ದೇಹದ ಆರೋಗ್ಯಕ್ಕೆ ನುಗ್ಗೆ

– ಶ್ಯಾಮಲಶ್ರೀ.ಕೆ.ಎಸ್.

drumstick, ನುಗ್ಗೆ

ಉತ್ತಮವಾದ ಜೀವನ ನಡೆಸಬೇಕೆಂದರೆ ಮಾನವನಿಗೆ ಆರೋಗ್ಯ ಬಹು ಮುಕ್ಯ . ಆರೋಗ್ಯಕರವಾಗಿರಲು ಶಕ್ತಿಯುತವಾದ ಆಹಾರ ಸೇವನೆ ಅಶ್ಟೇ ಮುಕ್ಯ. ನಮ್ಮ ದಿನನಿತ್ಯದ ಆಹಾರದಲ್ಲಿ ಹೇರಳವಾದ ಪೋಶಕಾಂಶ, ಜೀವಸತ್ವಗಳು ಇರುವಂತಹ ಸೊಪ್ಪು ಹಾಗೂ ತರಕಾರಿಗಳನ್ನು ಬಳಸಬೇಕಾಗುತ್ತದೆ. ದೇಹದ ಆರೋಗ್ಯಕ್ಕೆ ಪುಶ್ಟಿ ನೀಡುವಂತಹ ತರಕಾರಿ ಮತ್ತು ಸೊಪ್ಪು ಒಂದೇ ಗಿಡದಲ್ಲಿ ಸಿಗುತ್ತದೆ ಎಂದರೆ ಆಚ್ಚರಿಯಲ್ಲವೇ.. ಆ ಗಿಡವೇ ನುಗ್ಗೆ ಗಿಡ. ನುಗ್ಗೆ ಕಾಯಿಯು ನೋಡಲು ಹಸಿರಾಗಿದ್ದು ಉದ್ದಗೆ ಕೋಲಿನ ರೂಪ ಹೋಲುತ್ತದೆ. ವೈಜ್ನಾನಿಕವಾಗಿ ಮೊರಿಂಗ ಒಲಿಪೆರಾ (Moringa Oliefera) ಎಂದು ಕರೆಸಿಕೊಳ್ಳುವ ನುಗ್ಗೆಯ ಮೂಲ ಏಶ್ಯಾ. ಬಾರತದ ಆಗ್ರ ಮತ್ತು ತಮಿಳುನಾಡು ನುಗ್ಗೆ ಗಿಡದ ತವರೂರು ಎಂಬುದು ತಜ್ನರ ಅಬಿಪ್ರಾಯ.

ನುಗ್ಗೆಯು ಒಂದು ಪ್ರಮುಕವಾದ ವಾಣಿಜ್ಯ ಬೆಳೆ. ರೈತನು ಒಮ್ಮೆ ಇದರ ಸಸಿಗಳನ್ನು ನೆಟ್ಟು ನೀರು ,ಗೊಬ್ಬರಗಳನ್ನು ನೀಡಿದರೆ ಸುಮಾರು 6 ತಿಂಗಳಿಂದ ರಿಂದ 1 ವರ‍್ಶದೊಳಗಾಗಿ ಇದರ ಪಸಲನ್ನು ಕಾಣಬಹುದು. ನುಗ್ಗೆಯನ್ನು ಸಾಮಾನ್ಯವಾಗಿ ಎಲ್ಲಾ ಮಣ್ಣಿನಲ್ಲೂ, ಎಲ್ಲಾ ಕಾಲದಲ್ಲೂ ಬೆಳೆಯಬಹುದು. ಕಡಿಮೆ ನೀರಿರುವ ಪ್ರದೇಶಗಳಲ್ಲೂ ಇದನ್ನು ಬೆಳೆಸಬಹುದು. ನುಗ್ಗೆಕಾಯಿಯನ್ನು ಬಳಸಿ ರುಚಿಕರವಾದ ಸಾಂಬಾರ್, ಪಲ್ಯಗಳನ್ನುತಯಾರಿಸಬಹುದು. ನುಗ್ಗೆಕಾಯಿ ಹುಳಿಗೆ ಒಂದೆರಡು ಆಲೂಗೆಡ್ಡೆಯನ್ನು ಸೇರಿಸಿದರೆ ರುಚಿ ಅದ್ಬುತ. ಮಕ್ಕಳಿಗೆ ಊಟದಲ್ಲಿ ನುಗ್ಗೆಕಾಯಿಯನ್ನು ಚಪ್ಪರಿಸುವುದೆಂದರೆ ಬಹಳ ಕುಶಿ. ನುಗ್ಗೆಕಾಯಿಯು ಹೊಟ್ಟೆಯಲ್ಲಿರುವ ಜಂತುಹುಳ ನಾಶಕ್ಕೆ ಮತ್ತು ನಾರಿನಂಶ ಇರುವುದರಿಂದ ಅಜೀರ‍್ಣಕ್ಕೆ ಬಲು ಪರಿಣಾಮಕಾರಿ. ನುಗ್ಗೆ ಮರದ ತೊಗಟೆ, ಬೇರು, ಬೀಜಗಳನ್ನು ನಾನಾಬಗೆಯ ಆಯುರ‍್ವೇದಿಕ್ ಔಶದಿಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ನುಗ್ಗೆಯು ಮುಕ್ಯವಾಗಿ ಔಶದೀ ಸಸ್ಯವೂ ಹೌದು. ಇದರ ಎಲೆ ಅತವಾ ನುಗ್ಗೆ ಸೊಪ್ಪು ಅನಾದಿ ಕಾಲದಿಂದಲೂ ಆಯುರ‍್ವೇದ ಔಶದಿ ತಯಾರಿಕೆಯಲ್ಲಿ ಬಳಕೆಯಾಗಿದೆ. ನುಗ್ಗೆ ಸೊಪ್ಪಿನಿಂದ ರುಚಿಕಟ್ಟಾದ ಸಾಂಬಾರನ್ನು ಮಾಡಬಹುದು. ನುಗ್ಗೆ ಸೊಪ್ಪಿನ ಸಾರು, ನುಗ್ಗೆ ಸೊಪ್ಪಿನ ಪಲ್ಯ ಕರ‍್ನಾಟಕದ ಅಡುಗೆಗಳಲ್ಲಿ ವಿಶೇಶವಾದದ್ದು. ರಾಗಿ ಮುದ್ದೆಯೊಂದಿಗೆ ಸೇವಿಸಲು ಬಹಳ ರುಚಿಯಾಗಿರುತ್ತದೆ. ನುಗ್ಗೆ ಸೊಪ್ಪು ಸ್ವಲ್ಪ ಕಹಿಯಾದರೂ ಬೇಯಿಸಿ ಒಗ್ಗರಣೆ ನೀಡಿದರೆ ಸವಿಯಾಗಿರುತ್ತದೆ. ಮೊಟ್ಟೆ ಪಲ್ಯಕ್ಕೆ ಬೇಯಿಸಿದ ನುಗ್ಗೆ ಸೊಪ್ಪನ್ನು ಹಾಕಬಹುದು. ಈರುಳ್ಳಿ ಬೋಂಡಕ್ಕೆ ಸ್ವಲ್ಪ ನುಗ್ಗೆ ಸೊಪ್ಪನ್ನು ಸೇರಿಸಿದರೆ ಗರಿಗರಿಯಾಗಿಯೂ, ರುಚಿಯಾಗಿಯೂ ಇರುತ್ತದೆ.

ನುಗ್ಗೆ ಎಲೆ ಅತವಾ ನುಗ್ಗೆ ಸೊಪ್ಪು ಪೋಶಕಾಂಶಗಳ ಆಗರ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಮೆಗ್ನೀಶಿಯಂ, ಪ್ರೋಟೀನುಗಳ ಮಹಾಪೂರವೇ ಅಡಗಿದೆ. ಅದ್ಯಯನಗಳ ಪ್ರಕಾರ ಮದುಮೇಹಿಗಳಿಗೆ ಬೇಕಾದ ರೋಗನಿರೋದಕ ಶಕ್ತಿ ನುಗ್ಗೆ ಸೊಪ್ಪಿನಲ್ಲಿ ಇದೆ. ಹಾಗಾಗಿ ವಾರಕ್ಕೆ ಎರಡು ಬಾರಿಯಾದರೂ ಇದರ ಬಳಕೆ ಅವಶ್ಯಕ. ಅಶ್ಟೇ ಅಲ್ಲದೆ ಹ್ರುದಯ, ಲಿವರ್, ಶ್ವಾಸ ಕೋಶಗಳನ್ನು ಕಾಡುವ ಬ್ಯಾಕ್ಟೀರಿಯಾ, ವೈರಸ್ ಗಳ ವಿರುದ್ದ ಹೋರಾಡುವ ಶಕ್ತಿ ನುಗ್ಗೆಸೊಪ್ಪಿನಲ್ಲಿ ಅತ್ಯದಿಕವಾಗಿವೆ. ಹಾಲು, ಮೊಟ್ಟೆ, ಕ್ಯಾರೆಟ್ ಮತ್ತಿತರ ಸೊಪ್ಪುಗಳು, ನಿಂಬೆ, ಕಿತ್ತಳೆ, ಮೂಸಂಬಿ ಇವುಗಳಲ್ಲಿರುವ ಕ್ಯಾಲ್ಸಿಯಂ, ವಿಟಮಿನ್ ಎ, ಕಬ್ಬಿಣಾಂಶ, ವಿಟಮಿನ್ ಸಿ ಗಳು ನುಗ್ಗೆ ಸೊಪ್ಪಿನಲ್ಲಿ ಎರಡುಪಟ್ಟು ಇವೆ ಎಂಬುದಾಗಿ ಸಂಶೋದನೆಗಳು ತಿಳಿಸಿವೆ. ದೇಹದಲ್ಲಿ ಕೊಬ್ಬಿನಂಶ ತಡೆಯಲು ನುಗ್ಗೆ ತುಂಬಾ ಉಪಯೋಗಕಾರಿಯಾಗಿದೆ.

ನುಗ್ಗೆಯಲ್ಲಿ ಎರಡು ಬಗೆಗಳಿವೆ. ಒಂದು ಕರೀ ನುಗ್ಗೆ ಮತ್ತೊಂದು ಬಿಳೀ ನುಗ್ಗೆ. ಕರಿ ನುಗ್ಗೆಗಿಂತ ಬಿಳಿನುಗ್ಗೆ ಸೊಪ್ಪಿನಲ್ಲಿ ಕಹಿ ಅಂಶವು ಕಡಿಮೆ ಇರುತ್ತದೆ. ಆದ್ದರಿಂದ ನುಗ್ಗೆ ಸೊಪ್ಪಿನ ಸಾಂಬಾರ್ ತಯಾರಿಸಲು ಬಿಳೀ ನುಗ್ಗೆ ಸೊಪ್ಪನ್ನು ಆರಿಸಿಕೊಳ್ಳುವುದು ಉತ್ತಮ. ನುಗ್ಗೆ ಎಲೆಗಳು ಅತವಾ ನುಗ್ಗೆ ಸೊಪ್ಪು ಪುಟ್ಟ ಪುಟ್ಟದಾಗಿದ್ದು, ರೆಂಬೆ ಕೊಂಬೆಗಳು ಹಸಿರಿನ ಚಪ್ಪರದಂತೆ ಗೋಚರಿಸುತ್ತದೆ. ಚಳಿಗಾಲದಲ್ಲಿ ನುಗ್ಗೆಮರದಲ್ಲಿ ಕಂಬಳಿ ಹುಳಗಳ ಓಡಾಟ ಹೆಚ್ಚು.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ನುಗ್ಗೆಯ ಬಗ್ಗೆ ಉತ್ತಮ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು

ಅನಿಸಿಕೆ ಬರೆಯಿರಿ:

%d bloggers like this: