ಚುಟುಕು ಕತೆಗಳು

– ಕಾಂತರಾಜು ಕನಕಪುರ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಬಣ್ಣನೆ

ಚಂದ್ರನ ವದನವನ್ನು ರಮಣೀಯವಾಗಿ ಬಣ್ಣಿಸುತಿದ್ದ ಕವಿಪುಂಗವ, ಮೊಡವೆ ಮೂಡಿದ್ದ ಮಡದಿಯ ಮೊಗವನ್ನು ಮೂದಲಿಸಿದ.

***

ವಿರೂಪ

ಪ್ರೀತಿಸಿದವಳ ಜೊತೆಯಲ್ಲಿ ವಿಶ್ವವಿಕ್ಯಾತ ಐತಿಹಾಸಿಕ ಸ್ತಳಕ್ಕೆ ಬಂದಿದ್ದವನು ನೆನಪಿಗಿರಲಿ ಎಂದು, ತನ್ನ ಮತ್ತು ತನ್ನವಳ ಹೆಸರನ್ನು ಜೊತೆಗೂಡಿಸಿ ದಾಕಲು ಮಾಡಿದ್ದ. ಕಾಲಾಂತರದಲ್ಲಿ ಅದ್ಯಾಪಕನಾಗಿ ತನ್ನ ಶಿಶ್ಯಕೋಟಿಯೊಂದಿಗೆ ಅಲ್ಲಿಗೆ ಬೇಟಿ ನೀಡಿ ಐತಿಹಾಸಿಕ ಸ್ತಳಗಳನ್ನು ವಿರೂಪಗೊಳಿಸಬಾರದೆಂದು ಬುದ್ದಿ ಹೇಳಿದ.

***

ವಾಸ್ತವ

ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ತನ್ನೆಲ್ಲಾ ಸುಕ ಸಂತೋಶಗಳನ್ನು ತೊರೆದು, ತನ್ನ ಇಡೀ ಬದುಕನ್ನು ಮಗನಿಗಾಗಿ ಮುಡುಪಿಟ್ಟ ತಾಯಿಯೊಬ್ಬಳು, ಹರೆಯದ ತನ್ನ ಮಗ ಯಾವುದೋ ಹುಡುಗಿಗೆ “ನೀನಿಲ್ಲದೇ ನಾನು ಬದುಕಿರಲಾರೆ” ಎನ್ನುತ್ತಿದ್ದುದ್ದನ್ನು ಕೇಳಿ ಮೂಕಳಾದಳು.

***

ಅಮ್ಮ

ಬಂದು ಬಳಗದವರಿಂದ ಬಂಜೆ ಎಂದು ನಿಂದನೆಗೊಳಗಾದ ಅವಳು, ತಬ್ಬಲಿ ಮನೆಯ ಮಕ್ಕಳಿಗೆ ಅಮ್ಮನಾದಳು.

***

ದಾನ

ಬದುಕಿನುದ್ದಕ್ಕೂ ಎಂಜಲು ಕೈಯಲ್ಲಿ ಕಾಗೆ ಓಡಿಸದ ಹುಟ್ಟಾ ಜೀನನೊಬ್ಬ, ಅಪಗಾತದಲ್ಲಿ ಮರಣಹೊಂದಿ ಅಂಗಾಗ ದಾನ ಮಾಡಿ ಹಲವರ ಬದುಕಿಗೆ ಬೆಳಕಾದ.

***

ಬೋದನೆ

ಅವರು ಆ ವಿದ್ಯಾಕೇಂದ್ರದ ಹೆಸರಾಂತ ಅದ್ಯಾಪಕರು. ತರಗತಿಯಲ್ಲಿ ಸಮಾನತೆಯ ಬಗ್ಗೆ ಅತ್ಯುತ್ತಮವಾಗಿ ಉಪನ್ಯಾಸ ನೀಡುತ್ತಿದ್ದ ಆ ಅದ್ಯಾಪಕರ ಮಾತುಗಳ ಮೋಹಕತೆಗೆ ಒಳಗಾದ ಶಿಶ್ಯನೊಬ್ಬ ಅವರ ಮನೆಗೆ ಬಂದ.

ಅಲ್ಲಿ ಅದ್ಯಾಪಕರಿಂದ ಅವನಿಗೆ ಎದುರಾದ ಮೊದಲ ಪ್ರಶ್ನೆ, “ಏನಯ್ಯಾ ನೀನು, ದೇವರ ಮನೆ ಇದೆ ಇಲ್ಲೀವರೆಗೂ ಬಂದ್ಬಿಟ್ಯಾ?”

( ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: