ತುಮಕೂರಿನ ಶ್ರೀ ಸಿದ್ದಗಂಗಾ ಕ್ಶೇತ್ರ

– ಶ್ಯಾಮಲಶ್ರೀ.ಕೆ.ಎಸ್.

ತ್ರಿವಿದ ದಾಸೋಹಿಗಳು, ಶತಾಯುಶಿ ಪರಮಪೂಜ್ಯ ಲಿಂಗೈಕ್ಯ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ನೆಲೆಸಿ, ಹರಸಿದಂತಹ ಪುಣ್ಯಕ್ಶೇತ್ರ ಶ್ರೀ ಸಿದ್ದಗಂಗಾ ಮಟ. ಸಿದ್ದಗಂಗಾ ಮಟವು ಜಗತ್ತಿನಾದ್ಯಂತ ಮನ್ನಣೆ ಪಡೆದಿರುವ ಒಂದು ದಾರ‍್ಮಿಕ ಕ್ಶೇತ್ರ. ಇದು ಒಂದು ಪ್ರಸಿದ್ದ ಪ್ರವಾಸಿ ಸ್ತಳವೂ ಆಗಿದೆ. ಶ್ರೀಗಳ ಆಶೀರ‍್ವಾದದಿಂದ ಯಾವುದೇ ಜಾತಿ, ಮತ, ಪಂಗಡಗಳ ಬೇದವಿಲ್ಲದೆ ಸಹಸ್ರಾರು ಮಕ್ಕಳಿಗೆ ಆಶ್ರಯ ನೀಡಿ, ಶಿಕ್ಶಣ, ಊಟ, ವಸತಿ ಸೌಕರ‍್ಯವನ್ನು ನೀಡುತ್ತಿರುವ ತ್ರಿವಿದ ದಾಸೋಹದ ಒಂದು ಪುಣ್ಯಕ್ಶೇತ್ರ.

ಸಿದ್ದಗಂಗಾ ಕ್ಶೇತ್ರವು ಬೆಂಗಳೂರಿಗೆ ಸುಮಾರು 65 ಕಿ.ಮೀ ದೂರದಲ್ಲಿರುವ ಕ್ಯಾತಸಂದ್ರದಲ್ಲಿದೆ. ಕ್ಯಾತಸಂದ್ರದಿಂದ ಒಳಗೆ 1 ಕಿ.ಮೀ ಅಂತರದಲ್ಲಿದೆ. ಬೆಂಗಳೂರಿನಿಂದ ಕ್ಯಾತಸಂದ್ರಕ್ಕೆ ಬಸ್ಸು ಹಾಗೂ ರೈಲಿನ ಸೌಲಬ್ಯವಿದೆ. ಸುಮಾರು ಆರು ಶತಮಾನಗಳ ಹಿಂದೆ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಗೋಸಲ ಸಿದ್ದೇಶ್ವರರ ಪಾದ ಸ್ಪರ‍್ಶದಿಂದ ಕ್ಯಾತಸಂದ್ರದ ಬೆಟ್ಟದಲ್ಲಿ ಗಂಗೆಯು ಉದ್ಬವಿಸಿದ್ದಕ್ಕಾಗಿ ಸಿದ್ದಗಂಗೆ ಎಂಬ ಹೆಸರು ಬಂದಿತ್ತೆಂಬುದಾಗಿ ಹೇಳಲಾಗುತ್ತದೆ. ಗೋಸಲ ಸಿದ್ದೇಶ್ವರರು ಬೆಟ್ಟದ ತಪ್ಪಲಿನಲ್ಲಿ ಒಂದು ಮಟವನ್ನು ನಿರ‍್ಮಿಸಿದರು. ಇದನ್ನು ಈಗಿರುವ ಹಳೇಮಟ ಎಂದು ಹೇಳಲಾಗುತ್ತದೆ. ಸಿದ್ದೇಶ್ವರರು ಗುಬ್ಬಿಯ ಗೋಸಲ ಚನ್ನಬಸವ ರಾಜೇಂದ್ರರಿಗೆ ಅನುಗ್ರಹ ಮಾಡಿದರೆಂದು ಹೇಳಲಾಗುತ್ತದೆ.

ಚಾಮರಾಜನಗರ ತಾಲೂಕಿನ ಹರದನಹಳ್ಳಿಯಲ್ಲಿ ಜನ್ಮತಾಳಿದ ತೋಂಟದ ಸಿದ್ದಲಿಂಗೇಶ್ವರರು ಗೋಸಲ ಚನ್ನಬಸವೇಶ್ವರರಿಂದ ಜ್ನಾನೋಪದೇಶವನ್ನು ಪಡೆದು ವಚನ ಸಾಹಿತ್ಯವನ್ನು ಪುನರುಜ್ಜೀವನಗೊಳಿಸಿದರು. ಮಹಾಯೋಗಿಗಳಾದ ಇವರು ಸಿದ್ದಗಂಗೆಗೆ ಬಂದು ಅನೇಕ ಪವಾಡಗಳನ್ನು ಮಾಡಿದ್ದರಂತೆ.  ಸಿದ್ದಗಂಗೆಯ ಮಹಿಮೆಯ ಬಗ್ಗೆ ಅರಿತಿದ್ದ ಉತ್ತರ ಕರ‍್ನಾಟಕ ಜಿಲ್ಲೆಯವರಾದ ಅಡವಿ ಮಹಾಸ್ವಾಮಿಗಳು 19ನೇ ಶತಮಾನದಲ್ಲಿ ಇಲ್ಲಿಗೆ ಬಂದು ಮಟದ ಅಬಿವ್ರುದ್ದಿ ಕಾರ‍್ಯದಲ್ಲಿ ತೊಡಗಿ, ಬರುವ ಬಕ್ತಾದಿಗಳಿಗೆ ಅನ್ನ ಸಂತರ‍್ಪಣೆ ಕಾರ‍್ಯವನ್ನು ಆರಂಬಿಸಿದರು. ಸಂಸ್ಕ್ರುತ ಅಬ್ಯಾಸ ಮತ್ತು ಪ್ರಾತಮಿಕ ಹಂತದ ವಿದ್ಯಬ್ಯಾಸಕ್ಕೆ ಆದ್ಯತೆ ನೀಡಿ ವಿದ್ಯಾರ‍್ತಿ ನಿಲಯವನ್ನು ಪ್ರಾರಂಬಿಸಿದರು. ಕೆಲಕಾಲದ ನಂತರ ಲಕ್ಕೂರಿನ ರುದ್ರಪ್ಪರವರನ್ನು ಗುರುತಿಸಿ ಸಿದ್ದಗಂಗಾ ಮಟದ ಉತ್ತರಾದಿಕಾರಿಯಾಗಿ ನೇಮಕ ಮಾಡಿ ಅವರಿಗೆ ಉದ್ದಾನ ಶಿವಯೋಗಿಗಳು ಎಂದು ಹೆಸರನ್ನು ಬದಲಾಯಿಸಿದರು. ನಂತರ ಶ್ರೀ ಅಟವಿ ಮಹಾಸ್ವಾಮಿಗಳ ಆಶಯದಂತೆ ಚಿಕ್ಕತೊಟ್ಲುಕೆರೆಯ ಮಟದಲ್ಲಿ ಅವರ ಕ್ರಿಯಾಸಮಾದಿಯನ್ನು ಮಾಡಲಾಯಿತು ಎಂದು ಹೇಳಲಾಗುತ್ತದೆ.

ಶ್ರೀ ಉದ್ದಾನ ಶಿವಯೋಗಿಗಳ ಕಾಲದಲ್ಲಿ ಬಕ್ತರ ಸಂಕ್ಯೆ ಹೆಚ್ಚಾಗತೊಡಗಿತು. ದಾಸೋಹಕ್ಕಾಗಿ ನಾನಾ ಕಡೆಯಿಂದ ಹೇರಳವಾಗಿ ದವಸ ದಾನ್ಯಗಳು ಬರಲಾರಂಬಿಸಿದವು. ಶ್ರೀ ಉದ್ದಾನ ಶಿವಯೋಗಿಗಳು ವ್ಯವಸಾಯಕ್ಕೂ ಹೆಚ್ಚು ಪ್ರಾಮುಕ್ಯತೆಯನ್ನು ನೀಡುತ್ತಿದ್ದರು. ಸಂಸ್ಕ್ರುತ ಪಾಟಶಾಲೆ, ಉಚಿತ ಸಾರ‍್ವಜನಿಕ ವಿದ್ಯಾನಿಲಯವನ್ನು ಆರಂಬಿಸಿದರು. ಮಟದ ಉತ್ತರಾದಿಕಾರಿಯಾಗಿ ಶ್ರೀ ಮರುಳಾರಾದ್ಯರನ್ನು ನೇಮಿಸಿದರು. ಅನಾರೋಗ್ಯದಿಂದ ಮರುಳಾರಾದ್ಯರು ಶಿವೈಕ್ಯರಾದ್ದರಿಂದ, ಮತ್ತೆ ಉತ್ತರಾದಿಕಾರಿಯ ಹುಡುಕಾಟ ನಡೆಸಿ ಶ್ರೀ ಮರುಳಾರಾದ್ಯರ ಆತ್ಮೀಯರಾದ, ಮಾಗಡಿ ತಾಲೂಕಿನ ವೀರಾಪುರದ ಶಿವಣ್ಣರನ್ನು ಉತ್ತರಾದಿಕಾರಿಯಾಗಿ ನೇಮಿಸಿದರು. ಅವರೇ ಸಿದ್ದಗಂಗೆಯ ಕೀರ‍್ತಿಯನ್ನು ಉತ್ತುಂಗಕ್ಕೇರಿಸಿ, ನಡೆದಾಡುವ ದೇವರೆಂದೇ ಜಗತ್ ವಿಕ್ಯಾತರಾದ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು. ಇವರು ಉದ್ದಾನ ಶಿವಯೋಗಿಗಳ ಪರಮ ಶಿಶ್ಯರು. ಸಿದ್ದಗಂಗಾ ಮಟದಲ್ಲಿ ನಿತ್ಯ ದಾಸೋಹ, ಬಡ ವಿದ್ಯಾರ‍್ತಿಗಳಿಗೆ ಉಚಿತ ವಸತಿ ಶಿಕ್ಶಣವೆಲ್ಲವೂ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಉಸ್ತುವಾರಿಯಲ್ಲಿ ನಡೆದಿರುವಂತದ್ದು. ರಾಜ್ಯದ ನಾನಾಕಡೆ ಸುಮಾರು 125ಕ್ಕೂ ಹೆಚ್ಚು ಶಿಕ್ಶಣ ಸಂಸ್ತೆಗಳನ್ನು ಸ್ತಾಪಿಸಿ ಶಿಕ್ಶಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದರು. ಅದರಲ್ಲೂ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯವು ಬಹಳ ಪ್ರಸಿದ್ದಿ ಪಡೆದಿದೆ. ಇತ್ತೀಚೆಗೆ ತುಮಕೂರು ನಗರದ ಹ್ರುದಯ ಬಾಗದಲ್ಲಿ ಸುಸಜ್ಜಿತವಾದ ಸಿದ್ದಗಂಗಾ ಆಸ್ಪತ್ರೆ ಮತ್ತು ಡಯಾಗ್ನೋಟಿಕ್ ಸೆಂಟರ‍್ ಸ್ತಾಪಿಸಲಾಯಿತು.

