ಹಿಂದೂ ಮತ್ತು ಸಿಕ್ಕರ ಪವಿತ್ರ ಯಾತ್ರಾಸ್ತಳ – ಮಣಿಕರಣ್
– ಕೆ.ವಿ.ಶಶಿದರ.
ಮಣಿಕರಣ್ ಹಿಮಾಚಲಪ್ರದೇಶದಲ್ಲಿರುವ ಒಂದು ಯಾತ್ರಾಸ್ತಳವಾಗಿದೆ. ಮಣಿಕರಣ್ ಹೆಸರುವಾಸಿಯಾಗಿರುವುದು ಅಲ್ಲಿರುವ ಬಿಸಿನೀರಿನ ಬುಗ್ಗೆಯಿಂದ. ಇದನ್ನು ಹಿಂದೂಗಳು ಮತ್ತು ಸಿಕ್ಕರು ಪವಿತ್ರಸ್ತಳವೆಂದು ಪರಿಗಣಿಸಿದ್ದಾರೆ. ಮಣಿಕರಣ್ ಇರುವುದು ಕುಲು ಜಿಲ್ಲೆಯಲ್ಲಿ. ಕುಲುವಿನಿಂದ 45 ಕಿಲೋಮೀಟರ‍್ ದೂರದಲ್ಲಿರುವ ಮಣಿಕರಣ್, ಮನಾಲಿಯಿಂದ 85 ಕಿ.ಮಿ. ದೂರದಲ್ಲಿದೆ. ಕುಲು ಮತ್ತು ಮನಾಲಿಗೆ ಬರುವ ಅನೇಕ ಪ್ರವಾಸಿಗರು ಇಲ್ಲಿಗೂ ಬಂದು, ಸಿಕ್ಕರ ಗುರುದ್ವಾರ ಮತ್ತು ಹಿಂದೂ ದೇವಾಲಯ ವೀಕ್ಶಿಸಿದ ನಂತರ, ಇಲ್ಲಿನ ಬಿಸಿನೀರಿನ ಬುಗ್ಗೆಯಲ್ಲಿ ಮಿಂದೆದ್ದು ಹೋಗುವುದನ್ನು ರೂಡಿಸಿಕೊಂಡಿದ್ದಾರೆ. ಮಣಿಕರಣ್ ಸಮುದ್ರಮಟ್ಟದಿಂದ ಸರಿ ಸುಮಾರು 5700 ಅಡಿ ಎತ್ತರದಲ್ಲಿದೆ.ಈ ತಾಣದ ಪಕ್ಕ ಪಾರ‍್ವತಿ ನದಿ ಹರಿಯುತ್ತದೆ. ಶಿವ ಮತ್ತು ಪಾರ‍್ವತಿಗೆ ಸಂಬಂದಿಸಿದ ಪೌರಾಣಿಕ ಕತೆಗಳ ಕಾರಣ ಈ ನದಿಗೆ ಆ ಹೆಸರು ಬಂದಿದೆ ಎಂಬ ನಂಬಿಕೆಯಿದೆ.
ಈ ಸ್ತಳದ ವೈಶಿಶ್ಟ್ಯ ಸಾರುವ ಅನೇಕ ದಂತಕತೆಗಳು ಪ್ರಚಲಿತದಲ್ಲಿವೆ. ಜಲಪ್ರಳಯದ ನಂತರ ಮನು, ಮಾನವನನ್ನು ಇಲ್ಲಿ ಮರು ಸ್ರುಶ್ಟಿಸಿದ ಎಂಬುದು ಅದರಲ್ಲಿರುವ ಒಂದು ದಂತಕತೆಯಾಗಿದೆ. ಮತ್ತೊಂದು ದಂತಕತೆಯ ಪ್ರಕಾರ, ಒಮ್ಮೆ ಶಿವ-ಪಾರ‍್ವತಿಯರು ಈ ಕಣಿವೆಯಲ್ಲಿ ತಿರುಗಾಡುವಾಗ, ಅತ್ಯಂತ ಸುಂದರವಾದ ಹಾಗೂ ಪ್ರಶಾಂತವಾದ ಈ ಸ್ತಳವನ್ನು ಕಂಡರಂತೆ. ಇದರ ಪ್ರಕ್ರುತಿ ಸೊಬಗಿಗೆ ಮಾರುಹೋದ ಅವರು, ಸ್ವಲ್ಪ ಸಮಯ ಅಲ್ಲೇ ಉಳಿಯಲು ನಿರ‍್ದರಿಸಿ, ಒಂದು ಸಾವಿರ ವರುಶಕ್ಕೂ ಹೆಚ್ಚು ಕಾಲ ಅಲ್ಲಿ ನೆಲೆಸಿದ್ದರಂತೆ. ಹೀಗಿರುವಾಗ ಒಮ್ಮೆ ಪಾರ‍್ವತಿದೇವಿಯ ಕಿವಿಯೋಲೆ, ಅಲ್ಲಿ ಹರಿಯುತ್ತಿದ್ದ ನದಿಯಲ್ಲಿ ಬಿದ್ದುಬಿಟ್ಟಿತಂತೆ. ಇದರಿಂದ ಪಾರ‍್ವತಿದೇವಿ ಬೇಸರಗೊಂಡು ಅದನ್ನು ಹುಡುಕುವ ಪ್ರಯತ್ನ ಮಾಡಿ ಸೋತಳಂತೆ. ಇದರಿಂದ ಕೋಪಗೊಂಡ ಶಿವ, ತನ್ನ ಮೂರನೇ ಕಣ್ಣನ್ನು ತೆರೆದನಂತೆ. ಶಿವ ತನ್ನ ಮೂರನೇ ಕಣ್ಣನ್ನು ತೆರೆದಾಗ ಆಗಬಹುದಾದ ಅನಾಹುತವನ್ನು ಗ್ರಹಿಸಿದ ದೇವತೆಗಳು, ಸರ‍್ಪರಾಜನ ಮೊರೆಹೋಗಿ, ಕಿವಿಯೋಲೆಯನ್ನು ಹುಡುಕಿಕೊಡುವ ಮೂಲಕ ಶಿವನ ಕೋಪವನ್ನು ನಿಗ್ರಹಿಸಲು ಕೋರಿಕೊಂಡರಂತೆ. ಸರ‍್ಪರಾಜ ದೇವರುಗಳ ಮೊರೆಯನ್ನು ಆಲಿಸಿ ಒಮ್ಮೆ ಜೋರಾಗಿ ಬುಸುಗುಟ್ಟಿದನಂತೆ. ಆ ಬಯಂಕರ ಬುಸುಗುಟ್ಟುವಿಕೆಯಿಂದ ಪಾರ‍್ವತಿಯ ಕಿವಿಯಾಬರಣದ ಸಂಗಡ ಇನ್ನೂ ಅನೇಕ ಆಬರಣಗಳು ಹಾಗೂ ಬಿಸಿನೀರು ದಾರಾಕಾರವಾಗಿ ಮೇಲಕ್ಕೆ ಚಿಮ್ಮಲು ಪ್ರಾರಂಬಿಸಿತಂತೆ. ಆಬರಣಗಳು ಶಿವನಿಗೆ ಗೋಚರಿಸಿದ ಮೇಲೆ ಶಿವನ ಕೋಪ ನಿಗ್ರಹವಾಗಿ, ತನ್ನ ಮೂರನೇ ಕಣ್ಣನ್ನು ಶಾಂತಗೊಳಿಸಿದನಂತೆ. ಶಿವತಾಂಡವ ನ್ರುತ್ಯ ನಡೆದದ್ದು ಇಲ್ಲೇ ಎಂಬ ಪ್ರತೀತಿ ಸಹ ಜನಜನಿತವಾಗಿದೆ. ಇದರಿಂದಾಗಿ ಶಿವ ಪಾರ‍್ವತಿಯರ ದೇವಾಲಯ ಇಲ್ಲಿನ ಪ್ರಮುಕ ಆಕರ‍್ಶಣೆಯಾಗಿದೆ. ಶ್ರೀ ರಾಮಚಂದ್ರಪ್ರಬು, ಕ್ರಿಶ್ಣ ಹಾಗೂ ವಿಶ್ಣುವಿನ ದೇವಸ್ತಾನ ಇಲ್ಲಿನ ಪ್ರಸಿದ್ದ ಹಿಂದೂ ದೇವಾಲಯಗಳಾಗಿವೆ. ಹಿಮಾಚಲ ಪ್ರದೇಶದಲ್ಲಿ ಅತಿ ಹೆಚ್ಚು ಪ್ರವಾಸಿಗರು ಬೇಟಿ ನೀಡುವ ಪ್ರಮುಕ ದೇವಾಲಯಗಳಲ್ಲಿ ಇವುಗಳೂ ಸೇರಿವೆ.
ಇಲ್ಲಿರುವ ಗುರುನಾನಕ್ ದೇವ್‍ಜಿ ಗುರುದ್ವಾರವನ್ನು ‘ಮಣಿಕರಣ್ ಗುರುದ್ವಾರ’ ಎಂದು ಎಲ್ಲರೂ ಕರೆಯುತ್ತಾರೆ. ಇದು ಗುರುನಾನಕರಿಗೆ ಸಂಬಂದಿಸಿದ್ದು ಎಂಬ ನಂಬಿಕೆ ಇದೆ. ಈ ಗುರುದ್ವಾರದಿಂದ ಪ್ರವಾಸಿಗರಿಗೆ ಹಾಗೂ ನಿರ‍್ಗತಿಕರಿಗೆ ಪ್ರತಿದಿನ ಉಚಿತ ಆಹಾರ ಸರಬರಾಜು ಕಾರ‍್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಮಣಿಕರಣ್ ನೈಸರ‍್ಗಿಕ ಬಿಸಿನೀರಿನ ಬುಗ್ಗೆಗಳಿಗೆ ಹೆಸರುವಾಸಿಯಾಗಿದೆ. ಈ ಬಿಸಿನೀರಿನಲ್ಲಿ ರೋಗ ನಿರೋದಕ ಮತ್ತು ನಿವಾರಣಾ ಶಕ್ತಿ ಅಡಕವಾಗಿದೆ ಎಂಬ ನಂಬಿಕೆಯಿದೆ. ಅನೇಕ ಯಾತ್ರಿಗಳು, ಪ್ರವಾಸಿಗರು ಈ ನೀರಿನಲ್ಲಿ ಮಿಂದಲ್ಲಿ ತಮ್ಮ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆಯಿಂದ ಇಲ್ಲಿನ ಬಿಸಿನೀರಿನ ಬುಗ್ಗೆಯಲ್ಲಿ ಮಿಂದೆದ್ದು ಪಾವನರಾಗುತ್ತಾರೆ. ಹೀಗೆ ಹಿಮಾಚಲ ಪ್ರದೇಶದ ಪವಿತ್ರ ಯಾತ್ರಾ ಸ್ತಳಗಳಲ್ಲಿ ಮಣಿಕರಣ್ ತನ್ನದೇ ಆದ ಮಹತ್ವ ಪಡೆದಿದ್ದು, ಎಲ್ಲ ಕಡೆಗಳಿಂದ ಯಾತ್ರಾತ್ರಿಗಳನ್ನು ಸೆಳೆಯುತ್ತದೆ.
(ಮಾಹಿತಿ ಮತ್ತು ಚಿತ್ರ ಸೆಲೆ: india.com , incredibleindia.org , indiatales.com , pixahive.com )
ಧನ್ಯವಾದಗಳು ಸರ್ ???