ಪಂಪ ಬಾರತ ಓದು – 1ನೆಯ ಕಂತು

– ಸಿ.ಪಿ.ನಾಗರಾಜ.

ಹೆಸರು: ಪಂಪ ಕನ್ನಡದ ಆದಿ ಕವಿ ಮತ್ತು ಮಹಾ ಕವಿ
ಕಾಲ: ಕ್ರಿ.ಶ. 902
ತಾಯಿ: ಅಬ್ಬಣಬ್ಬೆ. ಅಣ್ಣಿಗೇರಿ, ನವಲುಗುಂದ ತಾಲ್ಲೂಕು, ದಾರವಾಡ ಜಿಲ್ಲೆ, ಕರ‍್ನಾಟಕ ರಾಜ್ಯ.
ತಂದೆ: ಬೀಮಪಯ್ಯ. ವೆಂಗಿಪಳು, ವೆಂಗಿಮಂಡಲ. ಈಗ ಇದು ಆಂದ್ರಪ್ರದೇಶಕ್ಕೆ ಸೇರಿದೆ.
ಆಶ್ರಯ: ಚಾಳುಕ್ಯ ಎರಡನೆಯ ಅರಿಕೇಸರಿಯ ಒಡ್ಡೋಲಗದಲ್ಲಿ ಕವಿ

ರಚಿಸಿದ ಕಾವ್ಯಗಳು:
1. ಆದಿ ಪುರಾಣ
2. ವಿಕ್ರಮಾರ‍್ಜುನ ವಿಜಯ/ಪಂಪ ಬಾರತ

==========================================

(ಪಂಪನ ವಿಕ್ರಮಾರ‍್ಜುನ ವಿಜಯ ಕಾವ್ಯದ ಪ್ರತಮ ಆಶ್ವಾಸದಿಂದ ಆಯ್ದುಕೊಳ್ಳಲಾಗಿದೆ. ಪದ್ಯ 68 ರ ನಂತರದ ಗದ್ಯ ಮತ್ತು ಪದ್ಯ 69 ರಿಂದ 73 ರ ವರೆಗಿನ ಪಟ್ಯವನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)

ಪಾತ್ರಗಳು

ಪರಾಶರ ಮುನಿ – ಬ್ರಹ್ಮದೇವನ ಮೊಮ್ಮಗ.
ಮತ್ಸ್ಯಗಂಧಿ – ದಾಶರಾಜನ ಸಾಕು ಮಗಳು. ಯೋಜನಗಂದಿ ಮತ್ತು ಸತ್ಯವತಿ ಎಂಬ ಮತ್ತೆರಡು ಹೆಸರುಗಳು ಈಕೆಗೆ ಇದ್ದವು.
ವ್ಯಾಸ – ಮತ್ಸ್ಯಗಂದಿ ಮತ್ತು ಪರಾಶರ ಮುನಿಯ ಮಗ.
ಶಂತನು – ಹಸ್ತಿನಾವತಿಯಲ್ಲಿ ನೆಲೆಸಿದ್ದ ಕುರುವಂಶದ ರಾಜ. ಗಂಗಾದೇವಿ ಮತ್ತು ಸತ್ಯವತಿ ಎಂಬುವರು ಈತನ ಇಬ್ಬರು ಹೆಂಡತಿಯರು.
ದಾಶರಾಜ – ಯಮುನಾ ನದಿ ತೀರದಲ್ಲಿ ನೆಲೆಸಿದ್ದ ಬೆಸ್ತರ ಸಮುದಾಯದ ಒಡೆಯ. ಮೀನು ಹಿಡಿಯುವುದು ಮತ್ತು ದೋಣಿಯನ್ನು ನಡೆಸುವುದು ಬೆಸ್ತ ಸಮುದಾಯದ ಕಸುಬಾಗಿತ್ತು.

ಮತ್ಸ್ಯಗಂಧಿ ಪ್ರಸಂಗ

ಒರ್ಮೆ ಬ್ರಹ್ಮರ ಮೊಮ್ಮನಪ್ಪ ವೃದ್ಧ ಪರಾಶರ ಮುನೀಂದ್ರನ್ ಉತ್ತರಾಪಥಕ್ಕೆ ಪೋಗುತ್ತುಮ್ ಬಂದು ತೊಱೆಯ ತಡಿಯೊಳ್ ಓಡಮನ್ ನಡೆಯಿಸುವ ಮತ್ಸ್ಯಗಂಧಿಯನ್ ಕಂಡು…

ಪರಾಶರ : ಎಮ್ಮನ್ ಈ ತೊಱೆಯಮ್ ಪಾಯಿಸು.
ಮತ್ಸ್ಯಗಂಧಿ : ಸಾಸಿರ್ವರ್ ಏಱಿದೊಡಲ್ಲದೆ ಈ ಓಡಮ್ ನಡೆಯದು.
ಪರಾಶರ: ಅನಿಬರ ಬಿಣ್ಪುಮ್ ಆಮ್ ಅಪ್ಪೆಮ್ ಏಱಿಸು.
ಮತ್ಸ್ಯಗಂಧಿ: ಅಂತೆ ಗೆಯ್ವೆನ್.

( ಎಂದು ಓಡಮ್ ಏಱಿಸಿ ನಡೆಯಿಸುವಲ್ಲಿ ಮುನೀಂದ್ರನ್ ದಿವ್ಯಕನ್ಯೆಯನ್ ಅಳ್ಕರ್ತು ನೋಡಿ, ಮನದೊಳ್ ಸೋಲ್ತು,

ಆಕೆಯ ಒಡಲ ಈ ದುರ್ಗಂಧ ಓಪಂತೆ ಯೋಜನ ಗಂಧಿತ್ವಮನ್ ಇತ್ತು, ಮಂಜನ್ ಕಾಂಡಪಟದಂತೆ

ಇರ್ಪನ್ನೆಗಮ್ ಮಾಡಿ, ಅಲಂಪು ಅಳ್ಕಱನ್ ಈಯೆ ಕೂಡುವ ಎಡೆಯೊಳ್ ಮಹಾ ಮುನಿಪನ್ ಜ್ಞಾನಸ್ವರೂಪನ್ ಪುಟ್ಟಿದನ್.

ದಿವ್ಯಮುನಿಗಳ್ಗೆ ಏಗೆಯ್ದೊಡಂ ತೀರದೇ…

ಅಂತು ನೀಲಾಂಬುದ ಶ್ಯಾಮನುಮ್, ಕನಕ ಪಿಂಗಳ ಜಟಾಬಂಧಕಳಾಪನುಮ್, ದಂಡ ಕಪಾಳ ಹಸ್ತನುಮ್,

ಕೃಷ್ಣಮೃಗ ತ್ವಕ್ಪರಿಧಾನನುಮ್ ಆಗೆ ವ್ಯಾಸಭಟ್ಟಾರಕನ್ ಪುಟ್ಟುವುದುಮ್, ಪರಾಶರನ್ ಸತ್ಯವತಿಗೆ ಪುನಃ

ಕನ್ಯಾಭಾವಮನ್ ದಯೆಗೆಯ್ದು ಆತನನ್ ಒಡಗೊಂಡು ಪೋದನ್.

ಇತ್ತಲ್ ಒರ್ಮೆ ಶಂತನು ಮೃಗಯಾವ್ಯಾಜದಿನ್ ತೊಳಲ್ತರ್ಪನ್, ತನ್ಮೃಗಶಾಬಾಕ್ಷಿಯ ಕಂಪು ಪಳಂಚಲ್ಕೆ ತಟ್ಟಿ,
ಮಧುಪಂಬೋಲ್ ಸೋಲ್ತು ಕಂಡು ನಲ್ಮೆಗೆ ಒಲ್ದು , ದಿಬ್ಯಮ್ ಪಿಡಿವಂತೆವೋಲ್ ಪಿಡಿದು…)

ಶಂತನು: ನೀನ್ ಬಾ ಪೋಪಮ್.
( ಎಂದಂಗೆ ತತ್ಕನ್ಯಕೆ ನಾಣ್ಚಿ ಮೆಲ್ಲಗೆ…)

ಸತ್ಯವತಿ: ಬೇಡುವೊಡೆ ನೀವ್ ಎಮ್ಮಯ್ಯನಂ ಬೇಡಿರೇ.
( ಎಂಬುದುಮ್ ಶಂತನು ಪೊಳಲ್ಗೆ ಮಗುಳ್ದು ವಂದು ಅವರಯ್ಯನಪ್ಪ ದಾಶರಾಜನಲ್ಲಿಗೆ ಕೂಸನ್ ಬೇಡೆ ಪೆರ್ಗಡೆಗಳನ್ ಅಟ್ಟಿದೊಡೆ…)

ದಾಶರಾಜ: ದೊರೆಯ ಪಿರಿಯ ಮಗನುಮ್ ಗಾಂಗೇಯನ್ ಕ್ರಮ ಕ್ರಮಾರ್ಹನುಮ್ ಇರ್ದಂತೆ ಎನ್ನ

ಮಗಳನ್ ಕುಡೆವು. ಎಮ್ಮ ಮಗಳ್ಗೆ ಪುಟ್ಟಿದಾತನ್ ಪಿರಿಯ ಮಗನುಮ್ ಕ್ರಮಕ್ಕೆ ಅರ್ಹನುಮ್ ರಾಜ್ಯಕ್ಕೆ ಒಡೆಯನುಮ್ ಅಪ್ಪೊಡೆ ಕುಡುವೆಮ್.

( ಎನೆ ತದ್ ವೃತ್ತಾಂತಮನ್ ಮಂತ್ರಿಗಳಿನ್ ಶಂತನು ಕೇಳ್ದು…)

ಶಂತನು: (ತನ್ನಲ್ಲಿಯೇ)

“ಕ್ರಮಮಮ್ ವಿಕ್ರಮದಿಂದೆ ತಾಳ್ದುವ ಮಗನ್ ಗಾಂಗೇಯನ್ ಇರ್ದಂತೆ ನೋಡ… ಮರುಳ್ ಶಂತನು ತನ್ನದೊಂದು ಸವಿಗಮ್ ಸೋಲಕ್ಕಮ್ ತನ್ನಯ ಬೇಟದಾಕೆಯ ಮಗಂಗೆ ನಿಜಕ್ರಮಮನ್ ಇತ್ತನ್“

ಎಂಬ ಒಂದು ಅಪಖ್ಯಾತಿ ಲೋಕಮನ್ ಆವರ್ತಿಸೆ ಬಳ್ದೊಡೆ ಎನ್ನ ಕುಲಮುಮ್ ತಕ್ಕೂರ್ಮೆಯುಮ್ ಮಾಸದೇ…

( ಎಂದು ತನ್ನ ನಾಣ್ಗಾಪನೆ ಬಗೆದು, ಅತನು ಪರಿತಾಪಿತ ಶರೀರನುಮಾಗಿ ಶಂತನು ಕರಂಗಿ ಎರ್ದೆಗಿಡೆ, ತದ್ ವೃತ್ತಾಂತಮೆಲ್ಲಮಂ ಗಾಂಗೇಯನ್ ಅಱಿದು…)

ಗಾಂಗೇಯ: (ತನ್ನಲ್ಲಿಯೇ)

ನೃಪತಿ ಬೇಡಿದುದನ್ ಕುಡಲೊಲ್ಲಂದು ಅಂಗಜೋತ್ಪನ್ನ ವಿಮೋಹದಿಂದ ಅಳಿದಪನ್. ಎನ್ನಯ

ದೂಸಱಿನ್ ಪತಿ ಸತ್ತೊಡೆ ಸತ್ತ ಪಾಪಮ್ ಎನ್ನನ್ ನರಕಂಗಳೊಳ್ ತಡೆಯದೆ ಅಳ್ದುಗುಮ್ .

ಪೋ ಏವುದು ರಾಜ್ಯಲಕ್ಷ್ಮಿ . ತನ್ನಯ ತಂದೆ ಎಂದುದನೆ ಕೊಟ್ಟು ವಿವಾಹಮನ್ ಇಂದೆ ಮಾಡುವೆನ್.

( ಎಂದು ನಿಶ್ಚಯಿಸಿ ಗಾಂಗೇಯನ್ ದಾಶರಾಜನಲ್ಲಿಗೆ ವಂದು…)

ಗಾಂಗೇಯ: ಈ ನಿಜ ತನೂಜೆಯನ್ ನೀಡಿರದೆ ಈವುದು . ಈ ವಧೂಗೆ ಆದ ಪುತ್ರರೊಳ್ ರಾಜ್ಯಲಕ್ಷ್ಮಿ ಕೂಡುಗೆ .

ಅಂತು ಅದು ಎನಗೆ ಮೊಱೆಯಲ್ತು. ನಿಕ್ಕುವಮ್ , ಇಂದು ಮೊದಲಾಗಿರೆ ಪೆಂಡಿರ್ ಎಂಬರೊಳ್ ಕೂಡುವನಲ್ಲೆನ್ .

( ಎಂದು ಆತನ ಮನದ ತೊಡರ್ಪನ್ ಪಿಂಗೆ ನುಡಿದು, ನದೀಸುತನ್ ಸತ್ಯವತಿಯನ್ ಉಯ್ದು ರಾಗದಿಮ್ ಪತಿಯೊಳ್ ಸತಿಯನ್ ಕೂಡಿದನ್.)

=====================================================================================

ಮತ್ಸ್ಯಗಂದಿ ಪ್ರಸಂಗದ ಪದಗಳ ವಿಂಗಡಣೆ ಮತ್ತು ತಿರುಳು:

ಒರ್ಮೆ=ಒಂದು ದಿನ; ಮೊಮ್ಮನ್+ಅಪ್ಪ; ಮೊಮ್ಮ=ಮೊಮ್ಮಗ; ಮೊಮ್ಮಗ= ಮಗಳ ಇಲ್ಲವೇ ಮಗನ ಮಗ; ಅಪ್ಪ=ಆಗಿದ್ದ; ವೃದ್ಧ=ಹಿರಿಯ; ಮುನಿ+ಇಂದ್ರನ್; ಮುನಿ=ರಿಸಿ; ಇಂದ್ರ=ಒಡೆಯ ; ಮುನೀಂದ್ರ=ದೊಡ್ಡ ಮುನಿ; ಉತ್ತರಾ+ಪಥಕ್ಕೆ; ಉತ್ತರ=ಒಂದು ದಿಕ್ಕಿನ ಹೆಸರು; ಪಥ=ದಾರಿ; ಉತ್ತರಾಪಥ=ವಿಂದ್ಯ ಪರ‍್ವತದಿಂದ ಉತ್ತರ ದಿಕ್ಕಿನ ಕಡೆ ಇರುವ ದೇಶ; ಪೋಗು=ಹೋಗು;

ಒರ್ಮೆ ಬ್ರಹ್ಮರ ಮೊಮ್ಮನಪ್ಪ ವೃದ್ಧ ಪರಾಶರ ಮುನೀಂದ್ರನ್ ಉತ್ತರಾಪಥಕ್ಕೆ ಪೋಗುತ್ತುಮ್ ಬಂದು=ಒಂದು ದಿನ ಬ್ರಹ್ಮನ ಹಿರಿಯ ಮೊಮ್ಮಗನಾದ ಪರಾಶರ ಮುನಿಯು ಉತ್ತರ ದಿಕ್ಕಿನತ್ತ ಇರುವ ದೇಶಕ್ಕೆ ಪಯಣಿಸುತ್ತ ಯಮುನಾ ನದಿಯ ತೀರಕ್ಕೆ ಬಂದು;

ತೊಱೆ=ನದಿ; ತಡಿ+ಒಳ್; ತಡಿ=ದಂಡೆ; ಒಳ್=ಅಲ್ಲಿ; ಓಡಮ್+ಅನ್; ಓಡ=ದೋಣಿ; ಅನ್=ಅನ್ನು; ನಡೆ=ಸಾಗು; ಮತ್ಸ್ಯ=ಮೀನು; ಗಂಧ=ವಾಸನೆ; ಮತ್ಸ್ಯಗಂಧ=ಮೀನಿನ ವಾಸನೆಯಿಂದ ಕೂಡಿರುವುದು; ಮತ್ಸ್ಯಗಂಧಿ=ದಾಶರಾಜನ ಮಗಳು. ಈಕೆಯು ಅಂಬಿಗಳಾಗಿ ದೋಣಿಯನ್ನು ನಡೆಸುವ ಕಸುಬನ್ನು ಮಾಡುತ್ತಿದ್ದಳು; ಕಂಡು=ನೋಡಿ;

ತೊಱೆಯ ತಡಿಯೊಳ್ ಓಡಮನ್ ನಡೆಯಿಸುವ ಮತ್ಸ್ಯಗಂಧಿಯನ್ ಕಂಡು=ನದಿಯ ದಂಡೆಯಲ್ಲಿ ದೋಣಿಯನ್ನು ನಡೆಯಿಸುವ ಮತ್ಸ್ಯಗಂದಿಯನ್ನು ನೋಡಿ;

ಎಮ್ಮನ್=ನಮ್ಮನ್ನು; ತೊರೆ+ಅಮ್; ಅಮ್=ಅನ್ನು; ಪಾಯಿಸು=ದಾಟಿಸು;

ಎಮ್ಮನ್ ಈ ತೊಱೆಯಮ್ ಪಾಯಿಸು=ನಮ್ಮನ್ನು ಈ ನದಿ ದಾಟಿಸು;

ಸಾಸಿರ+ಅರ್; ಸಾಸಿರ=ಒಂದು ಸಾವಿರ; ಸಾಸಿರ್ವರ್=ಒಂದು ಸಾವಿರ ಮಂದಿ; ಏಱಿದೊಡೆ+ಅಲ್ಲದೆ; ಏಱು=ಹತ್ತು; ಅಲ್ಲದೆ=ಹೊರತು; ಏಱಿದೊಡಲ್ಲದೆ=ಹತ್ತದಿದ್ದರೆ; ಈ ಓಡಮ್=ಈ ದೋಣಿಯು; ನಡೆಯದು=ಮುಂದೆ ಸಾಗದು;

ಸಾಸಿರ್ವರ್ ಏಱಿದೊಡಲ್ಲದೆ ಈ ಓಡಮ್ ನಡೆಯದು=ಒಂದು ಸಾವಿರ ಮಂದಿ ಈ ದೋಣಿಯನ್ನು ಹತ್ತದಿದ್ದರೆ, ಇದು ಮುಂದೆ ಸಾಗುವುದಿಲ್ಲ;

ಅನಿಬರ=ಅವರೆಲ್ಲರ ಅಂದರೆ ಸಾವಿರ ಮಂದಿಯ; ಬಿಣ್ಪು=ಹೊರೆ/ತೂಕ; ಆಮ್=ನಾವು; ಅಪ್ಪೆಮ್=ಆಗುತ್ತೇವೆ; ಏರಿಸು=ಹತ್ತಿಸಿಕೊಳ್ಳುವುದು;

ಅನಿಬರ ಬಿಣ್ಪುಮ್ ಆಮ್ ಅಪ್ಪೆಮ್ ಏಱಿಸು=ನಾವೊಬ್ಬರೇ ಅಶ್ಟು ಮಂದಿಯ ತೂಕವಾಗುತ್ತೇವೆ, ದೋಣಿಗೆ ನಮ್ಮನ್ನು ಹತ್ತಿಸಿಕೊ: ಅಂತೆ=ಆ ರೀತಿ; ಗೆಯ್ವೆನ್=ಮಾಡುತ್ತೇನೆ;

ಅಂತೆ ಗೆಯ್ವೆನ್ ಎಂದು ಓಡಮ್ ಏಱಿಸಿ ನಡೆಯಿಸುವಲ್ಲಿ=ನೀವು ಹೇಳಿದಂತೆಯೇ ಮಾಡುತ್ತೇನೆ ಎಂದು ಹೇಳಿ, ಪರಾಶರ ಮುನಿಯನ್ನು ದೋಣಿಗೆ ಹತ್ತಿಸಿಕೊಂಡು ಮತ್ಸ್ಯಗಂದಿಯು ದೋಣಿಯನ್ನು ನಡೆಸುತ್ತಿರುವಾಗ;

ದಿವ್ಯ=ಸುಂದರವಾದ; ಕನ್ಯೆ=ಕುಮಾರಿ; ನೋಡಿ=ಕಂಡು; ಮನ+ಒಳ್; ಮನ=ಮನಸ್ಸು; ಒಳ್=ಅಲ್ಲಿ; ಸೋಲ್=ಮೋಹಗೊಂಡು;

ಮುನೀಂದ್ರನ್ ದಿವ್ಯ ಕನ್ಯೆಯನ್ ನೋಡಿ ಮನದೊಳ್ ಸೋಲ್ತು=ಪರಾಶರ ಮುನಿಯು ಚೆಲುವೆ ಮತ್ಸ್ಯಗಂದಿಯನ್ನು ನೋಡಿ ಮೋಹಗೊಂಡು;

ಆಕೆಯ=ಮತ್ಸ್ಯಗಂದಿಯ; ಒಡಲು=ಮಯ್; ಈ=ಈಗ ಇರುವ; ದುರ್ಗಂಧ=ಗಬ್ಬು ವಾಸನೆ; ಪೋಪ+ಅಂತೆ; ಪೋ=ಹೋಗು; ಪೋಪಂತೆ>ವೋಪಂತೆ>ಓಪಂತೆ; ಓಪಂತೆ=ಹೋಗುವಂತೆ; ಯೋಜನ=ದಾರಿಯಲ್ಲಿ ಸಾಗುತ್ತಿರುವಾಗ ದೂರದ ಅಳತೆಯನ್ನು ಸೂಚಿಸುವ ಪದ/ನಾಲ್ಕು ಹರಿದಾರಿ/ಎರಡು ಗಾವುದ; ಗಂಧಿತ್ವ=ಕಂಪಿನಿಂದ ಕೂಡಿರುವುದು; ಯೋಜನಗಂಧಿತ್ವ=ಒಂದು ಯೋಜನದ ಸುತ್ತಳತೆಯಲ್ಲಿ ಕಂಪು ಹಬ್ಬಿರುವುದು; ಇತ್ತು=ನೀಡಿ;

ಆಕೆಯ ಒಡಲ ಈ ದುರ್ಗಂಧ ಓಪಂತೆ ಯೋಜನ ಗಂಧಿತ್ವಮನ್ ಇತ್ತು=ಆಕೆಯ ಮೈಯಿಂದ ಹರಡುತ್ತಿದ್ದ ಗಬ್ಬು ವಾಸನೆಯನ್ನು ಹೋಗಲಾಡಿಸಿ, ಸುವಾಸನೆಯು ಹೊರಹೊಮ್ಮುವಂತೆ ಮಾಡಿದನು. ಈಗ ಆಕೆಯ ಮೈಯ ಸುವಾಸನೆಯು ಒಂದು ಯೋಜನದ ಸುತ್ತಳತೆಯಲ್ಲಿ ಪಸರಿಸುತ್ತಿದ್ದುದರಿಂದ ಆಕೆಗೆ ಯೋಜನಗಂದಿ ಎಂಬ ಹೆಸರು ಬಂದಿತು; ಯೋಜನಗಂಧಿ=ಮತ್ಸ್ಯಗಂದಿಯ ಮತ್ತೊಂದು ಹೆಸರು;

ಮಂಜು=ಹಿಮ; ಕಾಂಡಪಟ+ಅಂತೆ; ಕಾಂಡಪಟ=ಪರದೆ; ಅಂತೆ=ಹಾಗೆ;ಇರ್ಪ+ಅನ್ನೆಗಮ್;ಇರ್ಪ=ಇರುವ; ಅನ್ನೆಗಮ್=ಆ ಸಮಯದಲ್ಲಿ; ಇರ್ಪನ್ನೆಗಮ್=ಆ ಸಮಯದಲ್ಲಿ ಇರುವಂತೆ; ಮಾಡಿ=ರಚಿಸಿ;

ಮಂಜನ್ ಕಾಂಡಪಟದಂತೆ ಇರ್ಪನ್ನೆಗಮ್ ಮಾಡಿ=ತಮ್ಮಿಬ್ಬರ ಸುತ್ತ ಮಂಜಿನ ಪರದೆಯನ್ನು ಕಟ್ಟಿ;

ಅಲಂಪು=ಚೆಲುವು; ಅಳ್ಕಱು=ಅಕ್ಕರೆ; ಈಯೆ=ನೀಡಲು; ಕೂಡು=ಕಾಮದ ನಂಟನ್ನು ಹೊಂದುವುದು; ಎಡೆ=ಜಾಗ; ಮಹಾ=ದೊಡ್ಡ; ಮುನಿಪನ್=ಮುನಿಯು; ಜ್ಞಾನ=ಅರಿವು; ಸ್ವರೂಪ=ಆಕಾರ; ಜ್ಞಾನಸ್ವರೂಪ=ಅರಿವಿನ ಮೂರ‍್ತಿ; ಪುಟ್ಟಿದನ್=ಹುಟ್ಟಿದನು;

ಅಲಂಪು ಅಳ್ಕಱನ್ ಈಯೆ ಕೂಡುವ ಎಡೆಯೊಳ್ ಮಹಾ ಮುನಿಪನ್ ಜ್ಞಾನಸ್ವರೂಪನ್ ಪುಟ್ಟಿದನ್= ಯೋಜನಗಂದಿಯ ಚೆಲುವು ಪರಾಶರಮುನಿಯಲ್ಲಿ ಅಕ್ಕರೆಯನ್ನು ಮೂಡಿಸಲು, ಇಬ್ಬರು ಕಾಮದ ನೆಂಟನ್ನು ಪಡೆದ ಎಡೆಯಲ್ಲಿ ಮಹಾಮುನಿಯೂ ಮತ್ತು ಅರಿವಿನ ಮೂರ‍್ತಿಯೂ ಆದ ಮಗನು ಹುಟ್ಟಿದನು;

ದಿವ್ಯ=ಉತ್ತಮವಾದುದು; ದಿವ್ಯಮುನಿಗಳ್ಗೆ=ಉತ್ತಮರೆಂದು ಹೆಸರು ಪಡೆದ ಮುನಿಗಳಿಗೆ; ಅಂತು=ಆ ರೀತಿ; ಏನ್+ಗೆಯ್ದೊಡಮ್; ಏನ್=ಯಾವುದನ್ನು; ಗೆಯ್=ಮಾಡು; ಗೆಯ್ದೊಡಮ್=ಮಾಡಿದರೂ; ತೀರ್=ಮುಗಿ;

ದಿವ್ಯಮುನಿಗಳ್ಗೆ ಅಂತು ಏಗೆಯ್ದೊಡಂ ತೀರದೇ=ದೊಡ್ಡ ಮುನಿಗಳೆಂದು ಹೆಸರಾಂತವರು ಏನು ಮಾಡಿದರೂ ನಡೆಯುತ್ತದೆಯಲ್ಲವೇ;

ನೀಲ+ಅಂಬುದ; ನೀಲ=ಒಂದು ಬಗೆಯ ಬಣ್ಣ; ಅಂಬುದ=ಮೋಡ; ನೀಲಾಂಬುದ=ನೀಲಿಯ ಮೋಡ; ಶ್ಯಾಮ=ಕಡು ನೀಲಿ ಬಣ್ಣ;

ನೀಲಾಂಬುದ ಶ್ಯಾಮನುಮ್=ಕಪ್ಪು ಮಿಶ್ರಿತ ನೀಲಿ ಬಣ್ಣದ ಮೋಡದಂತೆ ಮಯ್ ಬಣ್ಣವುಳ್ಳವನು;

ಕನಕ=ಹೊನ್ನು; ಪಿಂಗಳ=ಕಂದು ಬಣ್ಣ; ಜಟಾ=ಹೆಣೆದುಕೊಂಡು ಗಂಟುಗಂಟಾದ ತೆಕ್ಕೆಯ ತಲೆಕೂದಲು; ಬಂಧ=ಕಟ್ಟು; ಕಳಾಪ=ಗುಂಪು;

ಕನಕ ಪಿಂಗಳ ಜಟಾಬಂಧಕಳಾಪನುಮ್=ಹಳದಿ ಮಿಶ್ರಿತ ಕಂದು ಬಣ್ಣದ ತಲೆಕೂದಲಿನ ಹೆಣಿಗೆಯಿಂದಾದ ಮುಡಿಯುಳ್ಳವನು;

ದಂಡ=ಕೋಲು/ಯೋಗದಂಡ; ಕಪಾಲ=ಬಟ್ಟಲಿನ ಆಕಾರದಲ್ಲಿರುವ ತಲೆಚಿಪ್ಪು; ಹಸ್ತ=ಕಯ್; ದಂಡಕಪಾಲ ಹಸ್ತನುಮ್=ಒಂದು ಕೈಯಲ್ಲಿ ಯೋಗದಂಡವನ್ನು ಮತ್ತು ಮತ್ತೊಂದು ಕೈಯಲ್ಲಿ ಕಪಾಲವನ್ನು ಹಿಡಿದುಕೊಂಡಿರುವವನು;

ಕೃಷ್ಣ=ಕಪ್ಪು ಬಣ್ಣ; ಮೃಗ=ಜಿಂಕೆ; ಕೃಷ್ಣಮೃಗ=ಕಪ್ಪು ಬಣ್ಣದ ಜಿಂಕೆ; ತ್ವಕ್ಕ್=ತೊಗಲು; ಪರಿಧಾನ=ಉಡುಪು; ಆಗೆ=ಆಗಿ;

ಕೃಷ್ಣಮೃಗ ತ್ವಕ್ಪರಿಧಾನನುಮ್ ಆಗೆ=ಜಿಂಕೆಯ ತೊಗಲನ್ನು ಉಟ್ಟುಕೊಂಡಿರುವವನಾಗಿ;

ವ್ಯಾಸ=ಮತ್ಸ್ಯಗಂದಿ ಮತ್ತು ಪರಾಶರನಿಗೆ ಹುಟ್ಟಿದ ಮಗನ ಹೆಸರು; ಭಟ್ಟಾರಕ=ರಾಜ,ಗುರು,ಹಿರಿಯರ ಹೆಸರುಗಳ ಕೊನೆಯಲ್ಲಿ ಒಲವು ನಲಿವು ಆದರ ಸೂಚಕವಾಗಿ ಸೇರುವ ಪದ; ವ್ಯಾಸಭಟ್ಟಾರಕನ್=ಪೂಜ್ಯನಾದ ವ್ಯಾಸ ರಿಸಿಯು; ಪುಟ್ಟುವುದುಮ್=ಹುಟ್ಟಲು;

ವ್ಯಾಸಭಟ್ಟಾರಕನ್ ಪುಟ್ಟುವುದುಮ್=ಪೂಜ್ಯನಾದ ವ್ಯಾಸ ಮುನಿಯು ಹುಟ್ಟಲು;

ಪುನಃ=ಮತ್ತೆ; ಕನ್ಯಾಭಾವವನ್=ಕನ್ನೆತನವನ್ನು ಅಂದರೆ ಕಾಮದ ಕೂಡುವಿಕೆಗೆ ಮೊದಲು ಇದ್ದ ಸ್ಥಿತಿಯನ್ನು; ದಯೆಗೆಯ್ದು=ನೀಡಿ; ಆತನನ್=ವ್ಯಾಸನನ್ನು; ಒಡಗೊಂಡು=ಜತೆಗೂಡಿ; ಪೋದನ್=ಹೋದನು;

ಸತ್ಯವತಿಗೆ ಪರಾಶರನ್ ಪುನಃ ಕನ್ಯಾಭಾವಮನ್ ದಯೆಗೆಯ್ದು ಆತನನ್ ಒಡಗೊಂಡು ಪೋದನ್ =ಸತ್ಯವತಿಗೆ ಮೊದಲಿನ ರೀತಿಯಲ್ಲಿಯೇ ಕನ್ನೆತನ ಇರುವಂತೆ ವರವನ್ನು ನೀಡಿ, ಮಗನಾದ ವ್ಯಾಸನನ್ನು ತನ್ನೊಡನೆ ಕರೆದುಕೊಂಡು ಹೋದನು;

ಇತ್ತಲ್=ಈ ಕಡೆ/ಯಮುನಾ ನದಿಯ ತೀರದ ಕಾಡಿನಲ್ಲಿ; ಮೃಗಯಾ=ಪ್ರಾಣಿಗಳ ಬೇಟೆ; ವ್ಯಾಜ=ಕಾರಣ; ತೊಳಲ್+ತರ್ಪನ್; ತೊಳಲ್=ಅಡ್ಡಾಡುವಿಕೆ; ತರ್ಪನ್=ಬರುತ್ತಿರುವಾಗ;

ಇತ್ತಲ್ ಒರ್ಮೆ ಶಂತನು ಮೃಗಯಾವ್ಯಾಜದಿನ್ ತೊಳಲ್ತರ್ಪನ್=ಒಂದು ದಿನ ಶಂತನು ಮಹಾರಾಜನು ಯಮುನಾ ನದೀ ತೀರದ ಕಾಡಿನಲ್ಲಿ ಪ್ರಾಣಿಗಳ ಬೇಟೆಯಾಡಲೆಂದು ಅಡ್ಡಾಡುತ್ತಿರುವಾಗ;

ತತ್+ಮೃಗ+ಶಾಬ+ಅಕ್ಷಿಯ; ತತ್=ಆ/ಅದು; ಮೃಗ=ಜಿಂಕೆ; ಶಾಬ=ಮರಿ; ಅಕ್ಷಿ=ಕಣ್ಣು;

ತನ್ಮೃಗಶಾಬಾಕ್ಷಿಯ=ಜಿಂಕೆಯ ಮರಿಯ ಕಣ್ಣುಗಳಂತೆ ಕಣ್ಣುಳ್ಳ ಯೋಜನಗಂದಿಯ;

ಕಂಪು=ಪರಿಮಳ; ಪಳಂಚು=ತಾಗು/ಸೋಂಕು; ತಟ್ಟಿ=ಮೂಗಿಗೆ ಹೊಡೆದು; ಮಧುಪಮ್+ ಪೋಲ್; ಮಧುಪ=ತುಂಬಿ; ಪೋಲ್=ಅಂತೆ; ಸೋಲ್=ಮೋಹಗೊಳ್ಳು; ಪರವಶವಾಗು; ಮಧುಪಂಬೋಲ್ ಸೋಲ್ತು=ಹೂವಿನ ಮಕರಂದದ ಸುವಾಸನೆಗೆ ದುಂಬಿಯು ಮೋಹಗೊಳ್ಳುವಂತೆ ಒಲಿದು; ಕಂಡು=ನೋಡಿ;

ತನ್ಮೃಗಶಾಬಾಕ್ಷಿಯ ಕಂಪು ಪಳಂಚಲ್ಕೆ ತಟ್ಟಿ ಮಧುಪಂಬೋಲ್ ಸೋಲ್ತು ಕಂಡು=ಜಿಂಕೆಮರಿಯ ಕಣ್ಣುಗಳಂತೆ ಕಣ್ಣುಳ್ಳ ಯೋಜನಗಂದಿಯ ಮೈಯಿಂದ ಹೊರಹೊಮ್ಮುತ್ತಿರುವ ಪರಿಮಳವು ಮೂಗಿಗೆ ಹೊಡೆಯಲು, ಹೂವಿನ ಮಕರಂದಕ್ಕೆ ಮನಸೋಲುವ ದುಂಬಿಯಂತೆ ಆ ಸುವಾಸನೆಗೆ ಮನಸೋತು, ಸುವಾಸನೆಯು ಬಂದ ಎಡೆಯನ್ನು ಅರಸುತ್ತ ಬಂದು ಯೋಜನಗಂದಿಯನ್ನು ಕಂಡು;

ನಲ್ಮೆ=ಅನುರಾಗ; ಒಲಿ=ಮೆಚ್ಚು; ನಲ್ಮೆಗೆ ಒಲ್ದು=ಕಾಮದ ಸೆಳೆತಕ್ಕೆ ಒಳಗಾಗಿ;

ದಿಬ್ಯ=ಹತ್ತನೆಯ ಶತಮಾನದ ಕನ್ನಡ ಸಮುದಾಯದಲ್ಲಿ ಆರೋಪಕ್ಕೆ ಗುರಿಯಾದ ವ್ಯಕ್ತಿಯು ಮಾಡುತ್ತಿದ್ದ ಒಂದು ಬಗೆಯ ಆಚರಣೆ. ಆರೋಪಿಯು ತಾನು ತಪ್ಪನ್ನು ಮಾಡಿಲ್ಲವೆಂದು ಸಾಬೀತು ಪಡಿಸುವುದಕ್ಕಾಗಿ ಆಣೆಯನ್ನು ಇಕ್ಕುವಾಗ ಇಲ್ಲವೇ ಪ್ರಮಾಣವನ್ನು ಮಾಡುವಾಗ ಕಾದ ಕಬ್ಬಿಣದ ಸರಳನ್ನು ಕಯ್ಯಿಂದ ಹಿಡಿದುಕೊಳ್ಳಬೇಕು ಇಲ್ಲವೇ ನಾಗರ ಹಾವು ಇರುವ ಮಡಕೆಯೊಳಕ್ಕೆ ಕಯ್ಯನ್ನು ಹಾಕಬೇಕು ಇಲ್ಲವೇ ನಂಜನ್ನು ಕುಡಿಯಬೇಕು. ಆಗ ಕಯ್ ಸುಡದಿದ್ದರೆ, ಹಾವು ಕಚ್ಚಿ ಸಾಯದಿದ್ದರೆ, ನಂಜು ಏರಿ ಸಾವನ್ನಪ್ಪದಿದ್ದರೆ ಆತನು ತಪ್ಪನ್ನು ಮಾಡಿಲ್ಲವೆಂದು ಸಾಬೀತಾಗುತ್ತಿತ್ತು; ಪಿಡಿ+ಅಂತೆ+ವೋಲ್; ಪಿಡಿ=ಹಿಡಿ/ಕಯ್ಗೊಳ್ಳು; ವೋಲ್=ಆ ರೀತಿ;

ದಿಬ್ಯಮ್ ಪಿಡಿವಂತೆವೋಲ್ ಪಿಡಿದು=ದಿಬ್ಯವನ್ನು ಹಿಡಿಯುವವನಂತೆ ಆಕೆಯ ಕೈಗಳನ್ನು ಹಿಡಿದುಕೊಂಡು;

ಪೋಪಮ್=ಹೋಗೋಣ; ಎಂದಂಗೆ=ಎಂದು ಕರೆದವನಿಗೆ;

ನೀನ್ ಬಾ ಪೋಪಮ್ ಎಂದಂಗೆ=ನೀನು ನನ್ನೊಡನೆ ಬಾ. ಹೋಗೋಣವೆಂದು ಕರೆದವನಿಗೆ;

ತತ್+ಕನ್ಯಕೆ=ಆ ತರುಣಿಯು; ಕನ್ಯೆ=ತರುಣಿ; ನಾಣ್ಚಿ=ನಾಚಿಕೊಂಡು; ಮೆಲ್ಲಗೆ=ಮೆಲು ದನಿಯಲ್ಲಿ;

ಬೇಡುವೊಡೆ=ನನ್ನನ್ನು ಬಯಸುವುದಾದರೆ; ಎಮ್ಮ+ಅಯ್ಯನಮ್; ಎಮ್ಮ=ನಮ್ಮ; ಅಯ್ಯ=ಅಪ್ಪ; ಬೇಡು=ಕೇಳು/ಯಾಚಿಸು; ಎಂಬುದುಮ್=ಎಂದು ಹೇಳಲು;

ತತ್ಕನ್ಯಕೆ ನಾಣ್ಚಿ ಮೆಲ್ಲಗೆ ಬೇಡುವೊಡೆ ನೀವ್ ಎಮ್ಮಯ್ಯನಮ್ ಬೇಡಿರೇ ಎಂಬುದುಮ್=ಆ ತರುಣಿಯು ನಾಚಿಕೊಂಡು, ಮೆಲುದನಿಯಲ್ಲಿ ಶಂತನು ದೊರೆಗೆ “ ನೀವು ನನ್ನನ್ನು ಬಯಸುವುದಾದರೆ ನಮ್ಮ ಅಪ್ಪನನ್ನು ಕೇಳಿರಿ “ ಎಂದು ನುಡಿಯಲು; ಪೊಳಲ್=ಪಟ್ಟಣ; ಮಗುಳ್=ಹಿಂತಿರುಗು; ವಂದು=ಬಂದು;

ಶಂತನು ಪೊಳಲ್ಗೆ ಮಗುಳ್ದು ವಂದು=ಶಂತನು ಮಹಾರಾಜನು ತನ್ನ ಪಟ್ಟಣವಾದ ಹಸ್ತಿನಾವತಿಗೆ ಹಿಂತಿರುಗಿ ಬಂದು;

ಅವರ್+ಅಯ್ಯನ್+ಅಪ್ಪ; ಅಯ್ಯ=ತಂದೆ; ಅಪ್ಪ=ಆಗಿರುವ; ದಾಶರಾಜನ್+ಅಲ್ಲಿಗೆ; ಕೂಸು=ಕನ್ಯೆ; ಬೇಡು=ಕೇಳು; ಪೆರ್ಗಡೆ=ಹೆಗ್ಗಡೆ/ಮಂತ್ರಿ/ರಾಜನ ಆಡಳಿತದ ಕೆಲಸಗಳನ್ನು ನೋಡಿಕೊಳ್ಳುವ ವ್ಯಕ್ತಿ; ಅಟ್ಟು=ಕಳುಹಿಸು; ಅಟ್ಟಿದೊಡೆ=ಕಳುಹಿಸಿದರೆ;)

ಅವರಯ್ಯನಪ್ಪ ದಾಶರಾಜನಲ್ಲಿಗೆ ಕೂಸನ್ ಬೇಡೆ ಪೆರ್ಗಡೆಗಳನ್ ಅಟ್ಟಿದೊಡೆ=ಯೋಜನಗಂದಿಯ ತಂದೆ ದಾಶರಾಜನ ಬಳಿಗೆ “ ಹೆಣ್ಣನ್ನು ಕೇಳಲು “ ಶಂತನು ದೊರೆಯು ತನ್ನ ಹೆಗ್ಗಡೆಗಳನ್ನು ಕಳುಹಿಸಿದರೆ;

ದೊರೆ=ರಾಜ; ಪಿರಿಯ=ಹಿರಿಯ; ಗಾಂಗೇಯ=ಗಂಗೆಯ ಮಗ; ಕ್ರಮ+ಕ್ರಮ+ಅರ್ಹನುಮ್; ಕ್ರಮ=ವಂಶ

ಪರಂಪರೆಯಿಂದ ಬಂದ ರಾಜ್ಯಕ್ಕೆ; ಕ್ರಮ=ಯೋಗ್ಯವಾಗಿ/ನ್ಯಾಯವಾಗಿ; ಅರ್ಹನುಮ್=ಹಕ್ಕನ್ನು ಹೊಂದಿರುವವನು; ಇರ್ದಂತೆ=ಇರುವಾಗ; ಎನ್ನ=ನನ್ನ; ಮಗಳ್+ಅನ್; ಕುಡೆವು=ಕೊಡುವುದಿಲ್ಲ;

ದೊರೆಯ ಪಿರಿಯ ಮಗನುಮ್ ಗಾಂಗೇಯನ್ ಕ್ರಮ ಕ್ರಮಾರ್ಹನುಮ್ ಇರ್ದಂತೆ ಎನ್ನ ಮಗಳನ್ ಕುಡೆವು=ಶಂತನು ದೊರೆಯ ಹಿರಿಯ ಮಗನಾದ ಗಾಂಗೇಯನು ವಂಶಪರಂಪರೆಯಿಂದ ಬಂದಿರುವ ರಾಜ್ಯದ ಪಟ್ಟಕ್ಕೆ ಹಕ್ಕುಳ್ಳವನಾಗಿದ್ದಾನೆ. ಆದ್ದರಿಂದ ನಮ್ಮ ಮಗಳನ್ನು ಶಂತನು ದೊರೆಗೆ ಕೊಡುವುದಕ್ಕೆ ಆಗುವುದಿಲ್ಲ;

ಎಮ್ಮ=ನಮ್ಮ ; ಮಗಳ್ಗೆ=ಮಗಳಿಗೆ; ಪುಟ್ಟಿದ+ಆತನ್; ಪುಟ್ಟಿದಾತನ್=ಹುಟ್ಟಿದವನು; ಒಡೆಯ=ರಾಜ; ಅಪ್ಪೊಡೆ=ಆಗುವುದಾದರೆ; ಕ್ರಮಕ್ಕೆ ಅರ್ಹನುಮ್ ಅಪ್ಪೊಡೆ=ರಾಜ್ಯದ ಪಟ್ಟಕ್ಕೆ ಹಕ್ಕುಳ್ಳವನಾದರೆ; ಕುಡುವೆಮ್=ಕೊಡುತ್ತೇವೆ; ಎನೆ=ಎಂದು ಹೇಳಲು;

ಎಮ್ಮ ಮಗಳ್ಗೆ ಪುಟ್ಟಿದಾತನ್ ಪಿರಿಯ ಮಗನುಮ್ ಕ್ರಮಕ್ಕೆ ಅರ್ಹನುಮ್ ರಾಜ್ಯಕ್ಕೆ ಒಡೆಯನುಮ್ ಅಪ್ಪೊಡೆ ಕುಡುವೆಮ್ ಎನೆ=ನಮ್ಮ ಮಗಳ ಹೊಟ್ಟೆಯಲ್ಲಿ ಹುಟ್ಟುವ ಮಗನನ್ನು ರಾಜವಂಶದ ಪರಂಪರೆಯಂತೆ ಹಿರಿಯ ಮಗನೆಂದು ಪರಿಗಣಿಸಿ, ಪಟ್ಟದ ಹಕ್ಕುದಾರಿಕೆಯನ್ನು ನೀಡಿ, ರಾಜನನ್ನಾಗಿ ಮಾಡುವುದಾದರೆ ಯೋಜನಗಂದಿಯನ್ನು ಶಂತನು ದೊರೆಗೆ ಮದುವೆ ಮಾಡಿಕೊಡುತ್ತೇವೆ ಎಂದು ಹೇಳಲು;

ತತ್=ಆ; ಅದು; ವೃತ್ತಾಂತ=ಸುದ್ದಿ; ಮಂತ್ರಿಗಳಿನ್=ಮಂತ್ರಿಗಳಿಂದ;

ತತ್ ವೃತ್ತಾಂತಮಮ್ ಮಂತ್ರಿಗಳಿನ್ ಶಂತನು ಕೇಳ್ದು=ಆ ಸುದ್ದಿಯನ್ನು ಮಂತ್ರಿಗಳಿಂದ ಕೇಳಿದ ಶಂತನು ತನ್ನಲ್ಲಿಯೇ;

ಕ್ರಮಮಮ್=ವಂಶಪರಂಪರೆಯಿಂದ ಬಂದಿರುವ ಹಕ್ಕುದಾರಿಕೆಯನ್ನು; ವಿಕ್ರಮ+ಇಂದೆ; ವಿಕ್ರಮ=ಶೂರತನ; ತಾಳ್=ಹೊಂದು; ಇರ್ದಂತೆ=ಇರುವಾಗ;

ಕ್ರಮಮಮ್ ವಿಕ್ರಮದಿಂದೆ ತಾಳ್ದುವ ಮಗನ್ ಗಾಂಗೇಯನ್ ಇರ್ದಂತೆ=ವಂಶಪರಂಪರೆಯಿಂದ ಬರುವ ರಾಜಪದವಿಯನ್ನು ಶೂರತನದಿಂದ ಉಳಿಸಿ ಬೆಳೆಸಿ ಕಾಪಾಡಬಲ್ಲ ಮಗನಾದ ಗಾಂಗೇಯನು ಇರುವಾಗ;

ನೋಡ=ಅಚ್ಚರಿ, ಆತಂಕ ಇಲ್ಲವೇ ಸಂಕಟದ ಸಂಗತಿಗಳನ್ನು ಸೂಚಿಸುವಾಗ ಈ ರೀತಿಯ ಪದವನ್ನು ಬಳಸಲಾಗುತ್ತೆ;

ಮರುಳ್=ತಿಳಿಗೇಡಿ; ತನ್ನದು+ಒಂದು; ಸವಿ=ರುಚಿ/ಕಾಮ; ಸೋಲ=ಮೋಹ;

ತನ್ನದೊಂದು ಸವಿಗಮ್ ಸೋಲಕ್ಕಮ್=ತನ್ನ ಮಯ್ ಮನದಲ್ಲಿ ಮಿಡಿದ ಕಾಮದ ತೀಟೆಗಾಗಿ; ಬೇಟದ+ಆಕೆ; ಬೇಟ=ಮೋಹ /ಪ್ರಣಯ;

ಬೇಟದಾಕೆ=ತಾನು ಮೋಹಿಸಿದವಳು/ತನ್ನನ್ನು ಮರುಳುಮಾಡಿದವಳು; ನಿಜ=ಸರಿಯಾದ; ನಿಜ ಕ್ರಮಮಮ್ ಇತ್ತನ್=ಪರಂಪರಾಗತವಾಗಿ ಬಂದ ರಾಜ್ಯದ ಪಟ್ಟವನ್ನು ಕೊಟ್ಟನು;

ನೋಡ…ಮರುಳ್ ಶಂತನು ತನ್ನದೊಂದು ಸವಿಗಮ್ ಸೋಲಕ್ಕಮ್ ತನ್ನಯ ಬೇಟದಾಕೆಯ ಮಗಂಗೆ ನಿಜಕ್ರಮಮನ್ ಇತ್ತನ್=ತಿಳಿಗೇಡಿಯಾದ ಶಂತನು ದೊರೆಯು ತನ್ನ ಮಯ್ ಮನದ ಕಾಮದ ತೀಟೆಯನ್ನು ತೀರಿಸಿಕೊಳ್ಳುವುದಕ್ಕಾಗಿ ತಾನು ಮೋಹಿಸಿದವಳ ಮಗನಿಗೆ ರಾಜ್ಯದ ಪಟ್ಟವನ್ನು ಕಟ್ಟಿದನು;

ಎಂಬ=ಎನ್ನುವ; ಅಪಖ್ಯಾತಿ=ಕೆಟ್ಟ ಹೆಸರು; ಆವರ್ತಿಸು=ಎಲ್ಲೆಡೆ ಹರಡುವುದು; ಬಳ್ದೊಡೆ=ನೆಲೆಯಾಗಿ ನಿಂತರೆ;

ಎಂಬ ಒಂದು ಅಪಖ್ಯಾತಿ ಲೋಕಮನ್ ಆವರ್ತಿಸೆ ಬಳ್ದೊಡೆ=ಎನ್ನುವ ಕೆಟ್ಟಹೆಸರು ಲೋಕದಲ್ಲಿ ಹರಡಿ ನೆಲೆಯಾಗಿ ನಿಂತರೆ;

ತಕ್ಕೂರ್ಮೆ=ಹಿರಿತನ/ದೊಡ್ಡಸ್ತಿಕೆ; ಮಾಸು=ಕಳೆಗುಂದು;

ಎನ್ನ ಕುಲಮುಮ್ ತಕ್ಕೂರ್ಮೆಯುಮ್ ಮಾಸದೇ=ನನ್ನ ವಂಶದ ದೊಡ್ಡಸ್ತಿಕೆಯು ಕುಗ್ಗುತ್ತದೆಯಲ್ಲವೇ.

ನಾಣ್+ಕಾಪು; ನಾಣ್=ನಾಚಿಕೆ-ಲಜ್ಜೆ; ಕಾಪು=ಕಾಪಾಡಿಕೊಳ್ಳುವಿಕೆ; ನಾಣ್ಗಾಪು=ಮರ‍್ಯಾದೆಯನ್ನು ಕಾಪಾಡಿಕೊಳ್ಳುವುದು; ಬಗೆದು=ಚಿಂತಿಸಿ;

ತನ್ನ ನಾಣ್ಗಾಪನೆ ಬಗೆದು=ತನ್ನ ಮತ್ತು ತನ್ನ ರಾಜವಂಶದ ಕೀರ‍್ತಿಯನ್ನು ಕಾಪಾಡಿಕೊಳ್ಳುವುದೇ ದೊಡ್ಡದೆಂದು ತಿಳಿದು;

ಅತನು=ಕಾಮದೇವ/ಅನಂಗ/ಮನ್ಮತ. ಸಂಪತ್ತಿಗೆ ಲಕ್ಶ್ಮಿ ಮತ್ತು ವಿದ್ಯೆಗೆ ಸರಸ್ವತಿ ಎಂಬ ದೇವತೆಗಳನ್ನು ಜನಮನದಲ್ಲಿ ಕಲ್ಪಿಸಿಕೊಂಡಿರುವಂತೆಯೇ ವ್ಯಕ್ತಿಯ ಮಯ್ ಮನದಲ್ಲಿ ತುಡಿಯುವ ಕಾಮ, ಪ್ರಣಯ ಮತ್ತು ಮೋಹಕ್ಕೆ ಮನ್ಮತನನ್ನು ಒಬ್ಬ ದೇವತೆಯನ್ನಾಗಿ ಕಲ್ಪಿಸಿಕೊಳ್ಳಲಾಗಿದೆ; ಪರಿತಾಪ=ಹೆಚ್ಚಾದ ಬೇಗೆ; ಶರೀರನುಮ್+ಆಗಿ;

ಅತನು ಪರಿತಾಪಿತ ಶರೀರನುಮಾಗಿ=ಕಾಮದ ಬೇಗೆಯಿಂದ ಮಯ್ ಮನವು ಬೇಯುತ್ತಿರಲು;

ಕರಂಗಿ=ಸೊರಗಿ; ಎರ್ದೆ+ಕಿಡೆ; ಎರ್ದೆ=ಎದೆ/ಮನಸ್ಸು; ಕಿಡು=ನಾಶವಾಗು; ಇಲ್ಲವಾಗು; ಎರ್ದೆಗಿಡೆ=ಮನಸ್ಸು ಸಂಕಟದಿಂದ ಕುಸಿದುಹೋಗುತ್ತಿರಲು;

ಅತನು ಪರಿತಾಪಿತ ಶರೀರನುಮಾಗಿ ಶಂತನು ಕರಂಗಿ ಎರ್ದೆಗಿಡೆ=ಕಾಮದ ಬೇಗೆಯಿಂದ ಶಂತನು ಕೊರಗಿ ಮಾನಸಿಕವಾಗಿ ಕುಗ್ಗಿಹೋಗಿರಲು;

ತತ್+ವೃತ್ತಾಂತಮ್+ಎಲ್ಲಮಮ್; ಅರಿದು=ತಿಳಿದುಕೊಂಡು;

ತತ್ ವೃತ್ತಾಂತಮೆಲ್ಲಮಮ್ ಗಾಂಗೇಯನ್ ಅರಿದು=ಈ ವೃತ್ತಾಂತವೆಲ್ಲವನ್ನೂ ಗಾಂಗೇಯನು ತಿಳಿದವನಾಗಿ;

ನೃಪತಿ=ರಾಜ; ಬೇಡಿದುದನ್=ಬಯಸಿರುವುದನ್ನು; ಕುಡಲ್+ಒಲ್ಲಂದು; ಕುಡಲ್=ಕೊಡಲು; ಒಲ್ಲಂದು=ಒಪ್ಪದಿದ್ದರೆ;

ನೃಪತಿ ಬೇಡಿದುದನ್ ಕುಡಲೊಲ್ಲಂದು=ರಾಜನು ಆಸೆಪಟ್ಟಿರುವುದನ್ನು ಕೊಡದೇ ಹೋದರೆ;

ಅಂಗಜ+ಉತ್ಪನ್ನ; ಅಂಗಜ=ಕಾಮದೇವ; ಉತ್ಪನ್ನ=ಹುಟ್ಟಿದ; ವಿಮೋಹ=ಮೋಹಪರವಶತೆ; ಅಳಿ=ಸಾಯು; ಅಳಿದಪನ್=ಸಾಯುತ್ತಾನೆ;

ಅಂಗಜೋತ್ಪನ್ನ ವಿಮೋಹದಿಂದ ಅಳಿದಪನ್=ಕಾಮದ ಬೇಗೆಯಿಂದ ಸಾಯುತ್ತಾನೆ;

ಎನ್ನಯ=ನನ್ನ; ದೂಸರು=ನಿಮಿತ್ತ/ಕಾರಣ; ಎನ್ನಯ ದೂಸರಿಮ್=ನನ್ನಿಂದಾಗಿ; ಪತಿ=ರಾಜ; ಸತ್ತೊಡೆ=ಸಾವನ್ನಪ್ಪಿದರೆ; ಸತ್ತ ಪಾಪಮ್=ಸಾವಿನ ಪಾಪದ ಹೊರೆಯು; ಎನ್ನನ್=ನನ್ನನ್ನು; ನರಕಮ್+ಗಳ್+ಒಳ್; ನರಕ=ಸಂಕಟದ ನೆಲೆ; ತಡೆಯದೆ=ಬಿಡದೆ; ಅಳ್ದು=ಮುಳುಗಿಸು; ಅಳ್ದುಗುಮ್=ಮುಳುಗಿಸುತ್ತದೆ;

ಎನ್ನಯ ದೂಸರಿಮ್ ಪತಿ ಸತ್ತೊಡೆ ಸತ್ತ ಪಾಪಮ್ ಎನ್ನನ್ ನರಕಂಗಳೊಳ್ ತಡೆಯದೆ ಅಳ್ದುಗುಮ್=ನನ್ನ ಕಾರಣದಿಂದಾಗಿ ದೊರೆಯು ಸಾವನ್ನಪ್ಪಿದರೆ, ಅದರ ಪಾಪ ನನಗೆ ಸುತ್ತಿಕೊಂಡು ನನ್ನನ್ನು ನರಕದಲ್ಲಿ ಮುಳುಗಿಸುತ್ತದೆ;

ಪೋ=ಹೋಗು; ಏವುದು=ಯಾವುದು; ರಾಜ್ಯಲಕ್ಷ್ಮಿ=ರಾಜ್ಯದ ಸಂಪತ್ತು/ಒಡೆತನ/ಪಟ್ಟ;

ಪೋ ಏವುದು ರಾಜ್ಯಲಕ್ಷ್ಮಿ=ನನ್ನ ತಂದೆಯ ಒಲವು ನಲಿವಿನ ಮುಂದೆ ಈ ರಾಜ್ಯದ ಸಂಪತ್ತು ದೊಡ್ಡದಲ್ಲ. ಈ ರಾಜ್ಯ ಒಡೆತನದಿಂದ ನನಗೆ ಏನು ತಾನೆ ಆಗಬೇಕು;

ತಂದೆ+ಎಂದುದನೆ; ಎಂದುದನೆ=ಬಯಸಿರುವುದನ್ನೆ; ವಿವಾಹ+ಅನ್+ಇಂದೆ; ವಿವಾಹ=ಮದುವೆ; ಅನ್=ಅನ್ನು; ಇಂದೆ=ಈಗಲೇ;

ತನ್ನಯ ತಂದೆ ಎಂದುದನೆ ಕೊಟ್ಟು ವಿವಾಹಮನ್ ಇಂದೆ ಮಾಡುವೆನ್=ನನ್ನ ತಂದೆ ಆಸೆಪಟ್ಟಿರುವ ಹೆಣ್ಣನ್ನೇ ತಂದು ಮದುವೆಯನ್ನು ಈ ದಿನವೇ ಮಾಡುತ್ತೇನೆ; ನಿಶ್ಚಯಿಸಿ=ನಿರ‍್ಣಯಿಸಿಕೊಂಡು; ಗಾಂಗೇಯನ್ ದಾಶರಾಜನಲ್ಲಿಗೆ ಬಂದು=ಗಾಂಗೇಯನು ದಾಶರಾಜನ ಬಳಿಗೆ ಬಂದು;

ನಿಜ=ನಿಮ್ಮ; ತನೂಜೆ=ಮಗಳು; ನೀಡು=ತಡ/ಸಾವಕಾಶ; ನೀಡಿರದೆ=ತಡಮಾಡದೆ; ವಿಳಂಬ ಮಾಡದೆ; ಈವುದು=ಕೊಡುವುದು;

ಈ ನಿಜ ತನೂಜೆಯನ್ ನೀಡಿರದೆ ಈವುದು=ತಡಮಾಡದೆ ಈ ನಿಮ್ಮ ಮಗಳನ್ನು ನನ್ನ ತಂದೆಯೊಡನೆ ಮದುವೆ ಮಾಡುವುದು;

ವಧೂ=ಮದುವಣಗಿತ್ತಿ; ಮದುಮಗಳು; ಆದ=ಹುಟ್ಟುವ; ಪುತ್ರರೊಳ್=ಗಂಡು ಮಕ್ಕಳೊಡನೆ; ರಾಜ್ಯಲಕ್ಷ್ಮಿ=ರಾಜ್ಯ ಪಟ್ಟ/ಸಂಪತ್ತು/ಒಡೆತನ; ಕೂಡುಗೆ=ಸೇರಲಿ;

ಈ ವಧೂಗೆ ಆದ ಪುತ್ರರೊಳ್ ರಾಜ್ಯಲಕ್ಷ್ಮಿ ಕೂಡುಗೆ=ಇವಳ ಹೊಟ್ಟೆಯಲ್ಲಿ ಹುಟ್ಟುವ ಗಂಡು ಮಕ್ಕಳಿಗೆ ರಾಜ್ಯದ ಪಟ್ಟ ದೊರೆಯಲಿ;

ಅಂತು=ಹಾಗೆ; ಅದು=ರಾಜ್ಯದ ಪಟ್ಟ; ಎನಗೆ=ನನಗೆ; ಮೊರೆ+ಅಲ್ತು; ಮೊರೆ=ನಂಟು; ಅಲ್ತು=ಅಲ್ಲ;

ಅಂತು ಅದು ಎನಗೆ ಮೊರೆಯಲ್ತು=ಇಂದಿನಿಂದ ನನಗೂ ರಾಜ್ಯದ ಪಟ್ಟಕ್ಕೂ ಯಾವ ನಂಟು ಇಲ್ಲ;

ನಿಕ್ಕುವಮ್=ನಿಶ್ಚಯವಾಗಿಯೂ; ಇಂದು ಮೊದಲಾಗಿರೆ=ಇಂದಿನ ಈ ಗಳಿಗೆಯಿಂದ;

ಪೆಂಡಿರ್+ಎಂಬರ್+ಒಳ್; ಪೆಂಡಿರ್ ಎಂಬರೊಳ್=ಹೆಣ್ಣುಗಳು ಎಂದು ಎನಿಸಿಕೊಂಡವರೊಡನೆ; ಕೂಡುವನ್+ಅಲ್ಲೆನ್; ಕೂಡು=ಸೇರು;

ಇಂದು ಮೊದಲಾಗಿರೆ ಪೆಂಡಿರ್ ಎಂಬರೊಳ್ ಕೂಡುವನಲ್ಲೆನ್=ಇಂದಿನಿಂದ ನನ್ನ ಸಾವಿನ ತನಕ ನನ್ನ ಜೀವನದಲ್ಲಿ ಯಾವೊಂದು ಹೆಣ್ಣನ್ನು ಮದುವೆಯಾಗುವುದಿಲ್ಲ ಮತ್ತು ಯಾವುದೇ ಹೆಣ್ಣಿನೊಡನೆ ಕಾಮದ ನಂಟನ್ನು ಹೊಂದುವುದಿಲ್ಲ;

ನದೀಸುತ=ಗಂಗಾದೇವಿಯ ಮಗನಾದ ಗಾಂಗೇಯ; ಆತನ=ಯೋಜನಗಂದಿಯ ಅಪ್ಪನಾದ ದಾಶರಾಜನ; ಮನದ=ಮನಸ್ಸಿನಲ್ಲಿದ್ದ; ತೊಡರ್ಪು=ಆತಂಕ; ಪಿಂಗು=ತಗ್ಗು/ಕಡಿಮೆಯಾಗು/ಇಲ್ಲವಾಗು;

ಎಂದು ನದೀಸುತನ್ ಆತನ ಮನದ ತೊಡರ್ಪನ್ ಪಿಂಗೆ ನುಡಿದು=ದಾಶರಾಜನ ಮನದ ಆತಂಕವನ್ನು ಹೋಗಲಾಡಿಸುವಂತೆ ನುಡಿದು; ಸತ್ಯವತಿ=ಯೋಜನಗಂದಿಯನ್ನು ಈ ಹೆಸರಿನಿಂದಲೂ ಕರೆಯುತ್ತಿದ್ದರು;

ಉಯ್ದು=ಕರೆದುಕೊಂಡು ಹೋಗಿ; ರಾಗ=ಒಲುಮೆ; ಕೂಡಿದನ್=ಸೇರಿಸಿದನು;ಒಂದು ಮಾಡಿದನು;

ಸತ್ಯವತಿಯನ್ ಉಯ್ದು ರಾಗದಿನ್ ಪತಿಯೊಳ್ ಸತಿಯನ್ ಕೂಡಿದನ್=ಒಲವಿನಿಂದ ಸತ್ಯವತಿಯನ್ನು ಕರೆದುಕೊಂಡು ಹೋಗಿ ಶಂತನುವಿನೊಡನೆ ಸತ್ಯವತಿಯನ್ನು ಜತೆಗೂಡಿಸಿದನು;

(ಚಿತ್ರ ಸೆಲೆ: kannadadeevige.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: