ಇಲಾನ್ ಮಸ್ಕ್ – ಹೊಸ ಆಲೋಚನೆಗಳ ಹರಿಕಾರ

– .

ಜೀವ ವಿಕಾಸ ಸಿದ್ದಾಂತದ ಪಿತಾಮಹ ಚಾರ‍್ಲ್ಸ್ ಡಾರ‍್ವಿನ್ ಅವರು ಬದುಕಿನ ಬಗ್ಗೆ ಒಂದು ಒಳ್ಳೆಯ ನುಡಿಮುತ್ತನ್ನು ಹೇಳಿದ್ದಾರೆ.

ಬದುಕುಳಿಯುವುದು ಅತ್ಯಂತ ಬಲಿಶ್ಟ ಪ್ರಾಣಿಯೂ ಅಲ್ಲ, ಅತ್ಯಂತ ಬುದ್ದಿವಂತ ಪ್ರಾಣಿಯೂ ಅಲ್ಲ. ಬದಲಿಗೆ ಬದಲಾವಣೆಗೆ ಒಗ್ಗಿಕೊಳ್ಳುವ ಶಕ್ತಿಯುಳ್ಳ ಪ್ರಾಣಿಗಳು.

ಇಂದಿನ ಕಾಲವನ್ನು ಹೊಸ ಆಲೋಚನೆಗಳ ಕಾಲ ಎನ್ನಬಹುದು. ನಾವು ಈಗಿನ ಕಾಲವನ್ನು ಹೊಸ ಕಾಲ ಎಂದು ಕರೆಯಲು ಮುಕ್ಯ ಕಾರಣ ಜನರ ಹೊಸ ಹೊಸ ಆಲೋಚನೆಗಳು. ಈಗಿನ ತಂತ್ರಗ್ನಾನ, ಔದ್ಯಮಿಕ ಜಗತ್ತನ್ನು ನೋಡಿ, ಅದನ್ನು ಅರ‍್ತ ಮಾಡಿಕೊಂಡು ಮುಂದಿನ ಜಗತ್ತು ಹೀಗೆ ಇರಬೇಕೆಂದು ಈಗಿನ ಕೋಟ್ಯಾದೀಶರು, ಯಶಸ್ವಿ ಕಂಪನಿಯ ಸಿಇಓಗಳು ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ.

ಈಗಿನ ಕಾಲದಲ್ಲಿ ಜನರ ಆಲೋಚನೆ ಬಹಳ ಬದಲಾಗಿದೆ. ತಂತ್ರಗ್ನಾನದಲ್ಲಿ ತಮಗೆ ಗೊತ್ತಿರುವ ವಿಶಯದಲ್ಲಿ ಉದ್ಯಮವನ್ನು ಸ್ತಾಪಿಸಿ, ಅದರ ಆನ್ಲೈನ್ ಸ್ವರೂಪವನ್ನು ಯಾವ ರೀತಿ ಕಟ್ಟುತ್ತಾರೆಂದರೆ ಬೇರೆಯವರು ತಮ್ಮ ಉದ್ಯಮವನ್ನು ಬೆಳೆಸಲು ಇಂತಹ ಆನ್ಲೈನ್ ಉದ್ಯಮಗಳನ್ನೇ ಅವಲಂಬಿಸುತ್ತಾರೆ. ಅಂದರೆ ಅವರು ಮಾಡುವ ಕೆಲಸ ಯಾವುದೇ ಆದರೂ ಮಾಹಿತಿ ತಂತ್ರಗ್ನಾನದ ಬೆನ್ನೆಲುಬಿರದಿದ್ದರೆ ಆ ಕೆಲಸ ಇತರೆ ಕೆಲಸಗಳಿಗಿಂತ ಮಂಕಾಗುತ್ತದೆ‌. ಮುಂಚೆ ಜನರು, ಕೆಲಸ ಸಿಕ್ಕರೆ ಪೋನನ್ನು ಕೊಳ್ಳುತ್ತಿದ್ದರು. ಈಗ ಹಲವರು ತಮ್ಮ ಸ್ಮಾರ‍್ಟ್ ಪೋನ್ ಅನ್ನೇ ವ್ರುತ್ತಿಯ ಆದಾರವಾಗಿಸಿಕೊಂಡಿದ್ದಾರೆ. ಇವೆಲ್ಲವೂ ಈಗಿನ ಜನರ ಹೊಸ ಆಲೋಚನೆಗಳು ಹಾಗೂ ಅವರು ಅರ‍್ತ ಮಾಡಿಕೊಂಡ ತಂತ್ರಗ್ನಾನ ಮತ್ತು ಅದರ ಮೇಲೆ ಬೆಳೆದ ಉದ್ಯಮಗಳ ಕೊಡುಗೆ ಎನ್ನಬಹುದು.

ಇದೇ ರೀತಿ ಇನ್ನೊಬ್ಬ ಮಹಾಪುರುಶನ ಆಲೋಚನೆ ನೋಡಿದರೆ ನೀವು ಅಚ್ಚರಿಗೊಳ್ಳುತ್ತೀರಿ. ಬೇರೆಯವರಿಗೆ ಹುಚ್ಚು ಎಂದೆನಿಸುವ ಕನಸುಗಳನ್ನು ಕಂಡು ಅವುಗಳನ್ನು ಈತ ನನಸು ಮಾಡುತ್ತಿದ್ದಾನೆ.

ಆತನ ಹೆಸರು ಇಲಾನ್ ಮಸ್ಕ್. ಈತ ದಕ್ಶಿಣ ಆಪ್ರಿಕಾದಲ್ಲಿ ಹುಟ್ಟಿ, ತನ್ನ ತಾಯ್ತಂದೆಯರ ಜೊತೆ ಕೆನಡಾಗೆ ವಲಸೆ ಬಂದವನು. ತಾಯಿಯೇ ಇವನಿಗೆ ರೋಲ್ ಮಾಡೆಲ್. 9ನೇ ವಯಸ್ಸಿಗೆ ಇಡೀ ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾವನ್ನು ಓದಿ ಮುಗಿಸಿದ್ದ. 12ನೇ ವಯಸ್ಸಿಗೆ ಕಂಪ್ಯೂಟರ್ ಕೋಡಿಂಗ್ ಕಲಿತು, ಬ್ಲಾಸ್ಟರ್ ಎನ್ನುವ ವಿಡಿಯೋ ಗೇಮ್ ಸ್ರುಶ್ಟಿಸಿ 500 ಡಾಲರ್‌ಗೆ ಮಾರಾಟ ಮಾಡಿದ. ಬಾಲ್ಯದಲ್ಲಿ ಕುಸ್ತಿ, ಕರಾಟೆ, ಜುಡೋ ಕಲಿತಿದ್ದನು. ಜಿಪ್-2 ಎನ್ನುವ ತಂತ್ರಾಂಶ ಕಂಪನಿಯನ್ನು ಸ್ತಾಪಿಸುವ ಮೂಲಕ 27ನೇ ವರ‍್ಶಕ್ಕೆ ಬಿಲಿಯನೇರ್ ಆದ.  49 ವರ‍್ಶದ ಇವನು ಇಂದು 12 ಕ್ಕೂ ಹೆಚ್ಚು ಕಂಪನಿಗಳ ಒಡೆಯ. ಇನ್ನೊವೇಟಿವ್ ಲೀಡರ್, ಗೇಮ್ ಚೇಂಜರ್, ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಈತನೂ ಕೂಡ ಒಬ್ಬ.

ಈತನ ಹೊಸ ಆಲೋಚನೆ ಮತ್ತು ಗುರಿ ಏನೆಂದರೆ ಮಂಗಳನ ಅಂಗಳದಲ್ಲಿ ಮನುಶ್ಯನ ವಾಸಕ್ಕೆ ನೆಲೆ ಕಲ್ಪಿಸುವುದು. ತನ್ನದೇಯಾದ ಸ್ಪೇಸ್ ಎಕ್ಸ್ ಬಾಹ್ಯಾಕಾಶ ನಿಲ್ದಾಣ ಸ್ತಾಪಿಸಿ, ಬೆಂಗಳೂರಿನಿಂದ ಮೈಸೂರಿಗೆ ಕೆಎಸ್ಸಾರ‍್ಟಿಸಿ ಬಸ್ ಸಂಚರಿಸುವ ರೀತಿಯಲ್ಲಿ ಪ್ರಯಾಣಿಕರನ್ನು ರಾಕೆಟ್ನಲ್ಲಿ ಬಾಹ್ಯಾಕಾಶ ಪ್ರವಾಸ ಮಾಡಿಸುವುದು ಇವನ ಹೆಬ್ಬಯಕೆ. ಇಂತಹ ಮಹದಾಸೆಯ ಕನಸನ್ನು ನನಸು ಮಾಡುವುದರ ಸನಿಹಕ್ಕೆ ಬಂದೇ ಬಿಟ್ಟಿದ್ದಾನೆ. 2020 ಮೇನಲ್ಲಿ ಪ್ಲೋರಿಡಾದಲ್ಲಿರುವ ನಾಸಾದ ಕೆನಡಿ ಕೇಂದ್ರದಿಂದ ಮಸ್ಕ್‌ನ ಸ್ಪೇಸ್ ಎಕ್ಸ್ ಕಂಪನಿ ತಯಾರಿಸಿದ,  ಮಂದಿಯನ್ನು ಕೊಂಡೊಯ್ಯಬಲ್ಲ ಡ್ರ್ಯಾಗನ್ ಡೆಮೊ-2 ಬಾನಬಂಡಿ, ಬಾಬ್ ಬೆಹ್ನಕೆನ್ ಮತ್ತು ಡೌಗ್ ಹರ‍್ಲೆ ಎಂಬ ವ್ಯೋಮಯಾನಿಗಳನ್ನು ಹೊತ್ತು ಆಕಾಶಕ್ಕೆ ಜಿಗಿಯಿತು. ಇದು ಯಶಸ್ವಿಯಾಗಿ ಕಕ್ಶೆಗೆ ಸೇರಿತು. ಇದು ಕಾಸಗಿ ಕಂಪನಿಯೊಂದರ ಸಾದನೆ. ಕೋವಿಡ್ -19ರ ಬಯವನ್ನು ನಿರ‍್ಲಕ್ಶಿಸಿ ಒಂದೂವರೆ ಲಕ್ಶ ಮಂದಿ ಈ ಮಹಾ ಜಿಗಿತವನ್ನು ಕಣ್ತುಂಬಿಕೊಂಡರು. ಅಂದಿನ ಅಮೆರಿಕದ ಅದ್ಯಕ್ಶ ಡೊನಾಲ್ಡ್ ಟ್ರಂಪ್ ಕೂಡ ಈ ಸಂದರ‍್ಬದಲ್ಲಿ ಹಾಜರಿದ್ದರು. ಸೆಕೆಂಡಿಗೆ ಏಳೂವರೆ ಕಿಲೋ ಮೀಟರ್ ವೇಗದಲ್ಲಿ ಬೂಮಿಯಿಂದ ನಾಲ್ಕು ನೂರು ಕಿಲೋ ಮೀಟರ್ ಎತ್ತರದಲ್ಲಿ ಸುತ್ತುತ್ತಿರುವ ಅಂತಾರಾಶ್ಟ್ರೀಯ ಬಾಹ್ಯಾಕಾಶ ತಂಗುದಾಣಕ್ಕೆ ಯಾನಿಗಳ ಸಮೇತ ಕ್ರ್ಯೂಡ್ರ್ಯಾಗನ್ ಜೋಡಣೆಗೊಂಡಿತು‌. ಲಾಂಚ್ ವೆಹಿಕಲ್ ಪಾಲ್ಕನ್-9 ಬೂಸ್ಟರ್ ಮರಳಿ ಪ್ಲೋರಿಡಾಗೆ ಬಂದಿತು.

ಮುಂದಿನ ವರ‍್ಶ 55 ಮಿಲಿಯನ್ ಡಾಲರ್ ವೆಚ್ಚದಲ್ಲಿ ಬಾಹ್ಯಾಕಾಶ ಯಾನ ಮಾಡಿಸುತ್ತೇವೆಂದು ಸ್ಪೇಸ್ ಎಕ್ಸ್ ಹೇಳಿಕೊಂಡಿದೆ. ಇಲಾನ್ ಮಸ್ಕ್ ಗೆ ಸ್ಪೀಡ್ ಎಂದು ಕರೆಯುತ್ತಾರೆ. ಇವನ ಆಲೋಚನೆ ಎಂತದ್ದು ಎಂದರೆ ಸಂಚಾರ ದಟ್ಟಣೆಯಿಂದ ಬೇಸರಗೊಂಡು ಸುರಂಗ ಸಾರಿಗೆಯ ಪರ‍್ಯಾಯ ಯೋಜನೆಯನ್ನು ಇಲಾನ್ ಮಸ್ಕ್ ರೂಪಿಸಿದ. ಇದಕ್ಕಾಗಿ ಬೋರಿಂಗ್ ಎನ್ನುವ ಕಂಪನಿ ಸ್ತಾಪಿಸಿದ. ಈ ಕಂಪನಿ ಹೈಪರ್‌ಲೂಪ್ ಕೊಳವೆ ಮಾರ‍್ಗದ ಯೋಜನೆ ತಯಾರಿಸುತ್ತಿದೆ. ಇದರ ಮೂಲಕ ಕ್ಯಾಪ್ಶೂಲ್‌ಗಳು ಅಸಾದ್ಯ ವೇಗದಲ್ಲಿ ಚಲಿಸುತ್ತವೆ. ನ್ಯೂಯಾರ‍್ಕ್‌ನಿಂದ ವಾಶಿಂಗ್ಟನ್ ಡಿಸಿಗೆ 370 ಕಿಮೀ ದೂರವನ್ನು ಸುರಂಗ ಮಾರ‍್ಗದ ಮೂಲಕ ಕೇವಲ 29 ನಿಮಿಶಗಳಲ್ಲಿ ತಲುಪುವ ಯೋಜನೆ ಮುಂದಿನ ವರ‍್ಶ ನನಸು ಮಾಡುವತ್ತ ಮುನ್ನಡೆಯುತ್ತಿದೆ.

ಕ್ರುತಕ ಬುದ್ದಿಮತ್ತೆ, ಇದರ ಬಳಕೆಯ ವಲಯಗಳ ಕುರಿತು ಸಂಶೋದನೆ ನಡೆಸಲು ಓಪನ್ ಎಐ ಎನ್ನುವ ಕಂಪನಿಯನ್ನು ಸಹ ಇಲಾನ್ ಮಸ್ಕ್ ಸ್ತಾಪಿಸಿದ್ದಾನೆ. ಇವನು ಯೋಚಿಸುವ ರೀತಿ ಮತ್ತು ಇವನ ಯೋಜನೆಗಳನ್ನು ಕೇಳಿದರೆ ನಮ್ಮಲ್ಲಿ ನವೋಲ್ಲಾಸ ಮೂಡುತ್ತದೆ. ಇದೆಲ್ಲವನ್ನೂ ಗಮನಿಸಿದಾಗ ಈತನೊಬ್ಬ ಉತ್ತಮ ಹಾಗೂ ಉತ್ತುಂಗದ ಆಲೋಚನೆಗಾರ. ತಮ್ಮದೇ ದಾರಿ ಮತ್ತು ಗುರಿಗಳನ್ನು ಬೆನ್ನತ್ತಿ ಹೋಗುವ ದೈರ‍್ಯಶಾಲಿಗಳಿಗೆ ರೋಲ್ ಮಾಡೆಲ್ ಅಂತ ಹೇಳಿದರೆ ತಪ್ಪಿಲ್ಲ, ಅತಿಶಯವೂ ಅಲ್ಲ

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks