ವಿದ್ಯಾವಂತರಿಗೇಕಿಲ್ಲ ವಿವೇಕ?
– ಆರೋನಾ ಸೋಹೆಲ್.
ವಾರಾಂತ್ಯದಲ್ಲಿ ಒಮ್ಮೆ ನಾನು ಬೆಂಗಳೂರಿಗೆ ಹೋಗಬೇಕಾಗಿದ್ದರಿಂದ ಮೈಸೂರಿನಲ್ಲಿ ರೈಲನ್ನು ಹತ್ತಿದೆ. ಆಗ ಮದ್ಯಾಹ್ನ ಸುಮಾರು 12 ಗಂಟೆ. ಬೋಗಿಯೊಳಗೆ ಜನರು ಕಿಕ್ಕಿರಿದು ತುಂಬಿದ್ದರು. ಒಳಗೆ ಉಸಿರಾಡಲು ಗಾಳಿಯೇ ಇರಲಿಲ್ಲ ಎನ್ನುವಂತಿತ್ತು. ಸುಡು ಬಿಸಿಲಿನ ಹೊತ್ತಿನಲ್ಲೂ ರೈಲಿನಲ್ಲಿ ತುಂಬಿದ್ದ ಜನಸಂದಣಿಯನ್ನು ಕಂಡು ನಾನು ದಂಗಾದೆ. ಅಶ್ಟರಲ್ಲಿ ಒಳಗೆ ಯಾರೋ ಕೆಲವರು ತಮ್ಮಲ್ಲಿಯೇ ಮಾತಾಡಿಕೊಳ್ಳುತ್ತಿದ್ದದು ನನ್ನ ಕಿವಿಗೆ ಬಿತ್ತು. “ಅಯ್ಯೋ ಶನಿವಾರ, ಬಾನುವಾರ ಮಾತ್ರ ಬೆಂಗಳೂರಿಗೆ ರೈಲಿನಲ್ಲಿ ಹೋಗಬಾರದಪ್ಪ” ಎಂದು. ಅವರ ಮಾತಿನ ಹಿನ್ನೆಲೆ ಗ್ರಹಿಸಲು ನನಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಯಾಕೆಂದರೆ ಅಂದು ರೈಲಿನಲ್ಲಿ ಮಿತಿ ಮೀರಿ ಜನ ತುಂಬಿದ್ದರು. ನಾನು ಕುಳಿತಿದ್ದ ಬರ್ತ್ನಲ್ಲಿ ಮೇಲ್ಬಾಗದಲ್ಲಿಯೂ ಮಂದಿ ಕುಳಿತಿದ್ದರು. ಜೊತೆಗೆ ತಮ್ಮ ಲಗೇಜ್ಗಳನ್ನು ಪಕ್ಕದಲ್ಲಿಯೇ ಇಟ್ಟುಕೊಂಡು ಕುಳಿತಿದ್ದರು.
ಅಶ್ಟರಲ್ಲಿ ಸುಮಾರು 30 ವರ್ಶದ ಮಹಿಳೆಯೊಬ್ಬಳು ತನ್ನ ನಾಲ್ಕು ವರ್ಶದ ಮಗುವಿನ ಜೊತೆ ಜನರ ನಡುವೆ ತೂರಿಕೊಂಡು ಅಲ್ಲಿಗೆ ಬಂದಳು. ಜನರು ಕುಳಿತುಕೊಳ್ಳಬಹುದಾದ ಸ್ತಳದಲ್ಲಿ ವಸ್ತುಗಳನ್ನು ಇಟ್ಟಿರುವುದನ್ನು ಕಂಡು ಮಹಿಳೆ ದೈರ್ಯಮಾಡಿ ಮೇಲೆ ಹತ್ತಿ ತಾನೇ ಆ ವಸ್ತುಗಳನ್ನೆಲ್ಲ ಒಂದು ಪಕ್ಕಕ್ಕೆ ಸರಿಸಿ ಮಗುವಿಗೂ ತನಗೂ ಜಾಗ ಮಾಡಿಕೊಂಡು ಕುಳಿತುಕೊಂಡಳು. ಅಶ್ಟರಲ್ಲಿ ಅಲ್ಲಿ ಕುಳಿತಿದ್ದವರಲ್ಲೊಬ್ಬ “ಏನಮ್ಮ ನಮ್ಮ ಲಗೇಜ್ಗಳನ್ನೆಲ್ಲ ಬೇಕಾಬಿಟ್ಟಿ ತಳ್ಳಿಬಿಟ್ಟೆಯಲ್ಲ ನಿನಗೇನು ಬುದ್ದಿ-ಗಿದ್ದಿ ಇಲ್ಲವಾ?” ಎಂದು ಗದರಿದ. ರೈಲು ಹಿಡಿಯುವ ದಾವಂತದಲ್ಲಿ ಮತ್ತು ಪ್ರಯಾಸಪಟ್ಟು ಒಳಗೆ ಹತ್ತಿ ಬಂದಿದ್ದ ಆ ಮಹಿಳೆಗೆ ತಕ್ಶಣ ಪಿತ್ತ ನೆತ್ತಿಗೇರಿತು. ಕೋಪಗೊಂಡ ಅವಳು “ಹೌದು ಏನೀಗ? ಜನ ಕೂತ್ಕೊಳ್ಳೊ ಜಾಗದಲ್ಲಿ ಲಗ್ಗೇಜು ಇಟ್ಟಿದ್ದೀರಲ್ಲ, ನಾವೆಲ್ಲಿಗೆ ಹೋಗಬೇಕು? ಟ್ರೈನ್ ಏನು ನಿಮ್ಮಪ್ಪಂದ?” ಎಂದು ಅವರ ಮೇಲೆ ಜೋರು ಮಾಡಿದಳು. ಅವಳ ಮಾತಿಗೆ ಕೆರಳಿ ಕೋಪೋದ್ರಿಕ್ತರಾದ ಐವರೂ ಒಮ್ಮೆಲೆ ಅವಳ ಮೇಲೆ ಹರಿಹಾಯ್ದು ಬಿದ್ದರು. ಪಕ್ಕದಲ್ಲಿ ಕುಳಿತಿದ್ದ ಒಬ್ಬ ಹೆಂಗಸು ಕೂಡ ಆ ಮಹಿಳೆಗೆ “ಏನಮ್ಮ ಹೆಂಗಸರಿಗೆ ಯಾವಾಗಲೂ ಮಾತಿನ ಮೇಲೆ ಹಿಡಿತ ಇರಬೇಕು, ಬಾಯಿಗೆ ಬಂದಂಗೆ ಮಾತಾಡಬಾರದು” ಎಂದು ತಾಕೀತು ಮಾಡಿದಳು. ಕೆಳಗೆ ಕುಳಿತಿದ್ದ ನಾವು ನಾಲ್ಕೂ ಮಂದಿ ಏನೂ ಮಾತಾಡದೆ ಮೂಕ ಪ್ರೇಕ್ಶಕರಾಗಿಯೇ ಕುಳಿತಿದ್ದೆವು.
ಮಂಡ್ಯ ದಾಟಿ ಮದ್ದೂರು ಬಂದರೂ ಅವರ ನಡುವೆ ವಾಕ್ ಸಮರ ಬಿರುಸಾಗಿಯೇ ನಡೆದಿತ್ತು. ಅಲ್ಲಿದ್ದವರಲ್ಲಿ ಬೇರೆ ಯಾರೊಬ್ಬರೂ ಮಹಿಳೆಯ ಪರವಾಗಿ ಮಾತಾಡಲಿಲ್ಲ. ಅಶ್ಟರಲ್ಲಿ ಚಪ್ಪಾಳೆಯ ಶಬ್ದ ಕೇಳಿ ಬಂತು. ಯಾರು ಎನ್ನುವಶ್ಟರಲ್ಲಿ ತ್ರುತೀಯ ಲಿಂಗಿಯೊಬ್ಬಳು ಬಿಕ್ಶೆ ಬೇಡುತ್ತಾ ಅಲ್ಲಿಗೆ ಬಂದಳು. ಅಲ್ಲಿ ನಡೆಯುತ್ತಿದ್ದ ಗಲಾಟೆಯನ್ನು ಕ್ಶಣಮಾತ್ರದಲ್ಲಿ ಗ್ರಹಿಸಿ ಅಲ್ಲಿದ್ದವರನ್ನು ತರಾಟೆಗೆ ತೆಗೆದುಕೊಂಡಳು. ಕಾವೇರುತ್ತಿದ್ದ ಕಲಹ ತಟ್ಟನೆ ತಣ್ಣಗಾಯಿತು. ಬಾಯಿ ಮಾಡುತ್ತಿದ್ದವರು ಬಾಲ ಮುದುಡಿಕೊಂಡು ಸುಮ್ಮನಾದರು. ಉಳಿದವರು ನೆಮ್ಮದಿಯ ನಿಟ್ಟಿಸಿರು ಬಿಟ್ಟರು. ಆಮೇಲೆ ಆ ಮಹಿಳೆಯ ಬಗ್ಗೆ ಯಾರೂ ಸೊಲ್ಲೆತ್ತಲಿಲ್ಲ.
ಈ ಗಟನೆಯ ಬಗ್ಗೆ ನನ್ನಲ್ಲಿ ಉತ್ತರ ಸಿಗದ ಪ್ರಶ್ನೆಯೊಂದು ಸುಳಿಯಿತು. ಒಬ್ಬ ಅನಕ್ಶರಸ್ತೆಯಾಗಿರುವ ಆ ತ್ರುತೀಯ ಲಿಂಗಿಗೆ ಇರುವ ವಿವೇಕ, ಜ್ನಾನ ನಮ್ಮ ವಿದ್ಯಾವಂತರಿಗೇಕಿಲ್ಲ? ಅನ್ಯಾಯದ ವಿರುದ್ದ ಅವರೇಕೆ ಸಿಡಿದೇಳುತ್ತಿಲ್ಲ? ದನಿ ಇಲ್ಲದವರಿಗೆ ದನಿಯಾಗಿ ಸ್ಪಂದಿಸುವ ಮಾನವೀಯತೆಗೆ ನಾವೇ ಕಡಿವಾಣ ಹಾಕಿಕೊಂಡಿದ್ದೇವೆಯೇ?
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು