ನಾವೇಕೆ ಬಯ್ಯುತ್ತೇವೆ? – 12ನೆಯ ಕಂತು

– ಸಿ.ಪಿ.ನಾಗರಾಜ.

(ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು)

ಕಾಮದ ನಂಟಿನ ಬಯ್ಗುಳಗಳು

ಗಂಡು ಹೆಣ್ಣಿನ ಜನನೇಂದ್ರಿಯಗಳನ್ನು ಮತ್ತು ಜನನೇಂದ್ರಿಯಗಳಿಂದ ನಡೆಯುವ ದೇಹಗಳ ಮಿಲನದ ಕ್ರಿಯೆಯನ್ನು ಹೆಸರಿಸಿ ಆಡುವ ಬಯ್ಗುಳಗಳನ್ನು ಕಾಮದ ನಂಟಿನ ಬಯ್ಗುಳಗಳೆಂದು ಕರೆಯುತ್ತಾರೆ.

ಉದಾಹರಣೆ:

1. ನಿನ್ ತಾಯಿನಾ…

2. ನಿನ್ ಹೆಂಡ್ತಿನಾ…

ಬಯ್ಯುವ ಸನ್ನಿವೇಶದಲ್ಲಿ ಉಚ್ಚಾರಣೆಗೊಳ್ಳುವ ಪೂರ‍್ಣ ವಾಕ್ಯವನ್ನು ನಾನು ಬರೆದಿಲ್ಲ. ಇದಕ್ಕೆ ಕಾರಣವನ್ನು ತಿಳಿಯಲು ನಾವೆಲ್ಲರೂ ಅಂದರೆ ಕನ್ನಡ ನುಡಿಯನ್ನಾಡುವವರು ಕಾಮದ ಬಗ್ಗೆ ಹೊಂದಿರುವ ನಿಲುವುಗಳನ್ನು ಒಮ್ಮೆ ಒರೆಹಚ್ಚಿ ನೋಡಬೇಕು. ನಮ್ಮ ದೇಹದ ಅಂಗಗಳನ್ನು ಹೆಸರಿಸುವ ತಲೆ, ಕಣ್ಣು, ಕಿವಿ, ಮೂಗು, ನಾಲಗೆ, ಬಾಯಿ, ಕಯ್, ಕಾಲು, ಹೊಟ್ಟೆ, ಎದೆ ಮುಂತಾದ ಪದಗಳನ್ನು ದಿನನಿತ್ಯದ ಮಾತಿನ ಸನ್ನಿವೇಶಗಳಲ್ಲಿ ನಾವೆಲ್ಲರೂ ಯಾವ ಅಡೆತಡೆಯಿಲ್ಲದೆ ಉಚ್ಚರಿಸುವಂತೆ ನಮ್ಮ ದೇಹದ ಜನನೇಂದ್ರಿಯಗಳ ಹೆಸರನ್ನು ಹೇಳಲು ಹಿಂಜರಿಯುತ್ತೇವೆ.

ಏಕೆಂದರೆ ದಿನ ನಿತ್ಯದ ಮಾತುಕತೆಯಲ್ಲಿ ಕಾಮದ ಪದಗಳನ್ನು (Sexual Words) ಆಡಬಾರದೆಂಬ ಸಾಮಾಜಿಕ ಮತ್ತು ಸಾಂಸ್ಕ್ರುತಿಕವಾದ ಕಟ್ಟಲೆಯು ಸಾವಿರಾರು ವರುಶಗಳಿಂದಲೂ ನುಡಿ ಸಮುದಾಯದಲ್ಲಿ ಚಾಲ್ತಿಯಲ್ಲಿದೆ. ಜನನೇಂದ್ರಿಯಗಳನ್ನು ಹೆಸರಿಸುವ ಪದಗಳನ್ನು ಮತ್ತು ಅವುಗಳ ಕ್ರಿಯೆಗಳನ್ನು ಮಾತುಕತೆಯಲ್ಲಿ ಬಳಸುವುದು ದೊಡ್ಡ ತಪ್ಪು ಎಂದು ನುಡಿ ಸಮುದಾಯ ಪರಿಗಣಿಸಿದೆ.

