ತೈಲ್ಯಾಂಡಿನ ತ್ರೀ ವೇಲ್ ರಾಕ್

– .

ಬೂಮಿ ಅನೇಕ ನೈಸರ‍್ಗಿಕ ವಿಸ್ಮಯಗಳ ಆಗರ. ವಿಶ್ವದಲ್ಲಿರುವ ಪ್ರತಿಯೊಂದು ದೇಶವೂ ತನ್ನದೇ ಆದ ಅನನ್ಯತೆ ಮತ್ತು ಪ್ರಕ್ರುತಿ ಸೌಂದರ‍್ಯ ಹೊಂದಿದೆ. ಈ ಅನನ್ಯತೆಯೇ ಅನೇಕ ಪ್ರವಾಸಿಗರನ್ನು ಮಂತ್ರ ಮುಗ್ದರನ್ನಾಗಿಸಿ, ದೇಶ-ವಿದೇಶ ಸುತ್ತುವಂತೆ ಪ್ರೇರೇಪಿಸುತ್ತದೆ. ತೈಲ್ಯಾಂಡ್ ದೇಶ ಸಹ ಇದಕ್ಕೆ ಹೊರತಲ್ಲ. ಇಲ್ಲಿನ ನೈಸರ‍್ಗಿಕ ಸೌಂದರ‍್ಯಕ್ಕೆ ಮಾರುಹೋದ ಪ್ರವಾಸಿಗರು ಪ್ರತಿವರ‍್ಶ ಲಕ್ಶಾಂತರ ಸಂಕ್ಯೆಯಲ್ಲಿ ತೈಲ್ಯಾಂಡಿನ ವಿಶಿಶ್ಟತೆಯನ್ನು ನೋಡಲು ಬರುತ್ತಾರೆ. ಪ್ರವಾಸಿಗರನ್ನು ಆಕರ‍್ಶಿಸಿರುವ ಇಲ್ಲಿನ ಅನೇಕ ವಿಸ್ಮಯಗಳಲ್ಲಿ ಇಲ್ಲಿನ ‘ತ್ರೀ ವೇಲ್ ರಾಕ್’ ಒಂದು. ಇದನ್ನು ‘ಹಿನ್ ಸ್ಯಾಮ್ ವಾನ್’ ಎಂದು ಸ್ತಳೀಯ ಬಾಶೆಯಲ್ಲಿ ಗುರುತಿಸಲಾಗುತ್ತದೆ.

‘ತ್ರೀ ವೇಲ್ ರಾಕ್’ ಒಂದು ಅತ್ಯದ್ಬುತ ಸ್ತಳ. ಇದಕ್ಕೆ ಬೇರೆ ಪ್ರದೇಶಗಳಿಗೆ ಸಿಕ್ಕಶ್ಟು ಪ್ರಚಾರ ಸಿಕ್ಕಿಲ್ಲದ ಕಾರಣ ಇನ್ನೂ ವೀಕ್ಶಕರ ಕಣ್ಣಲ್ಲಿ ನಿಗೂಡವಾಗಿಯೇ ಇದೆ. ಇಲ್ಲಿರುವ ಮೂರು ದೊಡ್ಡ ಬಂಡೆಗಳು ಆಕಾಶದಿಂದ ನೋಡಿದಾಗ ತಂದೆ, ತಾಯಿ ಮತ್ತು ಮಗುವಿನಂತಿರುವ ಮೂರು ತಿಮಿಂಗಿಲಗಳ ಹಾಗೆ ಕಾಣುತ್ತವೆ. ಆಗಸದೆತ್ತರದಿಂದ ನೋಡಿದಾಗ ಇದರ ನಿಜವಾದ ಸೌಂದರ‍್ಯ ಗೋಚರವಾಗುತ್ತದೆ.  ‘ತ್ರೀ ವೇಲ್ ರಾಕ್’ ಬಹಳ ಪುರಾತನ ಕಾಲದಲ್ಲಿ ರೂಪುಗೊಂಡಿರುವ ಬಂಡೆ. ಇದು ಸುಮಾರು 75 ದಶಲಕ್ಶ ವರ‍್ಶಗಳಶ್ಟು ಹಳೆಯದು ಎಂದು ಅಂದಾಜಿಸಲಾಗಿದೆ. ಅವ್ಯಾಹತವಾಗಿ ಅಶ್ಟು ವರ‍್ಶಗಳ ಕಾಲ ವಾತಾವರಣದ ಏರು ಪೇರುಗಳಿಗೆ ತನ್ನ ಮೈಯನ್ನು ಒಡ್ಡಿರುವ ಹಿನ್ನೆಲೆಯಲ್ಲಿ, ಅದು ಇಂದಿನ ಆಕಾರ ಪಡೆದಿದೆ.

ಈ ಬಂಡೆಗಳು ತಿಮಿಂಗಿಲದ ಸ್ವರೂಪ ಪಡೆದಿರುವುದರಿಂದ ಅವುಗಳು ‘ತ್ರೀ ವೇಲ್ ರಾಕ್’ ಎಂದು ಕರೆಯಲ್ಪಟ್ಟಿವೆ. ಮೂರು ತಿಮಿಂಗಿಲದಂತೆ ಕಾಣುವ ಬಂಡೆಗಳು ತೈಲ್ಯಾಂಡಿನ ಬ್ಯೂಂಗ್ ಕನ್ ಪ್ರದೇಶದ ಪೂ ಸಿಂಗ್ ಪರ‍್ವತ ಶ್ರೇಣಿಯಲ್ಲಿವೆ. ಪ್ರವಾಸಿಗರಲ್ಲಿ ಬಹಳಶ್ಟು ಜನ ಇದರ ಮೇಲೆ ಹತ್ತುತ್ತಾರೆ. ಇಲ್ಲಿ ಯಾವುದೇ ರಕ್ಶಣಾ ಉಪಕರಣಗಳನ್ನು ಅಳವಡಿಸದೇ ಇರುವುದರಿಂದ, ಬಹಳ ಜಾಗರೂಕತೆ ಅವಶ್ಯ. ಬಂಡೆಗಳಲ್ಲಿ ರೂಪಗೊಂಡಿರುವ ತಿಮಿಂಗಿಲಗಳು ತಾಯ್ ಜನರಿಗೆ ಹಾಗೂ ವಿದೇಶಿ ಪ್ರವಾಸಿಗರ ವೀಕ್ಶಣೆಗೆ ಅದ್ಬುತ ತಾಣ. ಇಲ್ಲಿನ ಪ್ರಕ್ರುತಿ ಸೌಂದರ‍್ಯ, ದಟ್ಟ ಹಾಗೂ ನಿತ್ಯ ಹರಿದ್ವರ‍್ಣದ ಕಾಡಿನ ವಾತಾವರಣ, ಸುತ್ತಮುತ್ತಲಿನ ದ್ರುಶ್ಯಾವಳಿಗಳು ಮತ್ತು ಶಾಂತ ವಾತಾವರಣ ಎಂತಹವರನ್ನೂ ಮಂತ್ರ ಮುಗ್ದಗೊಳಿಸುತ್ತದೆ. ಪ್ರಕ್ರುತಿ ಹಾಗೂ ಶಾಂತತೆಯ ಪ್ರಿಯರಿಗೆ ಇದು ಅತ್ಯಂತ ಪ್ರಶಸ್ತ ಸ್ತಳ.

ಇಲ್ಲಿಗೆ ತಲುಪಲು ಒಂಬತ್ತು ವಿಬಿನ್ನ ಮಾರ‍್ಗಗಳಿದ್ದು, ಇದರಲ್ಲಿ ತಮಗೆ ಸೂಕ್ತವೆನಿಸಿದ ಯಾವುದೇ ಮಾರ‍್ಗವನ್ನಾದರೂ ಪ್ರವಾಸಿಗರು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ಮಾರ‍್ಗದಲ್ಲಿ ನಡೆದು ಹೋದರೂ, ಹಾದಿಯುದ್ದಕ್ಕೂ ಕಣ್ಮನ ಸೆಳೆಯುವ ಜಲಪಾತಗಳು, ಬೆಟ್ಟ-ಗುಡ್ಡಗಳು, ಕಾಡುಪ್ರಾಣಿಗಳು, ವಿವಿದ ಮಾದರಿಯ ಸಸ್ಯಗಳು ಹೀಗೆ ನೈಸರ‍್ಗಿಕ ಸೌಂದರ‍್ಯವನ್ನು ಅನುಬವಿಸುತ್ತಾ ಸಾಗುವುದರಿಂದ ಪ್ರಯಾಣ ಕಶ್ಟಕರವೆನಿಸುವುದಿಲ್ಲ. ಈ ದೈತ್ಯ ಬಂಡೆಯ ಮೇಲೆ ನಿಂತಾಗ ತೈಲ್ಯಾಂಡ್‍ನ ಪಶ್ವಿಮದಲ್ಲಿ ಸೂರ‍್ಯಾಸ್ತಮದ ಬವ್ಯ ದ್ರುಶ್ಯ ಕಾಣ ಸಿಗುತ್ತದೆ. ಬಹಳಶ್ಟು ಪ್ರವಾಸಿಗರು ಇದಕ್ಕಾಗಿ ಕಾದು ಕುಳಿತು, ಸೂರ‍್ಯಾಸ್ತಮವನ್ನು ನೋಡಿ ಕುಶಿ ಪಡುತ್ತಾರೆ. ಈ ದೈತ್ಯ ತಿಮಿಂಗಿಲದಂತಹ ಕಲ್ಲು ಬಂಡೆಗಳ ನೈಸರ‍್ಗಿಕ ನಿದಿಯು ತಾಯ್ ಸರ‍್ಕಾರದ ಸುಪರ‍್ದಿಯಲ್ಲಿದ್ದು, ಅದರ ರಕ್ಶಣೆಯ ಹೊಣೆಯನ್ನು ಸದ್ಯಕ್ಕೆ ಸರ‍್ಕಾರವೇ ಹೊತ್ತಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: nationthailand.com, nationalgeographic.comchillpainai.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: