ಹೊಗಳಿಕೆ ತೊಡಕಾದಾಗ

–  ಪ್ರಕಾಶ್ ಮಲೆಬೆಟ್ಟು.

ಮನೆಯಲ್ಲಿ ಇಬ್ಬರು ಪುಟ್ಟ ಮಕ್ಕಳು. ಒಬ್ಬಳು ದೊಡ್ಡವಳು ಮತ್ತೊಬ್ಬಳು ಚಿಕ್ಕವಳು. ಒಮ್ಮೆ ದೊಡ್ಡವಳು ಒಂದು ಒಳ್ಳೆಯ ಹಾಡನ್ನು ಹಾಡುತ್ತಾಳೆ. ಹಾಡನ್ನು ಕೇಳಿದ ಅವಳಮ್ಮ ಹೇಳುತ್ತಾರೆ, ‘ಮಗಳೇ ತುಂಬಾ ಚೆನ್ನಾಗಿ ಹಾಡನ್ನು ಹಾಡುತ್ತೀಯ. ನನಗೆ ತುಂಬಾ ಇಶ್ಟವಾಯಿತು’ ಎಂದು. ತಕ್ಶಣ ಚಿಕ್ಕವಳು ತನ್ನ ಮುಕ ಊದಿಸಿಕೊಂಡು ಅಳುಮೋರೆ ಮಾಡಿಕೊಂಡು, ‘ಯಾಕೆ ಅಮ್ಮ, ನನ್ನ ಹಾಡು ಇಶ್ಟ ಆಗಲ್ವ ನಿನಗೆ? ಅವಳ ಹಾಡು ಮಾತ್ರ ಇಶ್ಟ ಆಯ್ತಾ’ ಅಂತ ಕೋಪಿಸಿಕೊಳ್ಳುತ್ತಾಳೆ. ಇಲ್ಲಿ ಆ ತಾಯಿಯು ಪರಿಸ್ತಿತಿಯನ್ನು ನಿಬಾಯಿಸುವುದಾದರೂ ಹೇಗೆ? ‘ಹಾಗಲ್ಲ ಮಗಳೇ, ನೀನು ಕೂಡ ತುಂಬಾ ಚೆನ್ನಾಗಿ ಹಾಡು ಹಾಡುತ್ತೀಯ. ನಾನು ಯಾವಾಗ ಹೇಳಿದೆ ನಿನ್ನ ಹಾಡು ಚೆನ್ನಾಗಿಲ್ಲ ಅಂತ’, ಎಂದು ಹೇಳಿ ಸಮಾದಾನ ಪಡಿಸಲು ಪ್ರಯತ್ನ ಪಡುತ್ತಾರೆ. ಆ ಮಗಳಿಗೋ ಸಲ್ಪ ಹಟ ಹೆಚ್ಚೇ ಇರುತ್ತದೆ. ಕಡೆಗೂ ಪೆಟ್ಟು ತಿನ್ನುವ ತನಕ ಅವಳ ಹಟ ಬೆಳೆಯುತ್ತದೆ. ಹಾಗೆ ಅಕ್ಕನ ಬಗೆಗೆ ಸ್ವಲ್ಪ ಮತ್ಸರ ಕೂಡ ಚಿಗುರೊಡೆಯುತ್ತದೆ. ಇಂತಹ ಪರಿಸ್ತಿತಿ, ಮಕ್ಕಳಿರುವ ಎಲ್ಲರ ಮನೆಯಲ್ಲೂ ಎದುರಾಗುತ್ತದೆ. ತಂಗಿಯನ್ನು ಹೊಗಳಿದರೆ ಅಕ್ಕನಿಗೆ ಬೇಸರವಾಗುತ್ತದೆ. ತಮ್ಮನನ್ನು ಹೊಗಳಿದರೆ ಅಣ್ಣನಿಗೆ ಬೇಸರ, ಅಣ್ಣನನ್ನು ಹೊಗಳಿದರೆ ತಮ್ಮನಿಗೆ ಕೋಪ. ಆ ಅಮ್ಮ ದೊಡ್ಡ ಮಗಳನ್ನು ಹೊಗಳಿದಳಶ್ಟೇ ಹೊರತು, ಚಿಕ್ಕ ಮಗಳಿಗೆ ತೆಗಳಿರಲಿಲ್ಲ.

ಇದರ ಬಗ್ಗೆ ಯೋಚಿಸಿದಾಗ ನನಗೆ ಹೊಳೆದದ್ದು, ನಮ್ಮನ್ನು ಕಾಡುವ ಅಬದ್ರತೆಯೇ ಇದಕ್ಕೆ ಮೂಲ ಕಾರಣ! ಮೊದಲ ಮಗುವನ್ನು ಪ್ರೀತಿಯ ಹೊಳೆಯಲ್ಲಿ ತೇಲಿಸಿಬಿಡುತ್ತೇವೆ. ಅಪ್ಪ ಅಮ್ಮನ ಹೆಚ್ಚಿನ ಪ್ರೀತಿಯ ಸವಿಯನ್ನು ಅನುಬವಿಸುವುದು ಆ ಮೊದಲ ಮಗುವಾದರೂ, ಅತಿ ಹೆಚ್ಚಿನ ಕಶ್ಟವನ್ನು ಅನುಬವಿಸುವುದು ಕೂಡ ಮೊದಲ ಮಗುವೇೆ ಎನ್ನುವ ಮಾತು ಕೂಡ ಅಶ್ಟೇ ದಿಟ. ತನಗೆ ಒಬ್ಬ ತಮ್ಮನೋ, ತಂಗಿಯೋ ಬಂದ ಮೇಲೆ ಸಹಜವಾಗಿಯೇ ಅವನ/ಅವಳ ಮನಸಿನಲ್ಲಿ ಅಬದ್ರತೆ ಕಾಡತೊಡಗುತ್ತದೆ. ಹೆತ್ತವರು ಕೂಡ ಅಶ್ಟೇ, ಚಿಕ್ಕಮಗು ಎನ್ನುವ ಕಾಳಜಿಯಿಂದಾಗಿ, ಯಾರೇ ತಪ್ಪು ಮಾಡಿದರೂ ಮೊದಲು ದೊಡ್ಡ ಮಗ/ಮಗಳನ್ನು ಬೈಯಲು ತೊಡಗುತ್ತಾರೆ. ಇನ್ನು ಚಿಕ್ಕ ಮಕ್ಕಳ ಕತೆ ಏನೆಂದರೆ; ಮೊದಲನೆಯದಾಗಿ, ಕೆಲವು ಬಾವನೆಗಳನ್ನು ಅರ‍್ತ ಮಾಡಿಕೊಳ್ಳುವ ವಯಸ್ಸು ಅವರದಾಗಿರುವುದಿಲ್ಲ. ಎರಡನೆಯದಾಗಿ ಅಪ್ಪ-ಅಮ್ಮ ಎಲ್ಲದಕ್ಕೂ ನೀನು ಅಣ್ಣನಂತೆ ಆಗಬೇಕು, ಇಲ್ಲವೇ ಅಕ್ಕನಂತೆ ಆಗಬೇಕು ಅಂತ ಹೇಳುವಾಗ ಸಹಜವಾಗಿಯೇ ಒಂದು ಅಬದ್ರತಾ ಬಾವ, ಮತ್ಸರ ಅವರ ಮನಸ್ಸಿನೊಳಗೆ ಮೊಳಕೆ ಒಡೆಯಲಾರಂಬಿಸುತ್ತದೆ. ಹಾಗಾಗಿ ಹೊಗಳಿಕೆ ಎನ್ನುವುದು ಇಲ್ಲಿ ಸಮಸ್ಯೆಯ ರೂಪ ತಾಳತೊಡಗುತ್ತದೆ.

ಹಾಗಾದರೆ ಇಂತಹ ಸನ್ನಿವೇಶಗಳನ್ನು ಹೆತ್ತವರು ಹೇಗೆ ನಿಬಾಯಿಸಬಹುದು? ಇಲ್ಲಿ ಹೆತ್ತವರು ನೆನಪಿಡಬೇಕಾದ ವಿಶಯವೇನೆಂದರೆ, ಮಕ್ಕಳ ಮನಸ್ಸು ಒಂದು ಕಾಲಿಯಿರುವ ಹಾರ‍್ಡ್ ಡಿಸ್ಕ್ ತರಹ. ಅಲ್ಲಿ ನಾವು ಒಳ್ಳೆಯ ವಿಶಯವನ್ನು ತುಂಬಬಹುದು ಹಾಗೆಯೇ ಕೆಟ್ಟದನ್ನೂ ಕೂಡ!. ಮಕ್ಕಳು ಚಿಕ್ಕವರಿರುವಾಗ, ನಾವು ಅವರ ಮನಸಿನಲ್ಲಿ ಏನನ್ನು ತುಂಬಿಸುತ್ತೀವೋ, ಅದು ಅವರು ಜೀವನದಾದ್ಯಂತ ಹೇಗಿರುತ್ತಾರೆ ಎನ್ನುವುದಕ್ಕೆ ಒಂದು ಮುನ್ನುಡಿ ಎನ್ನುವುದನ್ನು ನಾವು ಮರೆಯಬಾರದು. ಚಿಕ್ಕವರಿರುವಾಗಲೇ ಸಹಿಶ್ಣುತೆಯ(ಎಲ್ಲರ ನಿಲುವನ್ನು ಗೌರವಿಸುವ/ಸಹಿಸುವ) ಗುಣವನ್ನು ಅವರು ಮೈಗೂಡಿಸಿಕೊಳ್ಳುವಂತೆ ನಾವು ಮಾಡದಿದ್ದಲ್ಲಿ, ಬೇರೆಯವರನ್ನು ಹೊಗಳಿದರೆ ಅದನ್ನು ಸಹಿಸಲಾಗದ ಗುಣ ಅವರಲ್ಲಿ ಬೆಳೆಯುತ್ತದೆ. ಆ ಪುಟ್ಟ ಮಕ್ಕಳಿಗೆ ನಾವು ತಾಳ್ಮೆಯಿಂದ ಅರ‍್ತ ಮಾಡಿಸಬೇಕು. ಮೊದಲಿಗೆ ಅಕ್ಕನನ್ನು ಇಲ್ಲವೇ ಅಣ್ಣನನ್ನು ಹೊಗಳಿದ ಮಾತ್ರಕ್ಕೆ ನೀನು ಹೊಗಳಿಕೆಗೆ ಯೋಗ್ಯವಲ್ಲ ಎಂದಂತಲ್ಲ ಎಂಬ ವಿಶಯ ಅವರಿಗೆ ಮನವರಿಕೆ ಮಾಡಿಕೊಡಬೇಕು. ಪ್ರತಿಯೊಬ್ಬರಿಗೂ ಬೇರೆ ಬೇರೆಯ ಗುಣಗಳಿರುತ್ತವೆ. ಹಾಗಾಗಿ ಮಕ್ಕಳ ನಡುವೆ ನಾವು ಸುತರಾಂ ಹೋಲಿಕೆ ಮಾಡಬಾರದು. ‘ತಮ್ಮನನ್ನು ನೋಡಿ ಕಲಿ, ಇಲ್ಲವೇ ಅಕ್ಕನನ್ನು ನೋಡಿ ಕಲಿ. ಅಣ್ಣನಂತೆ ಆಗಬೇಕು’ ಹೀಗೆ ಇಂತಹ ಮಾತುಗಳನ್ನು ಬಳಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಅಣ್ಣನನ್ನು, ಅಕ್ಕನನ್ನು , ಹಾಗೆ ತಮ್ಮನನ್ನು ಮತ್ತು ತಂಗಿಯನ್ನು ನೋಡಿ ಕಲಿಯಬೇಕಾದರೆ, ಮೊದಲಿಗೆ ಆ ಪುಟ್ಟ ಮಕ್ಕಳ ಮನಸಿನಲ್ಲಿ ಅಬದ್ರತಾ ಬಾವನೆಗಳು ತೊಲಗಿ ಅಲ್ಲಿ ಪ್ರೀತಿಯ ಬಾವನೆ ಮೂಡಬೇಕು. ಈ ಕಾರ‍್ಯದಲ್ಲಿ ಅಪ್ಪ-ಅಮ್ಮ ಮಹತ್ವದ ಪಾತ್ರ ನಿರ‍್ವಹಿಸಬೇಕಾಗುತ್ತದೆ. ‘ಮಕ್ಕಳು ಒಬ್ಬರನೊಬ್ಬರು ಗೌರವಿಸಿಕೊಂಡು ಪ್ರೀತಿಯಿಂದ ಬೆಳೆಯುವುದು, ನಮ್ಮ ವರ‍್ತನೆಯ ಮೇಲೆ ಅವಲಂಬಿತವಾಗಿರುತ್ತದೆ’ ಎನ್ನುವುದನ್ನು ಹೆತ್ತವರು ಮರೆಯಬಾರದು.

ಬೇರೆಯವರನ್ನು ಹೊಗಳಿದರೆ ಬೇಸರ ಮಾಡಿಕೊಳ್ಳದೆ, ಚಿಂತನೆಯ ಮನೋಬಾವವನ್ನು ಬೆಳೆಸಿಕೊಳ್ಳಲು ಮಕ್ಕಳನ್ನು ಹುರಿದುಂಬಿಸಬೇಕು. ಅಂದರೆ, ಅವನನ್ನು ಹೊಗಳಿದ್ದಾರೆ, ಆ ಹೊಗಳಿಕೆಯನ್ನು ತಾನೂ ಕೂಡ ಪಡೆಯಲು ಪ್ರಯತ್ನ ಮಾಡಬೇಕು. ‘ತನ್ನಲ್ಲಿ ಯಾವ ಕೊರತೆ ಇದೆ? ಅದನ್ನು ಸರಿಮಾಡಿಕೊಳ್ಳಲು ತಾನು ಯಾವ ಬಗೆಯ ಪ್ರಯತ್ನ ಪಡಬೇಕು?’ ಎನ್ನುವ ವಿಚಾರ ಮಕ್ಕಳ ಮನದಲ್ಲಿ ಬೆಳೆಯಲು ಮೊದಲು ನಾವು ಹುರಿದುಂಬಿಸಬೇಕು. ಇನ್ನು ಬಾಲ್ಯದಲ್ಲಿ ಇನ್ನೊಬ್ಬರನ್ನು ಹೊಗಳುವ, ಒಪ್ಪಿಕೊಳ್ಳುವ ಗುಣವನ್ನು ಮಕ್ಕಳಲ್ಲಿ ಬೆಳೆಸಿದರೆ, ಮುಂದೆ ಜೀವನದಲ್ಲಿ ಆ ರೀತಿಯ ಸನ್ನಿವೇಶಗಳನ್ನು ಎದುರಿಸುವಾಗ, ಆ ಗುಣ ನೆರವಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

(ಚಿತ್ರ ಸೆಲೆ: piqsels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: