ದೇವರು ಮತ್ತು ನಂಬಿಕೆ

– .

ಸಾಮಾನ್ಯವಾಗಿ ಮನುಶ್ಯರಲ್ಲಿ  ‘ದೇವರು’ ಎಂಬುದು ಬಾವನಾತ್ಮಕವಾಗಿ ಬೆಸೆದುಕೊಂಡ ವಿಚಾರವಾಗಿರುತ್ತದೆ. ಅದರಲ್ಲೂ ಬಾರತೀಯರಲ್ಲಿ ದೇವರ ಬಗೆಗಿನ ನಂಬಿಕೆಯನ್ನು ತುಸು ಹೆಚ್ಚಾಗಿಯೇ ಕಾಣಬಹುದು. ನಮಗೆ ಜೀವನದಲ್ಲಿ ಏನೇ ಸಂಕಶ್ಟಗಳು ಬಂದೊದಗಿದರೂ ಪರಿಹಾರಕ್ಕಾಗಿ ದೇವರಲ್ಲಿ ಮೊರೆ ಹೋಗುತ್ತೇವೆ. ದೇವರ ಮೇಲೆ ನಮ್ಮ ನಂಬಿಕೆ ಎಶ್ಟಿದೆ ಎಂದರೆ ನಮ್ಮೆಲ್ಲ ನೋವುಗಳನ್ನು, ಕಶ್ಟನಶ್ಟಗಳನ್ನು ಕ್ಶಣ ಮಾತ್ರದಲ್ಲಿ ನಿವಾರಿಸುವ ಅಗಾದ ಶಕ್ತಿ ದೇವರಿಗಿದೆ ಎಂಬುದಾಗಿದೆ. ನಾವು ಹೆಚ್ಚು ಸಂಕಶ್ಟದಲ್ಲಿದ್ದಾಗ ಸಂಕಟ ಬಂದಾಗ ವೆಂಕಟ ರಮಣ ಎಂಬ ಗಾದೆಯಂತೆ, ದೇವರಲ್ಲಿ ಹೆಚ್ಚು ಮೊರೆ ಹೋಗುತ್ತೇವೆ. ಹರಕೆಗಳನ್ನು ಕಟ್ಟಿಕೊಳ್ಳುತ್ತೇವೆ, ಮುಡುಪು ಕಟ್ಟಿಡುತ್ತೇವೆ, ಕಾಣಿಕೆಗಳನ್ನು ಸಮರ‍್ಪಿಸುತ್ತೇವೆ. ಇದು ನಾವು ದೇವರ ಮೇಲೆ ಬಾವನಾತ್ಮಕವಾಗಿ ಹೊಂದಿರುವ ಅಪಾರ ನಂಬಿಕೆಯಾಗಿದೆ.

‘ಮನೆಯೇ ಮಂತ್ರಾಲಯ ಮನಸೇ ದೇವಾಲಯ’ ಎಂಬ ಹಾಡಿನ ಸಾಲಿನಂತೆ, ನಮ್ಮೊಳಗಿನ ಅಪಾರ ಚಿಂತನ-ಮಂತನದ ಶಕ್ತಿಯನ್ನು ಬಳಸಿ ಸಂಕಶ್ಟಗಳ ಪರಿಹಾರಕ್ಕೆ ಒಂದು ಕಟ್ಟ ಕಡೆಯ ನೀಲಿ ನಕ್ಶೆ ತಯಾರಿಸಿಕೊಂಡು, ಅದನ್ನು ಶಿಸ್ತಿನಿಂದ ಯತಾವತ್ತು ರೂಡಿಗತಗೊಳಿಸಿಕೊಂಡು ಸಂಕಶ್ಟದಿಂದ ಪಾರಾಗಿ ಬಿಡುವ ಸ್ವಯಂ ಶಕ್ತಿಯ ಉಪಯೋಗವನ್ನು ಕಂಡಾಗ ‘ಮನಸೆ ದೇವಾಲಯ, ಮನಸ್ಸಿನ ಅದ್ಬುತ ಆಲೋಚನಾ ಶಕ್ತಿಯೇ ದೇವರು’ ಎಂಬ ತರ‍್ಕವನ್ನು ಕಾಣಬಹುದು. ಇಂತಹ ಜಿಜ್ನಾಸೆಗಳು ಏನೇ ಇರಲಿ, ಒಟ್ಟಿನ್ನಲ್ಲಿ ಕಣ್ಣಿಗೆ ಕಾಣುವ ದೇವರಿಂದಲೋ ಅತವಾ ಕಣ್ಣಿಗೆ ಕಾಣದಿರುವ ದೇವರಿಂದಲೋ  ನಮ್ಮ ಸಂಕಶ್ಟಗಳು, ನೋವುಗಳು ನಿವಾರಣೆಯಾಗುವುದು ಎನ್ನುವ ನಂಬಿಕೆಯಂತೂ ಗಟ್ಟಿಯಾಗಿದೆ.

ದೇವಸ್ತಾನದಲ್ಲಿ ಕಳ್ಳರು ಕೈಚಳಕ ತೋರಿ ದೇವರ ಹುಂಡಿ, ಬಂಗಾರ ಬೆಳ್ಳಿ, ದೇವರ ಮೂರ‍್ತಿ ಕಳ್ಳತನ ಮಾಡಿದಾಗ, ‘ತನ್ನನ್ನೇ ತಾನು ಸ್ವಯಂ ರಕ್ಶಿಸಿಕೊಳ್ಳದ ದೇವರು ಅದೇಗೆ ಜನರನ್ನು ರಕ್ಶಿಸುತ್ತಾನೆ?’ ಎಂದು ತರ‍್ಕಿಸುವವರಿದ್ದಾರೆ! ಮನುಶ್ಯರ ದೇವರ ಮೇಲಿನ ಅಪಾರ ನಂಬಿಕೆಗೆ ದೇವರ ಮೂರ‍್ತಿ ಬೌತಿಕವಾಗಿ ಒಂದು ಸಾಂಕೇತಿಕ ಮೂರ‍್ತಿ ಅಶ್ಟೆ ಎಂದು ವ್ಯಾಕ್ಯಾನಿಸಬಹುದು. ದೇವರು ಅಪರಿಮಿತ, ಅನನ್ಯ, ಅರೂಪ, ಹೀಗೆ ವಿಶ್ವದಾದ್ಯಂತ ಕಣ ಕಣದಲ್ಲೂ ಬೆರೆತು ಅನೂಹ್ಯನಾಗಿರುವವನು ಎಂದು ನಾವಿಲ್ಲಿ ನಿರ‍್ದರಿಸಬಹುದೇ? ಇದು ಕೂಡ ನಮ್ಮ ನಂಬಿಕೆಯೇ ಆಗಿದೆ.

ಕೆಲವರು ದೇವರ ಹೆಸರಲ್ಲಿ ನಡೆಯುವ ಗೌಜು-ಗದ್ದಲದ ಉತ್ಸವಗಳಲ್ಲಿ ಉನ್ಮತ್ತರಾಗಿ, ಹೆಚ್ಚು ಉನ್ಮಾದಕ್ಕೊಳಗಾಗುತ್ತಾರೆ. ಕ್ಶಣ ಮಾತ್ರದಲ್ಲಿ ದೇವರಾಗಿ ಮಾತನಾಡುವವರನ್ನು ಕಂಡು ನಾವು “ಅವನ ಮೈ ಮೇಲೆ ದೇವರು ಬಂದಿದೆ” ಎಂದು ಆತನಿಗೆ ಶಿರಸಾಶ್ಟಾಂಗ ನಮಿಸಿ, ನಮ್ಮೊಳಗಿನ ನೂರಾರು ಕಶ್ಟಕೋಟಲೆಗಳ ಪ್ರಶ್ನೆಗಳಿಗೆ ಉತ್ತರದ ಪರಿಹಾರ ಕಂಡುಕೊಳ್ಳುವಲ್ಲಿ ಮುಗಿ ಬೀಳುವುದು ನಮ್ಮ ನಂಬಿಕೆಯೇ ಆಗಿದೆ. ಕೆಲವರು ದೇವರ ಹೆಸರಲ್ಲಿ ಇಂತಹ ಗೌಜು ಗದ್ದಲ, ಆಡಂಬರ, ಡಾಂಬಿಕತನ ಒಪ್ಪದವರು ಬುದ್ದನಂತಹ ವಿವೇಕಯುತ ಬೋದನೆಗಳಿಗೆ ಮಾರು ಹೋಗಿ ಜಪಮಣಿ ಹಿಡಿದು ಶಾಂತವಾಗಿ ದ್ಯಾನ ಮಾಡುತ್ತ ತಮ್ಮ ಸಂಕಶ್ಟಗಳನ್ನು ನಿವಾರಿಸಿಕೊಳ್ಳುವ, ಅವುಗಳಿಗೆ ಪರಿಹಾರ ಕಂಡುಕೊಂಡುಳ್ಳುವ ಶಾಂತ ಮಾರ‍್ಗದಲ್ಲಿಯೇ ದೈವತ್ವವನ್ನು ಕಾಣುವವರಿದ್ದಾರೆ. ಅದು ಕೂಡ ನಂಬಿಕೆಯೇ ಆಗಿದೆ.

ಮನುಶ್ಯತ್ವ, ಮಾನವೀಯತೆ, ಜಗತ್ತಿನ ಸಕಲ ಚರಾಚರಗಳ ಮೇಲೆ, ಕರುಣೆ, ಕಕ್ಕುಲತೆ, ಎಲ್ಲರನ್ನೂ ಪ್ರೀತಿಸುವ ಗುಣ, ಸಮರ‍್ಪಣಾ ಬಾವ, ಬಡವರ, ನಿರ‍್ಗತಿಕರ, ಅಂಗವಿಕಲರ, ವಯೋವ್ರುದ್ದರ, ರೋಗಿಗಳ ಸೇವೆಯಲ್ಲಿಯೇ ದೇವರನ್ನು ಕಾಣುವವರದ್ದು ಕೂಡಾ, ಅದನ್ನು ಅವರ ಔಚಿತ್ಯಪೂರ‍್ಣ ನಂಬಿಕೆ ಎಂದೆ ಕರೆಯಬೇಕಾಗುತ್ತದೆ. ಏಸು, ಅಲ್ಲಾ, ಕ್ರಿಶ್ಣ, ಶಂಕರ, ವಿಶ್ಣು , ದುರ‍್ಗೆ, ಮಹಾಕಾಳಿ, ಮಹಾವೀರ, ಬುದ್ದ, ಬಸವ, ಸಂತ ಕಬೀರ‍ ಹೀಗೆ ಜನರು ಯಾರನ್ನೇ ದ್ಯಾನಿಸಲಿ, ಯಾರನ್ನೇ ಬಗವಂತನೆಂದು ಸ್ವೀಕರಿಸಲಿ, ಯಾರಲ್ಲಿಯೇ ದೈವತ್ವನ್ನೂ ಕಾಣಲಿ, ಕಶ್ಟನಶ್ಟಗಳಿಗೆ, ನೋವುಗಳಿಗೆ ಮೊರೆಯಿಡಲಿ – ಅವೆಲ್ಲವೂ ಅವರವರ ಮನಸ್ಸಿನ ಬಾವನೆಗಳ ನಂಬಿಕೆಯ ಮೇಲೆ ಈ ದೇವರು ಎಂಬದು ನಿಂತಿದೆ ಎಂದರೆ ಅತಿಶಯೋಕ್ತಿಯಾಗುವುದಿಲ್ಲ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: