ಇಲ್ಲಿ ಮೊಸಳೆಯೂ ಸಾಕು ಪ್ರಾಣಿಯಂತೆ!
– ಕೆ.ವಿ.ಶಶಿದರ.
ಬೆಕ್ಕು-ಇಲಿ, ಹದ್ದು-ಹಾವು, ಹಾವು-ಮುಂಗುಸಿ ಹೀಗೆ ಅನೇಕ ಪ್ರಾಣಿಗಳು ಒಂದನ್ನೊಂದು ದ್ವೇಶಿಸುತ್ತವೆ. ಇದಕ್ಕೆ ಕಾರಣಗಳು ಸಾವಿರ ಇರಬಹುದು ಆದರೆ “ಅವುಗಳ ನಡುವಿನ ದ್ವೇಶದ ಕಾರಣ ಅರಿತಿರುವೆ” ಎಂಬ ಹುಂಬುತನದಿಂದ ಮಾನವ ಅನೇಕ ಕತೆಗಳನ್ನು ಕಟ್ಟಿದ್ದಾನೆ. ಈ ಕಟ್ಟು ಕತೆಗಳನ್ನು ಕೇಳಿ, ಮಂತ್ರಮುಗ್ದರಾಗಿ, ಹೀಗಾ?! ಎಂದು ಉದ್ಗಾರ ತೆಗೆಯುವವರನ್ನೂ ಸಹ ನಾವು ಕಾಣಬಹುದು. ಅದೇನೇ ಇರಲಿ ದಿಟವೇನೆಂದರೆ, ಅವುಗಳು ಒಂದನ್ನೊಂದು ದ್ವೇಶಿಸುವ ಹಿಂದಿರುವ ಕಾರಣ ನಿಗೂಡವೇ ಆಗಿದೆ. ದ್ವೇಶದ ವಿಚಾರದಲ್ಲಿ ಮಾನವ ಎಲ್ಲಾ ಪ್ರಾಣಿಗಳಿಂದ ಸಮಾನ ಅಂತರ ಕಾಯ್ದುಕೊಂಡಿದ್ದಾನೆ. ಈತನಿಗೆ ಯಾವ ಪ್ರಾಣಿಯನ್ನು ಕಂಡರೂ ಸಹ ಅಶ್ಟಕ್ಕಶ್ಟೆ. “ಎಲ್ಲವೂ ತನ್ನ ನಿಯಂತ್ರಣದಲ್ಲೇ ಇರಬೇಕು, ತನ್ನ ಬಾಯಿ ರುಚಿಯನ್ನು ಪೂರೈಸಬೇಕು. ಅದು ಎಶ್ಟೇ ಮುದ್ದಾಗಿರಲಿ, ಕೊನೆಗೆ ತನ್ನ ಉದರವನ್ನೇ ಸೇರಿ ತ್ರುಪ್ತಿ ನೀಡಬೇಕು” ಎಂಬ ಕೆಟ್ಟ ಆಸೆ ಮಾನವನದು. ಇದು ಪ್ರಕ್ರುತಿಯ ನಿಯಮವೇ ಆಗಿ ಹೋಗಿದೆ.
ಇಲ್ಲಿ ಮೊಸಳೆಗಳನ್ನು ಕಂಡರೆ ಅಂಜಿಕೆಯಿಲ್ಲ
ಗಾನಾ ದೇಶದ ಪಾಗಾ ಎಂಬ ಸಣ್ಣ ಪಟ್ಟಣದ ಕೊಳದಲ್ಲಿರುವ ಮೊಸಳೆಗಳು, ಈ ಎಲ್ಲಾ ಪ್ರಕ್ರುತಿ ನಿಯಮಗಳಿಗೂ ಸೆಡ್ಡು ಹೊಡೆದು, ಅಲ್ಲಿನ ಜನರ ಜೊತೆ ಸೌಹಾರ‍್ದತೆಯಿಂದ ಬಾಳಿ ಬದುಕುತ್ತಿವೆ. ಹೇಗೆ ಇಲ್ಲಿರುವ ಮೊಸಳೆಗಳು ಜನರಿಗೆ ಹಾನಿ ಮಾಡಲು ಬಯಸುವುದಿಲ್ಲವೋ, ಅಂತೆಯೇ ಅಲ್ಲಿನ ಜನರೂ ಸಹ ಈ ಮೊಸಳೆಗಳಿಗೆ ಹಾನಿ ಮಾಡುವುದಿಲ್ಲ. ಮಕ್ಕಳು ಮರಿಗಳಾದಿಯಾಗಿ, ಎಲ್ಲರೂ ಮೊಸಳೆಗಳೊಡನೆ ಆಡಿ ನಲಿದು ಸಂತಸ ಪಡುತ್ತಾರೆ.
ಇಲ್ಲಿ ಹರಿದಾಡುತ್ತಿರುವ ದಂತಕತೆಯ ಪ್ರಕಾರ, ಪಾಗಾಗೆ ಬಂದ ಮೊದಲ ಮಾನವ, ತನ್ನ ದೀರ‍್ಗ ಪ್ರಯಾಣದಿಂದ ಬಸವಳಿದು ನೀರಿಗಾಗಿ ಹುಡುಕುತ್ತಿದ್ದನು. ಆಗ ಮೊಸಳೆಯೊಂದು ಅವನ ಬಾಯಾರಿಕೆಯನ್ನು ನೀಗಿಸಲು ಕೊಳದ ಬಳಿಗೆ ಕರೆದುಕೊಂಡು ಹೋಯಿತಂತೆ. ಅಂದಿನಿಂದ ಮಾನವ ಮತ್ತು ಮೊಸಳೆಗಳ ನಡುವೆ ಸೌಹಾರ‍್ದಯುತ ಬಾಳು ಸಾಗಿಕೊಂಡು ಬರುತ್ತಿದೆ ಎಂಬುದು ಇಲ್ಲಿನ ನಂಬಿಕೆಯಾಗಿದೆ.
ಮೊಸಳೆಗಳು ಮತ್ತು ಜನರ ನಡುವಿನ ಪರಸ್ಪರ ಸಹಬಾಳ್ವೆ
ಮೊಸಳೆಗಳು ಸರಿ ಸುಮಾರು 200 ಮಿಲಿಯನ್ ವರ‍್ಶಗಳಿಂದ ಬೂಮಿಯ ಮೇಲಿವೆ ಎಂಬ ಅಂದಾಜು ಮಾಡಲಾಗಿದೆ. ಮೊಸಳೆಯ ಸಂತತಿಯು ಅತ್ಯಂತ ಹಳೆಯ ಪ್ರಾಣಿಯಾದ ಡೈನೋಸಾರಸ್‍ಗಿಂತ ಹಿಂದಿನದು ಎನ್ನಲಾಗುತ್ತದೆ. ಪಾಗಾದ ಈ ಪುಟ್ಟ ಕೊಳದಲ್ಲಿ ಈಗಲೂ ನೂರಾರು ಮೊಸಳೆಗಳಿವೆ. ಕೊಳದಲ್ಲಿರುವ ಕೆಲವು ಮೊಸಳೆಗಳಿಗಂತೂ ಎಂಬತ್ತಕ್ಕೂ ಹೆಚ್ಚು ವರ‍್ಶ ವಯಸ್ಸಾಗಿದೆ. ಅಲ್ಲಿನ ಗ್ರಾಮಸ್ತರಿಗೆ ಮೊಸಳೆಗಳನ್ನು ಕಂಡರೆ ಯಾವುದೇ ಬಯವಿಲ್ಲ. ಅವುಗಳೊಡನೆಯೇ ಆರಾಮವಾಗಿ ಸ್ನಾನ ಮಾಡುತ್ತಾರೆ ಮತ್ತು ಬಟ್ಟೆಗಳನ್ನು ಒಗೆಯುತ್ತಾರೆ. ಇದುವರೆಗೂ, ಇಲ್ಲಿ ಮೊಸಳೆಗಳಿಂದ ಹಾನಿಗೊಳಗಾದವರಾರು ಕಂಡುಬರುವುದಿಲ್ಲ.
ಮೀನುಗಾರರು ಕೊಳದಲ್ಲಿ ಮೀನು ಹಿಡಿಯುವಾಗ ಯಾವುದೇ ಬಯವಿಲ್ಲದೆ ಮೊಸಳೆಗಳ ಹತ್ತಿರದಲ್ಲೇ ನಿಲ್ಲುತ್ತಾರೆ. ಅವರಿಗೆ ಮೊಸಳೆಗಳಿಂದ ಯಾವ ಹಾನಿಯೂ ಆಗುವುದಿಲ್ಲ. ಅದರಂತೆ ಕೊಳದಲ್ಲಿ ಪಾತ್ರೆ ಬೆಳಗುವವರು, ಬಟ್ಟೆ ಒಗೆಯುವವರು ತಮ್ಮ ಕೆಲಸಗಳಲ್ಲಿ ತಾವು ನಿರತರಾಗಿರುತ್ತಾರೆಯೇ ಹೊರತು, ಮೊಸಳೆಗಳತ್ತ ಗಮನವನ್ನೂ ಸಹ ಕೊಡುವುದಿಲ್ಲ. ಮೊಸಳೆಗಳೂ ಅಶ್ಟೇ, ತಮ್ಮ ಪಾಡಿಗೆ ತಾವಿರುತ್ತಾವೆಯೇ ಹೊರತು, ಯಾರಿಗೂ ಹಾನಿ ಮಾಡುವುದಿಲ್ಲ. ಅಮ್ಮಂದಿರೊಡನೆ ಕೊಳಕ್ಕೆ ಬಂದ ಮಕ್ಕಳು, ಮೊಸಳೆಗಳೊಡನೆ ಆಟವಾಡುವುದು ಸಾಮಾನ್ಯ. ಮಕ್ಕಳು ಅವುಗಳ ತೆರೆದ ಬಾಯಿಯಲ್ಲಿ ಇಣುಕುವುದಾಗಲಿ, ಬಾಲವನ್ನು ಹಿಡಿದೆತ್ತುವುದಾಗಲಿ ಮತ್ತು ಅದರ ಮೇಲೆ ಕುಳಿತುಕೊಳ್ಳುವುದಾಗಲಿ ಮಾಡಿದರೂ ಸಹ ಅವು ಸುಮ್ಮನೆ ಇರುತ್ತವೆ. ಮಕ್ಕಳ ಆಟದಲ್ಲಿ ಕೂಡ ಮೊಸಳೆಗಳು ಸಹಕರಿಸುತ್ತವೆ. ಮಕ್ಕಳಿಗಾಗಲಿ, ಮೊಸಳೆಗಳಿಗಾಗಲಿ ಪರಸ್ಪರರ ಹೆದರಿಕೆಯೂ ಇಲ್ಲ.
ಮೊಸಳೆಗಳ ಮತ್ತು ಗ್ರಾಮಸ್ತರ ನಡುವಿನ ಅನೇಕ ವರ‍್ಶಗಳ ಈ ಸುಮದುರ ಹೊಂದಾಣಿಕೆ, ವಿಗ್ನಾನಿಗಳ ಕೆಲವು ಸಿದ್ದಾಂತಗಳನ್ನು ಬುಡಮೇಲು ಮಾಡಿದೆ. ಈ ಕಾರಣಕ್ಕೆ ಇಲ್ಲಿಗೆ ಬರುವ ಪ್ರವಾಸಿಗರ ಸಂಕ್ಯೆ ಹೆಚ್ಚಳವಾಗಿ ಇದೊಂದು ಪ್ರವಾಸೀ ತಾಣವಾಗಿ ಮಾರ‍್ಪಟ್ಟಿದೆ. ಇಲ್ಲಿನ ದೊಡ್ಡ ದೊಡ್ಡ ಮೊಸಳೆಗಳ ಮೇಲೆ ನಿರ‍್ಬಯವಾಗಿ ಕುಳಿತು ಪೋಟೋ ತೆಗೆಸಿಕೊಳ್ಳಬಹುದು. ವಿಶ್ವದಲ್ಲಿಯೇ ಇದು, ಈ ಬಗೆಯ ಏಕೈಕ ಸ್ತಳವಾಗಿದೆ. ದೈತ್ಯ ಮೊಸಳೆಯ ಬೆನ್ನ ಮೇಲೆ ಕುಳಿತಾಗ, ಬಯ ಮಿಶ್ರಿತ ಸಂತೋಶದ ಮುಕ ಬಾವ ಪೋಟೋದಲ್ಲಿ ದಾಕಲಾಗುವುದು ಅನನ್ಯ.
ಈ ಕೊಳದಲ್ಲಿ ಮೀನು ಮತ್ತು ಕಪ್ಪೆಗಳು ಹೇರಳವಾಗಿವೆ. ಇವೇ ಇಲ್ಲಿ ವಾಸಿಸುವ ಮೊಸಳೆಗಳಿಗೆ ಸಂತ್ರುಪ್ತ ಆಹಾರವಾಗಿವೆ. ಇದರಿಂದ ಮೊಸಳೆಗಳ ಹೊಟ್ಟೆ ಸದಾ ತುಂಬಿರುತ್ತದೆ ಮತ್ತು ಇದು ಮಾನವನ ಮೇಲೆ ಆಕ್ರಮಣ ಮಾಡದಿರಲು ಒಂದು ಕಾರಣವಾದರೆ, ಇಲ್ಲಿಗೆ ಬರುವ ಪ್ರವಾಸಿಗರನ್ನು ರಂಜಿಸುವ ಮುನ್ನ ಅಲ್ಲಿನ ಸ್ತಳೀಯರು ಮೊಸಳೆಗಳಿಗೆ ನೀಡುವ ಕೋಳಿ ಮಾಂಸ ಮತ್ತೊಂದು ಕಾರಣವಿರಬಹುದು. ಕಾರಣವೇನೇ ಇರಲಿ, ಮೊಸಳೆಯಂತಹ ಆಕ್ರಮಣಾ ಪ್ರವ್ರುತ್ತಿಯ ಪ್ರಾಣಿಯು ಮಾನವನ ಜೊತೆ ಸಹಬಾಳ್ವೆ ನಡೆಸುತ್ತಿರುವುದು ಒಂದು ವಿಸ್ಮಯವೇ ಆಗಿದೆ.
(ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com, amusingplanet.com, odditycentral.com, wikimedia.org)
ಅಚ್ಚರಿಯ ವಿಶಯ. ಹಂಚಿಕೊಂಡ ನಿಮಗೆ ನನ್ನಿ!