ವಿಯೆಟ್ನಾಮ್‍ ನಲ್ಲಿದೆ ಮನಸೆಳೆವ ‘ಗೋಲ್ಡನ್ ಬ್ರಿಡ್ಜ್’

.

ಕೆಲವೊಂದು ಚಿತ್ರಗಳೇ ಹಾಗೆ. ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡ ಕೊಂಚ ವೇಳೆಯ ಬಳಿಕ, ವೈರಲ್ ಆಗಿ ಕೆಲವೇ ಸಮಯದಲ್ಲಿ ಜಗದ್ವಿಕ್ಯಾತವಾಗುತ್ತವೆ. ಇತ್ತೀಚೆಗೆ ಈ ಸಾಲಿಗೆ ಸೇರಿರುವುದು ವಿಯೆಟ್ನಾಂನಲ್ಲಿರುವ ಗೋಲ್ಡನ್ ಬ್ರಿಡ್ಜ್. ಹಿನ್ನೆಲೆಯಲ್ಲಿ ಪ್ರಕ್ರುತಿಯ ಅತಿ ಸುಂದರ ದ್ರುಶ್ಯಗಳಿಂದ ಕೂಡಿರುವ ಈ ಅದ್ಬುತ ವಿಶಿಶ್ಟ ವಿಸ್ಮಯ ರಚನೆ, ನೋಡುಗರ ಹುಬ್ಬೇರಿಸುವಂತೆ ಮಾಡುತ್ತದೆ.

‘ಗೋಲ್ಡನ್ ಬ್ರಿಡ್ಜ್’ ಹೆಸರಿಗೆ ಕಾರಣ

ಗೋಲ್ಡನ್ ಸೇತುವೆ ವಿಯೆಟ್ನಾಂನ ಮೇರು ಕ್ರುತಿ. ಈ ನವೀನ ವಾಸ್ತುಶಿಲ್ಪದ ನಿರ‍್ಮಾಣ ಡ ನಾಂಗ್‌ನ ಬಾ ನಾ ಬೆಟ್ಟಗಳ ನಡುವಿನ ಸಂಕೀರ‍್ಣದಲ್ಲಿದೆ. ಈ ಮನರಂಜನೆಯ ಹಾಗೂ ಪ್ರವಾಸಿ ಆಕರ‍್ಶಣೆಯ ಸ್ತಳ ಸಮುದ್ರ ಮಟ್ಟಕ್ಕಿಂತ 1,400 ಮೀಟರ್ (4,593 ಅಡಿ) ಎತ್ತರದಲ್ಲಿರುವ ಈ ಸೇತುವೆ, 150 ಮೀಟರ್ (492 ಅಡಿ) ಉದ್ದವಿದೆ. ಇದರ ಉದ್ದಕ್ಕೂ ಇಕ್ಕೆಲಗಳಲ್ಲಿ ಹಾಕಿರುವ ಚಿನ್ನದ ಲೇಪನವಿರುವ ಕಂಬಿ ತಡೆಯಿಂದ (ರೈಲಿಂಗ್ಸ್) ಈ ಸೇತುವೆಗೆ ‘ಗೋಲ್ಡನ್ ಬ್ರಿಡ್ಜ್’ ಎಂಬ ಹೆಸರು ಬಂದಿದೆ.

ಪರ‍್ವತರಾಜ ತನ್ನ ಎರಡು ಬ್ರುಹತ್ ಕೈಗಳಲ್ಲಿ ಹಿಡಿದಿರುವಂತೆ ನಿರ‍್ಮಿಸಿರುವ ಈ ಸೇತುವೆಯ ದ್ರುಶ್ಯ, ಅತ್ಯಂತ ಪ್ರಬಾವಶಾಲಿಯಾಗಿದೆ. ಸುತ್ತಲೂ ಹರಡಿರುವ ಹಸುರಿನ ರಾಶಿ, ಮೇಲ್ಗಡೆ ನೀಲಾಕಾಶ, ಸೇತುವೆಗೆ ಹಾಕಿರುವ ಚಿನ್ನದ ಕಂಬಿತಡೆ ಇವೆಲ್ಲಾ ನೋಡುಗರ ದ್ರುಶ್ಟಿಯಲ್ಲಿ ಅತ್ಯಂತ ನಯನ ಮನೋಹರವಾಗಿರುವ ಕಾರಣ ಸಾವಿರಾರು ಜೋಡಿಗಳು ಇದರ ಮೇಲೆ ನಿಂತು ತಮ್ಮ ಬಾವಚಿತ್ರ ತೆಗೆಸಿಕೊಳ್ಳುವುದು ಸಾಮಾನ್ಯ. ಈ ದ್ರುಶ್ಯವನ್ನು ಸೆರೆ ಹಿಡಿಯಲು ಬರುವ ಜೋಡಿಗಳೇ ಇಲ್ಲಿನ ಅತಿ ಹೆಚ್ಚು ಪ್ರವಾಸಿಗರು.

ಸೇತುವೆ ಕಟ್ಟಿರುವ ಬಗೆ

ವಾಸ್ತುಶಿಲ್ಪದ ಮೇರು ಕ್ರುತಿ ಎಂದು ವಿಶ್ವದಾದ್ಯಂತದ ಸ್ಪರ‍್ದೆಯಲ್ಲಿ ಬಹುಮಾನ ಪಡೆದಿರುವ ಈ ಗೋಲ್ಡನ್ ಬ್ರಿಡ್ಜ್, ಅದ್ಬುತ ವಾಸ್ತುಶಿಲ್ಪ ಮತ್ತು ಪ್ರಕ್ರುತಿಯ ಸಾಮರಸ್ಯದ ಮಿಶ್ರಣವಾಗಿ ಪ್ರಕ್ಯಾತಿಯಾಗಿದೆ. 150 ಮೀಟರ್ ಉದ್ದದ ಈ ಸೇತುವೆ 12.8 ಮೀಟರ್ ಅಗಲವಾಗಿದೆ. ಈ ಸೇತುವೆಯು, 8 ಕಮಾನುಗಳ ಬದ್ರ ಬುನಾದಿಯ ಮೇಲೆ ನಿಂತಿದೆ. ಈ ಸೇತುವೆಯ ನಿರ‍್ಮಾಣದ ಹಂತದಲ್ಲಿ ಸುತ್ತಲಿನ ಪ್ರಕ್ರುತಿ ಸೌಂದರ‍್ಯಕ್ಕೆ ಯಾವುದೇ ರೀತಿಯ ದಕ್ಕೆಯಾಗದಂತೆ ಎಚ್ಚರವಹಿಸಿ, ಇದರ ನೀಲನಕ್ಶೆಯನ್ನು ತಯಾರಿಸುವುದು ವಾಸ್ತುಶಿಲ್ಪಕ್ಕೇ ಸವಾಲಾಗಿತ್ತು. ಅದನ್ನು ಯಶಸ್ವಿಯಾಗಿ ನಿರ‍್ವಹಿಸಲಾಗಿದೆ. ಗೋಲ್ಡನ್ ಬ್ರಿಡ್ಜ್ ನ ವಾಸ್ತುಶಿಲ್ಪದ ಅತ್ಯಂತ ವಿಶಿಶ್ಟವಾದ ಅಂಶವೆಂದರೆ ಬಾಗಿರುವ ಸೇತುವೆಯನ್ನು ದೈತ್ಯ ಅಂಗೈಯಲ್ಲಿ ಹಿಡಿದಿರುವಂತೆ ರಚಿಸಿರುವುದು. ಈ ಸೇತುವೆಯ ಮೇಲೆ ನಡೆದಾಡುವಾಗ, ಪರ‍್ವತ ದೇವರ ಕೈಯಲ್ಲಿ ಹಿಡಿದಿರುವ ಮೋಡಗಳಲ್ಲಿ ನಡೆದಾಡುವಂತೆ ಬಾಸವಾಗುವುದು ವಿಶಿಶ್ಟ,

ಡ ನಾಂಗ್‌ನ ಈ ಗೋಲ್ಡನ್ ಬ್ರಿಡ್ಜ್ ಲೋಕಾರ‍್ಪಣೆಯಾದ ನಂತರ ಅನೇಕ ದೊಡ್ಡ ದೊಡ್ಡ ಮನಮೋಹಕ ಉತ್ಸವಗಳಿಗೆ, ಪ್ಯಾಶನ್ ಪೆರೇಡ್‌ಗಳಿಗೆ ಸಾಕ್ಶಿಯಾಗಿದೆ. ಇದರಲ್ಲಿ ಪ್ರಮುಕವಾದದ್ದು ‘ವಾಕ್ ಆನ್ ಎ ಕ್ಲೌಡ್’ ಎಂಬ ಪ್ಯಾಶನ್ ಶೋ. ಈ ವಾಸ್ತುಶಿಲ್ಪವು ಜಗತ್ತಿನ ಅನೇಕ ಪ್ಯಾಶನ್ ವಿನ್ಯಾಸಕರ ಅತ್ಯುತ್ತಮ ವಿನ್ಯಾಸದ ಸ್ರುಶ್ಟಿಗೆ ಪ್ರೇರಕವಾಗಿದೆ. ನೂತನ ಮದುಮಕ್ಕಳ ಪೋಟೋ ಶೂಟ್‌ಗೆ ಇದು ನೆಚ್ಚಿನ ತಾಣವೂ ಹೌದು.

‘ಗೋಲ್ಡನ್ ಬ್ರಿಡ್ಜ್’ ಅನ್ನು ತಲುಪೋದು ಹೇಗೆ?

ಸನ್ ವರ‍್ಲ್ಡ್ ಬಾ ನಾ ಹಿಲ್ಸ್ ರೆಸಾರ‍್ಟ್ ಮತ್ತು ಅಮ್ಯೂಸ್ಮೆಂಟ್ ಪಾರ‍್ಕಿಗೆ ಗೋಲ್ಡನ್ ಬ್ರಿಡ್ಜ್ ಸೇರಿದೆ. ಇದು ಡ ನಾಂಗ್ ಸಿಟಿ ಮದ್ಯದಿಂದ ಕೇವಲ 18 ಕಿಲೋಮೀಟರ್ ದೂರದಲ್ಲಿದೆ. ಬಾ ನಾ ಹಿಲ್ಸ್ ರೆಸಾರ‍್ಟ್ ಪಾರ‍್ಕಿಗೆ ತಲುಪಲು 45 ನಿಮಿಶಗಳ ಪ್ರಯಾಣವಶ್ಟೇ. ಕಾರಿನ ಮೂಲಕ ಬಾ ನಾ ಹಿಲ್ಸ್ ಅಮ್ಯೂಸ್ಮೆಂಟ್ ಪಾರ‍್ಕಿಗೆ ತಲುಪಿದ ನಂತರ, 20 ನಿಮಿಶಗಳ ಕೇಬಲ್ ಕಾರ್ ಪ್ರಯಾಣ ಪ್ರವಾಸಿಗರನ್ನು ಬಾ ನಾ ಹಿಲ್ಸ್‌ನ ಮೇಲ್ಬಾಗಕ್ಕೆ ಕೊಂಡೊಯ್ಯುತ್ತದೆ.

ಪ್ರವಾಸಿಗರನ್ನು ಆಕರ‍್ಶಿಸುವ ಸಲುವಾಗಿ, ಎರಡು ಬಿಲಿಯನ್ ಡಾಲರ್ ಯೋಜನೆಯ ಪ್ರಮುಕ ಬಾಗವಾಗಿ ಪ್ರಕ್ರುತಿ ಸೌಂದರ‍್ಯದ ಹಿನ್ನೆಲೆಯಲ್ಲಿ ನಿರ‍್ಮಿತವಾಗಿರುವುದೇ ಈ ‘ಚಿನ್ನದ ಸೇತುವೆ’ ಅರ‍್ತಾತ್ ಗೋಲ್ಡನ್ ಬ್ರಿಡ್ಜ್. ಇದು ಜೂನ್ 2018ರಲ್ಲಿ ಲೋಕಾರ‍್ಪಣೆಯಾಯಿತು.

(ಮಾಹಿತಿ ಮತ್ತು ಚಿತ್ರ ಸೆಲೆ: pickyourtrail.com, traveltriangle.com, bestpricetravel.com, atlasobscura.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: