ಉಪಾಯ ಬಲ್ಲವರಿಗೆ ಅಪಾಯವಿಲ್ಲ

–  ಪ್ರಕಾಶ್ ಮಲೆಬೆಟ್ಟು.

ಒಂದೂರಿನಲ್ಲಿ ಒಬ್ಬ ವ್ಯಾಪಾರಿಯಿದ್ದನು. ಆತನಿಗೆ ಒಬ್ಬಳು ಸುಂದರವಾದ ಮಗಳಿದ್ದಳು. ಆ ವ್ಯಾಪಾರಿ ಸ್ವಲ್ಪ ಕಶ್ಟದಲ್ಲಿ ಇದ್ದುದರಿಂದ, ಆ ಊರಿನ ಒಬ್ಬ ಶ್ರೀಮಂತ ಮುದುಕನ ಬಳಿ ಸಹಾಯ ಕೇಳುತ್ತಾನೆ. ಆ ಶ್ರೀಮಂತ ಮುದುಕನಿಗೆ, ವ್ಯಾಪಾರಿಯ ಮಗಳ ಮೇಲೆ ಕಣ್ಣು! ಹಾಗಾಗಿ ಆತ ಈ ವ್ಯಾಪಾರಿಗೆ ಸ್ವಲ್ಪ ಹಣವನ್ನು ಸಾಲದ ರೂಪದಲ್ಲಿ ಕೊಡುತ್ತಾನೆ. ಆದರೆ ಮಾತಿನಂತೆ ಗಡುವಿನೊಳಗೆ ವ್ಯಾಪಾರಿಗೆ ಸಾಲ ತೀರಿಸಲು ಸಾದ್ಯವಾಗುವುದಿಲ್ಲ. ಇಂತಹ ಗಳಿಗೆಯನ್ನೇ ಕಾಯುತಿದ್ದ ಮುದುಕ, ವ್ಯಾಪಾರಿಯ ಬಳಿ ಹೀಗೆ ಹೇಳುತ್ತಾನೆ. “ನೋಡಪ್ಪ ನಾಳೆಯೊಳಗೆ ನನ್ನ ಸಾಲ ಮರಳಿ ಕೊಡು, ಇಲ್ಲದಿದ್ದಲ್ಲಿ ನಿನ್ನ ಮಗಳನ್ನು ನನಗೆ ಮದುವೆ ಮಾಡಿಕೊಡು!”. ಯಾವ ಅಪ್ಪನಿಗೆ ತನ್ನ ಮಗಳನ್ನು ಒಬ್ಬ ಮುದುಕನಿಗೆ ಕೊಟ್ಟು ಮದುವೆ ಮಾಡಿಕೊಡಲು ಮನಸ್ಸು ಬರುತ್ತದೆ? ಅವನು ದುಕ್ಕದ ಮಡುವಿನಲ್ಲಿ ಮುಳುಗಿ ಹೋಗುತ್ತಾನೆ. ಆಗ ಆ ಮುದುಕ ಹೇಳುತ್ತಾನೆ “ನೋಡಪ್ಪ ವ್ಯಾಪಾರಿ, ನಿನಗೆ ಇನ್ನೊಂದು ಅವಕಾಶ ಕೊಡುತ್ತೇನೆ. ನಾಳೆ ನಿನ್ನ ಮಗಳನ್ನು ಕರೆದುಕೊಂಡು ಬಾ. ನೋಡು, ಇಲ್ಲಿ ಕೆಳಗೆ ಎಶ್ಟೊಂದು ಕಲ್ಲುಗಳಿವೆ. ನಾಳೆ ನಾನು ಎರಡು ಚೀಲ ತರುತ್ತೇನೆ. ಒಂದು ಚೀಲದಲ್ಲಿ ಕಪ್ಪು ಮತ್ತು ಮತ್ತೊಂದು ಚೀಲದಲ್ಲಿ ಬಿಳಿಯ ಕಲ್ಲನ್ನು ಹಾಕುತ್ತೇನೆ. ನಿನ್ನ ಮಗಳು ಯಾವುದಾದರು ಒಂದು ಚೀಲದೊಳಗೆ ಕೈ ಹಾಕಿ ಆ ಕಲ್ಲನ್ನು ಹೊರ ತೆಗೆಯಲಿ. ಅವಳು ಕಪ್ಪು ಕಲ್ಲು ತೆಗೆದರೆ, ನೀನು ಸಾಲ ತೀರಿಸೋದು ಬೇಡ. ಆದರೆ ಅವಳು ನನ್ನನ್ನು ಮದುವೆಯಾಗಬೇಕು. ಒಂದು ವೇಳೆ ಅವಳು ಬಿಳಿಯ ಕಲ್ಲು ಹೊರತೆಗೆದರೆ, ಆಗಲೂ ನೀನು ಸಾಲ ತೀರಿಸೋದು ಬೇಡ ಮತ್ತು ಅವಳು ನನ್ನ ಮದುವೆ ಕೂಡ ಆಗೋದು ಬೇಡ!” ಈ ಮಾತು ಕೇಳಿ ವ್ಯಾಪಾರಿ ಬಯಬೀತನಾಗುತ್ತಾನೆ.

ವ್ಯಾಪಾರಿ ಮಗಳ ಜೊತೆಗೂಡಿ ದೇವರ ಬಳಿ ಪ್ರಾರ‍್ತಿಸುತ್ತಾನೆ. ಬೆಳಿಗ್ಗೆ ಇಬ್ಬರೂ ಆ ಮುದುಕನ ಮನೆಗೆ ಹೋಗುತ್ತಾರೆ. ಮುದುಕ ಕೆಳಬಾಗಿ, ಎರಡು ಕಲ್ಲು ತೆಗೆದು ಒಂದೊಂದು ಚೀಲಕ್ಕೆ ಹಾಕಿ, “ನೋಡಪ್ಪ ವ್ಯಾಪಾರಿ, ಒಂದು ಚೀಲದಲ್ಲಿ ಬಿಳಿ ಕಲ್ಲು ಮತ್ತು ಇನ್ನೊಂದರಲ್ಲಿ ಕಪ್ಪು ಕಲ್ಲಿದೆ. ಯಾವುದರಲ್ಲಿ ಯಾವ ಬಣ್ಣದ ಕಲ್ಲಿದೆಯೆಂದು ನನಗೆ ಕೂಡ ಗೊತ್ತಿಲ್ಲ. ಈಗ ನಿನ್ನ ಮಗಳು ಒಂದು ಚೀಲದಿಂದ ಕಲ್ಲನ್ನು ಹೊರಗೆ ತೆಗೆಯಲಿ” ಅನ್ನುವನು. ಆದರೆ ಅವನು ಚೀಲಗಳಿಗೆ ಕಲ್ಲನ್ನು ಹಾಕುವಾಗ ಎರಡೂ ಚೀಲಗಳಿಗೆ ಕೂಡ ಕಪ್ಪು ಬಣ್ಣದ ಕಲ್ಲನ್ನು ಹಾಕಿದ್ದನ್ನು ವ್ಯಾಪಾರಿಯ ಮಗಳು ಗಮನಿಸುತ್ತಾಳೆ.

ಈಗ ಅವಳ ಬಳಿಯಿರುವ ಸಾದ್ಯತೆಗಳು ಕೇವಲ ಮೂರು. ಒಂದು ತಾನು ಈ ಆಟಕ್ಕೆ ತಯಾರಿಲ್ಲವೆಂದು ಹೇಳೋದು. ಒಂದು ವೇಳೆ ಹಾಗೆ ಹೇಳಿದರೆ, ಅವಳ ಅಪ್ಪ ಸಂಕಶ್ಟಕ್ಕೆ ಸಿಲುಕುತ್ತಾರೆ ಮತ್ತು ತಕ್ಶಣ ಸಾಲ ತೀರಿಸಬೇಕಾಗುತ್ತದೆ. ಇನ್ನು ಆ ಮುದುಕ ಮಾಡಿದ ಮೋಸವನ್ನು ಹೇಳಿ ಗಲಾಟೆ ಮಾಡಬಹುದು. ಆದರೆ ಆಗ ಆ ಮುದುಕ ಅದು ಆಕಸ್ಮಿಕವಾಗಿ ನಡೆದದ್ದು ಎಂದು ಹೇಳಿ ಮತೊಮ್ಮೆ ಬೇರೆ ಕಲ್ಲು ಹೆಕ್ಕಿ ಚೀಲದಲ್ಲಿ ಹಾಕಿದರೆ ಮುಂದೇನು ಮಾಡಬೇಕು? ಅಶ್ಟೇ ಅಲ್ಲದೆ ಆತ ಬಲಿಶ್ಟನಾದವನು. ಅವನು ಮೋಸ ಮಾಡಿದನೆಂದು ಹೇಳಿದರೂ, ಅಪ್ಪ ಮಗಳ ಬೆಂಬಲಕ್ಕೆ ಯಾರೂ ಸಹ ಬರುವುದಿಲ್ಲ. ಇನ್ನು ಮೂರನೆಯ ಸಾದ್ಯತೆಯೆಂದರೆ, ಅಪ್ಪನಿಗೋಸ್ಕರ ತಾನು ಆ ಮುದುಕನನ್ನು ಮದುವೆಯಾಗುವುದು. ಎರಡು ಚೀಲದಲ್ಲಿ ಕಪ್ಪು ಕಲ್ಲೇ ಇರೋದು. ಹಾಗಾಗಿ ಮದುವೆಯಾಗುವುದು ಬಿಟ್ಟು ಬೇರೆ ದಾರಿಯಿಲ್ಲ! ನಿಜ, ಬದುಕು ಕೆಲವೊಮ್ಮೆ ಇಂತಹ ಕಟಿಣ ಪರಿಸ್ತಿತಿಯನ್ನು ತಂದೊಡ್ಡಿಬಿಡುತ್ತದೆ. ಇಲ್ಲಿ ಮೂರು ಸಾದ್ಯತೆಗಳಿದ್ದರೂ, ಯಾವುದು ಕೂಡ ಆಕೆಯ ಜೀವನಕ್ಕೆ ಒಳಿತು ಮಾಡುವ ಲಕ್ಶಣ ಕಾಣಿಸುವುದಿಲ್ಲ!  ಆಕೆ ನಿದಾನವಾಗಿ ಮುಂದೆ ಸಾಗುತ್ತಾಳೆ. ಒಂದು ಚೀಲದೊಳಗೆ ಕೈ ಹಾಕಿ ಕಲ್ಲನ್ನು ತನ್ನ ಮುಶ್ಟಿಯೊಳಗೆ ಹಿಡಿದು ನಿದಾನಕ್ಕೆ ಹೊರಗೆ ತರುತ್ತಾಳೆ. ಕಲ್ಲಿನ ಬಣ್ಣ ನೋಡಲು ಹೋಗುವುದಿಲ್ಲ. ಸುತ್ತಲಿನ ಜನ ಕುತೂಹಲದಿಂದ ಅವಳನ್ನೇ ನೋಡುತ್ತಿರುತ್ತಾರೆ. ಆಕಸ್ಮಿಕ ಎನ್ನುವಂತೆ ಅವಳು ಆ ಕಲ್ಲನ್ನು ಕೆಳಗೆ ಬೀಳಿಸಿಬಿಡುತ್ತಾಳೆ. ಆ ಕಲ್ಲು ಇತರ ಕಲ್ಲುಗಳೊಂದಿಗೆ ಬೆರೆತುಬಿಡುತ್ತದೆ. ಆಗ ಆಕೆ “ಕ್ಶಮಿಸಿ , ಕಲ್ಲು ಕೆಳಗೆ ಬಿದ್ದುಬಿಟ್ಟಿತು. ಆದರೂ ಪರವಾಗಿಲ್ಲ. ನಾವು ಇನ್ನೊಂದು ಚೀಲದಲ್ಲಿ ಯಾವ ಕಲ್ಲಿದೆಯೆಂದು ನೋಡುವ” ಅಂತ ಹೇಳಿ ಮುಗುಳು ನಕ್ಕು ಇನ್ನೊಂದು ಚೀಲದಿಂದ ಕಪ್ಪು ಕಲ್ಲನ್ನು ಹೊರಗೆ ತೆಗೆದು ತೋರಿಸುತ್ತಾಳೆ. “ಒಹೋ! ಇದು ಕಪ್ಪು ಕಲ್ಲು, ಹಾಗಾದರೆ ನಾನು ಕೆಳಗೆ ಬೀಳಿಸಿದ್ದು ಬಿಳಿ ಕಲ್ಲು” ಎಂದು ಗಟ್ಟಿಯಾಗಿ ಹೇಳುತ್ತಾಳೆ. ಮುದುಕ ಸೋಲು ಒಪ್ಪಿಕೊಳ್ಳುವುದು ಅನಿವಾರ‍್ಯವಾಗಿಬಿಡುತ್ತದೆ. ಹೀಗೆ ತನ್ನ ಜಾಣ್ಮೆಯಿಂದ ತನ್ನ ಬದುಕನ್ನು ಕಾಪಾಡಿಕೊಳ್ಳುವುದಲ್ಲದೇ, ತನ್ನ ಅಪ್ಪನನ್ನು ಸಾಲದ ಶೂಲದಿಂದ ಪಾರುಮಾಡುತ್ತಾಳೆ.

ನಿಜ, ಬದುಕು ನಮ್ಮ ಜಾಣ್ಮೆಗೆ , ನಮ್ಮ ಆತ್ಮವಿಶ್ವಾಸಕ್ಕೆ, ನಮ್ಮ ನಂಬಿಕೆಗಳಿಗೆ ಸವಾಲನ್ನು ಒಡ್ಡುತ್ತಲೇ ಇರುತ್ತದೆ. ಆದರೆ ಆ ಸವಾಲುಗಳಿಗೆ ಪರಿಹಾರ ಇದ್ದೇ ಇರುತ್ತದೆ. ಎಲ್ಲವೂ ಸುಲಬದಲ್ಲಿ ದಕ್ಕಿ ಬಿಟ್ಟರೆ, ಬದುಕಿನಲ್ಲಿ ಏನು ಮಜಾ ಇರುತಿತ್ತು ಅಲ್ಲವೇ? ನಾವು ಹೀಗೆ ಬದುಕಬೇಕು, ನನ್ನ ಪ್ರಪಂಚ ಇಶ್ಟೇ, ನಾನೇನು ಮಾಡಲಾಗುವುದಿಲ್ಲ ಅನ್ನುವ ಆಲೋಚನೆಗಳೇ ತಪ್ಪು. ಪ್ರಪಂಚ ವಿಶಾಲವಾಗಿದೆ ಹಾಗೂ ಅವಕಾಶಗಳಿಗೆ ಕೊರತೆಯಿಲ್ಲ. ಅವಕಾಶಗಳನ್ನು ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮುನ್ನಡೆಯುವುದು ನಮ್ಮ ಕೈಯಲ್ಲೇ ಇದೆ.

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಪ್ರದೀಪ್ says:

    ಚಿಕ್ಕಂದಿನಿಂದ ಕೇಳುತ್ತಿರುವ ಕತೆ. ಚೆನ್ನಾಗಿದೆ!

ಅನಿಸಿಕೆ ಬರೆಯಿರಿ:

%d bloggers like this: