ವಿಶ್ವದ ಅತ್ಯಂತ ಆಳವಾದ ಗುಹೆ

– 

ವಿಶ್ವದ ಅತ್ಯಂತ ಆಳವಾದ ಗುಹೆ

ಬೂಮಿಯ ಮೇಲಿರುವ ಅನೇಕ ವಿಸ್ಮಯಗಳು ಮಾನವನ ದ್ರುಶ್ಟಿಯಿಂದ ಇನ್ನೂ ಶೇಶವಾಗಿಯೇ ಇದೆ. ಉದಾಹರಣೆಗೆ, ಸಮುದ್ರ ಮತ್ತು ಸಾಗರದ ಆಳ, ಅದರಲ್ಲಿರುವ ಅನೇಕ ಜೀವರಾಶಿಗಳು. ಇದರೊಡನೆ ಕಾಡು, ಮೇಡುಗಳಲ್ಲಿ ಹುದುಗಿರುವ ಅನೇಕ ಗುಹೆಗಳು ಸಹ ಮಾನವನ ಅನ್ವೇಶಣೆಯಿಂದ ದೂರವೇ ಉಳಿದಿದೆ. ವಿಶ್ವದ ಅತ್ಯಂತ ಎತ್ತರವಾದ ಪರ‍್ವತ ಯಾವುದು ಅಂದಾಕ್ಶಣ ತಟ್ಟನೆ ಬರುವ ಉತ್ತರ ಎವರೆಸ್ಟ್ ಎಂದು. ಏಕೆಂದರೆ ಇದಕ್ಕಿಂತ ಎತ್ತರವಾದ ಮತ್ತೊಂದು ಪರ‍್ವತ ಇಲ್ಲ ಎಂಬ ಕಾರಣಕ್ಕೆ. ಇದರಂತೆ ವಿಶ್ವದಲ್ಲೇ ಆತ್ಯಂತ ಆಳದ ಗುಹೆ ಯಾವುದೆಂದರೆ ಬಹುಶಹ ಬಹಳಶ್ಟು ಜನರಿಗೆ ತಿಳಿದಿರುವುದಿಲ್ಲ. ಇದಕ್ಕೆ ಕಾರಣ ಬೂಮಿಯ ಮೇಲ್ಮೈಯಲ್ಲಿ ಕಂಡಶ್ಟು ಸುಲಬವಾಗಿ ಬೂಮಿಯ ತಳದಲ್ಲಿರುವುದು ಕಾಣುವುದಿಲ್ಲವಲ್ಲ!

ಈವರೆಗೂ ಅನ್ವೇಶಿಸಲ್ಪಟ್ಟಿರುವ ಗುಹೆಗಳಲ್ಲಿ ವಿಶ್ವದ ಅತ್ಯಂತ ಆಳವಾದ ಗುಹೆ ಇರುವುದು ಜಾರ‍್ಜಿಯಾದ ಅರೇಬಿಕಾ ಮಾಸಿಪ್‍ನಲ್ಲಿ. ಅರೇಬಿಕಾ ಮಾಸಿಪ್ ಇರುವುದು ಜಾರ‍್ಜಿಯಾದ ಗಡಿ ಪ್ರದೇಶ ಅಬ್ಕಾಜಿಯಾದ ಕಪ್ಪು ಸಮುದ್ರದ ಅಂಚಿನಲ್ಲಿ. ‘ಗುಹೆಗಳ ಎವರೆಸ್ಟ್’ ಎಂದು ಕರೆಯಲ್ಪಡುವ ಕ್ರುಬೇರಾ ಗುಹೆಯ ಆಳ 7208 ಅಡಿ (2197 ಮೀಟರ‍್). ಐಪೆಲ್ ಟವರಿನ ಎತ್ತರದ ಆರೂವರೆ ಪಟ್ಟಿನಶ್ಟು. ಮೊದಲ ಬಾರಿಗೆ ಈ ಗುಹೆಯನ್ನು 1960ರಲ್ಲಿ ಪತ್ತೆ ಹಚ್ಚಲಾಯಿತು. ಅಲ್ಲಿಂದೀಚೆಗೆ ಅನೇಕ ಪರಿಶೋದಕರು ಮತ್ತು ವಿಗ್ನಾನಿಗಳು ಈ ಗುಹೆಯ ಆಳದ ಪರಿಶೀಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಬಾರಿ ಇದರ ಆಳದ ಅನ್ವೇಶಣೆಗೆ ತೊಡಗಿಸಿಕೊಂಡಾಗಲೂ ಹೊಸ ದಾಕಲೆಗಳು ಸ್ರುಶ್ಟಿಯಾಗುತ್ತಲೇ ಇರುತ್ತೆ!

2001ರಲ್ಲಿ ಈ ಗುಹೆಯ ಆಳದ ಅನ್ವೇಶಣೆ ಕೈಗೊಂಡ ತಂಡ 1710 ಮೀಟರ‍್ ಆಳಕ್ಕೆ ಇಳಿದಿದ್ದು, ಅಲ್ಲಿಯವರೆಗೂ ಅಗ್ರಸ್ತಾನದಲ್ಲಿದ್ದ ಲ್ಯಾಂಪೆಚ್ಸ್ಟಾಪೆನ್ ಗುಹೆಯನ್ನು 80 ಮೀಟರ‍್ಗಳ ಅಂತರದಿಂದ ಹಿಂದಿಕ್ಕಿತು. ಮೂರು ವರ‍್ಶಗಳ ತರುವಾಯ ಈ ಗುಹೆ 2000 ಮೀಟರ‍್ಗಿಂತಲೂ ಆಳವಾದ ಮೊದಲ ಗುಹೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಪ್ರತಿ ವರ‍್ಶವೂ ಅನೇಕ ಹೊಸ ತಂಡಗಳು ಇದರ ಆಳದ ಅನ್ವೇಶಣೆಯಲ್ಲಿ ತೊಡಗಿಸಿಕೊಳ್ಳುತ್ತವೆ. ಇಂತಹ ಆಳದ ಗುಹೆಯಲ್ಲಿ ಇಳಿಯುವುದಕ್ಕೆ ತರಬೇತಿ ಅತ್ಯಗತ್ಯ. ಒಳಗೆ ಇಳಿಯುತ್ತಿದ್ದಂತೆ ಉಂಟಾಗುವ ಉಸಿರು ಕಟ್ಟುವ ವಾತಾವರಣ, ಆಮ್ಲಜನಕದ ಕೊರತೆ, ಒತ್ತಡದ ಸನ್ನಿವೇಶವನ್ನು ಎದುರಿಸಲು ಸೂಕ್ತ ಏರ‍್ಪಾಡಿರಬೇಕು. ಎಲ್ಲಾದರೂ ಕೊಂಚ ಎಡವಟ್ಟಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

2012ರಲ್ಲಿ ಉಕ್ರೇನಿನ ಡೈವರ‍್ ಗೆನ್ನಾಡಿ ಸಮೋಕಿನ್ ಎಂಬಾತ ಇದರ ಆಳದ ಅನ್ವೇಶಣೆ ಕಾರ‍್ಯಕ್ಕಿಳಿದಾಗ 2197 ಮೀಟರ‍್ ವರೆಗೂ ತಲುಪಿದ್ದ. ಇಂದಿಗೂ ಸಹ ಇದೇ ದಾಕಲೆ ಮುಂದುವರೆದಿದೆ. ನೀರಿನಲ್ಲಿ ಸಂಪೂರ‍್ಣ ಮುಳುಗಿರುವ ಗುಹೆಯ ಆಳವನ್ನು ಅನ್ವೇಶಿಸುವುದು ಸುಲಬದ ಮಾತಲ್ಲ. ಇದು ಅತ್ಯಂತ ದೈರ‍್ಯ ಹಾಗೂ ಸಾಹಸದ ಕ್ರುತ್ಯ. ಕ್ರುಬೇರಾ ಗುಹೆಗಳು ಎಶ್ಟು ಆಳವಾಗಿವೆಯೆಂದರೆ, ನೇರವಾಗಿ ಬೂಮಿಯ ಮದ್ಯಕ್ಕೆ ಕರೆದುಕೊಂಡು ಹೋದಂತೆ ಕಂಡು ಬರುತ್ತದೆ. ಇದರಲ್ಲಿ ಆಳಕ್ಕೆ ಇಳಿಯುತ್ತಾ ಹೋದಂತೆ ಗನೀಕರಿಸಿದ ಬೂಗತ ಜಲಪಾತಗಳು, ನೀರಿನಿಂದ ಆವ್ರುತವಾದ ಪ್ರದೇಶಗಳು, ತುಂಬಾ ಕಿರಿದಾದ ಸುರಂಗಗಳು ಎದುರಾಗುತ್ತವೆ. ಇದರಲ್ಲಿ ನುಸುಳುತ್ತಾ ಕೆಳಗಿಳಿಯುವುದು ಅತ್ಯಂತ ತ್ರಾಸದಾಯಕ. ಕ್ರುಬೇರಾ ಗುಹೆ ಅಸಂಕ್ಯಾತ ಹೊಂಡ ಹಾಗೂ ಕತ್ತಲೆಯಿಂದ ಕೂಡಿರುವ ಕಾರಣ ಇದರ ಅನ್ವೇಶಣೆ ಸುಲಬದ ಮಾತಲ್ಲ.

(ಮಾಹಿತಿ ಮತ್ತು ಚಿತ್ರ ಸೆಲೆ: mymodernmet.com, atlasobscura.com, thetravel.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.