ಶ್ರೀ ಶಿವಕುಮಾರ ಮಹಾಸ್ವಾಮಿಗಳು 21-01-2019ರಂದು ತಮ್ಮ 111ನೇ ವಯಸ್ಸಿನಲ್ಲಿ ಶಿವೈಕ್ಯರಾದರು. ಪ್ರಸ್ತುತ ಇವರ ಉತ್ತರಾದಿಕಾರಿಗಳಾಗಿದ್ದ ಕಿರಿಯ ಸ್ವಾಮಿಗಳಾದ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಟದ ಪೂರ‍್ಣ ಪ್ರಮಾಣದ ಜವಾಬ್ದಾರಿಯನ್ನು ಹೊತ್ತು ಸಿದ್ದಗಂಗೆಯನ್ನು ಅಶ್ಟೇ ಸಮರ‍್ತವಾಗಿ ಮುನ್ನಡೆಸುತ್ತಿದ್ದಾರೆ. ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು 1988ರಲ್ಲಿ ಶ್ರೀ ಮಟದ ಉತ್ತರಾದಿಕಾರಿಯಾಗಿ ನೇಮಿಸಲ್ಪಟ್ಟಿದ್ದರು. ಅಂದಿನಿಂದ ಇಂದಿನವರೆಗು ಹಿರಿಯ ಶ್ರೀಗಳಾದ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಅನುಕರಣಾಶೀಲರಾಗಿ ಶ್ರೀ ಮಟದಲ್ಲಿ ದಾಸೋಹ, ಕ್ರುಶಿ, ಪಶುಪಾಲನೆ, ತೋಟಗಾರಿಕೆ ಹಾಗೂ ಶಿಕ್ಶಣಕ್ಶೇತ್ರ ಇತ್ಯಾದಿ ಕೆಲಸವನ್ನು ಜವಾಬ್ದಾರಿಯಿಂದ ನಿರ‍್ವಹಿಸುತ್ತಿದ್ದಾರೆ. ಸಿದ್ದಗಂಗೆಯ ಪ್ರಶಾಂತತೆ ಎಂತಹವರನ್ನೂ ದ್ಯಾನ ಮಗ್ನರನ್ನಾಗಿಸುತ್ತದೆ. ಪ್ರತೀ ವರ‍್ಶವೂ ಶಿವರಾತ್ರಿ ಹಬ್ಬದ ಪ್ರಯುಕ್ತ ಜರುಗುವ ಸಿದ್ದಲಿಂಗೇಶ್ವರನ ಜಾತ್ರೆಗೆ ಲಕ್ಶಾಂತರ ಬಕ್ತಾದಿಗಳು ಆಗಮಿಸುತ್ತಾರೆ. ಜಾತ್ರೆಯ ಸಮಯದಲ್ಲಿ ದನದ ಪರಿಶೆ, ವಸ್ತು ಪ್ರದರ‍್ಶನ ಮತ್ತು ಅನೇಕ ಸಾಂಸ್ಕ್ರುತಿಕ ಕಾರ‍್ಯಕ್ರಮಗಳು ನಡೆಯುತ್ತವೆ. ಶ್ರೀಗಳ ಜನ್ಮದಿನದ ಪ್ರಯುಕ್ತ ನಡೆಯುತ್ತಿದ್ದ ಗುರುವಂದನ ಕಾರ‍್ಯಕ್ರಮಗಳು ಅವಿಸ್ಮರಣೀಯ.

ಶ್ರೀ ಕ್ಶೇತ್ರದಲ್ಲಿ ನೋಡಬಹುದಾದ ಸ್ತಳಗಳು, ಬೆಟ್ಟದ ಮೇಲಿರುವ, ಶ್ರೀ ಸಿದ್ದಲಿಂಗೇಶ್ವರ ದೇವಾಲಯ, ಸಿದ್ದಗಂಗಮ್ಮನವರ ದೇವಾಲಯ, ಬೆಟ್ಟದ ತಪ್ಪಲಲ್ಲಿ ಇರುವ ಶ್ರೀ ಉದ್ದಾನೇಶ್ವರ ಯೋಗಿಗಳ ಗದ್ದುಗೆ, ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಗದ್ದುಗೆ, ಆಡಳಿತ ಕಚೇರಿ, ಅಡವಿ ಸ್ವಾಮಿಗಳ ಗದ್ದುಗೆ, ಯಂತ್ರದಾರಣ ಮಂಚ. ಜಾತ್ರೆಯ ಸಮಯದಲ್ಲಿ ಸಿದ್ದಲಿಂಗೇಶ್ವರನ ತೆಪ್ಪೋತ್ಸವ ಮಾಡುವ ಬ್ರುಹತ್ ಕಲ್ಯಾಣಿ, ದಾಸೋಹ, ಮಹಾಮನೆ, ಪ್ರಾರ‍್ತನ ಮಂದಿರ, ಮ್ಯೂಜಿಯಂ, ಬಿಲ್ವವನ ಇತ್ಯಾದಿ, ಇವಲ್ಲದೆ ಸಿದ್ದಗಂಗಾ ಕ್ಶೇತ್ರದಲ್ಲಿ ಅಂದರ ಶಾಲೆ, ವಿದ್ಯಾರ‍್ತಿ ನಿಲಯಗಳು, ಕಲ್ಯಾಣ ಮಂಟಪ, ಪ್ರಸಾದ ನಿಲಯ ಮತ್ತು ಅತಿತಿ ಗ್ರುಹಗಳೂ ಇವೆ.

(ಚಿತ್ರ ಸೆಲೆ: siddagangamath.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: