ವಿರೂಪಗೊಂಡ ಗೊಂಬೆಗಳ ದ್ವೀಪ

– ಕೆ.ವಿ. ಶಶಿದರ.

Dolls'_Island, ಗೊಂಬೆಗಳ ದ್ವೀಪ

ಇಸ್ಲಾ ಡಿ ಲಾಸ್ ಮುನೆಕಾಸ್ (ಗೊಂಬೆಗಳ ದ್ವೀಪ) ಒಂದು ಪ್ರಕ್ಯಾತ ಪ್ರವಾಸಿ ತಾಣ. ಇದು ಮೆಕ್ಸಿಕೋದ ಕ್ಸೋಚಿಮಿಲ್ಕೋದಲ್ಲಿದೆ. ಚಿಕ್ಕ ವಯಸ್ಸಿನಲ್ಲಿ ಅಕಾಲ ಮ್ರುತ್ಯು ಹೊಂದಿದ ಪುಟ್ಟ ಬಾಲಕಿಯ ಆತ್ಮದ ಸ್ವಾಂತನಕ್ಕಾಗಿ ಈ ದ್ವೀಪವನ್ನು ಮೀಸಲಿಡಲಾಗಿದೆ. ವಿರೂಪಗೊಂಡ ನೂರಾರು ಬಯಾನಕ, ಮ್ರುದುವಾದ ಗೊಂಬೆಗಳ ಆವಾಸ ಸ್ತಾನ ಇದಾಗಿದೆ. ಇಲ್ಲಿ ಕತ್ತರಿಸಿದ ಅವಯವಗಳು, ಶಿರಚ್ಚೇದಿತ ತಲೆಗಳು, ಕಣ್ಣಿನ ಗುಡ್ಡೆಗಳಿಲ್ಲದೆ ಮರದಲ್ಲಿ ನೇತಾಡುವ, ಬೇಲಿಯಲ್ಲಿ ಅವಿತಿರುವ ಹಾಗೂ ಅಲ್ಲಲ್ಲೇ ಲಬ್ಯವಿರುವ ಜಾಗದ ನೆಲದ ಮೇಲೆಲ್ಲಾ ಹರಡಿರುವ ಗೊಂಬೆಗಳನ್ನು ಕಾಣಬಹುದು. ಹಗಲು ಹೊತ್ತಿನ ಪ್ರಕಾಶಮಾನವಾದ ಬೆಳಕಿನಲ್ಲೇ ಬಯ ಹುಟ್ಟಿಸುವ ಈ ಗೊಂಬೆಗಳು, ಕತ್ತಲೆಯಾದ ನಂತರ ವಿಶೇಶವಾಗಿ ಕಾಡುತ್ತವೆ.

ಈ ಒಂದು ಬಯಾನಕ ಬೂತ ದ್ವೀಪದ ಹಿಂದೆ 1950ರಲ್ಲಿ ನಡೆದ ದುರಂತ ಕತೆ ಅಡಗಿದೆ. ಡಾನ್ ಹೂಲಿಯನ್ ಸಂತಾನಾ ಬ್ಯಾರೆರಾ ಈ ದ್ವೀಪದ ನಿವಾಸಿ. ಈ ದ್ವೀಪದ ಉಸ್ತುವಾರಿ ಸಹ ಅವನದ್ದೇ ಅಗಿತ್ತು. ಒಂದು ಪುಟ್ಟ ಹೆಣ್ಣು ಮಗು, ದ್ವೀಪವನ್ನು ಸುತ್ತುವರೆದ ಕಾಲುವೆಯಲ್ಲಿ ನಿಗೂಡವಾಗಿ ಮುಳುಗಿಹೋಗಿದ್ದನ್ನು ಇವನು ಕಂಡ. ಆ ಮಗುವಿನ ಜೀವ ರಕ್ಶಣೆ ಮಾಡಲು ಸಾದ್ಯವಾಗಿರಲಿಲ್ಲ. ಈ ವಿಚಾರ ಅವನ ಮನವನ್ನು ಸುಡುತ್ತಲೇ ಇತ್ತು.

ಈ ಪ್ರಕರಣದ ನಂತರ ಕೆಲವೇ ದಿನಗಳಲ್ಲಿ ಹೂಲಿಯನ್ ಅದೇ ಕಾಲುವೆಯಲ್ಲಿ ತೇಲುತ್ತಿರುವ ಗೊಂಬೆಯೊಂದನ್ನು ಕಂಡ. ಆ ಹೆಣ್ಣು ಮಗುವಿನ ಬಲಿಯಾಗುವ ಅಸಹಾಯಕನಾಗಿ ನೋಡುತ್ತಿದ್ದ ದ್ರುಶ್ಯ ಹಾಗೂ ಅದೇ ವಿಚಾರ ಅವನ ಮನದಲ್ಲಿ ಕೊರೆಯುತ್ತಿದ್ದ ಕಾರಣ, ಈ ಗೊಂಬೆಯನ್ನೂ ಹೆಣ್ಣು ಮಗುವೆಂದು ಅವನು ಬ್ರಮಿಸಿದ. ಅದನ್ನು ಅಲ್ಲಿಂದ ತೆಗೆದು, ಹತ್ತಿರದಲ್ಲಿದ್ದ ಮರದ ಮೇಲೆ ಕೂರಿಸಿ, ಜೀವ ಉಳಿಸಿದ ಸಂತಸ ಅನುಬವಿಸಿದ. ಚಿತ್ರ ಹಿಂಸೆಗೆ ಒಳಗಾಗಿ ಸತ್ತ ಆ ಪುಟ್ಟ ಹೆಣ್ಣು ಮಗುವಿನ ಸಾಂತ್ವನಕ್ಕಾಗಿ ಇದು ಎಂಬ ಬಾವನೆ ಅವನಲ್ಲಿತ್ತು. ಇಶ್ಟಾದರೂ ಆ ಪುಟ್ಟ ಹೆಣ್ಣು ಮಗುವಿನ ಜೀವವನ್ನು ಉಳಿಸದೇ ಹೋದ ಅಪರಾದ ಪ್ರಗ್ನೆ ಅವನನ್ನು ಬಹಳವಾಗಿ ಆವರಿಸಿತ್ತು. ಆತ ಪ್ರಕ್ಶುಬ್ದತೆಗೆ ಒಳಗಾಗಿದ್ದ. ಇಡೀ ದ್ವೀಪವನ್ನು ಆ ಪುಟ್ಟ ಹೆಣ್ಣು ಮಗುವಿನ ಆತ್ಮ ಕಾಡುತ್ತಿದೆ ಎಂದೆನಿಸಿತ್ತು ಅವನಿಗೆ.

ಒಂದು ಗೊಂಬೆಯಿಂದ ಆ ಪುಟ್ಟ ಮಗುವನ್ನು ಮೆಚ್ಚಿಸಲು ಸಾಲದು ಎಂದು ಹೂಲಿಯನ್ ಬಾವಿಸಿದ. ಅದರ ಆತ್ಮದಿಂದ ಬಯಬೀತನಾದ ಅವನು, ಆ ಹೆಣ್ಣು ಮಗುವಿಗೆ ಅಗತ್ಯ ಜೊತೆಗಾರರನ್ನು ನೀಡಲು ಪ್ರಯತ್ನ ಶುರುಮಾಡಿದ. ಕಾಲುವೆಯಲ್ಲಿ ಮುರಿದ, ಚಿಂದಿ ಚಿಂದಿ ಗೊಂಬೆಗಳು, ಕಸದಲ್ಲಿರುವುದನ್ನು ಕಂಡ. ಅವುಗಳನ್ನು ಶೇಕರಿಸಿ ಮರಗಳಲ್ಲಿ ನೇತು ಹಾಕಿದ. ಇದರಿಂದ ‘ತನಗೆ ರಕ್ಶಣೆ ಸಿಗುತ್ತದೆ’ ಎಂದು ಅವನು ಬಾವಿಸಿದ್ದ. ಹೀಗೆ ಆತ ಅರ‍್ದ ಶತಮಾನಕ್ಕೂ ಹೆಚ್ಚು ಕಾಲ ಗೊಂಬೆಗಳನ್ನು ಶೇಕರಿಸಿದ. ಈ ಅವದಿಯಲ್ಲಿ ಆತ ಸಂಗ್ರಹಿಸಿದ್ದು ಸಾವಿರದ ಐನೂರಕ್ಕೂ ಹೆಚ್ಚು ಬಯಾನಕ ಗೊಂಬೆಗಳನ್ನು. ಈಗಲೂ ಸಹ ಆ ಎಲ್ಲಾ ಗೊಂಬೆಗಳೂ ಅಲ್ಲೇ ಇವೆ. ಯಾರೂ ಅವುಗಳನ್ನು ಮುಟ್ಟಿಲ್ಲ. ಅವುಗಳು ಈಗ ಕೊಳೆಯುತ್ತಿರುವ ಪುಟ್ಟ ಮಕ್ಕಳ ದೇಹದಂತೆ ಕಾಣುತ್ತವೆ.

ಹೂಲಿಯನ್ 2001ರಲ್ಲಿ ಹ್ರುದಯಾಗಾತದಿಂದ ಸಾವನ್ನಪ್ಪಿದ. ಇದರ ಬಗ್ಗೆ ಹಲವಾರು ಕಲ್ಪಿತ ಕತೆಗಳು ಹುಟ್ಟಿಕೊಂಡವು. ಆ ಪುಟ್ಟ ಹೆಣ್ಣು ಮಗುವಿನ ರೀತಿಯಲ್ಲೇ ಇವನೂ ಸಹ ಕಾಲುವೆಯಲ್ಲಿ ಮುಳುಗಿ ಸತ್ತನೆಂದು ಹೇಳುತ್ತಾರೆ. ಎಶ್ಟು ನಿಜ, ಎಶ್ಟು ಸುಳ್ಳು ಬಲ್ಲವರಿಲ್ಲ. ಅದರೆ ಅವನ ಸಮಾದಿ ಅಲ್ಲೇ ಇದ್ದು, ಅದರ ಮೇಲೆ ಸಣ್ಣ ಬಿಳಿ ಶಿಲುಬೆಯನ್ನು ಸಹ ಕಾಣಬಹುದು.

ಇಶ್ಟೆಲ್ಲಾ ಕತೆ ಇದರ ಹಿಂದೆ ಇದ್ದರೂ ಸಹ, ಸತ್ಯ ಕತೆ ಇನ್ನೂ ನಿಗೂಡವಾಗಿಯೇ ಇದೆ. ಮುಳುಗಿ ಹೋಗಿದ್ದ ಆ ಪುಟ್ಟ ಹುಡುಗಿಯ ಅಸ್ತಿತ್ವದ ಬಗ್ಗೆಯೇ ಅನುಮಾನ ವ್ಯಕ್ತಪಡಿಸುವ ಸಮುದಾಯ ಇದೆ. ಹೂಲಿಯನ್ ಒಂಟಿಯಾಗಿದ್ದ ಕಾರಣ ಯಾರಿಗೂ ಕೊಂಚವೂ ಅನುಮಾನ ಬರುವುದಿಲ್ಲ ಎಂಬ ಬಾವನೆಯಿಂದ ಇಂತಹ ಕತೆಯನ್ನು ಅವನೇ ಸ್ರುಶ್ಟಿಸಿರಬಹುದು ಎಂದು ಅವರುಗಳ ಚಿಂತನೆ. ಚಿತ್ರಹಿಂಸೆಯಿಂದ ಎಂದೋ ಕೊಲ್ಲಲ್ಪಟ್ಟ ಆ ಸಣ್ಣ ಮಕ್ಕಳ ಆತ್ಮ, ಹೂಲಿಯನ್ ಮತಿಬ್ರಮಣೆ ಹೊಂದಲು ಮೂಲ ಕಾರಣ ಎನ್ನುವ ವಿಚಾರ ಸಹ ಕೇಳಿಬರುತ್ತದೆ. ಜೂಲಿಯನ್ಗೆ ತೀರ ಹತ್ತಿರದವರ ಪ್ರಕಾರ, ಅವ ಮೊದಲಿನಂತೆ ಇಲ್ಲ. ಯಾವುದೋ ಒಂದು ಬಯಂಕರ ಅತಿಮಾನುಶ ಶಕ್ತಿ ಅವನನ್ನು ಸಂಪೂರ‍್ಣವಾಗಿ ಬದಲಾಯಿಸಿಬಿಟ್ಟಿದೆ ಎನ್ನುತ್ತಾರೆ.

ಆ ಚಿಕ್ಕ ಹುಡುಗಿಯ ಆತ್ಮ ಇನ್ನೂ ಅಲ್ಲೇ ಇದೆ. ಆ ದ್ವೀಪದಲ್ಲಿ ಶೇಕರಣೆಯಾಗಿರುವ ಸಾವಿರಾರು ವಿರೂಪ ಅಂಗಗಳ ಗೊಂಬೆಗಳನ್ನು, ಹಾಲಿ ಅವುಗಳಿರುವ ಜಾಗದಿಂದ ತೆಗೆಯದಿರುವುದು ಕ್ಶೇಮ. ರಾತ್ರಿಯ ಹೊತ್ತಿನಲ್ಲಿ ಆ ಗೊಂಬೆಗಳಿಗೆ ಜೀವ ಬಂದು. ಅವುಗಳು ತಮ್ಮ ತಲೆಯನ್ನು ಅತ್ತಿಂದ ಇತ್ತ, ಇತ್ತಿಂದ ಅತ್ತ ಹೊರಳಿಸುತ್ತಾ, ಪಕ್ಕದಲ್ಲಿರುವ ಗೊಂಬೆಯ ಜೊತೆ ಪಿಸುಮಾತಿನಲ್ಲಿ ಸಂಬಾಶಣೆ ನಡೆಸುತ್ತವೆ ಎನ್ನುವ ನಂಬಿಕೆ ಹಲವರಲ್ಲಿದೆ.

ಮುಗ್ದ ಜೂಲಿಯನ್ನಿನ ಮನದ ಇಚ್ಚೆಯಂತೆ ಇದು ತೇಲುವ ಉದ್ಯಾನವನವಾಗಬೇಕಿತ್ತು. ಅದರಲ್ಲಿ ಬಣ್ಣ ಬಣ್ಣದ ಹೂವುಗಳು ಬೆಳೆದು ಕಣ್ಣಿಗೆ ತಂಪು ನೀಡಬೇಕಿತ್ತು. ಆದರೆ ಇದು ಇಂದು ಬಯಾನಕ, ಬಣ್ಣ ಕಳೆದುಕೊಂಡ, ಊನ ಅಂಗಗಳ, ರುಂಡ ಮುಂಡಗಳು ಬೇರೆಯಾದ, ವಿಕಾರವಾದ ಮುಕ, ಕಣ್ಣು ಗುಡ್ಡೆಗಳು ಹೊರಬಂದ ಗೊಂಬೆಗಳ ಸಮಾದಿ ಸ್ತಳವಾಗಿ ಪರಿವರ‍್ತನೆಗೊಂಡಿದ್ದು ವಿಪರ‍್ಯಾಸವೇ!

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org, isladelasmunecas.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: