ಕವಿತೆ : ವ್ರುತ್ತಾಂತ ವಿವರ, ವ್ರುತ್ತದ ಸುತ್ತ ಸುತ್ತುತ್ತಿದೆ!

ಗೀತಾಲಕ್ಶ್ಮಿ ಕೊಚ್ಚಿ.

ಯೋಚನೆ, ವಿಚಾರ, thought
ನಿಜದ ಮಜಲಿಗೆ
ಸಹಜ ಮರೀಚಿಕೆ
ಅಲ್ಲೊಂದು ಜಾಲಿಕೆಯಲ್ಲಿ
ಸುಳ್ಳೊಂದು ತೇಲುತ್ತಿದೆ
ಕಂಡರೂ ಅವರು ಕಡೆಗಣಿಸಿದ್ದಾರೆ
ಕಾಣದೇ ಹೋದವರು, ಕಳೆದು ಹೋಗಿದ್ದಾರೆ
ನಿಜ!
ವ್ರುತ್ತಾಂತ ವಿವರ ವ್ರುತ್ತದ ಸುತ್ತ ಸುತ್ತುತ್ತಿದೆ

ಅವರು ಕಳೆದು ಹೋದದ್ದಾದರೂ ಎಲ್ಲಿ
ಅರ‍್ತವಿರದ ಅನ್ವೇಶಣೆಯಲ್ಲಿ
ಸಾರ‍್ತಕತೆ ಸೇರದ ಸಂಬಾಶಣೆಗಳಲ್ಲಿ
ಬಂಜೆಯಾದ ಸಂಜೆಯಲ್ಲಿ
ಕತ್ತಲೆಯ ಕಣಿವೆಯಲ್ಲಿ
ಗಲ್ಲಿ ಗಲ್ಲಿಯ ಗುಲ್ಲಿನಲ್ಲಿ
ನಿಜ !
ವ್ರುತ್ತಾಂತ ವಿವರ ವ್ರುತ್ತದ ಸುತ್ತ ಸುತ್ತುತ್ತಿದೆ

ಇನ್ನು ಕೆಲವರು ಕಂಡುಹಿಡಿದರು
ಅಸಂಬವ ಸಂಬಾವ್ಯತೆಗಳನ್ನು
ಅಸಮಂಜಸ ಅಂಗೀಕಾರಗಳನ್ನು
ನಿರರ‍್ತಕ ನಿರೀಕ್ಶೆಗಳನ್ನು
ಉಡಾಪೆಯ ಉತ್ಪ್ರೇಕ್ಶೆಗಳನ್ನು
ನಿಜ!
ವ್ರುತ್ತಾಂತ ವಿವರ ವ್ರುತ್ತದ ಸುತ್ತ ಸುತ್ತುತ್ತಿದೆ

ಇವರು ಸಮತಾಬಾವದ ತಕ್ಕಡಿಯನ್ನೇರಿಸಿದ
ನ್ಯಾಯಕ್ಕೂ ನಿರಾಸೆ
ಈ ವರ‍್ತುಲದಲ್ಲಿ ಅಬಿಮನ್ಯು, ಅರ‍್ಜುನನ್ನು ನಿರೀಕ್ಶಿಸಲಾರ
ಆತನಿಗೆ ಅವನಿಗಿಂತ ಮಿಗಿಲಾದವರನ್ನು ಬೇಟಿಯಾಗುವ
ಇಚ್ಚೆ ಮತ್ತು ಇಚ್ಚಾಶಕ್ತಿ ಎರಡರದ್ದೂ ಕೊರತೆಯಿದೆ
ನಿಜ !
ವ್ರುತ್ತಾಂತ ವಿವರ ವ್ರುತ್ತದ ಸುತ್ತ ಸುತ್ತುತ್ತಿದೆ

( ಚಿತ್ರಸೆಲೆ : philosophyofbrains.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: