ಅನಿಸಿಕೆಗಳು