ಆದುದರಿಂದಲೇ ತಂದೆ ತಾಯಿಗಳು ತಮ್ಮ ಮಕ್ಕಳೊಡನೆ, ಗುರುಗಳು ತಮ್ಮ ವಿದ್ಯಾರ‍್ತಿಗಳೊಡನೆ ಮತ್ತು ಹಿರಿಯರು ಕಿರಿಯರೊಡನೆ ಕಾಮದ ಸಂಗತಿಗಳನ್ನು ಕುರಿತು ಮಾತನಾಡುವುದಿಲ್ಲ. ರೇಡಿಯೊ ಮತ್ತು ದೂರದರ‍್ಶನದ ಕಾರ‍್ಯಕ್ರಮಗಳಲ್ಲಿ ಬಹಿರಂಗವಾಗಿ ಕಾಮದ ಪದಗಳನ್ನು ಬಳಸಿಕೊಂಡು ಚರ‍್ಚೆ ಮಾಡುವುದಿಲ್ಲ. ಇನ್ನಿತರ ಸಮೂಹ ಮಾದ್ಯಮಗಳಲ್ಲಿಯೂ ಕಾಮಕ್ಕೆ ಸಂಬಂದಿಸಿದ ಪದಗಳನ್ನು ಪ್ರಕಟಿಸಬಾರದು ಎಂಬ ನಿಲುವು ಪರಂಪರಾಗತವಾಗಿ ಕನ್ನಡ ನುಡಿ ಸಮುದಾಯದ ಜನಮನದಲ್ಲಿ ನೆಲೆಸಿದೆ.

ಕಾಮದ ಸಂಗತಿಯ ಚರ‍್ಚೆ ಬಂದಾಗ ನಮ್ಮ ಇಚ್ಚೆಗೆ ಬಂದಂತೆ ಕಾಮದ ಪದಗಳನ್ನು ಆಡುವ ಸ್ವಾತಂತ್ರ್ಯ ನಮಗೆ ಇರುವುದಿಲ್ಲ. ಏಕೆಂದರೆ ಸಾಂಸ್ಕ್ರುತಿಕ ಕಟ್ಟುಕಟ್ಟಲೆಗಳು ಕಾಮದ ನಂಟಿನ ಮಾತುಗಳನ್ನು ನಿಯಂತ್ರಿಸುತ್ತಿವೆ. ಕಾಮದ ನಂಟಿನ ಬಗೆಗೆ ಕನ್ನಡ ನುಡಿ ಸಮುದಾಯವನ್ನು ಒಳಗೊಂಡಂತೆ ಜಗತ್ತಿನಲ್ಲಿ ಬಳಕೆಯಲ್ಲಿರುವ ಎಲ್ಲ ನುಡಿ ಸಮುದಾಯಗಳಲ್ಲಿಯೂ ಒಂದಲ್ಲ ಒಂದು ಬಗೆಯ ಕಟ್ಟಲೆಗಳು ಇದ್ದೇ ಇರುತ್ತವೆ. ಇದನ್ನು ‘ಟ್ಯಾಬು-Taboo’ ಎಂದು ಕರೆಯುತ್ತಾರೆ.

ಕೆಲವು ಬಗೆಯ ಮಾತುಗಳನ್ನು ಮತ್ತು ವರ‍್ತನೆಗಳನ್ನು ಜನರು ತಮ್ಮ ನಿತ್ಯ ಜೀವನದ ನಡೆನುಡಿಗಳಲ್ಲಿ ತಡೆಹಿಡಿಯಬೇಕೆಂದು ಇಲ್ಲವೇ ಹತ್ತಿಕ್ಕಬೇಕೆಂದು ಮಾಡಿರುವ ಸಾಮಾಜಿಕ ಮತ್ತು ಸಾಂಸ್ಕ್ರುತಿಕ ಕಟ್ಟಲೆಯನ್ನು ‘ಟ್ಯಾಬು-Taboo’ ಎಂದು ಕರೆಯುತ್ತಾರೆ.

ಜಗತ್ತಿನಲ್ಲಿರುವ ಪ್ರತಿಯೊಂದು ನುಡಿ ಸಮುದಾಯದ ನಡೆನುಡಿಯಲ್ಲಿಯೂ ಅಂದರೆ ಸಂಸ್ಕ್ರುತಿಯಲ್ಲಿಯೂ “ಕೆಲವೊಂದು ಬಗೆಯ ಮಾತುಗಳನ್ನು ಆಡಬಾರದು, ನೋಟಗಳನ್ನು ನೋಡಬಾರದು, ಉಣಿಸು ತಿನಸುಗಳನ್ನು ಸೇವಿಸಬಾರದು ಮತ್ತು ಕೆಲಸಗಳನ್ನು ಮಾಡಬಾರದು” ಎಂಬ ಕಟ್ಟುಕಟ್ಟಲೆಗಳಿರುತ್ತವೆ. ಪ್ರತಿಯೊಂದು ನುಡಿ ಸಮುದಾಯದ ಸಂಸ್ಕ್ರುತಿಯಲ್ಲಿಯೂ ಈ ಬಗೆಯ ಕಟ್ಟುಕಟ್ಟಲೆಗಳು ಆಹಾರ ಸೇವನೆಯ ವಿಚಾರದಲ್ಲಿ ಬೇರೆ ಬೇರೆ ಬಗೆಗಳಲ್ಲಿ ಇದ್ದರೂ ಗಂಡು ಹೆಣ್ಣಿನ ಕಾಮಕ್ಕೆ ಸಂಬಂದಪಟ್ಟಂತೆ ಸರಿಸುಮಾರಾಗಿ ಒಂದೇ ಬಗೆಯಲ್ಲಿವೆ.

ಏಕೆಂದರೆ ‘ಕಾಮ’ ಎಂಬುದು ಜಗತ್ತಿನಲ್ಲಿ ಮಾನವ ಜೀವಿಯನ್ನು ಒಳಗೊಂಡಂತೆ ಎಲ್ಲ ಬಗೆಯ ಪ್ರಾಣಿ, ಹಕ್ಕಿ, ಕ್ರಿಮಿ-ಕೀಟಗಳ ಪಾಲಿಗೆ ದೇಹದ ಹಸಿವಿನಂತೆಯೇ ಸಹಜವಾದ ಒಂದು ಸಂಗತಿಯಾಗಿದೆ. ಬದುಕಿ ಉಳಿಯಲು ಆಹಾರ ಸೇವನೆಯ ಮೂಲಕ ಹೇಗೆ ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕೋ ಅಂತೆಯೇ ಹೆಣ್ಣು ಗಂಡು ಜೀವಿಗಳು ಪರಸ್ಪರ ಕೂಡುವಿಕೆಯಿಂದ ತಮ್ಮ ಮಯ್ ಮನದ ಕಾಮದ ಬಯಕೆಯನ್ನು ಈಡೇರಿಸಿಕೊಳ್ಳುವುದು ಮತ್ತು ತಮ್ಮ ಸಂತತಿಯನ್ನು ಮುಂದುವರಿಸುವುದು ನಿಸರ‍್ಗ ಸಹಜವಾದ ಸಂಗತಿಯಾಗಿದೆ. ಆದರೆ ಅತ್ತ ನಿಸರ‍್ಗದ ನೆಲೆಯಲ್ಲಿ ಒಂದು ಪ್ರಾಣಿಯಾಗಿರುವ ಮಾನವರು, ಇತ್ತ ತಾವೇ ಕಟ್ಟಿಕೊಂಡಿರುವ ಜಾತಿ, ಮತ ಮತ್ತು ದೇವರುಗಳಿಂದ ಕೂಡಿದ ಒಕ್ಕೂಟಗಳ ನಡುವೆ ಸಾಮಾಜಿಕ ಪ್ರಾಣಿಯಾಗಿಯೂ ಬಾಳುತ್ತಿದ್ದಾರೆ. ಆದ್ದರಿಂದ ಮಾನವರ ಪಾಲಿಗೆ ಕಾಮ ಎಂಬುದು ಇತರ ಜೀವಿಗಳಂತೆ ಕೇವಲ ಮಯ್ ಮನದ ಬಯಕೆಯನ್ನು ಈಡೇರಿಸಿಕೊಳ್ಳುವ ಮತ್ತು ಸಂತಾನವನ್ನು ಪಡೆಯುವ ಕ್ರಿಯೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಮಾನವ ಸಮುದಾಯದ ಸಾಮಾಜಿಕ, ಮತೀಯ, ರಾಜಕೀಯ ಮತ್ತು ಸಂಪತ್ತಿನ ವ್ಯವಸ್ತೆಯನ್ನು ರೂಪಿಸುವುದರಲ್ಲಿ ಕಾಮದ ನಂಟಿನ ಬಗೆಗಿನ ರೀತಿನೀತಿಗಳು ಬಹು ದೊಡ್ಡ ಪಾತ್ರವನ್ನು ವಹಿಸಿವೆ.

ಜಗತ್ತಿನ ಮಾನವ ಸಮುದಾಯದಲ್ಲಿ ಬುಡಕಟ್ಟುಗಳನ್ನು ಒಳಗೊಂಡಂತೆ ಪ್ರತಿಯೊಂದು ಸಮಾಜದಲ್ಲಿಯೂ ಕಾಮದ ನಂಟಿನ ಬಗ್ಗೆ ಹಲವಾರು ಬಗೆಯ ಕಟ್ಟುಪಾಡುಗಳಿರುತ್ತವೆ. ಜಾತಿ, ಮತ ಮತ್ತು ಸಂಪತ್ತಿನ ಮಾನದಂಡವಾದ ವರ‍್ಗದ ಅಂತಸ್ತು ಮತ್ತು ಕುಟುಂಬಗಳಿಗೆ ಸೀಮಿತವಾಗಿರುವ ಸಂಪ್ರದಾಯಗಳು ಗಂಡು ಹೆಣ್ಣಿನ ಕಾಮದ ನಂಟಿಗೆ ಪೂರಕವಾದ ಸಂಗತಿಗಳಾಗುತ್ತವೆ.

ಮಾನವ ಸಮುದಾಯಗಳು ರೂಪಿಸಿರುವ ಈ ನೀತಿ ನಿಯಮಗಳನ್ನು ಲೆಕ್ಕಿಸದೆ, ಸಮಾಜದ ಕಟ್ಟುಕಟ್ಟಲೆಗಳನ್ನು ಮೀರಿ ಗಂಡು ಹೆಣ್ಣು ಕಾಮದ ನಂಟನ್ನು ಪಡೆಯುವುದನ್ನು ಮತ್ತು ಮಕ್ಕಳನ್ನು ಹೆರುವುದನ್ನು ಬಹು ದೊಡ್ಡ ತಪ್ಪೆಂದು ಜನಸಮುದಾಯ ನಿರ‍್ಣಯಿಸಿ, ಅಂತಹ ಕಾಮದ ನಂಟನ್ನು ಸಾಮಾಜಿಕ ಕಳಂಕವೆಂದು ಪರಿಗಣಿಸುತ್ತದೆ. ಆದ್ದರಿಂದ ಕಾಮದ ಪದಗಳೇ ಬಯ್ಗುಳಗಳಾಗಿ ಬಳಕೆಗೊಳ್ಳುತ್ತವೆ.

ಕಾಮದ ಪದಗಳು ಬಯ್ಗುಳಗಳಾಗಿ ರೂಪುಗೊಳ್ಳಲು ಕಾರಣವಾದ ಸಂಗತಿಯನ್ನು ಮಾನವ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕ್ರುತಿಕ ಚರಿತ್ರೆಯ ಹಿನ್ನೆಲೆಯಿಂದ ತಿಳಿಯಬೇಕು.

ಅಲೆಮಾರಿಯಾಗಿದ್ದ ಮಾನವ ಗುಂಪುಗಳು ಒಂದೆಡೆ ನಿಂತು ಬೇಸಾಯವನ್ನು ಮಾಡತೊಡಗಿದಾಗ ಕುಟುಂಬಗಳು ರಚನೆಗೊಂಡವು. ಈ ಕುಟುಂಬಗಳಲ್ಲಿ ತಾಯಿಯೇ ಮೇಟಿಯಾಗಿದ್ದಳು. ಹುಟ್ಟುವ ಮಕ್ಕಳು ಮತ್ತು ಉಳುಮೆ ಮಾಡುವ ಬೂಮಿಯು ಸಮುದಾಯದ ಒಟ್ಟು ಆಸ್ತಿಯಾಗಿದ್ದವು. ಮಕ್ಕಳು ತಾಯಿಯ ಹೆಸರಿನ ಕುಲಕ್ಕೆ ಸೇರದವರಾಗಿದ್ದು, ಆ ಕುಲದ ಹೆಸರನ್ನು ಪಡೆಯುತ್ತಿದ್ದರು. ಹುಟ್ಟುವ ಮಕ್ಕಳ ತಂದೆ ಯಾರು ಎಂಬುದು ದೊಡ್ಡ ಸಂಗತಿಯಾಗಿರಲಿಲ್ಲ. ಆಗ ಹೆಣ್ಣಿನ ಕಾಮದ ನಂಟಿಗೆ ಯಾವುದೇ ಬಗೆಯ ಕಟ್ಟುಪಾಡುಗಳು ಇರಲಿಲ್ಲ.

ಅನಂತರದ ಸಾವಿರಾರು ವರುಶಗಳ ಜನಜೀವನದಲ್ಲಿ ಅನೇಕ ಪಲ್ಲಟಗಳು ಉಂಟಾಗಿ ಉಳುವ ಬೂಮಿಯ ಒಡೆತನವು ಒಟ್ಟು ಸಮುದಾಯದಿಂದ ಕಯ್ ತಪ್ಪಿಹೋಗಿ, ಗಂಡಸರ ಹಿಡಿತಕ್ಕೆ ಸಿಲುಕಿದಾಗ, ಆಸ್ತಿಯ ಮೇಲೆ ಗಂಡಸಿನ ಒಡೆತನ ಉಂಟಾಯಿತು. ಗಂಡು ತನ್ನ ಬೀಜದಿಂದ ಹುಟ್ಟುವ ಮಕ್ಕಳಿಗೆ ಆಸ್ತಿಯ ಒಡೆತನದ ಹಕ್ಕು ದೊರೆಯಬೇಕೆಂಬ ಉದ್ದೇಶಕ್ಕೆ ಒಳಗಾಗಿ, ಹೆಣ್ಣಿಗೆ ಶೀಲದ ಎಲ್ಲೆಯನ್ನು ಹಾಕಿ, ಅವಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ. ಶೀಲವೆಂದರೆ ಒಂದು ಹೆಣ್ಣು ಯಾವ ಗಂಡಿನೊಡನೆ ಕಾಮದ ನಂಟನ್ನು ಹೊಂದಬೇಕು ಇಲ್ಲವೇ ಹೊಂದಬಾರದು ಎಂಬ ಕಟ್ಟಲೆಗೆ ಅನುಗುಣವಾದ ನಡೆನುಡಿ. ಈ ಕಟ್ಟಲೆಯನ್ನು ಮೀರಿದವಳು ಸಾಮಾಜಿಕ ಕಳಂಕಕ್ಕೆ ಗುರಿಯಾಗುತ್ತಾಳೆ.

ಈ ರೀತಿ ಆಸ್ತಿಯ ಹಕ್ಕುದಾರನಾದ ಗಂಡು ತಾನು ಹೆಣ್ಣಿನೊಡನೆ ಪಡೆಯುವ ಕಾಮದ ನಂಟಿಗೆ ಜಾತಿ,ಮತ ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ಹಾಕಿ, ಅವಳ ಚಲನವಲನಗಳನ್ನು ನಿಯಂತ್ರಿಸಿ, ಹೆಣ್ಣನ್ನು ತನ್ನ ಗುಲಾಮಳನ್ನಾಗಿಸಿಕೊಂಡ. ಆಸ್ತಿಯ ಹಕ್ಕು , ಹೆಣ್ಣಿನ ಮೇಲಿನ ಗಂಡಿನ ಒಡೆತನದ ಮತ್ತು ಗಂಡು ಮೇಲುಗಯ್ ಆಗಿರುವ ಕುಟುಂಬದ ರಚನೆಯ ಕಾರಣದಿಂದಾಗಿ ಕಾಮದ ನಂಟಿನ ಬಗ್ಗೆ ಹೆಚ್ಚಿನ ನಿಯಂತ್ರಣಗಳು ಜಾರಿಗೆ ಬಂದವು. ಹೆಣ್ಣಿನ ಕನ್ಯತ್ವ ಮತ್ತು ಶೀಲದ ಸುತ್ತ ಅತ್ಯಂತ ಕಟ್ಟುನಿಟ್ಟಾದ ಸಾಮಾಜಿಕ ಮತ್ತು ಸಾಂಸ್ಕ್ರುತಿಕ ಕಟ್ಟುಪಾಡುಗಳನ್ನು ರಚಿಸಿದ ಸಮುದಾಯಗಳಲ್ಲಿ ನಮ್ಮ ಕನ್ನಡ ನುಡಿ ಸಮುದಾಯವೂ ಒಂದಾಗಿದೆ.

ಸಮಾಜವು ರೂಪಿಸಿರುವ ಕಾಮದ ಕಟ್ಟುಪಾಡುಗಳನ್ನು ಮುರಿಯುವಂತಹ ಮಾತುಗಳು ಮತ್ತು ಕ್ರಿಯೆಗಳು ಸಾಮಾಜಿಕ ಕಳಂಕವೆನಿಸಿಕೊಳ್ಳುತ್ತವೆ. ಸಾಮಾಜಿಕ ಕಳಂಕವೆನಿಸಿದ ಕಾಮದ ನುಡಿಗಟ್ಟುಗಳೇ ಬಯ್ಗುಳಗಳಾಗಿ ರೂಪುಗೊಂಡು ಬಳಕೆಯಾಗುತ್ತಿವೆ.

ಕಾಮದ ನಂಟಿನ ಬಯ್ಗುಳಗಳಲ್ಲಿ ಹೆಚ್ಚಿನ ಬಯ್ಗುಳಗಳು ಹೆಣ್ಣಿನ ಶೀಲದ ಸುತ್ತಲೂ ಇರುತ್ತವೆ. ವ್ಯಕ್ತಿಯ ತಾಯಿಯ ಇಲ್ಲವೇ ಹೆಂಡತಿಯ ಶೀಲವನ್ನು ಕೆಡಿಸುವಂತಹ ಕಾಮದ ನಂಟಿನ ಬಯ್ಗುಳವು ಬಯ್ಯಿಸಿಕೊಂಡ ವ್ಯಕ್ತಿಯ ಕುಟುಂಬದ ಮರ‍್ಯಾದೆಯನ್ನೇ ಹಾಳುಮಾಡುವ ಉದ್ದೇಶವನ್ನು ಹೊಂದಿರುತ್ತವೆ. ಗಂಡಿನ ಗಂಡಸುತನವನ್ನು ಅಲ್ಲಗಳೆಯುವ ಮತ್ತು ಹೆಣ್ಣಿನ ಶೀಲವನ್ನು ಕಡೆಗಣಿಸುವ ಮಾತಿನ ಸನ್ನಿವೇಶಗಳಲ್ಲಿ ಹೆಚ್ಚಾಗಿ ಕಾಮದ ನಂಟಿನ ಬಯ್ಗುಳಗಳು ಬಳಕೆಯಾಗುತ್ತವೆ. ಸಾಮಾಜಿಕವಾದ ಕಟ್ಟುಪಾಡುಗಳನ್ನು ಮುರಿಯುವ ಸನ್ನಿವೇಶಗಳಲ್ಲಿ ಮತ್ತು ಸಮಾಜ ಒಪ್ಪಿತವಾದ ನಡೆನುಡಿಗಳನ್ನು ಲೆಕ್ಕಿಸದೆ ತಮ್ಮ ಇಚ್ಚೆಗೆ ಬಂದಂತೆ ವರ‍್ತಿಸುವ ವ್ಯಕ್ತಿಗಳು ಹೆಚ್ಚಾಗಿ ಕಾಮದ ನಂಟಿನ ಬಯ್ಗುಳಗಳನ್ನು ಆಡುತ್ತಿರುತ್ತಾರೆ. ದೇಹದ ಮೇಲೆ ನಡೆಸುವ ಅತ್ಯಾಚಾರದಂತೆಯೇ , ಕಾಮದ ಪದಗಳನ್ನು ಬಳಸಿ ಆಡುವ ಬಯ್ಗುಳಗಳು ಬಯ್ಯಿಸಿಕೊಳ್ಳುವ ವ್ಯಕ್ತಿಯನ್ನು ಮಾನಸಿಕವಾಗಿ ಗಾಸಿಗೊಳಿಸುತ್ತದೆ.

(ಚಿತ್ರ ಸೆಲೆ: learnitaliango.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: